ಅರಮನೆ ಮೈದಾನ ಬಳಕೆಗೆ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಬೆಂಗಳೂರು ಅರಮನೆ ಆಸ್ತಿ ವಿವಾದ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, 3014 ಕೋಟಿ ರೂ. ಪರಿಹಾರದ ಬಗ್ಗೆ ಮಾತನಾಡಿದ್ದಾರೆ. ಇದು ರಸ್ತೆ ಅಗಲೀಕರಣಕ್ಕಾಗಿ ಎಂದು ಹೇಳಿದ್ದು, ಯಾವುದೇ ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕೋರ್ಟ್ನಲ್ಲಿ ಸರ್ಕಾರಕ್ಕೆ ಅನುಕೂಲಕರ ತೀರ್ಪು ಬಂದಿದ್ದರೂ, ಈಗ ಪ್ರತಿವಾದಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು, ಜನವರಿ 25: ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಇದೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ನಾವು ದ್ವೇಷ ಸಾಧಿಸುವುದಕ್ಕೆ ಹೋಗಲ್ಲ. ಕಾನೂನು ಇದೆ, ಮುಂದಿನ ಅಭಿವೃದ್ಧಿ ತೊಂದರೆ ಇದೆ. ಯಾರ ಮೇಲಿನ ದ್ವೇಷದಿಂದ ಅಲ್ಲ. ಜನರ ಒಳಿತಿಗಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 3014 ಕೋಟಿ ರೂ. ಅಂದರೆ ಒಂದು ಎಕರೆಗೆ 200 ಕೋಟಿಗೂ ಹೆಚ್ಚಾಯಿತು. ಇಷ್ಟು ದರ ಬೆಂಗಳೂರಿನಲ್ಲಿ ಎಲ್ಲಿದೆ? ಜನರ ಮೇಲೆ ಏನು ಪರಿಣಾಮ ಬೀರುತ್ತೆ? ಎಂದರು.
ಇದನ್ನೂ ಓದಿ: ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಣಯ
ಸರ್ಕಾರಕ್ಕೆ ಹೊರೆ ಆಗಬಾರದು ಅಂತ ನಾವು ರಸ್ತೆ ಅಗಲೀಕರಣ ಮಾಡುತ್ತಿರುವುದು ಅಲ್ವಾ. ಟಿಡಿಆರ್ ಸರ್ಕಾರ ಕೊಡುವುದಕ್ಕೆ ಆಗದಿದ್ದರೆ ಪ್ರಾಜೆಕ್ಟ್ ಮಾಡುತ್ತೇವೆ ಅಂತ ಹೇಳಿದ್ದೀವಿ. ಮುಖ್ಯ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ಹೈಕೋರ್ಟ್ನಲ್ಲಿ ನಮ್ಮ ಪರ ಆಗಿದೆ. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗಬಾರದು ಎಂದಿದ್ದಾರೆ.
ಸುಗ್ರೀವಾಜ್ಞೆ ಮೂಲಕ ಜಾಗ ವಶಕ್ಕೆ ಪಡೆಯುವ ಮುಕ್ತ ಅವಕಾಶ
1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ.
ಇದನ್ನೂ ಓದಿ: ಬೆಂಗಳೂರು ಅರಮನೆ ವಿವಾದ; ಅನ್ಯಾಯವಾದರೆ ಕಾನೂನು ಸಮರಕ್ಕೆ ಸಿದ್ಧ ಎಂದ ಪ್ರಮೋದಾದೇವಿ ಒಡೆಯರ್
ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ರೂ. ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧುವಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.