ರಾಮನಗರ ಹೆಸರು ಬದಲಾವಣೆ ಮಾಡಿದ್ರೆ ಉಪವಾಸ ಸತ್ಯಾಗ್ರಹ: ಡಿಕೆಶಿಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ
ರಾಮಮನಗರ ಜಿಲ್ಲೆ ಹೆಸರು ಬದಲಾವಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 26): ಚನ್ನಪಟ್ಟಣ, ರಾಮನಗರ(ramanagara), ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು (Ramanagara District) ಬೆಂಗಳೂರು ದಕ್ಷಿಣ ಜಿಲ್ಲೆ (Bangalore South District) ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎನ್ನುವ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಮನಗರ ಜಿಲ್ಲೆಯ ಬಗ್ಗೆ ಡಿಕೆ ಶಿವಕುಮಾರ್ ಹಾಕಿರುವ ಸವಾಲು ಸ್ವೀಕರಿಸುತ್ತೇನೆ ಎಂದು ಹೇಳಿರುವ ಕುಮಾರಸ್ವಾಮಿ, ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ರಾಮನಗರ ಜೊತೆ ವ್ಯವಹಾರಿಕ ಸಂಬಂಧವಿಲ್ಲ, ಭಾವನಾತ್ಮಕ ಸಂಬಂಧವಿದೆ. ನಾನು ಹಾಸನದಲ್ಲಿ ಹುಟ್ಟಿದ್ದು, ನನ್ನ ಅಂತ್ಯ ರಾಮನಗರದಲ್ಲಿ. ಹೀಗಾಗಿ ನನ್ನ ಕೊನೆಯ ಉಸಿರು ಇರುವ ತನಕ ರಾಮನಗರಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸವಾಲು ಸ್ವೀಕರಿಸಿದ ಹೆಚ್ಡಿ ಕುಮಾರಸ್ವಾಮಿ, ಉಭಯ ನಾಯಕರ ರಾಜಕೀಯ ಯುದ್ಧ ಶುರು
ನಾನು ಹುಟ್ಟಿದ್ದು ಹಾಸನ ಆದರೂ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನಮ್ಮ ಸಮಾಜದವರು ಹೇಳಿದ್ರು ಅಂತ ಸುಮ್ಮನೆ ಇದ್ದೆ ಎನ್ನುವ ಡಿಕೆ ಹೇಳಿಕೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲವು ಜನರೇ ತೀರ್ಮಾನ ಮಾಡುತ್ತಾರೆ.ನನ್ನ ತಂದೆಯವರ ಹತ್ತಿರ ಪಂಚೆ, ಜುಬ್ಬಾ ಬಿಟ್ಟರೇ ಬೇರೆ ಏನೂ ಇಲ್ಲ. ನಾವು ಹಣ ಮಾಡಿದ್ದೇವೆ, ಆದರೆ ಲೂಟಿ ಹೊಡೆದು ಹಣ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರ-ಕನಕಪುರ ರಸ್ತೆ ಯಾರು ಮಾಡಿದ್ದು.? ಅಭಿವೃದ್ಧಿ ಅಂದರೆ ಏನು ಅಂತ ತೋರಿಸಿದ್ದು 2006-2007 ಸಮ್ಮಿಶ್ರ ಸರ್ಕಾರದಿಂದ. ವಿಧಾನಸೌಧದಲ್ಲಿ ಚರ್ಚೆ ಮಾಡಲು ನಾನು ಸಿದ್ಧ. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ನಾನು ಕರೆಂಟ್ ಬಗ್ಗೆ ಕೇಳಿದ್ದ ಪ್ರಶ್ನೆಗೆ ಯಾರಾದರೂ ಉತ್ತರ ಕೊಟ್ಟಿದ್ದಾರಾ?, ಮೊದಲು ಉತ್ತರ ಕೊಡಿ. ವಿದ್ಯುತ್ ಉತ್ಪಾದನೆ ಯಾಕೆ ಮಾಡಿಲ್ಲ. ನಿಮ್ಮ ಯೋಗ್ಯತೆಗೆ ಕಲ್ಲಿದ್ದಲು ಖರೀದಿ ಮಾಡಿಲ್ಲ. ತಪ್ಪನ್ನ ತಪ್ಪು ಅಂತ ಹೇಳಿದ್ರೆ ವಿಲನ್ನಾ ಎಂದು ಕಿಡಿಕಾರಿದರು.
ಡಿಸಿಎಂ ಅವರು ಟಿಆರ್ ಪಿ ಜಾಸ್ತಿ ಇರುವ ಚಾನಲ್ ನಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಅವರ ಆಹ್ವಾನ ಸ್ವೀಕಾರ ಮಾಡುತ್ತೇನೆ. ನಾನು ಪಲಾಯನ ಮಾಡುವುದಿಲ್ಲ. ನನ್ನ ಬಳಿ ಅಷ್ಟು ಸರಕು ಇದೆ ಎಂದು ಹೇಳುವ ಮೂಲಕ ಡಿಕೆಶಿ ಪಂಥಾಹ್ವಾನವನ್ನು ಕುಮಾರಸ್ವಾಮಿ ಒಪ್ಪಿಕೊಂಡರು.
ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ. ಹೀಗಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ