ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದ್ದರು, ಯಾರ ಜತೆ ಮೈತ್ರಿ ಮಾಡಿದರೆ ಇವರಿಗೇನು ಕಾಯಿಲೆ; ಕಾಂಗ್ರೆಸ್ ವಿರುದ್ಧ ರೇವಣ್ಣ ಕಿಡಿ
ನಮ್ಮ ನಿಲುವು ಬದಲಾಗಲು ಕಾಂಗ್ರೆಸ್ ಪಕ್ಷವೇ ಕಾರಣ. ಯಾರ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆಯೋ ಬಿಡುತ್ತೇವೆಯೋ ಇವರಿಗೇನು ಕಾಯಿಲೆ? ಈ ಹಿಂದೆ ಕಾಂಗ್ರೆಸ್ನವರೇ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ಚುನಾವಣೆ ಫಲಿತಾಂಶ ಬಂದಾಗ ಅದೇ ಬಿ ಟೀಂ ಬಳಿ ಏಕೆ ಬಂದಿದ್ದರು ಎಂದು ರೇವಣ್ಣ ಪ್ರಶ್ನಿಸಿದರು.
ಹಾಸನ, ಸೆಪ್ಟೆಂಬರ್ 12: ಕೋಮುವಾದಿಗಳನ್ನು ದೂರ ಇಡಬೇಕು ಎನ್ನುವ ಕಾಂಗ್ರೆಸ್ನವರು ಅವರ ಜತೆ ಸೇರಿಕೊಂಡು ತುಮಕೂರಿನಲ್ಲಿ ಹೆಚ್ಡಿ ದೇವೇಗೌಡರನ್ನು (HD Deve Gowda) ಸೋಲಿಸಿಲ್ಲವೇ? ನಾವು ಯಾರ ಜತೆ ಮೈತ್ರಿ ಮಾಡಿದರೆ ಇವರಿಗೇನು ಕಾಯಿಲೆ ಎಂದು ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ (HD Revanna) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್ಡಿ ದೇವೇಗೌಡರು, ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಕೋಮುವಾದಿಗಳನ್ನು ದೂರ ಇಡಬೇಕು ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ತುಮಕೂರಿನಲ್ಲಿ ಅವರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಿದ್ದರು. ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರವನ್ನು ಕೇಳಿರಲಿಲ್ಲ. ಹೆಚ್ಡಿ ದೇವೇಗೌಡರು ಮೈಸೂರು, ಮಂಡ್ಯ ಕ್ಷೇತ್ರಗಳನ್ನು ಕೇಳಿದ್ದರು. ಆದರೆ ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು. ದೇವೇಗೌಡರಿಗೆ ಶಕ್ತಿ ಇಲ್ಲವೆಂದು ಇಂಡಿಯಾ ಮೈತ್ರಿಕೂಟ ಸಭೆಗೆ ಕರೆದಿಲ್ಲ ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
ನಮ್ಮ ನಿಲುವು ಬದಲಾಗಲು ಕಾಂಗ್ರೆಸ್ ಪಕ್ಷವೇ ಕಾರಣ. ಯಾರ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆಯೋ ಬಿಡುತ್ತೇವೆಯೋ ಇವರಿಗೇನು ಕಾಯಿಲೆ? ಈ ಹಿಂದೆ ಕಾಂಗ್ರೆಸ್ನವರೇ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ಚುನಾವಣೆ ಫಲಿತಾಂಶ ಬಂದಾಗ ಅದೇ ಬಿ ಟೀಂ ಬಳಿ ಏಕೆ ಬಂದಿದ್ದರು ಎಂದು ರೇವಣ್ಣ ಪ್ರಶ್ನಿಸಿದರು.
ಇದನ್ನೂ ಓದಿ: ಮೋದಿ ಆಹ್ವಾನಕ್ಕೆ ಕಾಯುತ್ತಿರುವ ಕುಮಾರಸ್ವಾಮಿ, ಗಣೇಶ ಹಬ್ಬಕ್ಕೂ ಮುನ್ನವೇ BJP-JDS ಮೈತ್ರಿ ಅಧಿಕೃತ ಘೋಷಣೆ ಸಾಧ್ಯತೆ
ಯಾವುದೇ ಟೀಮ್ನಲ್ಲಿದ್ದರೂ ಅಲ್ಪಸಂಖ್ಯಾತರನ್ನು ಕೈಬಿಡುವುದಿಲ್ಲ ಎಂದು ರೇವಣ್ಣ ಭರವಸೆ ನೀಡಿದರು. ಸಿಎಂ ಇಬ್ರಾಹಿಂ ನಮ್ಮ ಪಕ್ಷದ ಅಧ್ಯಕ್ಷರಾಗಿಲ್ವಾ? ಹಿಂದುಳಿದವರಿಗೆ ಮೀಸಲಾತಿ ಕೊಡಲು ಹೆಚ್ಡಿಡಿ ಬರಬೇಕಾಯ್ತು. ನಾವು ಈ ರಾಜ್ಯವನ್ನು ಉಳಿಸಬೇಕಿದೆ. ಇಂಡಿಯಾ ಮೈತ್ರಿಕೂಟ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಕೋಮುವಾದಿಗಳನ್ನು ದೂರವಿಡಬೇಕೆಂದು ಇವರು ಒಂದಾಗಿದ್ದಾರೆ. ಬೇಕಾದಾಗ ಬಂದು ಕಾಲು ಹಿಡೀತಾರೆ, ಬೇಡದಿದ್ರೆ ಮುಗಿಸ್ತೀವಿ ಅಂತಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:47 pm, Tue, 12 September 23