ವಿಧಾನಪರಿಷತ್​​ ಸಭಾಪತಿ ಕಚೇರಿಯಲ್ಲಿ ಹೈಡ್ರಾಮಾ: ಕಾಂಗ್ರೆಸ್ ಸದಸ್ಯರ ರಾಜೀನಾಮೆ ಪ್ರಹಸನ

| Updated By: Ganapathi Sharma

Updated on: Mar 27, 2024 | 2:17 PM

ಕೋಲಾರ ಕಾಂಗ್ರೆಸ್ ಭಿನ್ನಮತ ಸ್ಫೋಟಗೊಂಡಿದ್ದು ರಾಜೀನಾಮೆ ನೀಡುವುದಕ್ಕಾಗಿ ಐವರು ಶಾಸಕರು (ಪರಿಷತ್ ಸದಸ್ಯರೂ ಸೇರಿ) ವಿಧಾನಸೌಧಕ್ಕೆ ತೆರಳಿದ್ದಾರೆ. ಪರಿಷತ್ ಸ್ಥಾನಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಅನಿಲ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದು, ಸಭಾಪತಿ ಹೊರಟ್ಟಿ ಸಂಜೆ ವರಗೆ ಕಾಯುವಂತೆ ಸೂಚಿಸಿದ್ದಾರೆ. ಈ ವೇಳೆ ವಿಧಾನಪರಿಷತ್​​ ಸಭಾಪತಿ ಕಚೇರಿಯಲ್ಲಿ ಹೈಡ್ರಾಮಾ ನಡೆಯಿತು.

ವಿಧಾನಪರಿಷತ್​​ ಸಭಾಪತಿ ಕಚೇರಿಯಲ್ಲಿ ಹೈಡ್ರಾಮಾ: ಕಾಂಗ್ರೆಸ್ ಸದಸ್ಯರ ರಾಜೀನಾಮೆ ಪ್ರಹಸನ
ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹ್ಮದ್
Follow us on

ಬೆಂಗಳೂರು, ಮಾರ್ಚ್​ 27: ಲೋಕಸಭೆ ಚುನಾವಣೆಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಉಂಟಾಗಿರುವ ಭಿನ್ನಮತ ಇದೀಗ ಸ್ಫೋಟಗೊಂಡಿದೆ. ಸಚಿವ ಕೆಹೆಚ್​​ ಮುನಿಯಪ್ಪ (KH Muniyappa) ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಕಾಂಗ್ರೆಸ್​​ನ ಪರಿಷತ್​ ಸದಸ್ಯರೂ ಸೇರಿದಂತೆ ಐವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಇತರರು ವಿಧಾನಪರಿಷತ್​​ ಸಭಾಪತಿ ಕಚೇರಿಗೆ ತೆರಳಿ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜೀನಾಮೆ ನೀಡಲು ಬುಧವಾರ ಮಧ್ಯಾಹ್ನ ಮುಂದಾದರು. ಈ ವೇಳೆ ನಾಟಕೀಯ ಬೆಳವಣಿಗೆಗಳು ನಡೆದವು.

ವಿಧಾನಪರಿಷತ್​​ ಸಭಾಪತಿ ಕಚೇರಿಯ ಹೊರಭಾಗದಲ್ಲಿ ಮಾತನಾಡಿದ ನಜೀರ್ ಅಹ್ಮದ್, ರಾಜೀನಾಮೆ ಕೊಡುವುದು ನಮ್ಮ ಹಕ್ಕು. ನಾವು ರಾಜೀನಾಮೆ ಕೊಡಬೇಕೆಂದೇ ಇಲ್ಲಿಗೆ ಬಂದಿದ್ದೆವು. ಆದರೆ, ರಾಜೀನಾಮೆ ಸ್ವೀಕರಿಸುವುದು ಬಿಟ್ಟು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರುವವರೆಗೂ ಕಾಯಿರಿ ಎಂದಿದ್ದಾರೆ ಎಂದರು.

ನಾನು ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಸಂಜೆ ಸಿಎಂ, ಡಿಸಿಎಂ ಜೊತೆಗೆ ನಾವು ಚರ್ಚೆ ಮಾಡುತ್ತೇವೆ ಎಂದ ನಜೀರ್ ಅಹ್ಮದ್, ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುನಿಯಪ್ಪ ಒಬ್ಬ ಪುಟಗೋಸಿ: ನಜೀರ್ ಅಹ್ಮದ್ ಕಿಡಿ

ನಾನು ಸಚಿವನಾಗಿದ್ದಾಗ ಮುನಿಯಪ್ಪ ಬ್ಯಾಗ್​ ಹಿಡಿದುಕೊಂಡು ಬರುತ್ತಿದ್ದ. ಕೆಎಚ್ ಮುನಿಯಪ್ಪ ಒಬ್ಬ ಪುಟಗೋಸಿ. ಮುನಿಯಪ್ಪ ಪುಟಗೋಸಿ ಬ್ಯಾಗ್​ ಹಿಡಿದುಕೊಂಡು ನನ್ ಹಿಂದೆ ಬರುತ್ತಿದ್ದ. ಆಗಲೇ ನಾನು ಸಚಿವನಾಗಿದ್ದೆ ಎಂದ ಅಹ್ಮದ್, ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್​ ಕೊಡಬೇಕೆಂದು ಆಗ್ರಹಿಸಿದರು.

ಇನ್ನು ಶಾಸಕರ, ಪರಿಷತ್ ಸದಸ್ಯರ ರಾಜೀನಾಮೆ ವಿಚಾರವಾಗಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​ ಪ್ರತಿಕ್ರಿಯಿಸಿದ್ದು, ಅವರನ್ನು ಸಮಾಧಾನ ಮಾಡಿ ಎಂದು ಸಿಎಂ, ಡಿಸಿಎಂ ನನಗೆ ಸೂಚಿಸಿದ್ದಾರೆ. ಅವರ ಜೊತೆ ಮಾತನಾಡಿ ನಾವು ತೀರ್ಮಾನ ಮಾಡುತ್ತೇವೆ. ಕೋಲಾರ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆ ಇನ್ನು ಅಂತಿಮ ಆಗಿಲ್ಲ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದರು.

ರಾಜೀನಾಮೆಗೆ ಮುಂದಾದ ಶಾಸಕರು ಯಾರೆಲ್ಲ?

  • ಕೊತ್ತೂರು ಮಂಜುನಾಥ್, ಕೋಲಾರ ಶಾಸಕ
  • ಕೆವೈ ನಂಜೇಗೌಡ, ಮಾಲೂರು ಶಾಸಕ
  • ಎಂಸಿ ಸುಧಾಕರ್, ಸಚಿವ
  • ಅನಿಲ್ ಕುಮಾರ್, ಪರಿಷತ್ ಸದಸ್ಯ
  • ನಜೀರ್ ಅಹ್ಮದ್, ಪರಿಷತ್ ಸದಸ್ಯ

ರಾಜೀನಾಮೆ ಕೊಟ್ಟಿಲ್ಲ: ಹೊರಟ್ಟಿ

ಪರಿಷತ್ ಸ್ಥಾನಕ್ಕೆ ನಜೀರ್ ಅಹ್ಮದ್, ಅನಿಲ್ ಕುಮಾರ್ ಇನ್ನೂ ರಾಜೀನಾಮೆ ಕೊಟ್ಟಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಾಜೀನಾಮೆ ಕೊಡದೇ ನಾವು ಕಸಿದುಕೊಳ್ಳುವುದಕ್ಕೆ ಬರುವುದಿಲ್ಲ. ಅವರು ರಾಜೀನಾಮೆ ಕೊಟ್ಟರೆ ನಾವು ಸ್ವೀಕಾರ ಮಾಡುತ್ತೇವೆ. ಅವರಿಗೆ ಒತ್ತಾಯ ಮಾಡಿ ನಾನು ರಾಜೀನಾಮೆ ಪಡೆಯಲು ಆಗಲ್ಲ ಎಂದರು.

ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ

ಯಾರೂ ರಾಜೀಮನಾಮೆ ನೀಡಿಲ್ಲ: ಕೋಲಾರ ಕಾಂಗ್ರೆಸ್ ಅಧ್ಯಕ್ಷ

ಕೋಲಾರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಪ್ರತಿಕ್ರಿಯಿಸಿದ್ದು, ಯಾರೂ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ. ಎಲ್ಲ ಶಾಸಕರ ಸಭೆ ನಡೆಸಿ ಆಭ್ಯರ್ಥಿಯನ್ನು ಗೆಲ್ಲಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಎಲ್ಲರು ಸಮ್ಮತಿ ನೀಡಿದ್ದಾರೆ. ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗಲಿದೆ ಎಂದು ಕೋಲಾರದ ಪತ್ರಕರ್ತರ ಭವನದಲ್ಲಿ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 27 March 24