AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯಜಿ ಬಾದಾಮಿಯಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡುತ್ತೇನೆ: ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇನ್ನೂ ಕ್ಷೇತ್ರ ಅಂತಿಮವಾಗಿಲ್ಲ. ವಿವಿಧ ಕ್ಷೇತ್ರದ ಅಭಿಮಾನಿಗಳು ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಬಾದಾಮಿಯ ಅಭಿಮಾನಿಯೊಬ್ಬ ತಮ್ಮ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವಂತೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಸಿದ್ದರಾಮಯ್ಯಜಿ ಬಾದಾಮಿಯಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡುತ್ತೇನೆ: ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
Rakesh Nayak Manchi
|

Updated on:Mar 24, 2023 | 9:33 PM

Share

ಬಾಗಲಕೋಟೆ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದರೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಇನ್ನೂ ಕ್ಷೇತ್ರ ಅಂತಿಮವಾಗಿಲ್ಲ. ವಿವಿಧ ಕ್ಷೇತ್ರದ ಅದರಲ್ಲೂ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭಿಮಾನಿಗಳು ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತಿದ್ದಾರೆ. ಇಂದು ಬಾದಾಮಿಯಲ್ಲಿ ನಡೆದ ಸಮಾವೇಶದುದ್ದಕ್ಕೂ ಹೈಡ್ರಾಮವೇ ನಡೆದಿದೆ. ಬಾದಾಮಿಯಲ್ಲಿನ ಸಿದ್ದು ಅಭಿಮಾನಿಯೊಬ್ಬ ಬಾದಾಮಿಯಿಂದಲೇ ಮತ್ತೆ ಸ್ಪರ್ಧಿಸುವಂತೆ ರಕ್ತದಲ್ಲಿ ಪತ್ರ ಬರೆದಿದ್ದು, ಮತ್ತೋರ್ವ ಅಭಿಮಾನಿ ಬ್ಲೇಡ್​ನಿಂದ ತನ್ನ ಕೈ ಕೊಯ್ದುಕೊಳ್ಳಲು ಮುಂದಾಗಿದ್ದಾನೆ. ಇನ್ನು, ಸಿದ್ದು ಭಾಷಣದ ವೇಳೆ ಬಾದಾಮಿಯಿಂದಲೇ ಮತ್ತೆ ಸ್ಪರ್ಧಿಸುವಂತೆ ಅಭಿಮಾನಿಗಳು, ಮುಖಂಡರು ಒತ್ತಾಯಿಸಿದರೆ, ಇನ್ನೂ ಕೆಲವರೂ ಮತ್ತೆ ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಇಂಗ್ಲೀಷ್​ನಲ್ಲಿ ತನ್ನ ರಕ್ತದ ಮೂಲಕ ಪತ್ರ ಬರೆದ ಸಿದ್ದು ಅಭಿಮಾನಿಯೂ ಆಗಿರುವ ಪುರಸಭೆ ಸದಸ್ಯೆ ವಂದನಾ ಭಟ್ಟಡ್ ಅವರ ಪತಿ ಗೋಪಾಲ ಭಟ್ಟಡ್, ಬಾದಾಮಿಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ, “ಸಿದ್ದರಾಮಯ್ಯಜಿ ಬಾದಾಮಿಯಿಂದ ಸ್ಪರ್ಧಿಸಿ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನೀವು ಹಾಗೂ ಹೊಳೆಬಸು ಶೆಟ್ಟರ್(ಸಿದ್ದು ಆಪ್ತ) ನನ್ನ ಸಾವಿಗೆ ಜವಾಬ್ದಾರರು. ದಯವಿಟ್ಟು ನನ್ನ ಕುಟುಂಬದ ಬಗ್ಗೆ ಕೇರ್ ತೆಗೆದುಕೊಳ್ಳಿ. ವಂದನೆಗಳೊಂದಿಗೆ ಎಂದು ಉಲ್ಲೇಖಿಸಿ ತನ್ನ ಹೆಸರು ಬರೆದಿದ್ದಾನೆ.

ಸಿದ್ದರಾಮಯ್ಯ ಭಾಷಣದ ವೇಳೆ ಅಭಿಮಾನಿಯೊಬ್ಬನಿಂದ ಹೈಡ್ರಾಮಾ

ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರು ಬಾದಾಮಿ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಹೈಡ್ರಾಮ ನಡೆಸಿದ್ದಾನೆ. ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಅಭಿಮಾನಿಯೊಬ್ಬ ಬ್ಲೇಡ್​ನಿಂದ ತನ್ನ ಕೈ ಕೊಯ್ದುಕೊಳ್ಳಲು ಮುಂದಾಗಿದ್ದಾಣೆ. ಕೂಡಲೇ ದೌಡಾಯಿಸಿದ ಪೊಲೀಸರು ವ್ಯಕ್ತಿಯ ಕೈಯಿಂದ ಬ್ರೇಡ್ ಕಸಿದು ಹೊರ ಕಳುಹಿಸಿದ್ದಾರೆ.

ಇದನ್ನೂ ಓದಿ: Assembly Polls:  ಬಾದಾಮಿ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯಗೆ ಜೈ ಅನ್ನುತ್ತಾ ವೇದಿಕೆ ಬಳಿ ಬಂದು ಅವರ ಮುಂದೆ ನಿಂತುಬಿಟ್ಟ!

ಮತ್ತೆ ಗೆಲ್ಲಿಸುತ್ತೇವೆ ಎಂದ ಸಿದ್ದು ಅಭಿಮಾನಿಗಳು

ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದಾಗ ಚಾಮುಂಡೇಶ್ವರಿಯಲ್ಲಿ ಸೋಲು ಅನುಭಿವಿಸಿದ ಹಾಗೂ ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆಲುವು ಸಾಧಿಸಿದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಬಾದಾಮಿಯ ಅಭಿಮಾನಿಗಳು ಮತ್ತೆ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಬಾದಾಮಿ ಕ್ಷೇತ್ರದ ಜನ ಬಹಳ ಒಳ್ಳೆಯವರು ಅಂತ ಅನೇಕ ಸಲ ಹೇಳಿದ್ದೇನೆ. ಇಷ್ಟೆಲ್ಲ ಕೆಲಸ ಮಾಡಿದ್ದೀರಿ, ಈಗ ಬಾದಾಮಿ ಬಿಟ್ಟು ಹೊರಟಿದ್ದೀರಿ, ಜನರಿಗೆ ಏನು ಉತ್ತರ ಕೊಡುತ್ತೀರಿ ಹೇಳಿರಿ ಎಂದು ಕಾಂಗ್ರೆಸ್ ಮುಖಂಡ ಮುಚಖಂಡಯ್ಯ ಹಂಗರಗಿ ಹೇಳಿದರು. ನನ್ನನ್ನು ಗೆಲ್ಲಿಸಿದ್ದೀರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಮತ್ತೆ ಗೆಲ್ಲಿಸುತ್ತೇವೆ ಎಂದ ಅಭಿಮಾನಿಗಳು ಹೇಳಿದ್ದಾರೆ.

ಹೈಕಮಾಂಡ್​ ಕಡೆ ಬೊಟ್ಟು, ಸಿದ್ದು ಅಭಿಮಾನಿಗಳಲ್ಲಿ ಮತ್ತೆ ನಿರಾಸೆ

ಬಾದಾಮಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಆಸೆಯಿಂದಿದ್ದ ಅಭಿಮಾನಿಗಳಿಗೆ ಸಿದ್ದರಾಮಯ್ಯ ಅವರು ಮತ್ತೆ ನಿರಾಸೆ ಮೂಡಿಸಿದ್ದಾರೆ. ಬಾದಾಮಿಯಿಂದ ಸ್ಪರ್ಧೆ ಬಗ್ಗೆ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಕಡೆ ಬೊಟ್ಟು ಮಾಡಿದ ಹಿನ್ನೆಲೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ನೀವೆ ಮತ್ತೆ ಸಿಎಮ್ ಆಗಬೇಕು ಎಂದ ಅಭಿಮಾನಿಗಳು

ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಾ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರಕ್ಕೆ ಮುಂದಾದರು. ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರ. ಇಂತಹ ಸರಕಾರ ಇರಬಾರದು ಎಂದು ಹೇಳುತ್ತಿದ್ದಂತೆ ನೀವೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅಭಿಮಾನಿಗಳು ಹೇಳಿದರು. ಈ ವೇಳೆ ನಾನು ‌ಸಿಎಂ ಆಗಬೇಕೆಂದರೆ ನೀವು ಆಶೀರ್ವಾದ ‌ಮಾಡಬೇಕು ಎಂದು ಅಭಿಮಾನಿಗಳಿಗೆ ಸಿದ್ದರಾಮಯ್ಯ ಅವರು ಹೇಳಿದರು.

ಹೈಕಮಾಂಡ್​ನವರು ಬಾದಾಮಿಯಿಂದ ನಿಲ್ಲಿ ಎಂದು ಹೇಳಿದರೆ ನಿಲ್ಲುತ್ತೇನೆ. ನಾನು ನಿಲ್ಲಲಿ ನಿಲ್ಲದೇ ಇರಲಿ ನೀವು ಕಾಂಗ್ರೆಸ್​ಗೆ ವೋಟ್ ಹಾಕಬೇಕು. ಯಾರೇ ಅಭ್ಯರ್ಥಿಯಾದರೂ ನಾನೇ ನಿಂತಿದ್ದೇನೆ ಎಂದು ವೋಟ್ ಹಾಕಬೇಕು ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖಂಡ ಮುಚಖಂಡಯ್ಯ, ನೀವು ಇಲ್ಲೇ ನಿಲ್ಲಬೇಕು ಇಲ್ಲಿಂದಲೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ, ಏ ಮುಚಖಂಡಯ್ಯ ನೀವು ಹುಡುಗರ ತರ ಆಡ್ತಿಯಲ್ಲಯ್ಯ ಎಂದು ಗದರಿದರು.

ಸಿದ್ದರಾಮಯ್ಯಗೆ ಜೈ ಅನ್ನುತ್ತಾ ವೇದಿಕೆ ಬಳಿ ಬಂದ ವ್ಯಕ್ತಿ

ಬಾದಾಮಿಯಲ್ಲಿಂದು ಅವರ ಅಭಿಮಾನಿಯೊಬ್ಬ ಪ್ರಾಯಶಃ ಎಣ್ಣೆ ಹಾಕಿದ್ದ ಅನಿಸುತ್ತೆ, ಮೈಯೆಲ್ಲ ಗುಲಾಲ್ ಚೆಲ್ಲಿಕೊಂಡು, ಸಿದ್ದರಾಮಯ್ಯ ಜೈ ಅನ್ನುತ್ತಾ ವೇದಿಕೆ ಮುಂಭಾಗಕ್ಕೆ ಬರುತ್ತಾನೆ. ಕಾರ್ಯಕರ್ತರು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದಾಗ ಅವರಿಗೇ ತಿರುಗಿ ಬೀಳುತ್ತಾನೆ. ಕೊನೆಗೆ ಪೊಲೀಸರು ಬಂದು ಅವನನ್ನು ಅಲ್ಲಿಂದ ಎಳೆದೊಯ್ದ ಪ್ರಸಂಗವೂ ನಡೆಯಿತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Fri, 24 March 23