ಆದಿವಾಸಿ ಮಹಿಳೆ ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ; ಹೆಚ್ಡಿ ಕುಮಾರಸ್ವಾಮಿ ಟ್ವೀಟ್
ದ್ರೌಪದಿ ಮುರ್ಮು ಅವರ ವ್ಯಕ್ತಿತ್ವ, ಅವರ ಹಿನ್ನೆಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಮ್ಮ ಪಕ್ಷ ಬೆಂಬಲ ಘೋಷಿಸಿದೆ.
ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ (Draupadi Murmur) ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಜನತಾ ದಳ ಪಕ್ಷ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಕೊವಿಡ್ ಪಾಸಿಟಿವ್ ಕಾರಣಕ್ಕೆ ನಾನು ವರ್ಚುಯಲ್ ವೇದಿಕೆ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಹೆಚ್ಡಿ ದೇವೇಗೌಡರು ಪ್ರಧಾನಿಗಳಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದರು. ಪ್ರಪ್ರಥಮ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಮಾಜಿ ಪ್ರಧಾನಮಂತ್ರಿಗಳ ಆಶಯವೂ ಹೌದು. ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ತಮ್ಮ ಉಮೇದುವಾರಿಕೆ ಘೋಷಣೆಯಾದ ಮರುದಿನವೇ ದ್ರೌಪದಿ ಮುರ್ಮು ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಕೋರಿದ್ದರು. ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸ್ವತಃ ಅವರೇ ಗೌಡರ ನಿವಾಸಕ್ಕೆ ಭೇಟಿ ನೀಡಿ ಮತ ಕೇಳಿದ್ದರು ಎಂದು ತಿಳಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು @JanataDal_S ಸರ್ವಾನುಮತದ ನಿರ್ಣಯ ಕೈಗೊಂಡಿದೆ.
ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕೋವಿಡ್ ಪಾಸಿಟಿವ್ ಕಾರಣಕ್ಕೆ ನಾನು ವರ್ಚುಯಲ್ ವೇದಿಕೆ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದೆ. 1/5 pic.twitter.com/GLYYsifaYf
— H D Kumaraswamy (@hd_kumaraswamy) July 15, 2022
ಇದನ್ನೂ ಓದಿ: Bundelkhand Expressway: ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಇಂದು ಬುಂದೇಲ್ಖಂಡ್ ಎಕ್ಸ್ಪ್ರೆಸ್ ವೇ ಉದ್ಘಾಟನೆ
ದ್ರೌಪದಿ ಮುರ್ಮು ಅವರ ವ್ಯಕ್ತಿತ್ವ, ಅವರ ಹಿನ್ನೆಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಮ್ಮ ಪಕ್ಷ ಬೆಂಬಲ ಘೋಷಿಸಿದೆ. ಇಲ್ಲಿ ಪಕ್ಷಗಳ ಪ್ರಮೇಯವೇ ಇಲ್ಲ. ರಾಷ್ಟ್ರದ ಪರಮೋಚ್ಛ ಸಾಂವಿಧಾನಿಕ ಸ್ಥಾನ ರಾಷ್ಟ್ರಪತಿ ಪದವಿ. ಅದು ಪಕ್ಷ ರಾಜಕಾರಣದ ಚೌಕಟ್ಟನ್ನು ಮೀರಿದ ಹೊಣೆಗಾರಿಕೆ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಹೆಮ್ಮೆಯ ಮೂರು ಸೇನಾಪಡೆಗಳ ಮಹಾ ದಂಡನಾಯಕರಾಗಿ ಬುಡಕಟ್ಟು ಸಮುದಾಯದ ಓರ್ವ ಮಹಿಳೆಯೊಬ್ಬರು ಚುಕ್ಕಾಣಿ ಹಿಡಿಯುವುದು ಎಂದರೆ, ಅದು ಐತಿಹಾಸಿಕ ಗರಿಯೇ ಸರಿ. ಸಮಸ್ತ ಮಹಿಳೆಯರಿಗೆ ಮಾತ್ರವಲ್ಲ ಭಾರತ ಒಪ್ಪಿಕೊಂಡಿರುವ ಪ್ರಜಾಸತ್ತೆಯ ಹೆಗ್ಗಳಿಕೆಯೂ ಹೌದು ಎಂದು ಹೆಚ್ಡಿಕೆ ಹೇಳಿದರು.
ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರ್ಕಾರ
Published On - 9:17 am, Sat, 16 July 22