75 ದಿನ ಉಚಿತ ಬೂಸ್ಟರ್ ಡೋಸ್ ಅಭಿಯಾನ; ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಕೇಂದ್ರ ಹಣ ಕೊಡದಿದ್ದರೆ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುತಿತ್ತು ಎಂದು ಮಾತನಾಡಿದ ಸಿಎಂ, ಕೊರೊನಾ ಕಡಿಮೆ ಆಗಿ ಕಣ್ಮರೆಯಾಗುತ್ತಿದೆ.

ಬೆಂಗಳೂರು: 75 ದಿನಗಳ ಕಾಲ ನಡೆಯಲಿರುವ ಉಚಿತ ಬೂಸ್ಟರ್ ಡೋಸ್ (Booster Dose) ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಂದು (ಜುಲೈ 16) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ಕೇಂದ್ರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ. ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಗೆ ಸಾಕಷ್ಟು ನೆರವು ನೀಡಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಹಣ ಕೊಡದಿದ್ದರೆ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುತಿತ್ತು ಎಂದು ಮಾತನಾಡಿದ ಸಿಎಂ, ಕೊರೊನಾ ಕಡಿಮೆ ಆಗಿ ಕಣ್ಮರೆಯಾಗುತ್ತಿದೆ. ಕೊರೊನಾ ಬಂದ ಬಳಿಕ ವಿಜ್ಞಾನಿಗಳು, ವೈದ್ಯರು, ದಾದಿಯರು ಎಲ್ಲರೂ ಲೀಡರ್ಗಳಾಗಿ ಮಾರ್ಪಾಡು ಆಗಿದ್ದಾರೆ. ಅವರು ಲೀಡರ್ ಆಗದೆ ಇದ್ದರೆ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕೊವಿಡ್ ಪ್ರಭಾವ ಇನ್ನೂ ಇದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಹೀಗಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ತೆಗೆದುಕೊಳ್ಳಿ. ಪ್ರಧಾನಿ ಮೋದಿ ಉಚಿತವಾಗಿ ಲಸಿಕೆ ನೀಡಲು ಹೇಳಿದ್ದಾರೆ. ಬೂಸ್ಟರ್ ಡೋಸ್ ಕೂಡಾ ಉಚಿತವಾಗಿ ಕೊಡುತ್ತಿದ್ದಾರೆ. ಕೊರೊನಾ ಕಡಿಮೆ ಆಗಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ. 75 ದಿನದೊಳಗೆ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಗುರಿ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
ಮೊಟ್ಟೆ, ಹಾಲು ಪೌಷ್ಟಿಕ ಆಹಾರ: ಮೊಟ್ಟೆ ಅಪೌಷ್ಟಿಕ ಆಹಾರ ಎಂಬ ಎನ್ಇಪಿ ಸಮಿತಿಯ ಶಿಫಾರಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಇದುವರೆಗೂ ನನ್ನ ಜ್ಞಾನಕ್ಕೆ ತಿಳಿದಂತೆ ಮೊಟ್ಟೆ, ಹಾಲು ಪೌಷ್ಠಿಕ ಆಹಾರ. ಅದು ಯಾರು ವರದಿಕೊಟ್ಟಿದ್ದಾರೊ ನನ್ನ ಗಮನಕ್ಕೆ ಇಲ್ಲ. ಎನ್ಇಪಿ ಸಮಿತಿಯ ವರದಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಸಮಿತಿಯ ವರದಿಯ ಪಡೆದು ನಾನು ಮಾತನಾಡುತ್ತೇನೆ ಎಂದರು.
Published On - 11:59 am, Sat, 16 July 22








