ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ಜಾಣತನದ ಉತ್ತರ
ನವೆಂಬರ್ 05 ರಂದು ಮಧ್ಯಪ್ರದೇಶದ ಖಂಡವಾದಲ್ಲಿ ನಡೆದಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು. ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಜಾಣತನದಿಂದ ಉತ್ತರ ನೀಡಿದ್ದಾರೆ.
ಬೆಂಗಳೂರು ನ.06: ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯದ ಬಗ್ಗೆ ಟೀಕಿಸುವುದು ಸಹಜ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆರೋಪ ಮಾಡಿದ್ದನ್ನು ಒಪ್ಪಬೇಕು ಅಂತಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು. ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕೆ ಮಾಡಿದ್ದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದೇವು. ನಾವು ಆರೋಪ ಮಾಡಿದ್ದಾಗ, ಬಿಜೆಪಿಯವರು ಒಪ್ಪಿಕೊಂಡಿದ್ದರಾ? ಎಂದರು.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕೆಂಬ ವಾಲ್ಮೀಕಿ ಶ್ರೀಗಳ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಶ್ರೀಗಳು ಮೊದಲಿನಿಂದಲೂ ಹೇಳುತ್ತಿದ್ದಾರೆ, ಈಗಲೂ ಹೇಳಿದ್ದಾರೆ. ಸಹಜವಾಗಿಯೇ ಸಮುದಾಯದ ಪರವಾಗಿ ಮಾತನಾಡುತ್ತಾರೆ. ನಾನು ಯಾವುದೇ ಪವರ್ ಸೆಂಟರ್ ಅಲ್ಲ. ನಮ್ಮದು ಒಂದೇ ಪವರ್ ಸೆಂಟರ್ ಅದು ಹೈಕಮಾಂಡ್ ಎಂದರು.
ಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ಗೆ ತಾವು ಗೈರಾದ ವಿಚಾರವಾಗಿ ಮಾತನಾಡಿದ ಅವರು ಅನಾರೋಗ್ಯದ ಕಾರಣ ಸಭೆಗೆ ಹೋಗಲು ಆಗಲಿಲ್ಲ. ಸಭೆಗೆ ಗೈರಾಗುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೆ. ಮೀಟಿಂಗ್ಗೆ ಹೋಗದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂಬುವುದು ಸರಿ ಇದೆ ಎಂದು ಹೇಳಿದರು
ಇದನ್ನೂ ಓದಿ: ಸಿಎಂ ಅಧಿಕಾರ ಹಂಚಿಕೆ ಚರ್ಚೆ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಎಬ್ಬಿಸಿದ ಸ್ವಾಮೀಜಿ!
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದ ಪ್ರಧಾನಿ ಮೋದಿ
ನವೆಂಬರ್ 05 ರಂದು ಮಧ್ಯಪ್ರದೇಶದ ಖಂಡವಾದಲ್ಲಿ ನಡೆದಿದ್ದ ಬಹಿರಂಗ ಸಭೆಯಲ್ಲಿ ಮಾಡಿದ್ದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಹಾಳಾಗಿದ್ದು, ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ. ಕರ್ನಾಟಕದಲ್ಲಿ ಕೇವಲ ಆರು ತಿಂಗಳ ಹಿಂದೆ ರಚನೆಯಾದ ಕಾಂಗ್ರೆಸ್ ಸರ್ಕಾರವನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಎಂದು ಗೊತ್ತಿಲ್ಲ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಮುಂದುವರಿಕೆ ಬಗ್ಗೆಯೇ ಗೊಂದಲಗಳು ಎದ್ದಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಅಧಿಕಾರ ಹಿಡಿದಿರುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಭಾಗಿಯಾದ್ದರಿಂದ ಕರ್ನಾಟಕವನ್ನು ಅವರು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಈ ಹೇಳಿಕೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿ ಅವರ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಹಿರಂಗ ಹೇಳಿಕೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನುಯ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 6 November 23