Kannada News Politics Nitish Kumar-BJP tensions hitting peak JDU Leader To Meet All Party MLAs Amid Break Up Speculation
Nitish Kumar: ಶಮನವಾಗದ ಭಿನ್ನಮತ; ಬಿಹಾರ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ, ಇಂದು ನಿತೀಶ್ಕುಮಾರ್ ಮಹತ್ವದ ಸಭೆ
Bihar Politics: ಬಿಹಾರದಲ್ಲಿ ಚುರುಕಿನ ಬೆಳವಣಿಗೆ ಕಾಣುತ್ತಿರುವ ರಾಜಕೀಯ ನಾಟಕದಲ್ಲಿ ಈವರೆಗೆ ಆಗಿರುವ 10 ಮುಖ್ಯ ಬೆಳವಣಿಗೆಗಳು ಇವು...
ಅಮಿತ್ ಶಾ ಮತ್ತು ನಿತೀಶ್ ಕುಮಾರ್
Follow us on
ಮಹಾರಾಷ್ಟ್ರ ರಾಜಕಾರಣವು ದೇಶದ ಗಮನ ಸೆಳೆದ ಕೆಲವೇ ವಾರಗಳ ನಂತರ ಬಿಹಾರದ ರಾಜಕಾರಣದ ಬಗ್ಗೆ ಇದೀಗ ಎಲ್ಲರೂ ಮಾತನಾಡುತ್ತಿದ್ದಾರೆ. ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯು (JDU) ಮತ್ತು ಬಿಜೆಪಿ (BJP) ನಡುವಣ ಮೈತ್ರಿ ಮುರಿದುಬೀಳುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಸರ್ವಪಕ್ಷಗಳ ಸಂಸದರು ಮತ್ತು ಶಾಸಕರ ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು (ಆಗಸ್ಟ್ 9, ಮಂಗಳವಾರ) ಮುಂಜಾನೆ ಕರೆದಿದ್ದಾರೆ. ಈ ನಡುವೆ ಬಿಹಾರದಲ್ಲಿ ರಾಜಕೀಯ ಶಕ್ತಿಯಾಗಿರುವ ರಾಷ್ಟ್ರೀಯ ಜನತಾ ದಳ (Rashtriya Janatha Dal – RJD) ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷಗಳು ಜೆಡಿಯು ಜೊತೆಗೆ ಮೈತ್ರಿ ಸಿದ್ಧ ಎನ್ನುವ ಸಂದೇಶ ರವಾನಿಸಿವೆ.
ಬಿಹಾರದಲ್ಲಿ ಚುರುಕಿನ ಬೆಳವಣಿಗೆ ಕಾಣುತ್ತಿರುವ ರಾಜಕೀಯ ನಾಟಕದಲ್ಲಿ ಈವರೆಗೆ ಆಗಿರುವ 10 ಮುಖ್ಯ ಬೆಳವಣಿಗೆಗಳು ಇವು…
ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರುಹಾಜರಾಗಿದ್ದರು. ಬಿಹಾರದ ರಾಜ್ಯಕಾರಣದಲ್ಲಿ ಎನ್ಡಿಎ ಮೈತ್ರಿಕೂಟದ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆಗೆ ಇದು ಆಹಾರ ಒದಗಿಸಿತ್ತು. ಈ ಮೂಲಕ ಸತತ 3ನೇ ಬಾರಿಗೆ ಕೇಂದ್ರ ಸರ್ಕಾರ ಕರೆದಿದ್ದ ಸಭೆಯೊಂದನ್ನು ನಿತೀಶ್ ಕುಮಾರ್ ತಪ್ಪಿಸಿಕೊಂಡಿದ್ದರು. ಅದೇ ದಿನ ಬಿಹಾರದಲ್ಲಿ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು.
ನಿನ್ನೆ (ಆಗಸ್ಟ್ 8, ಸೋಮವಾರ) ನಿತೀಶ್ ಕುಮಾರ್ ಬಿಜೆಪಿ ನಾಯಕ ತಾರ್ಕಿಶೋರ್ ಪ್ರಸಾದ್ ಅವರನ್ನು ಭೇಟಿಯಾಗಿ, ಕೆಲ ಸಮಯ ಮಾತನಾಡಿದರು.
ಮುಖ್ಯಮಂತ್ರಿ ಕರೆದಿರುವ ಮಹತ್ವದ ಸಭೆಯ ಮುನ್ನಾ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಜೆಡಿಯು ನಾಯಕ ಉಪೇಂದ್ರ ಕುಶ್ವಾಹ, ‘ಎನ್ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿದೆ. ನಾವು ಇಂದು ಯಾವುದೇ ಹಕ್ಕು ಮಂಡಿಸುತ್ತಿಲ್ಲ. ಆದರೆ ನಿತೀಶ್ ಅವರಿಗೆ ಭಾರತದ ಪ್ರಧಾನಿಯಾಗುವ ಎಲ್ಲ ಅರ್ಹತೆಯಿದೆ ಎಂದು ಸೂಚ್ಯವಾಗಿ ಪಕ್ಷದ ಇಂಗಿತ ವ್ಯಕ್ತಪಡಿಸಿದ್ದರು.
ಜೆಡಿಯು ಹಿರಿಯ ನಾಯಕ ಆರ್ಸಿಪಿ ಸಿಂಗ್ ಪಕ್ಷವನ್ನು ತೊರೆದ ನಂತರ ಗೊಂದಲ ಮೂಡಿತ್ತು. ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಹೊಂದಲು ನಮಗೆ ಆಸಕ್ತಿಯಿಲ್ಲ ಎಂದು ಜೆಡಿಯು ಘೋಷಿಸಿತ್ತು. ‘2019ರಲ್ಲಿ ಲೋಕಸಭೆ ಚುನಾವಣೆ ಮುಕ್ತಾಯವಾದ ನಂತರ ಕೇಂದ್ರ ಸಂಪುಟದಲ್ಲಿ ನಮ್ಮ ಪಕ್ಷದ ಪ್ರತಿನಿಧಿ ಇರುವುದಿಲ್ಲ ಎಂದು ನಮ್ಮ ನಿಲುವು ಸ್ಪಷ್ಟಪಡಿಸಿದ್ದೆವು’ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೇಳಿದ್ದರು.
ಆರ್ಸಿಪಿ ಸಿಂಗ್ ಪಕ್ಷ ತೊರೆದ ಕುರಿತು ಪ್ರತಿಕ್ರಿಯಿಸಿದ್ದ ರಾಜೀವ್ ರಂಜನ್ ಸಿಂಗ್, ‘ಕೇಂದ್ರ ಸಂಪುಟಕ್ಕೆ ಆರ್ಸಿಪಿ ಸಿಂಗ್ ತಮ್ಮ ಸ್ವಂತ ಇಚ್ಛೆಯಿಂದ ಸೇರಿದ್ದರು. ಅಮಿತ್ ಶಾ ಸೂಚನೆಯಂತೆ ಕೇಂದ್ರ ಸಚಿವ ಸಂಪುಟ ಸೇರಿದೆ ಎಂದು ಆರ್ಸಿಪಿ ಸಿಂಗ್ ಹೇಳಿದ್ದರು. ಅಮಿತ್ ಶಾ ಜೆಡಿಯು ಪಕ್ಷಕ್ಕೆ ಸೇರಿದವರೇ? ಜೆಡಿಯು ಸಂಸದರ ಪೈಕಿ ಯಾರು ಸಚಿವರಾಗಬಹುದು ಎಂದು ಬಿಜೆಪಿ ನಿರ್ಧರಿಸಬಹುದೇ’ ಎಂದು ಪ್ರಶ್ನಿಸಿದ್ದರು.
ಬಿಹಾರ ರಾಜಕಾರಣದ ಕ್ಷಿಪ್ರ ಬೆಳವಣಿಗೆಯನ್ನು ಗಮನಿಸಿರುವ ಕಾಂಗ್ರೆಸ್ ಮತ್ತು ಆರ್ಜೆಡಿ ಸಹ ಇಂದು ಸಭೆ ನಡೆಸಲಿದ್ದು, ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿವೆ.
ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಈ ಪೈಕಿ ಬಿಜೆಪಿಗೆ 77 ಮತ್ತು ಜೆಡಿಯುಗೆ 45 ಶಾಸಕರಿದ್ದಾರೆ. ಅಧಿಕಾರಕ್ಕೆ ಪಡೆಯಲು 122 ಸದಸ್ಯ ಬಲ ಹೊಂದಿರಬೇಕಿದೆ.
75 ಸದಸ್ಯ ಬಲ ಹೊಂದಿರುವ ಆರ್ಜೆಡಿ ಬಿಹಾರ ವಿಧಾನಸಭೆಯ ಅತಿದೊಡ್ಡ ಪ್ರತಿಪಕ್ಷವಾಗಿದೆ. ನಿತೀಶ್ ಅವರು ಎನ್ಡಿಎ ಮೈತ್ರಿಕೂಟದಿಂದ ಹೊರಬಂದರೆ ಬೆಂಬಲಿಸಲು ಸಿದ್ಧ ಎಂದು ಆರ್ಜೆಡಿ ನಾಯಕರು ಹೇಳಿಕೆ ನೀಡಿದ್ದಾರೆ.
ಭಿನ್ನಮತದ ಕಾರಣಕ್ಕೆ 2017ರಲ್ಲಿ ನಿತೀಶ್ ಕುಮಾರ್ ಅವರು ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಹೊರಗೆ ಬಂದಿದ್ದರು.
ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ (ಆರ್) ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿ, ಹಲವು ಕ್ಷೇತ್ರಗಳಲ್ಲಿ ನಿತೀಶ್ ಪಕ್ಷದ ಹಿನ್ನಡೆಗೆ ಕಾರಣವಾಗಿತ್ತು. ಇದೀಗ ಮತ್ತೆ ಮಾತನಾಡಿರುವ ಚಿರಾಗ್ ಪಾಸ್ವಾನ್, ‘ನಿತೀಶ್ ಅವರಿಗೆ ಬಿಜೆಪಿ ಬಗ್ಗೆ ಆಕ್ಷೇಪಗಳಿದ್ದರೆ ನೇರವಾಗಿ ಮೋದಿ ಅವರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಲಿ. ಅದು ಬಿಟ್ಟು, ನಮ್ಮ ಹೆಸರು ಬಳಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು.