ರಾಜ್ಯ ಸರ್ಕಾರ ಪತನದ ಬಗ್ಗೆ ಚುನಾವಣೆ ಬಳಿಕ ಬಂದು ಕೇಳಿ: ಜನರಿಗೆ ಗ್ಯಾರಂಟಿ ಕೊಟ್ಟ ದೇವೇಗೌಡ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾತನಾಡಿದ್ದು, ಚುನಾವಣೆ ಬಳಿಕ ನನ್ನ ಬಳಿ ಬನ್ನಿ ಸರ್ಕಾರ ಪತನದ ಬಗ್ಗೆ ಹೇಳುತ್ತೇನೆ. ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನ ಮನೆಗೆ ಬಂದು ಕೇಳಿ, ಹೇಳ್ತೀನಿ. ಕಾಂಗ್ರೆಸ್‌ನವರು ಏನೇನು ಮಾಡಿದ್ದಾರೆ ಅನ್ನೋದು ನನಗೆ ಎಲ್ಲಾ ಗೊತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೋಲಾರ, ಏಪ್ರಿಲ್ 19: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ (Congress) ಸರ್ಕಾರ ಇರಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Devegowda) ಇದೀಗ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನದ ಬಗ್ಗೆ ನನ್ನ ಬಳಿ ಬಂದು ಕೇಳಿ ಎಂದು ಜಿಲ್ಲೆಯ ಮಾಲೂರಿನಲ್ಲಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ನನ್ನ ಬಳಿ ಬನ್ನಿ ಸರ್ಕಾರ ಪತನದ ಬಗ್ಗೆ ಹೇಳುತ್ತೇನೆ. ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನ ಮನೆಗೆ ಬಂದು ಕೇಳಿ, ಹೇಳ್ತೀನಿ ಎಂದಿದ್ದಾರೆ.
ಕಾಂಗ್ರೆಸ್‌ನವರು ಏನೇನು ಮಾಡಿದ್ದಾರೆ ಅನ್ನೋದು ನನಗೆ ಎಲ್ಲಾ ಗೊತ್ತಿದೆ. ಮುಸ್ಲಿಮರಿಗೆ, ವಾಲ್ಮೀಕಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟವನು ಯಾವನು? ಡೋಂಟ್ ಟಾಕ್ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಹೌದು ನಾನು ಬಿಜೆಪಿ ಬಿ ಟೀಂ ನಾಯಕ: ರಾಹುಲ್ ಆರೋಪಕ್ಕೆ ದೇವೇಗೌಡ ತೀಕ್ಷ್ಣ ತಿರುಗೇಟು
ಸಿಎಂ ಸಿದ್ದರಾಮಯ್ಯ ಬಳಿ ಯಾವ ಜಾತ್ಯತೀತತೆ ಇದೆ. ಠಾಕ್ರೆ ಬಳಿ ಹೋಗಿ ಹೊಂದಾಣಿಕೆ ಮಾಡಿಕೊಂಡರಲ್ಲ, ಇವರಿಗೆ ನಾಚಿಕೆ ಆಗಲ್ವಾ? ಜಾತ್ಯತೀತ ಪಕ್ಷದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಬೇಕಾ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ಎರಡು ರಾಜಕೀಯ ಬಣಗಳಿವೆ. ಒಂದು ಎನ್ಡಿಎ ಒಕ್ಕೂಟ, ಇನ್ನೊಂದು INDIA ಒಕ್ಕೂಟ ಇದೆ. 2 ಬಣಗಳ ಮುಖ್ಯಸ್ಥರು ಯಾರು?, ಒಂದು ಬಣಕ್ಕೆ ಯಾರೂ ಇಲ್ಲ. ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ಮುಖ್ಯಸ್ಥರಿದ್ದಾರೆ. ಲೋಕಸಭಾ ಕ್ಷೇತ್ರವನ್ನು ಮುನಿಸ್ವಾಮಿ JDSಗೆ ಬಿಟ್ಟು ಕೊಟ್ಟಿದ್ದಾರೆ. 91ನೇ ವಯಸ್ಸಿನಲ್ಲಿ ಯಾವುದೇ ಆಕಾಂಕ್ಷೆ ಇಲ್ಲದೆ NDA ಸೇರಿದ್ದೇವೆ. ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಇರೋದು. ಮೋದಿ ಬಿಟ್ಟು ಯಾರಿಗಾದ್ರೂ ಆಳುವ ಶಕ್ತಿ ಇದ್ದರೇ ಹೇಳಲಿ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಎನ್ಡಿಎ ಒಕ್ಕೂಟ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ: ಸ್ಪಷ್ಟನೆ ನೀಡಿದ ಸುಮಲತಾ
ತಮಿಳುನಾಡು ಸ್ಟಾಲಿನ್ ಕನ್ನಡಿಗರಿಗೆ ನೀರು ಕೊಡಲ್ಲ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಕಾವೇರಿ ನಮ್ಮದು ಅಂತ ಸ್ಟಾಲಿನ್ ಹೇಳ್ತಿದ್ದಾರೆ. 28 ಸ್ಥಾನ ಗೆಲ್ಲಿಸಿ ಮಾಲೂರಿಗೆ ಮೇಕೆದಾಟು ಅಥವಾ ಕೃಷ್ಣ ನದಿಯನ್ನು ತರುತ್ತೇವೆ. ಇನ್ನು 2 ವರ್ಷ ರಾಜ್ಯಸಭಾ ಸದಸ್ಯ ಸ್ಥಾನದಲ್ಲಿ ನಾನು ಇರ್ತೇನೆ. ಮೋದಿ ಅವರಿಗೆ ಕೈ ಹಿಡಿದು ಕೇಳುವ ಶಕ್ತಿ 28 ಸ್ಥಾನ ಗೆದ್ದರೆ ಬರುತ್ತೆ. 40 ಸ್ಥಾನ ಗೆದ್ದು ಕಾಂಗ್ರೆಸ್ ಇಷ್ಟು ದಿನ ಆಟ ಆಡಿದರು. 28 ಲೋಕಸಭಾ ಸದಸ್ಯರನ್ನು ಗೆಲ್ಲಿಸಿ ಮೋದಿ ಬಳಿ ಒಟ್ಟಿಗೆ ಕರೆದುಕೊಂಡು ಹೋಗಿ ಕೇಳುತ್ತೇನೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.