ರಾಜ್ಯಸಭೆ ಚುನಾವಣೆ: ರೆಸಾರ್ಟ್ ರಾಜಕೀಯದ ಮೊರೆ ಹೋಗಲು ಕಾಂಗ್ರೆಸ್ ಸಜ್ಜು
Rajya Sabha Election: ರಾಜ್ಯಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಐವರು ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಈ ಮಧ್ಯೆ, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಶ್ವಾಸ ಮತಗಳನ್ನು ಸೆಳೆಯಲು ಕಾರ್ಯತಂತ್ರ ಆರಂಭಿಸಿದ್ದಾರೆ. ಮತ್ತೊಂದೆಡೆ, ಪಕ್ಷದ ಶಾಸಕರನ್ನು ರಕ್ಷಿಸಲು ರೆಸಾರ್ಟ್ ರಾಜಕೀಯದ ಮೊರೆ ಹೋಗುವತ್ತ ಕಾಂಗ್ರೆಸ್ ಚಿಂತನೆ ನಡೆಸಿದೆ. ಇಷ್ಟೇ ಅಲ್ಲದೆ, ಮೈತ್ರಿ ಅಭ್ಯರ್ಥಿಗೆ ಟಕ್ಕರ್ ಕೊಡಲು ಕಾರ್ಯತಂತ್ರ ಹೆಣೆಯುತ್ತಿದೆ.
ಬೆಂಗಳೂರು, ಫೆಬ್ರವರಿ 21: ರಾಜ್ಯಸಭೆ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ (Resort Politics) ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಆಡಳಿತಾರೂಢ ಕಾಂಗ್ರೆಸ್ (Congress), ಪ್ರತಿಪಕ್ಷಗಳ ಬಿಜೆಪಿ, ಜೆಡಿಎಸ್ ಮೈತ್ರಿಗೆ ರಾಜ್ಯಸಭೆ ಚುನಾವಣ ಅಖಾಡ ಪ್ರತಿಷ್ಠೆಯ ಕಣವಾಗಿದೆ. ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ ಕಣದಲ್ಲಿ ಐದು ಜನ ಅಭ್ಯರ್ಥಿಗಳಿದ್ದಾರೆ. ಅಜಯ್ ಮಾಕೆನ್, ನಾಸೀರ್ ಹುಸೇನ್, ಜೆಸಿ ಚಂದ್ರಶೇಖರ್, ನಾರಾಯಣಸಾ ಬಾಂಡಗೆ, ಕುಪೇಂದ್ರ ರೆಡ್ಡಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಜೆಡಿಎಸ್- ಬಿಜೆಪಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯಿಂದ ವಿಶ್ವಾಸ ಮತಗಳ ಪಡೆಯುವ ಯತ್ನ ಮುಂದುವರಿದಿದೆ. ಮೈತ್ರಿ ಅಭ್ಯರ್ಥಿ ಈಗಾಗಲೇ ತನ್ನ ಗೆಲುವಿಗೆ ಕಸರತ್ತು ಶುರು ಮಾಡಿದ್ದಾರೆ. ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿ ವಿಧಾನಸೌಧ ಲಾಂಜ್ನಲ್ಲಿ ಓಡಾಡುತ್ತಿರುವ ಕುಪೇಂದ್ರ ರೆಡ್ಡಿ ಶಾಸಕರ ಓಲೈಕೆಗೆ ಮುಂದಾಗಿದ್ದಾರೆ.
ಈ ಮಧ್ಯೆ, ಬಿಜೆಪಿ- ಜೆಡಿಎಸ್ ಲೆಕ್ಕಾಚಾರ ತಲೆಕೆಳಗೆ ಮಾಡಲು ಕಾಂಗ್ರೆಸ್ ಕೌಂಟರ್ ಪ್ಲ್ಯಾನ್ ಮಾಡುತ್ತಿದೆ. ಇದಕ್ಕಾಗಿ ಕೆಲವು ತಂತ್ರಗಾರಿಕೆ ಹೂಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾದಂತೆ ಶಾಸಕರನ್ನ ರೆಸಾರ್ಟ್ಗೆ ಶಿಫ್ಟ್ ಮಾಡುವ ಮಾತುಕತೆ ನಡೆಯುತ್ತಿದೆ. ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರನ್ನು ಗುರುವಾರ ರೆಸಾರ್ಟ್ ಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಫೆಬ್ರವರಿ 27ರಂದು ರಾಜ್ಯಸಭಾ ಸ್ಥಾನಕ್ಕೆ ಮತದಾನ ನಡೆಯಲಿದ್ದು, ಚುನಾವಣೆಗೆ ನೇರವಾಗಿ ಎಲ್ಲ ಶಾಸಕರೂ ಒಟ್ಟಾಗಿ ಬರುವ ಪ್ಲ್ಯಾನ್ ಕಾಂಗ್ರೆಸ್ನದ್ದಾಗಿದೆ. ರೆಸಾರ್ಟ್ಗೆ ಶಾಸಕರ ಸ್ಥಳಾಂತರ ವಿಚಾರವಾಗಿ ಇನ್ನೂ ಅಂತಿ ನಿರ್ಧಾರ ಆಗಿಲ್ಲ. ರೆಸಾರ್ಟ್ನಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹ ವಾಸ್ತವ್ಯ ಹೂಡಿ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ಇವರು ಎರಡು ದಿನಗಳ ಕಾಲ ರೆಸಾರ್ಟ್ನಲ್ಲೇ ಠಿಖಾಣಿ ಹೂಡುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?
ಮತ್ತೊಂದೆಡೆ, ಈಗಾಗಲೇ ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇಡಲಾಗಿದೆ. ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಈ ಬಗ್ಗೆ ಗುಸು ಗುಸು ಮಾತುಕತೆ ನಡೆಯುತ್ತಿದ್ದು, ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಮೈತ್ರಿ ಶಾಸಕರನ್ನ ಗೈರು ಮಾಡಿಸುವ ತಂತ್ರ ಹೆಣೆಯಲಾಗುತ್ತಿದೆ. ಬಿಜೆಪಿಯ ಇಬ್ಬರು ಶಾಸಕರು, ಜೆಡಿಎಸ್ ನ ಮೂರು ಶಾಸಕರನ್ನ ಗೈರು ಮಾಡಿಸುವ ಪ್ರಯತ್ನ ತೆರೆಯ ಮರೆಯಲ್ಲಿ ನಡೆಯುತ್ತಿದೆ. ಅಡ್ಡಮತದಾನ ಬದಲಿಗೆ ಗೈರು ಮಾಡಿಸುವ ಬಗ್ಗೆ ಚರ್ಚೆ ಜೋರಾಗಿದೆ. ಆ ಮೂಲಕ ಮೈತ್ರಿ ಕೂಟಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ