Central Cabinet Expansion: ಉದಾಸಿ, ಗದ್ದಿಗೌಡರ್ ಜೊತೆಗೆ ರಾಘವೇಂದ್ರ ಹೆಸರೂ ಪಟ್ಟಿಯಲ್ಲಿದೆ

ಕೇಂದ್ರ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭ ಆಗಲಿದೆ ಎನ್ನುವ ಹಿನ್ನೆಲೆಯಲ್ಲಿ, ರಾಜ್ಯದಿಂದ ಯಾರು ಕೇಂದ್ರ ಸಂಪುಟ ಸೇರಬಹುದು ಎನ್ನುವ ಲೆಕ್ಕಾಚಾರ ಈಗ ಪ್ರಾರಂಭ ಆಗಿದೆ. ಶಿವಕುಮಾರ್​ ಉದಾಸಿ ಮತ್ತು ಪಿ.ಸಿ. ಗದ್ದಿಗೌಡರ್​ ಅವರ ಹೆಸರಿನ ಜೊತೆ ಬಿ.ವೈ. ರಾಘವೇಂದ್ರ ಹೆಸರು ಸಂಪುಟ ಸೇರುವವರ ಪಟ್ಟಿಯಲ್ಲಿ ಕಾಣುತ್ತಿರುವುದು ವಿಶೇಷ.

Central Cabinet Expansion: ಉದಾಸಿ, ಗದ್ದಿಗೌಡರ್ ಜೊತೆಗೆ ರಾಘವೇಂದ್ರ ಹೆಸರೂ ಪಟ್ಟಿಯಲ್ಲಿದೆ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
ಡಾ. ಭಾಸ್ಕರ ಹೆಗಡೆ
|

Updated on:Jul 02, 2021 | 6:21 PM

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಶನಿವಾರ (ಜೂನ್ 3) ಆಗಬಹುದು ಎಂಬ ಮಾಹಿತಿ ಜೋರಾಗಿ ಹರಿದಾಡುತ್ತಿದೆ. ಈಗಾಗಲೇ, ಎನ್​ಡಿಟಿವಿ ಮತ್ತು ಇನ್ನೂ ಅನೇಕ ರಾಷ್ಟ್ರೀಯ ಸುದ್ದಿ ವಾಹಿನಿಗಳು ಈ ಕುರಿತು ಮಾಹಿತಿಯನ್ನು ಮತ್ತು ವಿವರವನ್ನು ನೀಡುತ್ತಿವೆ. ಕರ್ನಾಟಕದ ದೃಷ್ಟಿಯಿಂದ ಈ ಸಂಪುಟ ವಿಸ್ತರಣೆ ಬಹಳ ಮುಖ್ಯ. ಇನ್ನು ಎರಡು ವರ್ಷದೊಳಗೆ ವಿಧಾನ ಸಭಾ ಚುನಾವಣೆ ಇದೆ. ಈ ಸಂಪುಟ ವಿಸ್ತರಣೆಯಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ನೇರವಾಗಿ ಲಾಭ ಆಗಬಹುದು ಎಂದರೆ ನಂಬುವುದು ಕಷ್ಟ. ಆದರೆ ಚುನಾವಣಾ ಪೂರ್ವ ಗ್ರಹಿಕೆಯ ಯುದ್ಧದಲ್ಲಿ (Perception Battle) ಆಡಳಿತ ಪಕ್ಷಕ್ಕೆ ಅನುಕೂಲವಾಗಲು ಏನೆಲ್ಲ ತಂತ್ರ ಮಾಡಬೇಕೋ ಅದಕ್ಕೆ ಈ ಸಂಪುಟ ವಿಸ್ತರಣೆ ಸಹಕಾರಿಯಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.

ದೆಹಲಿಯ ಮೂಲಗಳ ಪ್ರಕಾರ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಸಂಪುಟ ಸೇರುವ ಅವಕಾಶ ಸಿಗಬಹುದು. ಆದರೆ, ಮೋದಿಯವರ ಲೆಕ್ಕಾಚಾರ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಉದಾಹರಣೆಗೆ, ಮೋದಿ  ಸರ್ಕಾರದ ಮೊದಲ ಅವಧಿಯಲ್ಲಿ (ಮೋದಿ 1.0) ಅನಂತಕುಮಾರ ಹೆಗಡೆ ಅವರಿಗೆ ಅವಕಾಶ ಸಿಗುತ್ತೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಹಾಗೇನೇ ಈಗಲೂ ಸಹ 25 ಸಂಸದರಲ್ಲಿ ಅವಕಾಶ ಯಾರಿಗೆ ಒಲಿದು ಬರುತ್ತೆ ಎಂದು ಹೇಳಲಾಗದು.

ಕರ್ನಾಟಕದ ರಾಜಕೀಯ ಜಾತಿಯ ಮೇಲೆ ನಿಂತಿರುವುದರಿಂದ, ಯಾರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಈ ರಾಜಕೀಯದ ಲಾಭ ಸಿಗಬಹುದು ಎಂದು ಬಿಜೆಪಿ ಲೆಕ್ಕಾಚಾರ ಮಾಡಿರುವುದು ನಿಜ. ಈ ಹಿನ್ನೆಲೆಯಲ್ಲಿ, ಸುರೇಶ ಅಂಗಡಿಯವರ ನಿಧನದಿಂದ ಖಾಲಿಯಾದ ಸ್ಥಾನಕ್ಕೆ ಮತ್ತೋರ್ವ ಲಿಂಗಾಯತ ನಾಯಕರನ್ನು ತರುವ ಸಾಧ್ಯತೆ ಇದೆ. ಲಿಂಗಾಯತ ನಾಯಕರ ಲೆಕ್ಕಾಚಾರಕ್ಕೆ ಇಳಿದರೆ, ಶಿವಕುಮಾರ್ ಉದಾಸಿ ಮತ್ತು ಪಿ.ಸಿ. ಗದ್ದಿಗೌಡರ್ ಅವರ ಹೆಸರು ಕೇಳಿಬರುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಪ್ರಾಯಶಃ ಇವರಿಬ್ಬರಲ್ಲಿ ಒಬ್ಬರು ಸಂಪುಟ ಸೇರುವ ಸಾಧ್ಯತೆ ಜಾಸ್ತಿ ಇದೆ ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ. ಇದರ ಜೊತೆಗೆ ಪರಿಶಿಷ್ಟ ಜಾತಿಯಿಂದ ಕೂಡ ಓರ್ವ ನಾಯಕರು ಕೇಂದ್ರ ಸಂಪುಟ ಸೇರಬಹುದು ಎಂಬ ಲೆಕ್ಕಾಚಾರ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಈ ನಡುವೆ ಇನ್ನೊಂದು ಪ್ರಮುಖ ತಿರುವು ಆಗುವ ಸಾಧ್ಯತೆಯನ್ನು ಇಲ್ಲಿ ತಳ್ಳಿ ಹಾಕಲು ಆಗಲ್ಲ.

ಆ ತಿರುವು ಯಾವುದು? ಸುಮಾರು ಎಂಟು ದಿನಗಳ ಹಿಂದೆ ಮಾಧ್ಯಮದ ಸರ್ಚ್​ಲೈಟ್​ಗೆ ಸಿಗದೆ ರಾಜ್ಯಕ್ಕೆ ಬಂದು ಆರ್​ಎಸ್​ಎಸ್​ ನಾಯಕರನ್ನು, ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಹಿಂತಿರುಗಿದ ಭೂಪೇಂದ್ರ ಯಾದವ್ ಅವರ ವರದಿಯ ಮೇಲೆ ರಾಜ್ಯ ಬಿಜೆಪಿಯ ಮುಂದಿನ ಬೆಳವಣಿಗೆ ನಿಂತಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿಯ ಭವಿಷ್ಯದ ಕೊಂಡಿಯಾಗಿರುವ ಈ ಕೇಂದ್ರ ಸಂಪುಟಕ್ಕೆ ಯಾರು ಸೇರಬೇಕು ಎಂಬ ವಿಚಾರ ಕೂಡ ಇಲ್ಲಿ ಚರ್ಚೆ ಆಗಿರುವ ಸಾಧ್ಯತೆ ಇದೆ, ಎಂದು ಮೂಲಗಳು ಹೇಳಿವೆ.

ಪಕ್ಷದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಮತ್ತು ಶಿವಮೊಗ್ಗ ಸಂಸದ, ಬಿ.ವೈ. ರಾಘವೇಂದ್ರ ಅವರಿಗೆ ಕೆಂದ್ರ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಒಮ್ಮೆ ಈ ಬೆಳವಣಿಗೆ ಆದಲ್ಲಿ, ಇದು ರಾಜ್ಯ ರಾಜಕೀಯದಲ್ಲಿ ಮುಂದಾಗಬಹುದಾದ ರಾಜಕೀಯ ಬದಲಾವಣೆಯ ಮುನ್ನುಡಿಯಾಗುವ ಸಾಧ್ಯತೆ ಜಾಸ್ತಿ. ಒಂದು ಬಾರಿಯೂ ಮಂತ್ರಿ ಆಗಿಲ್ಲದ ರಾಘವೇಂದ್ರ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ತೀರ್ಮಾನವನ್ನೇನಾದರೂ ಮೋದಿ ತೆಗೆದುಕೊಂಡರೆ ಅದು ಮುಖ್ಯ ಬೆಳವಣಿಗೆ. ಯಾಕೆಂದರೆ ಅದು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಕೇಂದ್ರದ ನಾಯಕರ ಮಾಡಿಕೊಂಡಿರುವ ಒಳ ಒಪ್ಪಂದದ ಭಾಗವಾಗಿರುವ ಸಾಧ್ಯತೆ ಜಾಸ್ತಿ ಇರುತ್ತದೆ. ಅಂದರೆ, ರಾಘವೇಂದ್ರ ಅವರನ್ನು ಈಗ ಮಂತ್ರಿ ಮಾಡಿದರೆ, ಯಡಿಯೂರಪ್ಪ ತಮ್ಮ ಸ್ಥಾನದಿಂದ ಇಳಿಯುವ ಸಾಧ್ಯತೆ ಜಾಸ್ತಿ ಇದೆ ಎಂಬುದು ಪಕ್ಷದ ನಾಯಕರ ವಾದ.

ಆದರೆ ಇದರ ಸಾಧ್ಯತೆ ಕಡಿಮೆ ಎಂಬುದು ಯಡಿಯೂರಪ್ಪ ಗುಂಪಿನ ವಾದ. ಮೊನ್ನೆ ವಿಜಯೇಂದ್ರ ನೀಡಿದ ಹೇಳಿಕೆ-ನಾಯಕತ್ವ ಬದಲಾವಣೆ ಮುಗಿದ ಮಾತು-ಎಂಬುದು ನಿಜವಾಗಿದ್ದರೆ, ರಾಘವೇಂದ್ರ ಸಂಪುಟದ ಒಳಗೆ ಬರಲಾರರು. ಅಂದರೆ, ಯಡಿಯೂರಪ್ಪ ಅವರೇ ಇನ್ನೆರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದು ಅವರ ವಾದ. ಆದರೆ ರಾಜಕೀಯದಲ್ಲಿ ಸದಾ ಆಶ್ಚರ್ಯ ನೀಡುತ್ತಲೇ ಬಂದಿರುವ ಮೋದಿ- ಅಮಿತ್ ಶಾ ಈ ಬಾರಿಯೂ ಶಾಕ್ ನೀಡಿ ರಾಘವೇಂದ್ರ ಅವರನ್ನೇ ಸಂಪುಟಕ್ಕೆ ಸೇರಿಸಿಕೊಂಡರೆ? ಆಗ ವಿಜಯೇಂದ್ರ ಕೂಡ ಅದನ್ನು ವಿರೋಧಿಸುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮೆಗಾ ವಿಸ್ತರಣೆ: ಯಾರಿಗೆಲ್ಲಾ ಅವಕಾಶ? ಇಲ್ಲಿದೆ ವಿವರ

ಇದನ್ನೂ ಓದಿ: Opinion: ಪ್ರಾಮಾಣಿಕ ಪತ್ರಕರ್ತರನ್ನು ನೀವು ಕೊಲ್ಲಬೇಡಿ!

(Names of BY Raghavendra son of CM BS Yediyurappa is among the list of probables from the state to join central cabinet in the expansion)

Published On - 6:05 pm, Fri, 2 July 21