Droupadi Murmu: ದ್ರೌಪದಿ ಮುರ್ಮು ಬಗ್ಗೆ ಗೌರವವಿದೆ, ಆದರೆ ಯಶವಂತ್ ಸಿನ್ಹಾಗೆ ನಮ್ಮ ಬೆಂಬಲ; ಆಪ್ ಘೋಷಣೆ
ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಾವು ಯಶವಂತ್ ಸಿನ್ಹಾ ಅವರಿಗೆ ಮತ ಹಾಕುತ್ತೇವೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯ (Presidential Election 2022) ಕುರಿತು ವಿರೋಧ ಪಕ್ಷದ ಪಾಳೆಯದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ನಡುವೆ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷವು (AAP) ಜುಲೈ 18ರ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ. ನಾವು ದ್ರೌಪದಿ ಮುರ್ಮು (Droupadi Murmu) ಅವರನ್ನು ಗೌರವಿಸುತ್ತೇವೆ. ಆದರೆ, ಯಶವಂತ್ ಸಿನ್ಹಾ (Yashwant Sinha) ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ವಿರೋಧ ಪಕ್ಷಗಳ ರಾಷ್ಟ್ರಪತಿ ಚುನಾವಣೆಯ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಲಿದೆ. ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಾವು ಯಶವಂತ್ ಸಿನ್ಹಾ ಅವರಿಗೆ ಮತ ಹಾಕುತ್ತೇವೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ಎಎಪಿ ಇದುವರೆಗೆ ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಬೆಂಬಲ ಯಾರಿಗೆ ಎಂಬ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅಥವಾ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುತ್ತದೆಯೇ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಸೋಮವಾರ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದೆ.
ಇದನ್ನೂ ಓದಿ: Presidential Poll: ರಾಷ್ಟ್ರಪತಿ ಚುನಾವಣೆ; ಶಿವಸೇನೆಯಿಂದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಪಂಜಾಬ್ ಸಂಸದ ರಾಘವ್ ಚಡ್ಡಾ ಮತ್ತು ಶಾಸಕ ಅತಿಶಿ ಸೇರಿದಂತೆ ಪಿಎಸಿಯ ಇತರ ಸದಸ್ಯರು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮಾಯಾವತಿ ನೇತೃತ್ವದ ಬಿಎಸ್‌ಪಿ, ದೇವೇಗೌಡರ ಜೆಡಿಎಸ್, ಎಐಎಡಿಎಂಕೆ, ಟಿಡಿಪಿ, ಜೆಎಂಎಂ, ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆಯಂತಹ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಘೋಷಿಸಿವೆ.
ಎಎಪಿ ದೆಹಲಿ ಮತ್ತು ಪಂಜಾಬ್ ಈ ಎರಡು ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ಏಕೈಕ ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷವಾಗಿದೆ. ಆಪ್ ದೆಹಲಿಯ ಮೂವರು ಸೇರಿದಂತೆ ಎರಡು ರಾಜ್ಯಗಳ 10 ರಾಜ್ಯಸಭಾ ಸಂಸದರನ್ನು ಹೊಂದಿದೆ. ಅಲ್ಲದೆ, ಈ ಪಕ್ಷವು ಪಂಜಾಬ್‌ನಲ್ಲಿ 92, ದೆಹಲಿಯಲ್ಲಿ 62 ಮತ್ತು ಗೋವಾದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಘೋಷಣೆ
ಆಮ್ ಆದ್ಮಿ ಪಕ್ಷದ ಜೊತೆಗೆ, ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಕೂಡ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ತನ್ನ ಬೆಂಬಲವನ್ನು ನೀಡಿದೆ. ತೆಲಂಗಾಣದಲ್ಲಿ ಬಿಜೆಪಿ ಕಾಲಿಡುವ ಯತ್ನದ ನಡುವೆಯೇ ಎನ್‌ಡಿಎಗೆ ನಿಕಟವಾಗಿರುವ ಟಿಆರ್‌ಎಸ್ ಈ ಕ್ರಮ ಕೈಗೊಂಡಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಲಿದೆ.
ಬಿಜೆಡಿ, ವೈಎಸ್‌ಆರ್-ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಜೆಎಂಎಂ, ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆಯಂತಹ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಮತ ಹಂಚಿಕೆಯಾಗಿರುವುದರಿಂದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸುಲಭವಾಗಿ ಗೆಲುವು ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.
Published On - 3:43 pm, Sat, 16 July 22