Sasikala ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು

ಜಯಲಲಿತಾ ನೆರಳಿನಂತೆ ಬದುಕಿ, ತನ್ನ ಬದುಕು ಕಟ್ಟಿಕೊಂಡ ಶಶಿಕಲಾ ನಟರಾಜನ್ ನಡೆದು ಬಂದ ಹಾದಿಯ ಅವಲೋಕನ ಇಲ್ಲಿದೆ. ಶಶಿಕಲಾ ತಮಿಳುನಾಡಿಗೆ ಬಂದರೆ ಆಡಳಿತಾರೂಢ ಎಐಎಡಿಎಂಕೆ ನಾಯಕರಲ್ಲಿ ಸ್ಥಾನಪಲ್ಲಟದ ಭೀತಿ ಏಕೆ?

Sasikala ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು
ದಿವಂಗತ ಜೆ.ಜಯಲಲಿತ ಅವರೊಂದಿಗೆ ಶಶಿಕಲಾ ನಟರಾಜನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 03, 2021 | 10:45 PM

ಇನ್ನೇನು ಮುಖ್ಯಮಂತ್ರಿ ಆಗಿಯೇಬಿಟ್ಟರು ಅಂದುಕೊಳ್ಳುತ್ತಿದ್ದಾಗ ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವರು ತಮಿಳುನಾಡು ರಾಜಕಾರಣದಲ್ಲಿ ಮತ್ತೊಮ್ಮೆ ಸಕ್ರಿಯರಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ತಮಿಳುನಾಡಿಗೆ ಬಂದಾಗ ಅವರಿಗೆ ದೊರೆತ ಸ್ವಾಗತ ಆಡಳಿತರೂಢ ಎಐಎಡಿಎಮ್​ಕೆ ಪಕ್ಷಕ್ಕೆ ನಡುಕ ಹುಟ್ಟಿಸಿತ್ತು. ಆದರೆ ಅವರು ಬುಧವಾರದಂದು ರಾಜಕೀಯಕ್ಕೆ ನಿವೃತ್ತಿ ಘೋಷಸಿ ತಮ್ಮಅಪಾರ ಬೆಂಬಲಿಗರಿಗೆ ನಿರಾಶೆ ಮೂಡಿಸಿದರೆ ವೈರಿಗಳಿಗೆ ನಿರಾಳತೆಯನ್ನು ಒದಗಿಸಿದ್ದಾರೆ. ಜಯಲಲಿತಾ ನೆರಳಿನಂತೆ ಬದುಕಿ, ತನ್ನ ಬದುಕು ಕಟ್ಟಿಕೊಂಡ ಶಶಿಕಲಾ ನಟರಾಜನ್ ನಡೆದು ಬಂದ ಹಾದಿಯ ಅವಲೋಕನ ಇಲ್ಲಿದೆ.

ತಮಿಳುನಾಡು ರಾಜಕೀಯಕ್ಕೆ 1980ರ ದಶಕದ ಆರಂಭದಲ್ಲಿ ಜೆ.ಜಯಲಲಿತಾ ಪ್ರವೇಶಿಸಿದಾಗ ಶಶಿಕಲಾ ನಟರಾಜನ್ ಎಂದೇ ಎಲ್ಲರಿಗೂ ಗೊತ್ತಿರುವ ವಿವಾಕಾನಂದನ್ ಕೃಷ್ನವೇಣಿ ಶಶಿಕಲಾ ಚೆನೈಯಲ್ಲಿ ಸಿನಿಮಾಗಳ ವಿಡಿಯೊ ಕೆಸೆಟ್​ಗಳನ್ನು ಬಾಡಿಗೆ ನೀಡುವ ಅಂಗಡಿಯೊಂದರ ಮಾಲೀಕರಾಗಿದ್ದರು. ಹಾಗೆಯೇ ಮದುವೆ ಮತ್ತು ಇತರ ಸಮಾರಂಭಗಳ ವಿಡಿಯೊ ಶೂಟ್ ಮಾಡುವ ಕಂಟ್ರ್ಯಾಕ್ಟ್ ಪಡೆದು ವಿಡಿಯೊಗ್ರಾಫಿ ಮಾಡಿ ಹಣ ಸಂಪಾದಿಸುತ್ತಿದ್ದರು. ಶಶಿಕಲಾ ಪತಿ ಎಂ.ನಟರಾಜನ್ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ತಮಿಳುನಾಡು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಕಾಂಟ್ಟ್ಯಾಕ್ಟ್​ಗಳನ್ನು ಹೆಚ್ಚಿಸಲು ಶಶಿಕಲಾ ಪತಿಯು ದುಂಬಾಲು ಬಿದ್ದಾಗ ಅಕೆಯ ಮಾತನ್ನು ಯಾವತ್ತೂ ಕಡೆಗಣಿಸಿದ ನಟರಾಜನ್ ಆಗ ಕಡಲೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಎಸ್.ಚಂದ್ರಲೇಖಾ ಅವರ ನೆರವು ಕೋರಿ ಆಗಷ್ಟೇ ರಾಜಕೀಯಕ್ಕೆ ಬಂದಿದ್ದರೂ ಆಲ್-ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂ​ಕೆ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಯಾಲಲಿತಾ ಅವರನ್ನು ಶಶಿಕಲಾಗೆ ಪರಿಚಯಿಸುವಂತೆ ವಿಜ್ಞಾಪಿಸಿದ್ದರು. ನಟರಾಜನ್ ದಂಪತಿಗಳ ಆಸೆಯನ್ನು ಈಡೇರಿಸಿದ್ದರು ಚಂದ್ರಲೇಖಾ.

ಚೆನೈನ ತಮಿಳು ಕುಟುಂಬವೊಂದರಲ್ಲಿ 66 ವರ್ಷಗಳ ಹಿಂದೆ ಜನಿಸಿದ ಶಶಿಕಲಾ ನಟರಾಜನ್​ರನ್ನು ವರಿಸಿದ್ದು 1973ರಲ್ಲಿ. ಆಗ ಜಯಲಲಿತಾ ತಮಿಳುನಾಡು ಚಿತ್ರರಂಗದಲ್ಲಿ ಜನಪ್ರಿಯ ತಾರೆ. ಹಾಗೆ ನೋಡಿದರೆ, ರಾಜಕೀಯ ಪ್ರವೇಶಿಸುವವರೆಗೂ ಅವರು ಬೇಡಿಕೆಯಲ್ಲಿದ್ದ ನಟಿಯಾಗಿದ್ದರು. ಅವರ ಮತ್ತು ವಿಖ್ಯಾತ ನಟನಾಗಿದ್ದು ನಂತರ ರಾಜಕೀಯ ಪ್ರವೇಶಿಸಿದ ಎಮ್ ಜಿ ರಾಮಚಂದ್ರನ್ ನಡುವಿನ ಸ್ನೇಹ ಸಂಬಂಧಕ್ಕೆ ತಿರುಗಿದ್ದರಿಂದ, ಆಕೆ ತಮಿಳು ಚಿತ್ರರಂಗದಂತೆ ರಾಜಕೀಯದಲ್ಲೂ ಬಹಳ ಪ್ರಭಾವವುಳ್ಳ ನಾಯಕಿಯಾಗಿ ಬೆಳೆಯಲು ಸಾಧ್ಯವಾಯಿತು.

ಶಶಿಕಲಾ ಪರಿಚಯಯವಾದ ನಂತರ ಜಯಾ ಆಕೆಯ ವಿಡಿಯೊ ಅಂಗಡಿಯಿಂದ ಕೆಸೆಟ್​ಗಳನ್ನು ತರಿಸಿಕೊಂಡು ನೋಡುತ್ತಿದ್ದರು. ಕ್ರಮೇಣ ಅವರು ಶಶಿಕಲಾಗೆ ತಮ್ಮ ಸಭೆಗಳ, ಭಾಷಣಗಳ ವಿಡಿಯೊಗ್ರಾಫಿ ಮಾಡುವ ಅವಕಾಶ ಕಲ್ಪಿಸಿದರು. ಶಶಿಕಲಾಗೆ ಬೇಕಾಗಿದ್ದ ಮಜಲು ದೊರಕಿತ್ತು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ

ಜಯಲಲಿತಾ ದೇಹದ ಪಕ್ಕ ಶಶಿಕಲಾ ಮತ್ತು ಆಕೆಯ ಕುಟುಂಬದವರು

ಎಂಜಿಆರ್ ನಿಧನದ ನಂತರ ಗಾಢವಾಯ್ತು ಸ್ನೇಹ ಜಯಾ ಮತ್ತು ಶಶಿಕಲಾ ನಡುವಿನ ಸ್ನೇಹ ಗಾಢವಾಗಿದ್ದು 1987ರಲ್ಲಿ ಎಂ.​ಜಿ.ರಾಮಚಂದ್ರನ್ (ಎಂಜಿಆರ್) ನಿಧನರಾದ ನಂತರ ಎಂದು ಎಐಎಡಿಎಂಕೆ ಪಕ್ಷದ ಹಳೆ ನಾಯಕರು ಹೇಳುತ್ತಾರೆ. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಪಕ್ಷದ ಸಾರಥ್ಯವಹಿಸಿಕೊಳ್ಳುವ ನಿರ್ಧಾರ ಪ್ರಕಟಿಸಿದಾಗ ಅದಕ್ಕಾಗಿ ಹೊಂಚುಹಾಕುತ್ತಿದ್ದ ಜಯಾ ಪಕ್ಷ ಇಬ್ಭಾಗವಾಗುವ ಸ್ಥಿತಿಯನ್ನು ಸೃಷ್ಟಿಸಿದರು. ಅನೇಕ ಹಿರಿಯ ನಾಯಕರು ಜಯಾ ಜೊತೆ ನಿಂತರು. ಈ ಹಂತದಲ್ಲಿ ಜಯಾಗೆ ಬೇಕಿದ್ದ ಮಾನಸಿಕ ಸ್ಥೈರ್ಯವನ್ನು ಮತ್ತು ಎಲ್ಲಾ ಬಗೆಯ ಬೆಂಬಲವನ್ನು ಶಶಿಕಲಾ ನೀಡಿದರು. ಆಕೆಯ ಸ್ನೇಹ, ನೀಡಿದ ಬೆಂಬಲ ಜಯಾರನ್ನು ಯಾವಮಟ್ಟಿಗೆ ಪರವಶಗೊಳಿಸಿದವೆಂದರೆ ಆಕೆಯನ್ನು ಪೊಯೆಸ್ ಗಾರ್ಡನ್​ಗೆ (ಜಯಾರ ಮನೆ) ಬರಮಾಡಿಕೊಂಡರು. ಜಯಾ ತನ್ನ ಬದುಕಿನ ಅಂತ್ಯದರೆಗೂ ಇದೇ ಮನೆಯಲ್ಲಿ ವಾಸವಾಗಿದ್ದರು. ಅಂದಹಾಗೆ, ಜಾನಕಿ ಮತ್ತು ಜಯಾ ನಡುವಿವ ವೈಮನಸ್ಸು ಬಹಳ ದಿನಗಳ ಉಳಿಯಲಿಲ್ಲ. ಎಐಎಡಿಎಂ​ಕೆ ಪಕ್ಷ ಮತ್ತೆ ಒಂದಾಯಿತು.

1991ರಲ್ಲಿ ಜಯಾ ಮುಖ್ಯಮಂತ್ರಿಯಾದಾಗ ಶಶಿಕಲಾ ಅಕ್ಷರಶಃ ಅವರ ನೆರಳಿನಂತಾದರು. ಆಕೆ ಎಲ್ಲೇ ಹೋದರೂ ಬೆಂಗಾವಲಿನವರಂತೆ ಶಶಿಕಲಾ ಜೊತೆಗಿರುತ್ತಿದ್ದರು. ಆದರೆ, ಜಯಾ ಅಧಿಕಾರ ಸ್ವೀಕರಿಸಿದ ಕೆಲ ದಿನಗಳ ನಂತರ ಅವರಿಗೆ ಶಶಿಕಲಾ ಪತಿ ನಟರಾಜನ್ ಜೊತೆ ಅದ್ಯಾವದೋ ಕಾರಣಕ್ಕೆ ಮನಸ್ತಾಪ ಬಂದು ಅವರನ್ನು ಪೊಯೆಸ್ ಗಾರ್ಡನ್​ನಿಂದ ಹೊರಗಟ್ಟಿದರು. 1996ರಲ್ಲಿ ಜಯಾ ಚುನಾವಣೆಯಲ್ಲಿ ಸೋತಾಗ ಅಲ್ಪಾವಧಿಯವರೆಗೆ ಶಶಿಕಲಾ ಸಹ ಅಕೆಯಿಂದ ದೂರವಾದರು. ಕೆಲ ತಿಂಗಳುಗಳ ನಂತರ ಅವರ ಮನಸ್ತಾಪ ತಿಳಿಗೊಂಡು ಶಶಿಕಲಾ ಪುನಃ ಪೊಯೆಸ್ ಗಾರ್ಡನ್​ಗೆ ವಾಪಸ್ಸಾದರು.

ಮೂಲಗಳ ಪ್ರಕಾರ ಶಶಿಕಲಾ, ಗ್ರಾನೈಟ್, ಗಣಿಗಾರಿಕೆ, ರಿಯಲ್ ಎಸ್ಟೇಟ್ ಮತ್ತು ಸಿನಿಮಾ ನಿರ್ಮಾಣ ಉದ್ಯಮಗಳ ಮೂಲಕ ಸಾಕಷ್ಟು ಹಣ ಸಂಪಾದಿಸಿದರು.

ಶಶಿಕಲಾ ಬಗ್ಗೆ ಜಯಲಲಿತಾಗೆ ಸಿಟ್ಟಿತ್ತು ಆದರೆ, 2011ರಲ್ಲಿ ಜಯಾ, ಶಶಿಕಲಾ ಮತ್ತು ಆಕೆಯ ಕುಟುಂಬದ ವಿರುದ್ಧ ಯಾವ ಪರಿ ಸಿಟ್ಟು ಮಾಡಿಕೊಂಡಿದ್ದರೆಂದರೆ ಅವರೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಶಶಿಕಲಾ ಒಂದು ಬಹಿರಂಗ ಕ್ಷಮಾಪಣೆ ಬರೆದುಕೊಟ್ಟ ನಂತರವೇ ಜಯಾ ಆಕೆಯನ್ನು ಕ್ಷಮಿಸಿ ಪಾರ್ಟಿಗೆ ಸೇರಿಸಿಕೊಂಡಿದ್ದು. ಶಶಿಕಲಾ ಪಕ್ಷದ ಸದಸ್ಯರಾಗಿದ್ದರೂ ಜಯಾ ಆಕೆಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಪಕ್ಷದ ಹಿರಿಯ ನಾಯಕರ ಪ್ರಕಾರ ಜಯಾಗೆ ಆರೋಗ್ರದ ಸಮಸ್ಯೆಗಳು ಎದುರಾದಾಗ ಸರ್ಕಾರದ ಪ್ರಮುಖ ನಿರ್ಣಯಗಳನ್ನು ಶಶಿಕಲಾ ತೆಗೆದುಕೊಳ್ಳಲಾರಂಭಿಸಿದರಂತೆ.

ಜಯಾ 2016ರಲ್ಲಿ ಮರಣ ಹೊಂದಿದಾಗ, ಎಂ​ಜಿಆರ್ ಅಂತ್ಯಸಂಸ್ಕಾರದ ಸಮಯದಲ್ಲಿ ಎಂಜಿಆರ್ ದೇಹದ ಪಕ್ಕದಲ್ಲಿಯೇ  ಜಯಾ ಇದ್ದಂತೆ, ಜಯಾ ಪಾರ್ಥೀವ ಶರೀರದ ಅಂತ್ಯಸಂಸ್ಕಾರದ ವಿಧಿಗಳು ಮುಗಿಯುವರೆಗೆ ಶಶಿಕಲಾ ಇದ್ದರು. ಆಕೆಯೊಂದಿಗೆ ನಾದಿನಿ ಜೆ.ಇಳವರಿಸಿ, ಮಗ ವಿವೇಕ್, ದಿವಹರನ್ ಮತ್ತು ಆತನ ಮಗ ಜೈ ಆನಂದ ಸಹ ಇದ್ದರು. ಇವರನ್ನು ಜಯಾ ಪೊಯೆಸ್ ಗಾರ್ಡನ್​ನಿಂದ ಹೊರಗಿಟ್ಟಿದ್ದರು ಎನ್ನುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

ಶಶಿಕಲಾಗೆ ತಮಿಳುನಾಡಿನಲ್ಲಿ ಅದ್ದೂರಿ ಸ್ವಾಗತ

ಇನ್ನೇನು ಶಶಿಕಲಾ ಮುಖ್ಯಮಂತ್ರಿ ಆಗಬೇಕು ಎನ್ನುವಷ್ಟರಲ್ಲಿ.. ಜಯಾ ವಿಧವಶರಾದ ನಂತರ ಪಕ್ಷದ ಸದಸ್ಯರು ಶಶಿಕಲಾರನ್ನು ‘ಚಿನ್ನಮ್ಮ’ ಎಂದು ಸಂಬೋಧಿಸಲಾರಂಬಿಸಿದರು. ಮುಖ್ಯಮಂತ್ರಿಯಾಗಿ ಓ.ಪನ್ನೀರ್​ಸೆಲ್ವಂ ಅಧಿಕಾರ ಸ್ವೀಕರಿಸಿದ್ದರೂ, ಆಡಳಿತದ ಚುಕ್ಕಾಣಿ ಶಶಿಕಲಾ ಅವರ ಕೈಲಿತ್ತು.

ಚೆನೈ ನಗರದ ಮುಲೆಮೂಲೆಗಳಲ್ಲಿ ಆಕೆಯ ಫೋಸ್ಟರ್​ಗಳು ರಾರಾಜಿಸತೊಡಿಗಿದ್ದವು. ಡಿಸೆಂಬರ್ 29, 2016ರಂದು ಆಕೆಯನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಜಯಾರಂತೆಯೇ ಶಶಿಕಲಾ ಹಸಿರು ಸೀರೆಯನ್ನುಟ್ಟು ಆಕೆಯಂತೆಯೇ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದರು.

ಫೆಬ್ರುವರಿ 2017 ರಲ್ಲಿ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಶಶಿಕಲಾ ಪಟ್ಟಾಭಿಷೇಕಕ್ಕೆ ವೇದಿಕೆ ನಿರ್ಮಾಣಗೊಂಡಿತು. ಆದರೆ ರಾಜ್ಯಪಾಲ ಸಿ.ವಿದ್ಯಾಸಾಗರ ಅವರ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಶಶಿಕಲಾ ಅಧಿಕಾರ ಸ್ವೀಕರಿಸುವುದು ವಿಳಂಬವಾಯಿತು.

ಏತನ್ಮಧ್ಯೆ, ಜಯಾ ಅವರ ಸಮಾಧಿ ಬಳಿ ಧ್ಯಾನಕ್ಕೆ ಕುಳಿತ ಪನ್ನೀರ್ ಸೆಲ್ವಂ, ಮಾಧ್ಯಮದವರೆದರು ತನ್ನನ್ನು ಬಲವಂತದಿಂದ ಕೆಳಗಿಳಿಸಲಾಯಿತೆಂದು ಅವಲತ್ತುಕೊಂಡರು. ಪಕ್ಷದ ಕೆಲ ಸದಸ್ಯರು ಮತ್ತು ಶಾಸಕರು ಪನ್ನಿರ್​ಸೆಲ್ವಂಗೆ ಬೆಂಬಲ ವ್ಯಕ್ತಪಡಿಸಿಲಾರಂಭಿಸಿದ ನಂತರ ಶಶಿಕಲಾ 129 ಶಾಸಕರನ್ನು ಒಂದು ರೆಸಾರ್ಟ್​ನಲ್ಲಿ ಕೂಡಿಟ್ಟರು.

ಆದರೆ, ಫೆಬ್ರವರಿ ಮಧ್ಯಭಾಗದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಶಶಿಕಲಾ ಕನಸು ನುಚ್ಚುನೂರಾಯಿತು. ಭಾರತದ ಸರ್ವೋಚ್ಛ ನ್ಯಾಯಾಲಯವು ಆಕೆಯನ್ನು ಅಕ್ರಮ ಆಸ್ತಿ ಗಳಿಕೆ ಪ್ರಕಾರಣದಲ್ಲಿ ದೋಷಿ ಎಂದು ತೀರ್ಪು ನೀಡಿ 4 ವರ್ಷಗಳ ಶಿಕ್ಷೆ ವಿಧಿಸಿತು. ಕೋರ್ಟು ಆಕೆಯ ವಿರುದ್ಧ ತೀರ್ಪು ಪ್ರಕಟಿಸಿದ ಮರದಿನವೇ ಅಂದರೆ ಫೆಬ್ರುವರಿ 15ರಂದು ಆಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಜೈಲು ಅಧಿಕಾರಿಗಳೆದುರು ಶರಣಾದರು.

ಅತ್ತ, ತಮಿಳುನಾಡಿನಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಆಧಿಕಾರ ಸ್ವೀಕರಿಸಿದರಲ್ಲದೆ, ಫೆಬ್ರುವರಿ 19ರಂದು ಸದನದ ವಿಶ್ವಾಸಮತವನ್ನೂ ಪಡೆದುಕೊಂಡರು. ಪನ್ನೀರ್​ಸೆಲ್ವಂ ಅವರ ಬಣ ಈ ಸರ್ಕಾರದಿಂದ ಅಂತರ ಕಾಯ್ದುಕೊಂಡಿತು. ಆದರೆ ನಂತರದ ದಿನಗಳಲ್ಲಿ ಅವೆರಡು ಒಂದಾಗಿ ಪನ್ನೀರ್​ಸೆಲ್ವಂ ಸರ್ಕಾರದ ಭಾಗವಾದರು.

ತಮಿಳುನಾಡಿನಲ್ಲಿ ಅದ್ಧೂರಿ ಸ್ವಾಗತ ಶಶಿಕಲಾ ಅವರ ನಾಲ್ಕು ವರ್ಷದ ಸೆರೆವಾಸ ಕಳೆದ ವಾರ ಕೊನೆಗೊಂಡು ಆಕೆ ಹೊರ ಬಂದಿದ್ದಾರೆ. ಆಕೆಯ ಅಭಿಮಾನಿಗಳು, ಬೆಂಬಲಿಗರು ಅಭೂತಪೂರ್ವವಾಗಿ ತಮಿಳುನಾಡಿಗೆ ಬರಮಾಡಿಕೊಂಡಿದ್ದನ್ನು ಜನ ಬೆರಗು ಕಣ್ಣುಗಳಿಂದ ನೋಡಿದ್ದರು.

ಬೆಂಗಳೂರಿನಿಂದ ಹೊರಡುವ ಮುನ್ನ ಸಕ್ರಿಯ ರಾಜಕಾರಣಕ್ಕೆ ವಾಪಸ್ಸಾಗುವುದಾಗಿ ಹೇಳಿದ್ದ ಶಶಿಕಲಾ, ಎಐಎಡಿಎಂ​ಕೆ ಪಕ್ಷದ ಕಚೇರಿಗೆ ಭೇಟಿ ನೀಡುವಿರೇ ಎಂದು ಕೇಳಿದ ಪ್ರಶ್ನೆಗೆ ಕಾದು ನೋಡಿರಿ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

ಆದರೆ, ತಮಿಳುನಾಡಿಗೆ ವಾಪಸ್ಸಾದ ನಂತರ ಕೆಲ ದಿನಗಳ ಕಾಲ ಮೌನವಾಗಿದ್ದ ಶಶಿಕಲಾ ಬುಧವಾರದಂದು ರಾಜಕೀಯದಿಂದ ವಿದಾಯ ಹೇಳುತ್ತಿರುವ ಘೋಷಣೆ ಮಾಡಿದ್ದಾರೆ. ಎಐಎಡಿಎಮ್​ಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷವು ಶಶಿಕಲಾ ಅವರನ್ನು ಪುನಃ ಪಕ್ಷಕ್ಕೆ ತರುವೆಡೆ ಒಲವು ತೋರಿತ್ತು. ಆದರೆ, ಶಶಿಕಲಾ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ.

ತಮಿಳುನಾಡು ರಾಜಕಾರಣದಲ್ಲಿ ಶಶಿಕಲಾ ನಿಸ್ಸಂದೇಹವಾಗಿ ಕಿಂಗ್​ಮೇಕರ್ ಆಗುವವರಿದ್ದರು. ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಅವರು ಯಾವ ಚುನಾವಣೆಯಲ್ಲೂ ಸ್ಪರ್ಧಿಸಲು ಸಾಧ್ಯವಿರದ ಕಾರಣ ತೆರೆಮರೆಯಲ್ಲಿದ್ದುಕೊಂಡೇ ದಾಳಗಳನ್ನು ಬೀಸಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾಗಲೇ, ‘ರಾಜಕೀಯ ನನಗಿನ್ನು ಬೇಡ’ ಅಂದುಬಿಟ್ಟಿದ್ದಾರೆ. ಅವರ ನಿರ್ಧಾರವನ್ನು ಅರ್ಥೈಸಿಕೊಳ್ಳುವುದು ಸದ್ಯಕ್ಕಂತೂ ಕಷ್ಟ. ಆದರೆ ಮುಂಬರುವ ದಿನಗಳಲ್ಲಿ ನಮಗೆ ಕಾರಣ ಗೊತ್ತಾಗಲಿದೆ, ಅಥವಾ ಶಶಿಕಲಾ ತಮ್ಮ ನಿರ್ಧಾರ ಬದಲಿಸಿದರೂ ಆಶ್ಚರ್ಯಪಡಬೇಕಿಲ್ಲ!

ಜೈಲಿನಿಂದ ಹೊರ ಬಂದ ಶಶಿಕಲಾ ಎದುರು ಹಲವು ದಾರಿಗಳು; ಜಯಲಲಿತಾ ಸಮಾಧಿಯೆದುರು ಮಾಡಿದ್ದ ಶಪಥದಂತೆ ನಡೆಯುತ್ತಾರಾ?

Published On - 10:04 pm, Mon, 8 February 21

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ