ಕಿಡ್ನಾಪ್ಗೂ ನನಗೂ ಸಂಬಂಧ ಇಲ್ಲ: ಎಸ್ಐಟಿ ವಿಚಾರಣೆಯಲ್ಲಿ ಯಾವುದೂ ಬಾಯಿಬಿಡದ ರೇವಣ್ಣ
HD Revanna at SIT enquiry: ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳಲ್ಲಿ ಸಿಲುಕಿರುವ ಜೆಡಿಎಸ್ ಶಾಸಕ ಹಾಗು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೂವರೆಗೆ ನಡೆದ ವಿಚಾರಣೆಯಲ್ಲಿ ರೇವಣ್ಣ ಹೆಚ್ಚು ಬಾಯಿ ತೆರೆದಿಲ್ಲ. ಈ ಕಿಡ್ನಾಪ್ಗೂ ತನಗೂ ಸಂಬಂಧ ಇಲ್ಲ, ತನಗೆ ಏನೂ ಗೊತ್ತಿಲ್ಲ ಎಂಬಂತಹ ಮಾತುಗಳನ್ನೇ ಹೇಳುತ್ತಾ ಬಂದಿದ್ದಾರೆ ಎನ್ನಲಾಗಿದೆ. ಇವತ್ತೂ ಕೂಡ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಬೆಂಗಳೂರು, ಮೇ 5: ಕಿಡ್ನಾಪ್ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ (HD Revanna) ಅವರನ್ನು ಬಂಧಿಸಲಾಗಿದೆ. ಎಸ್ಐಟಿ ಅಧಿಕಾರಿಗಳು ನಿನ್ನೆ ರಾತ್ರಿ ರೇವಣ್ಣರ ವಿಚಾರಣೆ ನಡೆಸಿದ್ದಾರೆ. ಇಂದೂ ಕೂಡ ವಿಚಾರಣೆ ಮುಂದುವರಿಯಲಿದೆ. ಇದೂವರೆಗೂ ನಡೆದ ವಿಚಾರಣೆಯಲ್ಲಿ ರೇವಣ್ಣ ಯಾವ ವಿಚಾರದ ಬಗ್ಗೆಯೂ ಏನೂ ಬಾಯಿ ಬಿಟ್ಟಿರುವುದು ಗೊತ್ತಾಗಿಲ್ಲ. ಎಲ್ಲದಕ್ಕೂ ಅವರು ಮೌನವಾಗಿದ್ದಾರೆ. ಈ ಕಿಡ್ನಾಪ್ಗೂ ತನಗೂ ಸಂಬಂಧ ಇಲ್ಲ ಎನ್ನುವಂತಹ ಮಾತನ್ನೇ ಅವರು ಪದೇ ಪದೇ ಹೇಳುತ್ತಿದ್ದಾರೆ. ಅದು ಬಿಟ್ಟು ಬೇರೆ ಯಾವ ವಿಚಾರದ ಬಗ್ಗೆಯೂ ಅವರಿಂದ ಹೇಳಿಕೆ ಬಂದಿಲ್ಲ.
ಎಚ್.ಡಿ. ರೇವಣ್ಣ ಹಾಗು ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಹೊಳೆನರಸೀಪುರದ ಮನೆಯಲ್ಲಿ ನಡೆದಿತ್ತೆನ್ನಲಾದ ಲೈಂಗಿಕ ಕಿರುಕುಳದ ದೂರನ್ನು ಮನೆಗೆಲಸದವರು ನೀಡಿದ್ದರು. ಅದರಲ್ಲಿ ರೇವಣ್ಣ ಎ1 ಆರೋಪಿ. ಆದರೆ, ಇದು ನಾನ್ ಬೈಲಬಲ್ ಕೃತ್ಯವೆಂದು ಪರಿಗಣಿಸಲಾಗಿಲ್ಲ. ಆದರೆ, ಕೆಆರ್ ನಗರದಲ್ಲಿ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿರುವ ಪ್ರಕರಣದಲ್ಲಿ ರೇವಣ್ಣ ಎ1 ಆರೋಪಿಯಾಗಿದ್ದಾರೆ. ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಇದರಲ್ಲಿ ಅವರಿಗೆ ಜಾಮೀನು ಸಿಗುವುದಿಲ್ಲ.
ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣನ ಸರ್ಕಾರಿ ನಿವಾಸಕ್ಕೆ ಬೀಗ ಜಡಿದ ಎಸ್ಐಟಿ
ಪ್ರಜ್ವಲ್ ರೇವಣ್ಣ ವಿರುದ್ಧ ನೇರವಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಎಂಪಿ ಹೌಸ್ನಲ್ಲಿ ತನ್ನ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿ ವಿಡಿಯೋ ರೆಕಾರ್ಡಿಂಗ್ ಮಾಡಿದ್ದಲ್ಲದೆ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಇದು ಬಹಳ ಗಂಭೀರ ಆರೋಪವಾಗಿದ್ದು ಪ್ರಜ್ವಲ್ ಅವರು ಬಂಧಿತರಾದರೆ ಜಾಮೀನು ಕೂಡ ಸಿಕ್ಕುವುದಿಲ್ಲ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ