Shiradi Ghat: ಶಿರಾಡಿಘಾಟ್ ಬಂದ್​: ಮಂಗಳೂರಿಗೆ ಹೋಗಲು ಪರ್ಯಾಯ ಮಾರ್ಗಗಳು ಯಾವವು ಗೊತ್ತಾ?

ಹಾಸನದಿಂದ ಸಕಲೇಶಫುರ ಮಾರ್ಗದಲ್ಲಿ ಮಂಗಳೂರಿಗೆ ಹೋಗೋ ಮಾರ್ಗದ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದು, ಇದೀಗ ಪರ್ಯಾಯ ಮಾರ್ಗಗಳನ್ನು ಹಾಸನ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Shiradi Ghat: ಶಿರಾಡಿಘಾಟ್ ಬಂದ್​: ಮಂಗಳೂರಿಗೆ ಹೋಗಲು ಪರ್ಯಾಯ ಮಾರ್ಗಗಳು ಯಾವವು ಗೊತ್ತಾ?
ಶಿರಾಡಿ ಘಾಟ್​ನಲ್ಲಿ ಕುಸಿದ ರಸ್ತೆ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 16, 2022 | 9:18 AM

ಹಾಸನ: ಮಳೆಗಾಲ ಬಂದರೆ ಸಾಕು ಶಿರಾಡಿಘಾಟ್ (Shiradi Ghat) ​ನಲ್ಲಿ ಯಾವಾಗ ಭೂ ಕುಸಿತವಾಗುತ್ತೋ, ಯಾವಾಗ ರಾಜಧಾನಿ ಬೆಂಗಳೂರು ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಡಿತವಾಗುತ್ತೋ ಎನ್ನೋ ಆತಂಕ ಇದ್ದೇ ಇರುತ್ತೆ. ಈ ವರ್ಷವೂ ಇಂತಹುದೇ ಆತಂಕ ಕಳೆದ ಐದು ದಿನಗಳಿಂದ ಮನೆ ಮಾಡಿತ್ತು. ಕಡೆಗೂ ಇಂದು ಶಿರಾಡಿ ಘಾಟ್ ರಸ್ತೆ ಬಂದ್ ಆಗೋ ಮೂಲಕ ಮತ್ತೊಮ್ಮೆ ಮಳೆಗಾಲದಲ್ಲಿ ರಾಜ್ಯದ ಜೀವನಾಡಿ ರಸ್ತೆ, ರಾಷ್ಟ್ರೀಯ ಹೆದ್ದಾರಿ 75 ಬಂದ್ ಆಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ನದಿ ತೊರೆಗಳೆಲ್ಲಾ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ಪಶ್ಚಿಮಘಟ್ಟದ ತಪ್ಪು ಶೀರಾಡಿಘಾಟ್​ನಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿದ್ದು, ಅತಿಯಾದ ಶೀತದಿಂದ ಜುಲೈ 10ರಂದು ಹಾಸನದಿಂದ ಮಂಗಳೂರಿಗೆ ತೆರಳೋ ಮಾರ್ಗದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಸಣ್ಣ ಪ್ರಮಾಣದ ಭೂ ಕುಸಿತವಾಗಿತ್ತು. ತಕ್ಷಣ ಇದನ್ನ ದುರಸ್ಥಿ ಮಾಡೋ ಪ್ರಯತ್ನ ನಡೆದರೂ ಅತಿಯಾದ ಮಳೆಯಿಂದ ಮಾಡಿದ ಪ್ರಯತ್ನ ಫಲ ನೀಡದೆ ಇದು ಕೊಚ್ಚಿಹೋಗಿತ್ತು.

ಈ ಘಟನೆ ನಡೆದಾಗಲೇ ಈ ವರ್ಷವೂ ಕೂಡ ಶಿರಾಡಿ ಘಾಟ್ ಬಂದ್ ಆಗಲಿದೆಯಾ ಎನ್ನೋ ಆತಂಕ ಸಹಜವಾಗಿಯೇ ಮನೆ ಮಾಡಿತ್ತು. ಆದರೆ ಮರುದಿನ ಜುಲೈ 11ರ ಸೋಮವಾರ ಸ್ಥಳಕ್ಕೆ ಬೇಟಿ ನೀಡಿದ್ದ, ಲೋಕೋಪಯೋಗಿ ಸಚಿವರಾದ ಸಿಸಿ ಪಾಟೀಲ್ ಸ್ಪಷ್ಟವಾಗಿ ಹೇಳಿದ್ದು, ಯಾವುದೇ ಕಾರಣದಿಂದ ಶೀರಾಡಿಘಾಟ್ ಬಂದ್ ಮಾಡಲ್ಲ ಎಂದು. ಆದರೆ ಅವರು ಬಂದು ಹೋದ ಮೂರೇ ಮೂರು ದಿನಕ್ಕೆ ಇದೇ ಸ್ಥಳದಲ್ಲಿ ಮತ್ತೆ ಭೂ ಕುಸಿತವಾಗಿದೆ. ಅಂದರೆ ಜುಲೈ 14ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದೋಣಿಗಲ್ ಸಮೀಪ ಭೂ ಕುಸಿತವಾಗಿ ತಕ್ಷಣ ಸ್ಥಳಕ್ಕೆ ಬೇಟಿಕೊಟ್ಟ ಸಕಲೇಶಪುರ ಉಪ ವಿಭಾಗ ಅಧಿಕಾರಿ ಪ್ರತೀಕ್ ಬಯಾಲ್ ಈ ಭಾಗದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರೋದಾಗಿ ಘೋಷಣೆ ಮಾಡಿದ್ದರು. ಕೇವಲ ಲಘುವಾಹನಗಳಿಗೆ ಮಾತ್ರ ಅವಕಾಶ ಎಂದು ಹೇಳೊ ಜೊತೆಗೆ ಸರದಿಯಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಯ್ತು. ಸಂಜೆ ವೇಳೇಗೆ ಈ ಆದೇಶ ಮಾರ್ಪಾಡು ಮಾಡಿದ ಜಿಲ್ಲಾಧಿಕಾರಿಯವರು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಹಾಗೂ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಬಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದರು. ಇದಾಗಿ ಒಂದು ದಿನ ಕಳೆಯೋ ಮುನ್ನವೇ ಇದೇ ಸ್ಥಳದಲ್ಲಿ ಮತ್ತೊಂದು ಬದಿಯ ರಾಜ್ಯಹೆದ್ದಾರಿಯಲ್ಲಿ ಕುಸಿತವಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿ ಇದೀಗ ಶಿರಾಡಿ ಮಾರ್ಗದಲ್ಲಿ ಲಘು ಹಾಗು ಭಾರೀವಾಹನಗಳೆಲ್ಲವನ್ನು ಕೂಡ ನಿಷೇಧ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಈ ಮಾರ್ಗ ಸಂಪೂರ್ಣ ಬಂದ್ ಆಗಿರಲಿದ್ದು ಮತ್ತೊಮ್ಮೆ ಶಿರಾಡಿಘಾಟ್ ಬಂದ್ ಆದಂತಾಗಿದೆ.

ಪ್ರತೀ ವರ್ಷ ಮಳೆಗಾಲದಲ್ಲಿ ಕುಸಿಯೋ ಭೂಮಿ!

ಶಿರಾಡಿಘಾಟ್ ಕಳೆದ ಹಲವು ದಶಕಗಳಿಂದ ಈ ಮಾರ್ಗದ ವಾಹನ ಸವಾರರಿಗೆ ನರಕ ಸದೃಶ್ಯ ರಸ್ತೆಯೇ ಆಗಿದೆ, ಶಿರಾಡಿಘಾಟ್ ದುರಸ್ಥಿಆಗಬೇಕು ಎಂದು ದಶಖಗಳ ಕಾಲ ಹೋರಾಟ ಆಗಿದೆ. ಸಕಲೇಶಫುರ ತಾಲ್ಲೂಕಿನ ಮಾರನಹಳ್ಳಿಯಿಂದ ಗುಂಡ್ಯವರೆಗೆ ನಾಲ್ಕು ವರ್ಷಗಳ ಹಿಂದೆ ಕಾಂಕ್ರಿಟ್ ರಸ್ತೆಯಾಗಿ ಜನರು ನೆಮ್ಮದಿಯಾಗಿ ಓಡಾಡುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ದಶಕಗಳ ಹಿಂದೆ ಚತುಷ್ಪತ ರಸ್ತೆ ನಿರ್ಮಾಣ ಮಾಡಲು ಯೋಜನೆ ರೆಡಿಯಾಗಿ ಈ ರಸ್ತೆ ಹಾಸನದವರೆಗೂ ಪೂರ್ಣಗೊಂಡು ಹಲವು ವರ್ಷಗಳೆ ಕಳೆದಿದೆ. ಆದರೆ ಹಾಸನದಿಂದ ಸಕಲೇಶಫುರ ತಾಲ್ಲೂಕಿನ ಮಾರನಹಳ್ಳಿವರೆಗೆ 46 ಕಿಲೋಮೀಟರ್ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ಆರಂಬಗೊಂಡು ಏಳು ವರ್ಷ ಕಳೆದಿದೆ. ಆದರೆ ಕಾಮಗಾರಿ ಮುಗಿದಿಲ್ಲ. ಇದೀಗ ಸಕಲೇಶಪುರದವರೆಗೆ ಕಾಮಗಾರಿ ಶೇಕಡಾ 60 ರಷ್ಟು ಮುಗಿದಿದೆ. ಆದರೆ ಸಕಲೇಶಫುರದಿಂದ ಮಾರನಹಳ್ಳಿವರೆಗೆ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡಿದ ಯಡವಟ್ಟು ನಿರ್ಲಕ್ಷ್ಯದಿಂದ ಇದೀಗ ಜನರು ಸಂಕಷ್ಟ ಪಡುವಂತಾಗಿದೆ.

ರಸ್ತೆ ನಿರ್ಮಾಣಕ್ಕೆ ಕನಿಷ್ಟ ತಯಾರಿಯನ್ನು ಮಾಡಿಕೊಳ್ಳದೆ ಏಕಾ ಏಕಿ ಗುಡ್ಡ ಕೊರೆದು ತಡೆಗೋಡೆ ಕಟ್ಟಲು ಮುಂದಾಗಿದ್ದು, ಇದೀಗ ಪ್ರತೀ ವರ್ಷ ರಸ್ತೆ ಕುಸಿಯಲು ಕಾರಣವಾಗಿದೆ. ಭಾರೀ ಪ್ರಪಾತದಂತಿರೋ ಕಡೆಯಲ್ಲಿ ನೂತನ ರಸ್ತೆ ನಿರ್ಮಿಸಲು ಬೇಕಾದ ತಯಾರಿ ಮಾಡಿಕೊಳ್ಳದೆ ಮಾಡಿದ ಪ್ರಮಾದ ಇದೀಗ ಪ್ರತೀ ವರ್ಷ ಮಳೆಗಾಲ ಬಂದರೆ ದೋಣಿಗಲ್ ಸಮೀಪ ಭೂ ಕುಸಿತ ಆಗೋದು ರಸ್ತೆ ಸಂಚಾರ ಬಂದ್ ಆಗೋದು ಮಾಮೂಲಿ ಎನ್ನುವಂತಾಗಿದೆ.

ಶಿರಾಡಿಘಾಟ್ ಬಂದ್ ಆಯ್ತು ಮಂಗಳೂರಿಗೆ ಮಾರ್ಗ ಯಾವುದು?

ಹಾಸನದ ಮೂಲಕ ರಾಜದಾನಿ ಬೆಂಗಳೂರು ಹಾಗು ಬಂದರು ನಗರಿ ಮಂಗಳೂರನ್ನು ಸಂಪರ್ಕಿಸೋ ಪ್ರಮುಖ ರಸ್ತೆ ಹಾಗೂ ಹತ್ತಿರದ ರಸ್ತೆ ಅದು ರಾಷ್ಟ್ರೀಯ ಹೆದ್ದಾರಿ 75, ಈ ಮಾರ್ಗದಲ್ಲಿ ನಿತ್ಯ ಏನಿಲ್ಲವೆಂದರೂ 20 ಸಾವಿರ ವಾಹನಗಳು ಓಡಾಡುತ್ತವೆ. ಎನ್ನೋ ಮಾತಿದೆ. ರಾಜ್ಯದ ಜೀವನಾಡಿ ರಸ್ತೆ ಎಂದು ಕರೆಸಿಕೊಳ್ಳೋ ಹೆದ್ದಾರಿ ಇದು ಎನ್ನೋ ಜೊತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರು ಹೋಗೋದು ಇದೇ ಮಾರ್ಗದಲ್ಲಿ ಹಾಗಾಗಿಯೇ ಈ ರಸ್ತೆ ಬಂದ್ ಆದರೆ ಒಂದು ಪ್ರಯಾಣಿಕರಿಗೆ ತೊಂದರೆ. ಇನ್ನೊಂದು ಇಲ್ಲಿ ಓಡಾಡೋ ವಾಹನಗಳು ಪ್ರಯಾಣಿಕರನ್ನೇ ನಂಬಿ ನೂರಾರು ಕುಟುಂಬಳ ಜೀವನ ನಡೆಯುತ್ತೆ. ಹೊಟೆಲ್ ಉದ್ಯಮ, ಟ್ಯಾಕ್ಸಿ, ಟ್ರಾವೆಲ್ಸ್ ಹೀಗೆ ಎಲ್ಲವೂ ಈ ರಸ್ತೆಯ ಮೇಲೆ ನಿಂತಿದೆ. ಇದೀಗ ರಸ್ತೆ ಬಂದ್ ಆಗಿದ್ದು, ಎಲ್ಲರಿಗೂ ಹೊಡೆತಬಿದ್ದಿದೆ ಹಾಗಾಗಿಯೇ ಬದಲಿ ಮಾರ್ಗ ಯಾವುದು ಎನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಾಸನದಿಂದ ಸಕಲೇಶಫುರ ಮಾರ್ಗದಲ್ಲಿ ಮಂಗಳೂರಿಗೆ ಹೋಗೋ ಮಾರ್ಗದ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದು, ಇದೀಗ ಪರ್ಯಾಯ ಮಾರ್ಗಗಳನ್ನು ಹಾಸನ ಜಿಲ್ಲಾಧಿಕಾರಿಯವರು ಸೂಚಿಸಿದ್ದು, ಅದು ಈ ಕೆಳಗಿನಂತಿದೆ.

ಲಘು ಹಾಗೂ ಬಸ್ ಮತ್ತು ಸಣ್ಣ ಪ್ರಮಾಣದ ವಾಹನಗಳು ಹಾಸನದಿಂದ ಅರಕಲಗೂಡು, ಕುಶಾಲನಗರ, ಮಡಿಕೇರಿ ಹಾಗೂ ಸಂಪಾಜೆ ಮೂಲಕ ಮಂಗಳೂರಿಗೆ ಹೋಗಬಹುದು. ಇದು ಒಂದನೇ ಮಾರ್ಗ. ಎರಡನೇ ಮಾರ್ಗವಾಗಿ ಬಸ್​ಗಳ ಜೊತೆಗೆ ಮದ್ಯಮ ಪ್ರಮಾಣದ ಸರಕು ಸಾಗಣೆ ವಾಹನಗಳು ಸೇರಿದಂತೆ ಹಾಸನದಿಂದ ಬೇಲೂರು ಮೂಡಿಗೆರೆ ಮೂಲಕ ಚಾರ್ಮಾಡಿಘಾಟ್ ತಲುಪಿ ಈ ಮಾರ್ಗದಲ್ಲಿ ಮಂಗಳೂರು ತಲುಪಬೇಕು. ಇನ್ನು ಭಾರೀ ಪ್ರಮಾಣದ ವಾಹನಗಳು ಅಂದರೆ ದೊಡ್ಡ ದೊಡ್ಡ ಟ್ರಕ್, ಹತ್ತು ಚಕ್ರಕ್ಕಿಂತ ಮೇಲ್ಪಟ್ಟ ವಾಹನಗಳು ಬೇರೆ ಪರ್ಯಾಯ ಮಾರ್ಗದ ಮೂಲಕ ತೆರಳಬೇಕು ಎಂದು ತಮ್ಮ ಆದೇಶದಲ್ಲಿ ಹಾಸನ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದು, ಮುಂದಿನ ಆದೇಶದವರೆಗೆ ಇದೇ ಮಾರ್ಗಗಳ ಮೂಲಕ ಬೆಂಗಳೂರಿನಿಂದ-ಮಂಗಳೂರಿಗೆ, ಮಂಗಳೂರಿನಿಂದ-ಬೆಂಗಳೂರಿಗೆ ಪ್ರಯಾಣಿಕರು ತಲುಪಬೇಕಿದೆ.

ವರದಿ: ಮಂಜುನಾಥ್-ಕೆ.ಬಿ ಟಿವಿ9, ಹಾಸನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada