ಕರ್ನಾಟಕದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ: ಬಿಜೆಪಿ ನಾಯಕ ಸ್ಫೋಟಕ ಭವಿಷ್ಯ
ಮಾಜಿ ಸಚಿವ ಸಿಸಿ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ. ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ ಅಂತೆಲ್ಲ ಹೇಳುತ್ತಿದ್ದರು. ಆದರೆ, ಸಿಸಿ ಪಾಟೀಲ್ ಮಾತ್ರ ಹೊಸದಾಗಿ ಮಧ್ಯಂತರ ಚುನಾವಣೆ ಅಂತ ಹೇಳಿದ್ದು, ಅಚ್ಚರಿ ಮೂಡಿಸಿದೆ.
ಗದಗ, ಮೇ 05: ಲೋಕಸಭಾ ಚುನಾವಣೆ (Lok Sabha Election) ನಂತರ ರಾಜ್ಯದಲ್ಲಿ ಕಾಂಗ್ರೆಸ್ (Congress) ಇಬ್ಭಾಗವಾಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ. ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬರುತ್ತೆ. ಇದರಿಂದ ರಾಜ್ಯ ವಿಧಾನಸಭೆಗೆ (Vidhan Sabha) ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬರಬಹುದು. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ (CC Patil) ಹೇಳಿದರು.
ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆ ಸೈಡ್ ಎಫೆಕ್ಟ್ನಿಂದ ಸಾವಾಗಿದೆ ಅಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಸಹಾಯಕನ ಕೊನೆ ಅಸ್ತ್ರವೆಂದರೆ ಅಪಪ್ರಚಾರವಾಗಿರುತ್ತದೆ. ನಾನು ಕೋವಿಶೀಲ್ಡ್ ಲಸಿಕೆಯ 3 ಡೋಸ್ ತೆಗೆದುಕೊಂಡಿದ್ದೇನೆ. ಪ್ರಿಯಾಂಕಾ ಗಾಂಧಿನೂ ಕೊರೊನಾ ಲಸಿಕೆ ಪಡೆದಿರಬಹುದು. ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಾಗಿದೆ, ಒಂದಾದರೂ ಉದಾಹರಣೆ ಬೇಕಲ್ಲ. ಕೊರೊನಾ ಲಸಿಕೆಯಿಂದ ಸಾವಾಗಿದ್ದರೆ ಮಾಧ್ಯಮದವರು ಸುಮ್ಮನಿರುತ್ತಿದ್ದರಾ? ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡುವಂತೆ ನಮ್ಮವರೇ ಸಲಹೆ ನೀಡಿರಬೇಕು ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಪತನದ ಬಗ್ಗೆ ಚುನಾವಣೆ ಬಳಿಕ ಬಂದು ಕೇಳಿ: ಜನರಿಗೆ ಗ್ಯಾರಂಟಿ ಕೊಟ್ಟ ದೇವೇಗೌಡ
ಬಡವರಿಗೆ ಭಾಗ್ಯಗಳನ್ನು ಕೊಡುವುದಕ್ಕೆ ವಿರೋಧವಿಲ್ಲ. ಇದಕ್ಕೆ ತಗಲುವ ವೆಚ್ಚ ಎಷ್ಟು ಅಂತ ಸಿದ್ದರಾಮಯ್ಯ ನೋಡಬೇಕಿತ್ತು. ಬಸವರಾಜ ಬೊಮ್ಮಾಯಿಯವರ ಅವಧಿ ಮುಗಿದಾಗ 25 ಸಾವಿರ ಕೋಟಿ ರೂಪಾಯಿ ಅನುದಾನ ರಾಜ್ಯದ ಖಜಾನೆಯಲ್ಲಿತ್ತು. ಅದು ಖಾಲಿಯಾಗಿ 1 ಲಕ್ಷ 85 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಸ್ ಫ್ರೀ ಅಂದರ, 10 ಬಸ್ ಓಡುವಲ್ಲಿ ನಾಲ್ಕು ಬಸ್ ಓಡುತ್ತಿವೆ. ಕೆಟ್ಟ ಬಸ್ಗಳನ್ನು ರಿಪೇರಿ ಮಾಡಲು ಹಣ ಇಲ್ಲ. ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ. ಶಾಸಕರ ಸಂಬಳವೂ ಸರಿಯಾಗಿ ಆಗುತ್ತಿಲ್ಲ. 2-3 ತಿಂಗಳಿಗೊಮ್ಮೆಯಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದರು.
ಹೆಚ್ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನು ಕ್ರಮ ತೆಗೆದುಕೊಂಡಿದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುತ್ತಾರೆ ಅನ್ನೊ ಮಾಹಿತಿ ಇದೆ. ತನಿಖೆ ಪೂರ್ಣವಾಗಲಿ ಸತ್ಯ ಹೊರಬರಲಿ. ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಬಿಜೆಪಿಗೆ ಪರಿಣಾಮ ಬೀರಲ್ಲ. ಘಟನೆಯಾಗಬಾರದಿತ್ತು ಅನ್ನೋ ನೋವಿದೆ. ದೇಶದ ಮಾಜಿ ಪ್ರಧಾನಿ ಈ ವಯಸ್ಸಿನಲ್ಲಿ ಯಾತನೆ ಅನುಭವಿಸುವುದು ನೋವಾಗಿದೆ. ಆದರೆ ಅದಕ್ಕೂ ಬಿಜೆಪಿಗೆ ಸಂಬಂಧ ಇಲ್ಲ. ನಮಗೆ ಮೊದಲೆ ಗೊತ್ತಿದ್ದರೇ ಮೈತ್ರಿಯ ಅವಶ್ಯಕತೆ ಇರುತ್ತಿರಲಿಲ್ಲ. ಪ್ರಜ್ವಲ್ ರೇವಣ್ಣ ವಿಷಯ ಬಹಳ ಎಳೆಯುವುದು ಬೇಡ. ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ