ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election 2023) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಬೆಳಗಾವಿ (Belagavi) ಜಿಲ್ಲೆಯಲ್ಲಿ ಈಗನಿಂದಲೇ ಓಲೈಕೆ ರಾಜಕೀಯ (Politics) ಶುರುವಾಗಿದೆ. ಜಿಲ್ಲೆಯಲ್ಲಿ ಮತದಾರರಿಗೆ ಹಲವು ಬಗೆಯ ಗಿಫ್ಟ್ಗಳನ್ನು ನೀಡಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ನಾನು 6 ಎಲೆಕ್ಷನ್ನಲ್ಲಿ ಗೆದ್ದಿದ್ದೇನೆ. ಆದ್ರೆ ದುಡ್ಡು ಹಂಚಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಅವರು ರಮೇಶ್ ಜಾರಕಿಹೊಳಿ ಕಳೆದ ಚುನಾವಣೆ ಸಂದರ್ಭದಲ್ಲಿ ಹಣ ಹಂಚುತ್ತಿದ್ದ ಫೋಟೋ ಹಾಗೂ ದಾಖಲಾಗಿದ್ದ ಎಫ್ಐಆರ್ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.
ಹೌದು…ಇಂದು(ಜನವರಿ 21) ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್ ಪೂಜಾರಿ, 2018ರ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ದುಡ್ಡು ಹಂಚುತ್ತಿದ್ದ ಫೋಟೋ ರಿಲೀಸ್ ಮಾಡಿದರು. ಅಲ್ಲದೇ ಹಣ ಹಂಚಿಕೆ ಆರೋಪದ ಮೇಲೆ ದಾಖಲಾಗಿದ್ದ ಎಫ್ಐಆರ್ ಪ್ರತಿಯನ್ನು ಸಹ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. ಈ ಮೂಲಕ ರಮೇಶ್ ಜಾರಕಿಹೊಳಿ ಹಣ ಹಂಚಿಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು.
2018ರ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ, ರಮೇಶ್ ಜಾರಕಿಹೊಳಿ ವಿರುದ್ಧ ಸೋಲುಕಂಡಿದ್ದರು. ಆ ವೇಳೆ ದುರ್ಗಾ ಮಂದಿರದಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಹಣ ಹಂಚಿದ ಆರೋಪ ಮಾಡಿದ್ದರು. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ 2018 ಮೇ.7ರಂದು ಎಫ್ಐಆರ್ ದಾಖಲಾಗಿತ್ತು. ಆ ಎಫ್ಐಆರ್ ಪ್ರತಿಯನ್ನು ಬಿಡುಗಡೆ ಮಾಡಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್: ರಮೇಶ್ ಜಾರಕಿಹೊಳಿ ಆಪ್ತನಿಂದ ಸೀರೆ ಹಂಚಿಕೆ
ನಿನ್ನೆ (ಜನವರಿ 20) ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕುಕ್ಕರ್, ಮಿಕ್ಸರ್ ಗಿಫ್ಟ್ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಾಗೇ ನಾನು 6 ಚುನಾವಣೆ ಗೆದ್ದಿದ್ದೇನೆ ಎಂದೂ ದುಡ್ಡು ಹಂಚಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ರಮೇಶ್ ಜಾರಕಿಹೊಳಿ ಹಣ ಹಂಚಿದ ಫೋಟೋವನ್ನು ಅಶೋಕ್ ಪೂಜಾರಿ ಬಿಡುಗಡೆ ಮಾಡುವ ಮೂಲಕ ಜಾರಕಿಹೊಳಿಗೆ ತಿವಿದಿದ್ದಾರೆ.
ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಅಶೋಕ್ ಪೂಜಾರಿ ಸತತವಾಗಿ 4 ಬಾರಿ ಸ್ಪರ್ಧಿಸಿ ಸೋಲುಕಂಡಿದ್ದಾರೆ. ಈಗ ಮತ್ತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕ್ನಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
Published On - 3:32 pm, Sat, 21 January 23