ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ: ಬಿಜೆಪಿಗೆ ಮಾನವೀಯತೆ ಪಾಠದೊಂದಿಗೆ ಸ್ಪಷ್ಟನೆ ನೀಡಿದ ಖರ್ಗೆ
ರಾಹುಲ್ ಗಾಂಧಿ ಅವರ ಕ್ಷೇತ್ರದ ವಯನಾಡಿ ಮೂಲದ ವ್ಯಕ್ತಿ ಮೇಲೆ ಕರ್ನಾಟಕದ ಆನೆ ದಾಳಿ ಮಾಡಿದ್ದು, ಇದೀಗ ಮೃತ ವ್ಯಕ್ತಿ ಕುಟುಂಬಕ್ಕೆ ರಾಜ್ಯ ಸರ್ಕಾರ 15 ಲಕ್ಷ ರೂ ಪರಿಹಾರ ನೀಡಿದೆ. ಇನ್ನು ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ತೆರಿಗೆ ಹಣ ರಾಹುಲ್ ಗಾಂಧಿಗೆ ಎಂದು ಟೀಕಿಸುತ್ತಿದೆ. ಇದೀಗ ಇದಕ್ಕೆ ಸಚಿವರಾದ ಪ್ರಿಯಾಂಕ್ ಖರ್ಗೆ , ಸಂತೋಷ್ ಲಾಡ್ ತಿರಯಗೇಟು ನೀಡಿದ್ದಾರೆ.
ಬೆಂಗಳೂರು, (ಫೆಬ್ರವರಿ 20): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ (Wayanad in Kerala) ಆನೆ ದಾಳಿಗೆ ಪ್ರಾಣ ಕಳೆದುಕೊಂಡ ಅಜೀಶ್ ಎಂಬವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ (Karnataka Government) 15 ಲಕ್ಷ ರೂ. ಪರಿಹಾರ ನೀಡಿದೆ. ಇದೀಗ ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. “ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ – ರಾಹುಲ್ ಗಾಂಧಿಯ ವಯನಾಡ್‌ನ ಮಡಿಲಿಗೆ” ಎಂದು ಬಿಜೆಪಿ ಟೀಕಿಸಿದೆ. ಇನ್ನು ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ದಾಳಿ ಮಾಡಿದ್ದ ಆನೆ ಕರ್ನಾಟಕದ್ದು. ಹಾಸನದಲ್ಲಿ ವಶಕ್ಕೆ ಪಡೆದಿದ್ದು, ರೇಡಿಯೋ ಕಾಲರ್ ಕೂಡ ನಮ್ಮ ಇಲಾಖೆಯಿಂದಲೇ ಹಾಕಲಾಗಿತ್ತು. ಅದು ಬೇರೆ ರಾಜ್ಯಕ್ಕೆ ಹೋಗಿ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡಿದ ವರದಿಯಿದೆ. ವರದಿ ತರೆಸಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗಿದೆ. ಆನೆಯನ್ನ ಸಂಬಾಳಿಸುತ್ತಿದ್ದು ನಮ್ಮ ಕರ್ನಾಟಕ ಸರ್ಕಾರ. ಮಾನವೀಯತೆಯನ್ನ ಮೆರೆಯಬಾರದು ಅಂದ್ರೆ ಬಿಜೆಪಿಯವರಿಗೆ ಏನು ಹೇಳಬೇಕು? ಎಂದು ತಿರುಗೇಟು ನೀಡಿದ್ದಾರೆ.
ಪರಿಹಾರದಿಂದ ನಮ್ಮ ರಾಜ್ಯದ ತೆರೆಗೆ ಬೇರೆ ರಾಜ್ಯಕ್ಕೆ ಹೋಗುತ್ತಿಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಕನ್ನಡಿಗರಿಗೆ ಆಗುತ್ತಿರುವ ಇರುವ ಅನ್ಯಾಯ 15 ಲಕ್ಷ ರೂ. ಅಲ್ಲ. 1 ಲಕ್ಷ 77 ಕೋಟಿ ರೂ. ಅನ್ಯಾಯ ಆಗುತ್ತಿದೆ. ಅದರ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ. 15 ಲಕ್ಷದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಅಲ್ವಾ 1 ಲಕ್ಷ 77 ಕೋಟಿ ರೂ. ಅನ್ಯಾಯ ಆಗಿರುವ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಇವರು ನಮ್ಮ ಜೊತೆ ದೆಹಲಿಗೆ ಯಾಕೆ ಬಂದಿಲ್ಲ? ಇವರು ಕನ್ನಡಿಗರ ಪರವಾಗಿಲ್ಲ, ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಓದಲು ಬರುವುದಿಲ್ಲ ಅಂದ್ರೆ ಕೇಳೋಕೆ ಹೇಳಿ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ರಾಹುಲ್ ಗಾಂಧಿ ಸಲಹೆ ಮೇರೆಗೆ ಕರ್ನಾಟಕದ ತೆರಿಗೆದಾರರ ಹಣ ದುರುಪಯೋಗ: ವಿಜಯೇಂದ್ರ ಆಕ್ರೋಶ
ಇಲ್ಲಿ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಎಂಬ ಕುಮಾರಸ್ವಾಮಿ ಟೀಕೆ ಉತ್ತರಸಿದ ಪ್ರಿಯಾಂಕ್ ಖರ್ಗೆ, ಯಾರು ಯಾರು ಸಿಎಂ ಆಗಿದ್ದಾಗ ಎಷ್ಟು ಬಿಡುಗಡೆ ಮಾಡಿದ್ದಾರೆ ಅಂತ ಪಟ್ಟಿ ಕೊಡಲಿ. ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇರಳದ ವ್ಯಕ್ತಿಗೆ ಪರಿಹಾರ ಕೊಟ್ಟಿರುವುದನ್ನು ಸಮರ್ಥಿಸಿಕೊಂಡರು.
ಸಂತೋಷ್ ಲಾಡ್ ಸಮರ್ಥನೆ
ಇನ್ನು ಇದೇ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಬರೆದಿರುವ ಪತ್ರದಲ್ಲಿ ಏನಿದೆ ಗೊತ್ತಿಲ್ಲ. ಇದನ್ನೇ ವಿವಾದ ಮಾಡಿ ರಾಜಕೀಯ ಮಾಡುವ ಅಗತ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ ಮುತುವರ್ಜಿ ವಹಿಸಿ ಕೊಟ್ಟಿರಬಹುದು. ರಾಹುಲ್ ಹೇಳಿದ್ರು ಅಂತಾ ಕೊಟ್ಟಿರಬಹುದು, ಮೆಚ್ಚಿಸುವಂಥದ್ದು ಏನಿದೆ? 15 ಲಕ್ಷ ರೂ. ಪರಿಹಾರ ಮೂಲಕ ರಾಹುಲ್ ಗಾಂಧಿಯನ್ನ ಮೆಚ್ಚಿಸಬಹುದಾ? ಎಂದು ಕರ್ನಾಟಕ ಸರ್ಕಾರ ನೀಡಿದ ಪರಿಹಾರವನ್ನು ಸಮರ್ಥಿಸಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ