ಪರಿಷತ್ ಚುನಾವಣಾ ಮರು ಮತ ಎಣಿಕೆ ಮುಕ್ತಾಯ: ಉಪಸಭಾಪತಿ ಎಂ ಕೆ ಪ್ರಾಣೇಶ್ಗೆ ಢವಢವ
ವಿಧಾನ ಪರಿಷತ್ ಉಪಸಭಾಪತಿ ಚುನಾವಣೆಯ ಮರು ಮತ ಎಣಿಕೆ ಸುಪ್ರೀಂ ಕೋರ್ಟ್ ಆದೇಶದಂತೆ ಪೂರ್ಣಗೊಂಡಿದೆ. ಎಂ.ಕೆ. ಪ್ರಾಣೇಶ್ ಮತ್ತು ಗಾಯತ್ರಿ ಶಾಂತೇಗೌಡರ ನಡುವಿನ ಕಾನೂನು ಹೋರಾಟದ ಅಂತಿಮ ಹಂತ ಇದಾಗಿದೆ. ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆದ ಈ ಮರು ಎಣಿಕೆಯ ಫಲಿತಾಂಶವು ಚುನಾವಣಾ ಆಯೋಗದಿಂದ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

ಚಿಕ್ಕಮಗಳೂರು, ಮಾರ್ಚ್ 01: ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ (MK Pranesh) ವರ್ಸಸ್ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ನಡುವಿನ ಪರಿಷತ್ ಚುನಾವಣೆಯ (Parishad Election) ಮರು ಮತ ಎಣಿಕೆ (Recounting) ಕಾನೂನು ಸಮರ ಕ್ಲೈಮ್ಯಾಕ್ಸ್ ಹಂತಕೆ ಬಂದಿದೆ. ಸುಪ್ರೀಂಕೋರ್ಟ್ (Suprem Court) ನಿರ್ದೇಶನದ ಮೇರೆಗೆ ಮರು ಮತ ಎಣಿಕೆ ಶುಕ್ರವಾರ (ಫೆ.28) ರಾತ್ರಿ ಮುಕ್ತಾಯಗೊಂಡಿದೆ. ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯ ಮತದಾನದ ಮರುಮತ ಎಣಿಕೆ ಉಚ್ಚನ್ಯಾಯಾಲಯದ ಆದೇಶ ಮೇರೆಗೆ ನಡೆದಿದೆ.
2021ರ ರಂದು ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣ ಪಂಚಾಯಿತಿಯ 12 ಮಂದಿ ನಾಮ ನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ 2021ರ ಡಿಸೆಂಬರ್ 14 ರಂದು ಮತ ಎಣಿಕೆ ನಡೆದಿದ್ದು, ಒಟ್ಟು 2410 ಮತಗಳಲ್ಲಿ 39 ಅಸಿಂಧುವಾಗಿದ್ದು, 2371 ಮತಗಳು ಸಿಂಧುವಾಗಿದ್ದವು. ಈಗ ವಿಧಾನಪರಿಷತ್ ಉಪ ಸಭಾಪತಿಯಾಗಿರುವ ಎಂ.ಕೆ.ಪ್ರಾಣೇಶ್ 1188 ಮತಪಡೆದರೇ, ಗಾಯತ್ರಿಶಾಂತೇಗೌಡ 1182 ಮತಪಡೆದಿದ್ದರು. ಬಿಜೆಪಿಯ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನ ಎ.ವಿ.ಗಾಯತ್ರಿ ಶಾಂತೇಗೌಡ ವಿರುದ್ಧ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಕ ಸದಸ್ಯರಿಗೆ ಮತದಾನಮಾಡುವ ಅವಕಾಶವಿಲ್ಲವೆಂದು ಗಾಯತ್ರಿ ಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಇತ್ತೀಚೆಗೆ ನಾಮ ನಿರ್ದೇಶಿತ ಸದಸ್ಯರ 12 ಮತಗಳನ್ನು ಪ್ರತ್ಯೇಕವಾಗಿರಿಸಿ 30 ದಿನದೊಳಗೆ ಮರುಮತ ಎಣಿಕೆ ಮಾಡುವಂತೆ ಆದೇಶಿಸಿತ್ತು. ಮರುಮತ ಎಣಿಕೆಗೆ ತಡೆ ನೀಡುವಂತೆ ಎಂ.ಕೆ.ಪ್ರಾಣೇಶ್ ಸಲ್ಲಿಸಿದ್ದ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಹೈ ಕೋರ್ಟ್ ಸೂಚನೆಯಂತೆ ಮರು ಮತ ಎಣಿಕೆ ನಡೆಯಿತು.
ಮರು ಮತ ಎಣಿಕಾ ಕಾರ್ಯಕ್ಕೆ ವೀಕ್ಷಕರನ್ನಾಗಿ ಚುನಾವಣಾ ಆಯೋಗ ಉಜ್ವಲ್ ಕುಮಾರ್ ಘೋಷ್ ಸೇರಿದಂತೆ ಮೂವರನ್ನ ನೇಮಕ ಮಾಡಿತ್ತು. ಶುಕ್ರವಾರ (ಫೆ.28) ಬೆಳಗ್ಗೆ 6:30ಕ್ಕೆ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿರುವ ಟ್ರಂಕ್ ನಲ್ಲಿರಿಸಿರುವ ಬ್ಯಾಲೆಟ್ ಪೇಪರ್ಗಳನ್ನ ಐಡಿಎಸ್‌ಜಿ ಕಾಲೇಜಿನ ಮರು ಮತ ಎಣಿಕಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಮರು ಮತ ಎಣಿಕಾ ಕೇಂದ್ರದಲ್ಲಿ ಓರ್ವ ಅಭ್ಯರ್ಥಿ ಜೊತೆಗೆ ಒಬ್ಬ ಚುನಾವಣಾ ಏಜೆಂಟ್ ಹಾಗೂ ಇಬ್ಬರು ಕೌಂಟಿಂಗ್ ಏಜೆಂಟರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಎರಡು ರೌಂಡ್ ಟೇಬಲ್ನಲ್ಲಿ ಮತ ಎಣಿಕಾ ಕಾರ್ಯ ನಡೆದಿದ್ದು, ಮರು ಮತ ಎಣಿಕೆಯ ಕಾರ್ಯ ಸಂಪೂರ್ಣ ವಿಡಿಯೋ ಚಿತ್ರೀಕರಣಗೊಂಡಿದೆ. ಎರಡು ಸ್ಟ್ಯಾಂಡ್ ಕ್ಯಾಮೆರಾ, ಒಂದು ಮೂವಿಂಗ್ ಕ್ಯಾಮರಾದ ಕಣ್ಗಾವಲಲ್ಲಿ ಮರು ಮತ ಎಣಿಕೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಮರು ಮತ ಎಣಿಕಾ ಕಾರ್ಯದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿತ್ತು.
ಚಿಕ್ಕಮಗಳೂರು ತಾಲೂಕಿನಾದ್ಯಂತ ಮದ್ಯ ನಿಷೇಧ ಕೂಡಾ ಮಾಡಲಾಗಿತ್ತು. ಇನ್ನೂ, ಭದ್ರತೆಗಾಗಿ 4 KSRP, ಹಾಗೂ 300 ಹೆಚ್ಚು ಅಧಿಕಾರಿ, ಸಿಬ್ಬಂದಿಯನ್ನ ನಿಯೋಜನೆ ಮಾಡಿಕೊಳ್ಳಲಾಗಿತ್ತು. ತಾಲೂಕಿನ ಕೆಲವೆಡೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು. ಮರು ಮತ ಎಣಿಕಾ ಕೇಂದ್ರದ ಒಳಗೆ ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಗೇಟ್ ಒಳಗೆ ಯಾವುದೇ ವ್ಯಕ್ತಿ ಅಥವಾ ವಾಹನಗಳಿಗೆ ಪ್ರವೇಶವನ್ನೂ ಕೂಡಾ ನಿಷೇಧಿಸಲಾಗಿತ್ತು.
ಇದನ್ನೂ ಓದಿ: ಪರಿಷತ್ ಚುನಾವಣೆ: ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಆಯ್ಕೆ: ಯಾರು ಈ ಬಲ್ಕಿಸ್ ಭಾನು?
ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಹಾಗೂ ಗಾಯಿತ್ರಿ ಶಾಂತೇಗೌಡ ಅವರ ಮೂರು ವರ್ಷಗಳ ಕಾನೂನು ಸಮರದ ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೂಚನೆ ಮೇರೆಗೆ ಕ್ಯಾಮೆರಾ ಕಣ್ಗಾವಲಿನಲ್ಲಿ ಮರು ಮತ ಎಣಿಕಾ ಕಾರ್ಯ ಮುಗಿದಿದ್ದು, ಮುಚ್ಚಿದ ಲಗೋಟೆಯಲ್ಲಿ ಫಲಿತಾಂಶ ಭದ್ರವಾಗಿದೆ. ಫಲಿತಾಂಶವನ್ನು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ನೀಡಲಿದ್ದು, ಮಾರ್ಚ್ 4 ರಂದು ತೀರ್ಪು ಹೊರ ಬರುವ ಸಾಧ್ಯತೆ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Sat, 1 March 25