ರಾಹುಲ್ ಗಾಂಧಿ ಇಡಿ ವಿಚಾರಣೆ; ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ ಭವನ್ ಚಲೋ
ಬೆಳಗ್ಗೆ 9:30 ರ ವೇಳೆಗೆ ಕೆಪಿಸಿಸಿ ಕಚೇರಿಯಿಂದ ರಾಜ್‌ಭವನ್ ವರೆಗೆ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಲಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಆಗಲಿದೆ
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಜಾರಿ ನಿರ್ದೇಶನಾಲಯ (ED) ಕ್ರಮ ಮತ್ತು ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ಕರ್ನಾಟಕದ ಕಾಂಗ್ರೆಸ್ ನಾಯಕರು ಇಂದು (ಗುರುವಾರ) ರಾಜಭವನಕ್ಕೆ ಮುತ್ತಿಗೆ (Raj Bhavan Chalo) ಹಾಕಲಿದ್ದಾರೆ. ಬೆಳಗ್ಗೆ 9:30 ರ ವೇಳೆಗೆ ಕೆಪಿಸಿಸಿ ಕಚೇರಿಯಿಂದ ರಾಜ್‌ಭವನ್ ವರೆಗೆ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಲಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಬುಧವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರು ಮತ್ತು ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಬೆಳಿಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಿಂದ ‘ರಾಜ್‌ಭವನ್ ಚಲೋ’ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ಸೇಡಿನ ರಾಜಕಾರಣ ಮತ್ತು ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಸಿದಾಗ ಎರಡರಿಂದ ಮೂರು ಗಂಟೆಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬಹುದಿತ್ತು. ಆದರೆ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವ ಷಡ್ಯಂತ್ರ ಇದಾಗಿದೆ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಕೇಸುಗಳಿಗೆ ಹೆದರಿ ಜೈಲಿಗೆ ಹೋಗುವುದಿಲ್ಲ, ಅನ್ಯಾಯದ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತೇವೆ. ದೇಶದಲ್ಲಿ ಸದ್ಯ ಬ್ರಿಟಿಷರ ಆಡಳಿತಕ್ಕಿಂತ ಹದಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರವು ರಾಜಕೀಯ ಸೇಡಿಗಾಗಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸುವವರೆಗೂ ಇದರ ವಿರುದ್ಧ ಪ್ರತಿಭಟನೆ ಮುಂದುವರಿಸುವುದಾಗಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಯಲಿದೆ.
ಸಂಚಾರ ದಟ್ಟಣೆ ಯಾವ ಯಾವ ಮಾರ್ಗದಲ್ಲಿ ಇರಲಿದೆ
ಕ್ವೀನ್ಸ್ ರೋಡ್- ಇಂಡಿಯನ್ ಎಕ್ಸ್ ಪ್ರೆಸ್, ಜಿಪಿಓ ಸಿಗ್ನಲ್ ಮೂಲಕ ರ್ಯಾಲಿ ರಾಜ್ ಭವನ ತಲುಪಲಿದೆ. ಹಾಗಾಗಿ ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ವಸಂತನಗರ, ಶಿವಾಜಿನಗರ, ಕೋಲ್ಸ್‌ಪಾರ್ಕ್, ನಂದಿದುರ್ಗ ರಸ್ತೆ,ವಿಧಾನ ಸೌಧ, ಕೆ ಆರ್ ಸರ್ಕಲ್ ಸೇರಿದಂತೆ ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಇದೆ.
ರಾಜ್ಯದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:41 am, Thu, 16 June 22