ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​ ಬಿಜೆಪಿಯಲ್ಲಿಲ್ಲ: ಆರ್ ಅಶೋಕ್

ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್ ರಾಜ್ಯಸಭೆ ಚುನಾವಣೆ ವೇಳೆಯೇ ಬಿಜೆಪಿಯಿಂದ ಹೊರಗೆ ಕಾಲಿಟ್ಟಿದ್ದಾರೆ. ಈಗ ಅವರು ಬಿಜೆಪಿಯಲ್ಲಿ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋ ಹೇಳಿದರು. ಇಷ್ಟೇ ಅಲ್ಲದೆ, ಸುಮಲತಾ ಬಿಜೆಪಿ ಸೇರ್ಪಡೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​ ಬಿಜೆಪಿಯಲ್ಲಿಲ್ಲ: ಆರ್ ಅಶೋಕ್
ಆರ್ ಅಶೋಕ್
Edited By:

Updated on: Apr 05, 2024 | 2:30 PM

ಬೆಂಗಳೂರು, ಏಪ್ರಿಲ್ 5: ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​ (ST Somashekhar) ಬಿಜೆಪಿಯಲ್ಲಿ (BJP) ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೋಮಶೇಖರ್​ ಕಾಲು ಹೊರಗಡೆ ಹಾಕಿದ್ದಾರೆ. ಅವರು​ ಕಾಂಗ್ರೆಸ್​ನವರ ಸಂಪರ್ಕದಲ್ಲಿ ಇದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಸೋಮಶೇಖರ್ ಮತ ಹಾಕಿದ್ದಾರೆ. ಅವರು ಆಗಲೇ ಬಿಜೆಪಿಯಿಂದ ಕಾಲು ಹೊರಗಿಟ್ಟಿದ್ದರು ಎಂದು ಅಶೋಕ್ ಹೇಳಿದ್ದಾರೆ.

ಸುಮಲತಾ ಪ್ರಭಾವ ಬಳಸಿ ಮಂಡ್ಯ, ಮೈಸೂರು ಗೆಲ್ಲುತ್ತೇವೆ: ಅಶೋಕ್

ಸಂಸದೆ ಸುಮಲತಾ ಪ್ರಭಾವ ಬಳಸಿಕೊಂಡು ಮಂಡ್ಯ, ಮೈಸೂರು ಗೆಲ್ಲುತ್ತೇವೆ ಎಂದು ಅಶೋಕ್ ಭರವಸೆ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಬೆಂಬಲ ನೀಡಿದ್ದೆವು. ಈ ಬಾರಿ ಚುನಾವಣಾ ಪ್ರಚಾರಕ್ಕೆ ಸಂಸದೆ ಸುಮಲತಾರನ್ನು ಬಳಸಿಕೊಳ್ಳುತ್ತೇವೆ. ಈಗಾಗಲೇ ಕೇಂದ್ರ ನಾಯಕರ ಜೊತೆ ಸುಮಲತಾ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.

ಜೆಡಿಎಸ್​ ಹಾಗೂ ಬಿಜೆಪಿ ತಳಮಟ್ಟದಿಂದಲೇ ಹೊಂದಾಣಿಕೆ ಆಗಬೇಕು. ಈ ಬಗ್ಗೆ ಮೊನ್ನೆ ಬೆಂಗಳೂರಿಗೆ ಬಂದಾಗ ಕೇಂದ್ರ ಸಚಿವ ಅಮಿತ್ ಶಾ ಕೂಡ ತಿಳಿಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬೀದರ್​ನಲ್ಲಿ ಅಸಮಾಧಾನ ಶಮನವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ರಾಜ್ಯದ ಎಲ್ಲಾ ಕಡೆ ಸಮನ್ವಯ ಸಮಿತಿ‌ ಸಭೆ ಮಾಡುತ್ತಿದ್ದೇವೆ. ಜೆಡಿಎಸ್ ಹಾಗೂ ಬಿಜೆಪಿ ಹಾಲು ಜೇನಿನಂತೆ ಒಗ್ಗೂಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಸಂಸದೆ ಸುಮಲತಾ ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಕೂಡ ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಈ ನಾಯಕರು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಸುಮಲತಾ ಅಂಬರೀಶ್, ಕ್ರಿಕೆಟಿಗ ದೊಡ್ಡ ಗಣೇಶ್​​​ ಬಿಜೆಪಿ ಸೇರ್ಪಡೆ

ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆ ಮಂಡ್ಯದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸುಮಲತಾ ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಹಾಕದೇ ಬೆಂಬಲ ನೀಡಿತ್ತು. ಇದೀಗ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣದಲ್ಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ