ಕಾಂಗ್ರೆಸ್ ಸೇರುವುದು ನಿಜ, ಆದರೆ ಮಾ. 5ಕ್ಕಲ್ಲ; ಶಿವಲಿಂಗೇಗೌಡ ಸ್ಪಷ್ಟನೆ
ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ದಿನಾಂಕವನ್ನು ತಿಳಿಸುತ್ತೇನೆ. ಆದರೆ, ಚುನಾವಣೆ ಘೋಷಣೆ ಆಗುವವರೆಗೂ ರಾಜೀನಾಮೆ ನೀಡುವುದಿಲ್ಲ ಎಂದು ಶಿವಲಿಂಗೇಗೌಡ ತಿಳಿಸಿದ್ದಾರೆ.
ಹಾಸನ: ಕಾಂಗ್ರೆಸ್ ಪಕ್ಷವನ್ನು ಸೇರುವ ಬಗ್ಗೆ ನಿರ್ಧಾರ ಕೈಗೊಂಡಿರುವುದು ನಿಜ. ಆದರೆ ಮಾರ್ಚ್ 5ಕ್ಕಲ್ಲ ಎಂದು ಜೆಡಿಎಸ್ (JDS) ಭದ್ರಕೋಟೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ (KM Shivalinge Gowda) ಸ್ಪಷ್ಟಪಡಿಸಿದ್ದಾರೆ. ಬುಧವಾರ ರಾತ್ರಿ ಅರಸೀಕೆರೆಯ ತೋಟದ ಮನೆಯಲ್ಲಿ ಶಾಸಕರು ಕರೆದಿದ್ದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ದರು. ಜತೆಗೆ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಸಲಹೆ ನೀಡಿದ್ದರು. ಇದರ ಆಧಾರದಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಶಿವಲಿಂಗೇಗೌಡ ತಿಳಿಸಿದ್ದಾರೆ.
ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ದಿನಾಂಕವನ್ನು ತಿಳಿಸುತ್ತೇನೆ. ಆದರೆ, ಚುನಾವಣೆ ಘೋಷಣೆ ಆಗುವವರೆಗೂ ರಾಜೀನಾಮೆ ನೀಡುವುದಿಲ್ಲ. ನನ್ನ ಬೆಂಬಲಿಗರು ಸೂಚಿಸಿದ ಪಕ್ಷಕ್ಕೆ ಸೇರುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ಕಾಂಗ್ರೆಸ್‌ಗೆ ಸೇರುವುದು ಸೂಕ್ತ ಅಂತ ಬೆಂಬಲಿಗರು ಸಲಹೆ ನೀಡಿದ್ದಾರೆ. ಮಾ. 5ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬ ಸುದ್ದಿ ಬರುತ್ತಿದೆ. ಈ ಬಗ್ಗೆ ಅನೇಕ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ ಇದು ನಿಜವಲ್ಲ. ಶೀಘ್ರವೇ ಕಾಂಗ್ರೆಸ್ ಪಕ್ಷಕ್ಕೆ ಸೇರುವ ದಿನಾಂಕವನ್ನು ತಿಳಿಸುತ್ತೇನೆ. ಕಾನೂನು ತೊಡಕಾಗದಂತೆ ನೋಡಿಕೊಂಡು ಕಾಂಗ್ರೆಸ್ ಸೇರುತ್ತೇನೆ ಎಂದು ಅವರು ಹೇಳಿದ್ದಾರೆ.
‘ರಾಮಸ್ವಾಮಿ ಕಾಂಗ್ರೆಸ್‌ನಲ್ಲಿ ಸೋಲುತ್ತಾರೆಂದು ಶಿವಲಿಂಗೇಗೌಡ ಹೇಳಿದ್ದಾರೆ’ ಎಂಬ ಜೆಡಿಎಸ್ ನಾಯಕ ಎಚ್ಡಿ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಮಸ್ವಾಮಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅವರ ಬಗ್ಗೆ ನಾನು ಮಾತನಾಡಿದ್ದಕ್ಕೆ ದಾಖಲೆಯನ್ನು ನೀಡಲಿ ಎಂದು ಸವಾಲು ಹಾಕಿದರು. ರಾಮಸ್ವಾಮಿ ಬಗ್ಗೆ ನಾನು ಯಾಕೆ ಮಾತನಾಡಲಿ? ಇಂತಹ ರಾಜಕೀಯ ಬೆಳವಣಿಗೆ ಪೂರ್ವ ನಿಯೋಜಿತ ಎಂದು ಅವರು ಹೇಳಿದರು.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಭಿನ್ನಮತ: ದಳಪತಿಗಳಿಗೆ ತಲೆ ನೋವಾದ ಬಂಡಾಯ ನಾಯಕರ ನಡೆ
ನಾನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಲು ಸನ್ನಿವೇಶ ಕಾರಣ. ನಾನು ಪಾರ್ಟಿ ಬಿಡುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದು ಯಾರು? ಯಾಕೆ ಪಕ್ಷ ತ್ಯಜಿಸುತ್ತಿದ್ದಾರೆ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಈಗ ಶುಭಕೋರುವ ರೇವಣ್ಣ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.
ಹಾಸನ ಟಿಕೆಟ್ ನೀಡಿಕೆ ವಿಚಾರದಲ್ಲಿ ಜೆಡಿಎಸ್ನಲ್ಲಿ ಭಿನ್ನಮತ ಪ್ರಕಟಗೊಂಡಿರುವ ಬೆನ್ನಲ್ಲೇ ಅದೇ ಜಿಲ್ಲೆಯ ಶಾಸಕರು ಪಕ್ಷ ತ್ಯಜಿಸಲು ನಿರ್ಧರಿಸಿರುವುದು ದಳಪತಿಗಳಿಗೆ ಹೊಸ ಸಮಸ್ಯೆ ಸೃಷ್ಟಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಜೆಡಿಎಸ್ಗೆ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ