ಗುಜರಾತ್ ಸಚಿವ ಸಂಪುಟದಲ್ಲಿ 9 ಇಲಾಖೆ ಜವಾಬ್ದಾರಿ ಹೊತ್ತ ಹರ್ಷ್ ಸಾಂಘ್ವಿ ಯಾರು?
ಗೆಳೆಯನೊಬ್ಬ ರಕ್ತಹೀನತೆಯಿಂದ ಮೃತಪಟ್ಟ ನಂತರ ಹರ್ಷ ಸಾಂಘ್ವಿ ಬುಡಕಟ್ಟು ಜನರೊಂದಿಗೆ ಸಕ್ರಿಯರಾಗಿ ಕೆಲಸ ಮಾಡಲು ಆರಂಭಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ನಾಯಕ ಸಂದೀಪ್ ವಿವರಿಸುತ್ತಾರೆ.
ದೆಹಲಿ: ಗುಜರಾತ್ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸಚಿವ ಸಂಪುಟದಲ್ಲಿ ಹರ್ಷ್ ಸಾಂಘ್ವಿ ಒಟ್ಟು 9 ಇಲಾಖೆಗಳ ಜವಾಬ್ದಾರಿ ಹೊತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ ಭೂಪೇಂದ್ರ ಪಟೇಲ್ ಅವರು ಸಹ ಇಷ್ಟೇ ಸಂಖ್ಯೆಯ ಇಲಾಖೆಗಳನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡಿದ್ದಾರೆ.
38 ವರ್ಷದ ಸಾಂಘ್ವಿ ಅವರಿಗೆ ಗೃಹ (ರಾಜ್ಯ), ವಿಪತ್ತು ನಿರ್ವಹಣೆ ಮತ್ತು ಪೊಲೀಸ್ ಗೃಹ ನಿರ್ಮಾಣ ಇಲಾಖೆಗಳ ಸಂಪುಟ ದರ್ಜೆ ನೀಡಲಾಗಿದೆ. ಇದರ ಜೊತೆಗೆ ರಾಜ್ಯದರ್ಜೆಯಲ್ಲಿ ಕ್ರೀಡೆ, ಯುವ ಮತ್ತು ಸಾಂಸ್ಕೃತಿಕ ವ್ಯವಹಾರ, ಅನಿವಾಸಿ ಭಾರತೀಯರು, ಅಬಕಾರಿ ಮತ್ತು ಸಾರಾಯಿ ನಿಷೇಧ, ಗಡಿಭದ್ರತೆ ಹಾಗೂ ಬಂದೀಖಾನೆ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಸಾಂಘ್ವಿ ಅವರಿಗೆ ಮೊದಲು ಪ್ರದೀದ್ ಸಿಂಗ್ ಜಡೇಜ, ಅಮಿತ್ ಶಾ, ಹರೇನ್ ಪಾಂಡ್ಯಾ ಮತ್ತು ಗೊರ್ಧನ್ ಜಡಾಫಿಯಾ ಗುಜರಾತ್ನ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗೃಹಾಡಳಿತ, ಆಡಳಿತ ನಿರ್ವಹಣೆ, ಮಾಹಿತಿ ಮತ್ತು ಪ್ರಸರಣ, ಕೈಗಾರಿಕೆ, ಗಣಿ ಮತ್ತು ಖನಿಜ, ಬೃಹತ್ ಯೋಜನೆಗಳು, ನಗರಾಭಿವೃದ್ಧಿ, ನಗರ ಗೃಹ ನಿರ್ಮಾಣ, ನರ್ಮದಾ ಮತ್ತು ಬಂದರು ಖಾತೆಯನ್ನು ತಮ್ಮಲ್ಲಿ ಇರಿಸಿಕೊಂಡಿದ್ದಾರೆ.
ಹರ್ಷ್ ಸಾಂಘ್ವಿ ಯಾರು? 2012ರಲ್ಲಿ ಮಜುರಾ ಕ್ಷೇತ್ರದಿಂದ ಮೊದಲ ಬಾರಿಗೆ ಹರ್ಷ್ ಸಾಂಘ್ವಿ ವಿಧಾನಸಭೆಗೆ ಆಯ್ಕೆಯಾದಾಗ ಅವರ ವಯಸ್ಸು ಕೇವಲ 27. 2010ರಿಂದಲೂ ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಅನುರಾಗ್ ಠಾಕೂರ್, ಅಂದು ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿದ್ದ ಸಂಸದೆ ಪೂನಮ್ ಮಹಾಜನ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.
ಕೊವಿಡ್ ಪಿಡುಗಿನ ಅವಧಿಯಲ್ಲಿ ಸಾಂಘ್ವಿ ಚುರುಕಾಗಿ ಕೆಲಸ ಮಾಡಿದ್ದರು. ನಿರುದ್ಯೋಗಿಗಳಿಗಾಗಿ ಹಲವೆಡೆ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದರು. ತಮ್ಮ ಸ್ವಕ್ಷೇತ್ರ ಸೂರತ್ನ ಹಲವೆಡೆ ಪುಸ್ತಕ ಬ್ಯಾಂಕ್ಗಳನ್ನು ಆರಂಭಿಸಿದ್ದರು. ಬುಡಕಟ್ಟು ಪ್ರದೇಶಗಳಲ್ಲಿ ನಡೆಸಿದ್ದ ಸೇವಾ ಚಟುವಟಿಕೆಗಳಿಂದಾಗಿ ಜನಪ್ರಿಯರಾಗಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿದ್ದ ವಾರಣಾಸಿಯಲ್ಲಿ ತೆರೆಯ ಹಿಂದೆ ನಿಂತು ಶ್ರಮಿಸಿದ್ದರು. ಮೋದಿ ವಾರಣಾಸಿಗೆ ಬರುವ ಮೊದಲು ಅಲ್ಲ ಅವರ ಪರ ಪ್ರಬಲವಾದ ಅಲೆ ಏಳುವಂತೆ ಹಲವು ಕೆಲಸ ಮಾಡಿದ್ದರು. ಹತ್ತಿರದಿಂದ ಸಾಂಘ್ವಿ ಅವರ ಕಾರ್ಯವೈಖರಿ ಗಮನಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಸ್ತುತ ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷರಾಗಿರುವ ಸಿ.ಆರ್.ಪಾಟೀಲ್ ಮೆಚ್ಚಿಕೊಂಡಿದ್ದರು.
2017ರ ವಿಧಾನಸಭೆ ಚುನಾವಣೆ ವೇಳೆ ಪಾಟೀಲ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ್ದ ಸಾಂಘ್ವಿ ಸೂರತ್ನಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ಆಯೋಜಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದರು. ಈ ರೋಡ್ ಶೋದಲ್ಲಿ 50,000 ಯುವಕರು ಮತ್ತು 2,500 ಬೈಕ್ ಸವಾರರು ಪಾಲ್ಗೊಂಡಿದ್ದರು. ಈ ರೋಡ್ ಶೋದಲ್ಲಿ 3ಡಿ ಲೇಸರ್ ಶೋಗಳಿದ್ದವು. 11 ಕಿಮೀ ಉದ್ದದ ಸೀರೆಯ ಮೇಲೆ ಸರ್ಕಾರದ ಯೋಜನೆಗಳ ಹೆಸರು ಮುದ್ರಿಸಲಾಗಿತ್ತು. ರಸ್ತೆಯುದ್ದಕ್ಕೂ ಯೋಜನೆಗಳ ಹೆಸರು ಎದ್ದುಕಾಣುವಂತೆ ಕಟ್ಟಲಾಗಿತ್ತು.
ಕೊರೊನಾ ಪಿಡುಗು ವ್ಯಾಪಿಸಿದ್ದಾಗ ಸೂರತ್ ಪಾಲಿಕೆ ಸಭಾಂಗಣದಲ್ಲಿ 200 ಐಸೊಲೇಶನ್ ವಾರ್ಡ್ಗಳು ಕಾರ್ಯನಿರ್ವಹಿಸುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ಇತರ ಶಾಸಕರು ಈ ಮಾದರಿ ಅನುಸರಿಸಿದರು. ಎರಡನೇ ಅಲೆಯ ವೇಳೆ ಸ್ವತಃ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಕ್ಸಿಜನ್ ಸಿಲಿಂಡರ್, ಬೆಡ್ಗಳ ವ್ಯವಸ್ಥೆ ಮಾಡಲು ಗಮನ ಹರಿಸಿದ್ದರು. ಕೊರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡವರಿಗೆ ಹಾಗೂ ಪುಸ್ತಕ ಖರೀದಿಸಲು ಸಾಧ್ಯವಾಗದವರಿಗೆ ನೆರವಾಗಲೆಂದು ಸಾಂಘ್ವಿ ಆಯೋಜಿಸಿದ್ದ ಪುಸ್ತಕ ಬ್ಯಾಂಕ್ಗಳು ಸಾಂಘ್ವಿ ಅವರನ್ನು ಯುವಕಣ್ಮಣಿಯಾಗಿ ಬಿಂಬಿಸಿದ್ದವು ಎಂದು ಬಿಜೆಪಿ ಗುಜರಾತ್ ಘಟಕದ ಉಪಾಧ್ಯಕ್ಷ ಜನಕ್ಭಾಯ್ ಪಟೇಲ್ ಹೇಳುತ್ತಾರೆ.
ರೆಮ್ಡೆಸಿವಿರ್ ಕೊರತೆ ಇಡೀ ದೇಶವನ್ನು ಬಾಧಿಸುತ್ತಿದ್ದಾಗ ಸಾಂಘ್ವಿ ತಮ್ಮ ಕ್ಷೇತ್ರ ಸೂರತ್ನಲ್ಲಿ 5000 ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ಉಚಿತವಾಗಿ ಹಂಚಿದ್ದರು. ಅಗತ್ಯ ಇರುವವರಿಗೆ ಬಿಜೆಪಿ ಸೂರತ್ ಘಟಕವು ಸಹಾನುಭೂತಿ ಮತ್ತು ಮಾನವೀಯ ದೃಷ್ಟಿಯಿಂದ ಇಂಜೆಕ್ಷನ್ ನೀಡಿತ್ತು ಎಂದು ಗುಜರಾತ್ ಹೈಕೋರ್ಟ್ ನತಂತರ ದಿನಗಳಲ್ಲಿ ಹೇಳಿಕೆ ನೀಡಿದ್ದರು.
ಸೂರತ್: ಅತಿಮುಖ್ಯ ಕ್ಷೇತ್ರ ಯುವಕರು ಮತ್ತು ಬುಡಕಟ್ಟು ಜನರ ನಡುವೆ ಸಾಂಘ್ವಿ ಮಾಡಿದ್ದ ಕೆಲಸಗಳು ಅವರನ್ನು ಜನಪ್ರಿಯಗೊಳಿಸಿದ್ದವು. ಅವರ ಯಶಸ್ಸಿನ ಹಿಂದೆ ಈ ಕಾರ್ಯಗಳ ಕೊಡುಗೆ ದೊಡ್ಡದು ಎಂದು ಹಲವು ಬಿಜೆಪಿ ನಾಯಕರು ಹೇಳುತ್ತಾರೆ.
ಸತತ ಕೆಲಸ ಮಾಡುವ ಸಾಂಘ್ವಿ ಗೆಳೆಯನೊಬ್ಬ ರಕ್ತಹೀನತೆಯಿಂದ ಮೃತಪಟ್ಟ ನಂತರ ಬುಡಕಟ್ಟು ಜನರೊಂದಿಗೆ ಸಕ್ರಿಯರಾಗಿ ಕೆಲಸ ಮಾಡಲು ಆರಂಭಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ನಾಯಕ ಸಂದೀಪ್ ವಿವರಿಸುತ್ತಾರೆ.
ಮೋದಿ ಅವರ ವಿದೇಶ ಪ್ರವಾಸಗಳ ವೇಳೆ ಸಾಂಘ್ವಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು. 2014ರ ಆಸ್ಟ್ರೇಲಿಯಾ ಪ್ರವಾಸ, 2017ರ ಇಸ್ರೇಲ್ ಭೇಟಿ ವೇಳೆ ಮೋದಿ ಅವರೊಂದಿಗೆ ಅಲ್ಲಿದ್ದ ಭಾರತೀಯರು ಸಂವಾದದಲ್ಲಿ ಸೇರುವಂತೆ ಮಾಡಿದ್ದರು. 2022ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂರತ್ನ ಆಗುಹೋಗುಗಳ ಮೇಲೆ ಗಮನ ಇರಿಸಲೆಂದೇ ಸಾಂಘ್ವಿ ಅವರಿಗೆ ಗೃಹ ಖಾತೆ ನೀಡಲಾಗಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕರು ಹೇಳಿದರು.
2015-16ರ ಪಾಟಿದಾರ್ ಮೀಸಲಾತಿ ಹೋರಾಟದ ಕೇಂದ್ರ ಬಿಂದು ಸೂರತ್ ಆಗಿತ್ತು. ಹೀಗಾಗಿಯೇ ಬಿಜೆಪಿ ಸೂರತ್ ಬಹಳ ಮುಖ್ಯ ಎನಿಸಿದೆ. ಭೂಪೇಂದ್ರ ಪಟೇಲ್ರ ಸಂಪುಟದಲ್ಲಿ ಸೂರತ್ನ ನಾಲ್ವರು ಸಚಿವರಿದ್ದಾರೆ. ಪೂರ್ಣೇಶ್ ಮೋದಿ, ಹರ್ಷ್ ಸಾಂಘ್ವಿ, ವಿನು ಮೊರ್ದೀಯಾ ಮತ್ತು ಮುಕೇಶ್ ಪಟೇಲ್. ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಪಾಟೀಲ್ ಮತ್ತು ರೈಲ್ವೆ ಇಲಾಖೆಯ ರಾಜ್ಯ ಸಚಿವ ದರ್ಶನ್ ಜಾರ್ದೋಶ್ ಸಹ ಸೂರತ್ ಮೂಲದವರೇ ಆಗಿದ್ದಾರೆ.
ಸಾಂಘ್ವಿ ಅವರಿಗೆ ಗೃಹ ಇಲಾಖೆ ಕೊಡಲು ಮೋದಿ, ಶಾ ಮತ್ತು ಪಾಟೀಲ್ ಒಮ್ಮತದ ನಿರ್ಣಯ ಮಾಡಿದ್ದು ಸಹ ವಿರೋಧಿಗಳಿಗೆ ನೀಡಿದ ರಾಜಕೀಯ ಸಂದೇಶ ಎಂದು ಬಿಜೆಪಿಯ ಹಿರಿಯ ನಾಯಕರು ಅಭಿಪ್ರಾಯಪಡುತ್ತಾರೆ.u
(Gujarat BJP Politics Who is Harsh Sanghavi a leader who holds 9 portfolios in new cabinet)
ಇದನ್ನೂ ಓದಿ: ಗುಜರಾತ್ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ; 24 ಮಂತ್ರಿಗಳ ಪಟ್ಟಿ ಹೀಗಿದೆ
ಇದನ್ನೂ ಓದಿ: Bhupendra Patel: ಗುಜರಾತ್ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್