ಬಾಗಲಕೋಟೆ: ರಾಜ್ಯದಲ್ಲಿ ಪ್ರವಾಹ, ಕೊರೊನಾ ವೇಳೆ ಪ್ರಧಾನಿ ಮೋದಿ ಬರಲಿಲ್ಲ. ಚುನಾವಣೆ ಹಿನ್ನೆಲೆ ಈಗ ಮೇಲಿಂದ ಮೇಲೆ ಮೋದಿ ಬರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದರು. ಜಿಲ್ಲೆಯ ಕಲಾದಗಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಮೊದಲು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. 1 ಲಕ್ಷದವರೆಗೆ ಸಾಲಮನ್ನಾ ಮಾಡುತ್ತೇವೆಂದು ಹೇಳಿ ಮಾಡಲಿಲ್ಲ. ಭರವಸೆ ನೀಡದಿದ್ದರೂ ರೈತರ 50 ಸಾವಿರ ರೂಪಾಯಿ ಸಾಲ ಮನ್ನಾ ಮಾಡಿದೆ. ನಾನು ಸಿಎಂ ಆಗಿದ್ದಾಗ ಬೀಳಗಿ ಕ್ಷೇತ್ರಕ್ಕೆ 1,800 ಕೋಟಿ ಕೊಟ್ಟಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮೊದಲ ವರ್ಷವೇ 5 ಸಾವಿರ ಕೋಟಿ ಅನುದಾನ ನೀಡುತ್ತೇವೆ. ಮೋದಿ ಅಚ್ಛೇದಿನ್ ಅಂತಾ ಹೇಳಿದ್ದರು, ಎಲ್ಲಿ ಅಚ್ಛೇದಿನ್ ಬಂದಿದೆ ಎಂದು ಹರಿಹಾಯ್ದರು.
ರಸಗೊಬ್ಬರ, ಗ್ಯಾಸ್, ಅಡುಗೆಎಣ್ಣೆ, ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ರೈತರ ಸಾಲ ದುಪ್ಪಟ್ಟು ಆಯ್ತು ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ. ತೇಜಸ್ವಿ ಸೂರ್ಯ ಎಂಬುವನು ಒಬ್ಬ ಸಂಸದ ಇದ್ದಾನೆ. ರೈತರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗಿ ಹೋಗುತ್ತೆ ಅಂತಾನೆ. ಉದ್ಯಮಿಗಳಾದ ಅಂಬಾನಿ, ಅದಾನಿಯ ಕೋಟಿ ಕೋಟಿ ಸಾಲಮನ್ನಾ ಪ್ರಧಾನಿ ಮೋದಿ ಈ ಇಬ್ಬರು ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆ. ಬಿಜೆಪಿಯವರು ಅಂಬಾನಿ, ಅದಾನಿಯಿಂದಲೇ ಮತ ಹಾಕಿಸಿಕೊಳ್ಳಲಿ. ನೀವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಇಲ್ಲ, ಜನರಿಗೆ ಬಿಪಿಎಲ್ ಕಾರ್ಡ್ ಇಲ್ಲ: ಇದು ಬಿಜೆಪಿ ಸರ್ಕಾರದ ಬೀಳ್ಕೊಡಿಗೆ ಭಾಷಣ ಎಂದ ಖಾದರ್
ಕಬ್ಬಿನ ತೂಕದಲ್ಲಿ ಮೋಸಮಾಡಿ ಸಚಿವ ನಿರಾಣಿ ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಲೂಟಿ ಹೊಡೆದ ಹಣದಲ್ಲಿ ಮತದಾರರಿಗೆ 5 ಕೆಜಿ ಸಕ್ಕರೆ ಕೊಡ್ತಿದ್ದಾರೆ. ಈ ಮೂಲಕ ನಿರಾಣಿ ಮತ ಪಡೆಯುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಸೋಲುವುದು ಗೊತ್ತಾಗಿ ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ. ಯುಕೆಪಿ ಸಂತ್ರಸ್ತರಿಗೆ ಸಚಿವ ನಿರಾಣಿ ಏನು ಸಹಾಯ ಮಾಡಿದ್ದೀರಿ. ಅಧಿಕಾರಕ್ಕೆ ಬಂದು 4 ವರ್ಷ ಆಯ್ತು, ಏನಾದ್ರು ಸಹಾಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬಂದರೆ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಅಂದರು. ಅವರು 4 ವರ್ಷಗಳಲ್ಲಿ ಖರ್ಚು ಮಾಡಿದ್ದು ಕೇವಲ 45 ಸಾವಿರ ಕೋಟಿ ಎಂದು ಹೇಳಿದರು.
ಇದನ್ನೂ ಓದಿ: 64 ಕ್ಷೇತ್ರಗಳ ಟಿಕೆಟ್ ಬೇಡಿಕೆ ಇಟ್ಟ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು, ಆ ಕ್ಷೇತ್ರಗಳು ಯಾವುವು? ಇಲ್ಲಿದೆ ಪಟ್ಟಿ
ಇನ್ನು ಸಿಎಂ ಬೊಮ್ಮಾಯಿ ಸರಕಾರ ಮನೆಗೆ ಕಳಿಸೋದಕ್ಕೆ ಜನ ಕಾಯ್ತಾ ಇದಾರೆ. ನಾನು ಅನೇಕ ಸರಕಾರ, ಸಿಎಂ ನೋಡಿದ್ದೇನೆ. ಈ ಬಿಜೆಪಿ ಸರಕಾರದಂತ ಭ್ರಷ್ಟ ಸರಕಾರ, ವಚನ ಭ್ರಷ್ಟ ಸರಕಾರ, ದಲಿತರು, ಬಡವರ, ಮಹಿಳೆಯರು, ಇವರಿಗೆ ವಿರುದ್ಧವಾದ ಕೆಟ್ಟ ಸರಕಾರ ನೋಡಿಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಅಂತ ಪಿಸುಗುಡೋಕೆ ಶುರು ಮಾಡಿವೆ. ಇವರ ಭ್ರಷ್ಟಾಚಾರ ಆ ಮಟ್ಟಿಗೆ ಇದೆ. ಯಾವುದೇ ಕಚೇರಿಗೆ ಹೋಗಲಿ ಬರಿ ಲಂಚ ಎನ್ನುತ್ತಾರೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.