ವಕೀಲರ ವಿರುದ್ಧ ಎಫ್‌ಐಆರ್; ಪಿಎಸ್‌ಐ ಅಮಾನತಿಗೆ ಸದನದಲ್ಲಿ ವಿಪಕ್ಷ ಬಿಗಿಪಟ್ಟು; ಪರಮೇಶ್ವರ್ ಹೇಳಿದ್ದೇನು?
ರಾಮನಗರದಲ್ಲಿ 40 ಮಂದಿ ವಕೀಲರ ವಿರುದ್ಧ ಪಿಎಸ್‌ಐ ತನ್ವೀರ್ ಎಫ್‌ಐಆರ್ ದಾಖಲಿಸಿರುವ ವಿಚಾರವೀಗ ರಾಜಕೀಯ ಆಯಾಮ ಪಡೆದುಕೊಂಡಿದೆ. ಎಫ್‌ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಆರಂಭಿಸಿದ್ದ ಧರಣಿ ತಡರಾತ್ರಿಯಾದರೂ ಮುಂದುವರೆಯಿತು. ಇಂದು ಅಧಿವೇಶನದಲ್ಲಿ ವಿಪಕ್ಷ ನಾಯಕರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪಿಎಸ್‌ಐ ಅಮಾನತಿಗೆ ಪಟ್ಟು ಹಿಡಿದಿದ್ದಾರೆ.
ವಿಧಾನಸಭೆ, ಫೆ.20: ರಾಮನಗರದಲ್ಲಿ (Ramanagara) 40 ಮಂದಿ ವಕೀಲರ ವಿರುದ್ಧ ಪಿಎಸ್‌ಐ ತನ್ವೀರ್ ಎಫ್‌ಐಆರ್ ದಾಖಲಿಸಿರುವ ವಿಚಾರವೀಗ ರಾಜಕೀಯ ಆಯಾಮ ಪಡೆದುಕೊಂಡಿದೆ. ವಕೀಲರ ಪ್ರತಿಭಟನೆಗೆ ಬಿಜೆಪಿ ಬೆಂಬಲಿಸಿದ್ದು, ಅಧಿವೇಶನದಲ್ಲೂ ಇಂದು ಸುದ್ದು-ಗದ್ದಲ ಉಂಟಾಯಿತು. ಪಿಎಸ್‌ಐ ಅಮಾನತಿಗೆ ಬಿಗಿಪಟ್ಟು ಹಿಡಿದಿರುವ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ (BJP-JDS) ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಶೂನ್ಯವೇಳೆಯಲ್ಲಿ ವಕೀಲರ ವಿರುದ್ಧ ದಾಖಲಿಸಿದ ಎಫ್‌ಐಆರ್ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ರಾಮನಗರ ಪ್ರಕ್ಷುಬ್ಧ ಆಗಿದೆ, ಪ್ರತಿಭಟನಾ ಸ್ಥಳಕ್ಕೆ ನಿನ್ನೆ ನಾನು, ಎಚ್.ಡಿ. ಕುಮಾರಸ್ವಾಮಿ ಹೋಗಿದ್ದೆವು. ಚಾಂದ್ ಪಾಷಾ ಎಂಬ ವಕೀಲ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆಗೆ ಕೋರ್ಟ್ ಆದೇಶ ಮಾಡಿರುವ ಬಗ್ಗೆ ಟ್ವೀಟ್ನಲ್ಲಿ ಆ ಜಡ್ಜ್ಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಹಿಂದೂಗಳು, ಬಿಜೆಪಿ ವಿರುದ್ಧವೂ ನಿಂದಿಸಿದ್ದಾನೆ ಎಂದರು.
ಇಷ್ಟೆಲ್ಲಾ ಆದ ನಂತರ ಚಾಂದ್ ಪಾಷ ವಿರುದ್ಧ ಜನ ಠಾಣೆಗೆ, ವಕೀಲರ ಸಂಘಕ್ಕೆ ದೂರು ಕೊಡುತ್ತಾರೆ. ವಕೀಲರ ಸಂಘದ ಸದಸ್ಯರು ಇದರ ಬಗ್ಗೆ ಚರ್ಚೆ ಮಾಡುವಾಗ ಕೆಲವರು ನುಗ್ಗಿ ವಕೀಲರಿಗೆ ಕೆಟ್ಟ ಪದಗಳಿಂದ ಬೈಯುತ್ತಾರೆ. ಇದರ ವಿರುದ್ಧವೂ ವಕೀಲರು ಪೊಲೀಸರಿಗೆ ದೂರು ಕೊಡುತ್ತಾರೆ. ಆದರೆ ಪೊಲೀಸರು ವಕೀಲರ ದೂರು ಪಡೆದು ಸುಮ್ಮನೆ ಆಗುತ್ತಾರೆ, ಯಾವುದೇ ಕ್ರಮಕ್ಕೆ ಮುಂದಾಗಲ್ಲ ಎಂದರು.
ಇದನ್ನೂ ಓದಿ: ರಾಮನಗರ ವಕೀಲರ ಪ್ರತಿಭಟನೆ: ವಿವಾದದ ಕಿಡಿ ಹೊತ್ತಿಕೊಂಡಿದ್ದೆಲ್ಲಿಂದ? ಇಲ್ಲಿದೆ ಪೂರ್ಣ ವಿವರ
ನಂತರ ಚಾಂದ್ ಪಾಷ ಕಡೆಯವರಿಂದಲೂ ಪೊಲೀಸರು ಒಂದು ದೂರು ತೆಗೆದುಕೊಳ್ಳುತ್ತಾರೆ. ವಕೀಲರೇ ಚಾಂದ್ ಪಾಷಾ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ಕೊಡುತ್ತಾರೆ. ಪೊಲೀಸರು ತಕ್ಷಣ ಮೊದಲು ದೂರು ಕೊಟ್ಟ ವಕೀಲರ ವಿರುದ್ಧವೇ ಎಫ್‌ಐಆರ್ ಹಾಕುತ್ತಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ. ಚಾಂದ್‌ಪಾಷಾ ಜ್ಞಾನವ್ಯಾಪಿ ಮಸೀದಿ ಬಗ್ಗೆ ಆದೇಶಿಸಿ ಜಡ್ಜ್ ವಿರುದ್ಧ ಲೂಟಿ ಆರೋಪ ಮಾಡಿದ್ದಾರೆ. ವಕೀಲರ ಸಂಘದ ಚುನಾವಣೆಯಲ್ಲಿ ಗೆದ್ದವರಿಗೂ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿದರು.
ಎಫ್‌ಐಆರ್ ಸಂಬಂಧ ಸದನಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣದ ತನಿಖೆಗೆ ಚನ್ನಪಟ್ಟಣ ಡಿವೈಎಸ್‌ಪಿರನ್ನು ನೇಮಿಸಲಾಗಿದೆ. ತನಿಖಾ ವರದಿಯಲ್ಲಿ ತಪ್ಪು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಬ್ಬ ಅಧಿಕಾರಿಯನ್ನು ವಿನಾಕಾರಣ ಅಮಾನತು ಮಾಡಲು ಆಗುವುದಿಲ್ಲ. ನನಗೆ ಯಾವುದೇ ಒತ್ತಡ ಇಲ್ಲ ಎಂದರು. ಪಟ್ಟು ಬಿಡದ ವಿಪಕ್ಷ ನಾಯಕ ಆರ್.ಅಶೋಕ್, ಪಿಎಸ್‌ಐ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಕೀಲರಿಗೆ ನ್ಯಾಯ ಕೊಡಿ. ಆ ಪೊಲೀಸ್ 40 ವಕೀಲರ ಮೇಲೆಯೇ ಎಫ್‌ಐಆರ್ ಹಾಕುತ್ತಾನೆ. ಆ ಪೊಲೀಸ್ನನ್ನು ಗಡೀಪಾರು ಮಾಡಿ, ಸಸ್ಪೆಂಡ್ ಬೇಡ. ಹೀಗೇ ಆದರೆ ಈ ರಾಜ್ಯದಲ್ಲಿ ಹಿಂದೂಗಳೇ ಜೀವನ ಮಾಡಲು ಆಗಲ್ಲ. ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ, ಪಿಎಫ್ಐ ಬಗ್ಗೆ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಡಾ. ಸಿಎನ್ ಅಶ್ವತ್ಥ ನಾರಾಯಣ, ನಿಮಗೂ ಕೂಡಾ ಪಿಎಫ್ಐ ಕಾಟ ಎಷ್ಟು ಕೊಟ್ಟಿದ್ದಾರೆ, ನಿಮಗೆ ಅದರ ಅನುಭವ ಇದೆ ಎಂದು ಸ್ಪೀಕರ್ ಯುಟಿ ಖಾದರ್ಗೆ ಹೇಳಿದರು. ಇದಕ್ಕೆ, ನೀವು ಇಷ್ಟು ಕಾಟ ಕೊಡುತ್ತೀರಾ ಅಂತಾ ಅಂದುಕೊಂಡಿರಲಿಲ್ಲ ಎಂದು ಟಾಂಗ್ ಕೊಟ್ಟರು. ನಾವು ಕಾಟ ಕೊಡಲು ಸಿದ್ದರಾಮಯ್ಯ ಕೆಟ್ಟು ಹೋದೆವಾ? ನಾವು ನೋಡಿ ಎಷ್ಟು ಫ್ರೆಂಡ್ಲಿ ಆಗಿದ್ದೇವೆ ಅಂತಾ ಅಶ್ವತ್ಥ ನಾರಾಯಣ ಹೇಳಿದರು.
ಇದನ್ನೂ ಓದಿ: ರಾಮನಗರ: ಡಿಸಿ ಕಚೇರಿಗೆ ವಕೀಲರ ದಿಗ್ಬಂಧನ; ಮನೆಗೆ ಹೋಗಲಾಗದೆ ಕಚೇರಿಯಲ್ಲೇ ಕುಳಿತ ಜಿಲ್ಲಾಧಿಕಾರಿ
ಚಾಂದ್‌ಪಾಷ 2011 ರಿಂದಲೂ ಪದೇ ಪದೇ ಭಾವನೆ ಕೆರಳಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ. ಅವನಿಗೆ ದ್ವೇಷ, ವೈಮನಸ್ಸು ಸಿಕ್ಕಾಪಟ್ಟೆ ಇದೆ. ಚಾಂದ್ ಪಾಷಾ ಬಗ್ಗೆ ಡಿಸಿಎಂಗೂ ಗೊತ್ತಿದೆ. ಇಲ್ಲಿ ಡಿಸಿಎಂ ಮೌನಿಯಾಗಿ ಏನೂ ಮಾತಾಡದೇ ಕೂತರೆ ಬಹಳ ಕಷ್ಟ. ಡಿಸಿಎಂ ಜಿಲ್ಲೆಯವರೇ ಮಾತಾಡಲ್ಲ ಅಂದರೆ ಹೇಗೆ ಎಂದು ಕೇಳಿದರು.
ಚಾಂದ್ ಪಾಷ ಬಗ್ಗೆ ಮಾತನಾಡಿದ ಪರಮೇಶ್ವರ್, ಚಾಂದ್ ಪಾಷ ವಿರುದ್ಧ 504, 505 ಐಪಿಸಿ ಪ್ರಕಾರ ಕೇಸ್ ದಾಖಲಾಗಿದೆ. ಸರ್ಕಾರ ಚಾಂದ್ ಪಾಷ ಪರ ನಿಂತಿಲ್ಲ, ಇದು ಸತ್ಯಕ್ಕೆ ದೂರವಾಗಿದೆ. ಸಬ್ ಇನ್ಸ್ಪೆಕ್ಟರ್ ತನ್ವೀರ್ ಹುಸೇನ್ ತಪ್ಪಿದೆಯಾ ಇದರಲ್ಲಿ? ಅವರು ಕೇಸ್ ಕೊಟ್ಟಿದ್ದನ್ನು ತೆಗೆದುಕೊಂಡಿದ್ದಾರೆ. ಅವರನ್ನು ಅಮಾನತು ಮಾಡುವುದು ದೊಡ್ಡ ವಿಷಯ ಅಲ್ಲ. ಆದರೆ ಆತ ಕೇಸ್ ರಿಜಿಸ್ಟರ್ ಮಾಡಿ ತನಿಖೆ ನಡೆಸಲು ಮುಂದಾಗಿದ್ದು ತಪ್ಪು ಎನ್ನಲಾಗುತ್ತಾ ಹೇಳಿ ಎಂದು ವಿಪಕ್ಷ ನಾಯಕರನ್ನು ಪ್ರಶ್ನಿಸಿದರು.
ಸಸ್ಪೆಂಡ್ ಮಾಡುವುದು ಐದು ನಿಮಿಷದ ಕೆಲಸ ಅಷ್ಟೇ. ಒಟ್ಟು ಮೂರು ಎಫ್‌ಐಆರ್ ಆಗಿದೆ. ಸಬ್ ಇನ್ಸ್ಪೆಕ್ಟರ್ ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದಾನೆ. ನಂತರ ಡಿಸಿ, ಎಸ್‌ಪಿ, ಎಡಿಜಿಪಿ ಎಲ್ಲರೂ ಪ್ರಯತ್ನ ಮಾಡಿದ್ದಾರೆ, ವಕೀಲರು ಸೊಪ್ಪು ಹಾಕಿಲ್ಲ. ನಂತರ ಬೆಂಗಳೂರಿನಿಂದ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹೋಗಿ ಇನ್ನಷ್ಟು ಪ್ರಚೋದನೆ ಮಾಡಿದ್ದಾರೆ. ಸಿಎಂ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಕೂಡಾ ಪ್ರಯತ್ನ ಪಟ್ಟರೂ ಸೊಪ್ಪು ಹಾಕಿಲ್ಲ. ಒಂದು ಘಟನೆಯನ್ನು ಬೇರೆ ಬೇರೆ ಬಿಂಬಿಸಿದರೆ ಹೇಗೆ? ಇದು ಎಲ್ಲಿ ಹೋಗಿ ಮುಟ್ಟುತ್ತದೆ ಎಂದರು.
ಸರ್ಕಾರ ಇದರಲ್ಲಿ ಯಾರ ರಕ್ಷಣೆ ಮಾಡುತ್ತಿಲ್ಲ. ಚಾಂದ್ ಪಾಷ ವಿರುದ್ಧವೂ ಕ್ರಮ ಆಗಿದೆ. ಮುಂದೆ ಇನ್ನೂ ಹೆಚ್ಚಿನ ಕ್ರಮ ಆಗುತ್ತದೆ. ಇದು ಸರ್ಕಾರದ ತಪ್ಪು ಅಂತ ಹೇಗೆ ಹೇಳುತ್ತೀರಿ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ರಾಮನಗರಕ್ಕೆ ಕುಮಾರಸ್ವಾಮಿ, ಅಶೋಕ್ ಹೋಗಿದ್ದರು. ನಾವು ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಬಾರ್ ಅಸೋಸಿಯೇಷನ್ನವರ ಜೊತೆ ನಾನೂ ಬೇಕಾದರೆ ಮಾತಾಡುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ