ವಿಧಾನಸಭೆ ಚುನಾವಣೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಸೂಚನೆ: ವಲಸೆ ಹೋದವರಿಗೂ ಮುಕ್ತ ಆಹ್ವಾನ ಕೊಟ್ಟ ಡಿಕೆಶಿ
ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಪಕ್ಷ ಬಿಟ್ಟು ಹೋದವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಆರೇಳು ತಿಂಗಳು ಮಾತ್ರ ಬಾಕಿ ಇದ್ದು, ಆಗಲೇ ಟಿಕೆಟ್ ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ. ಒಂದು ಕ್ಷೇತ್ರದಲ್ಲಿ ಎರಡ್ಮೂರು ಟಿಕೆಟ್ ಆಕಾಂಕ್ಷಿ ಇರುವುದರಿಂದ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಒಬ್ಬರಿಗೆ ಟಿಕೆಟ್ ನೀಡಿದ್ರೆ ಮತ್ತೊಬ್ಬರು ಮುನಿಸಿಕೊಳ್ಳುವ ಆತಂಕ ಎದುರಾಗಿದೆ. ಇನ್ನು ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಪಕ್ಷ ಬಿಟ್ಟು ಹೋದವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಇಂದು(ನ.02) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದ್ದು, ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಳುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು. ಕೆಪಿಸಿಸಿ ಕಚೇರಿಯಲ್ಲಿ 5 ಸಾವಿರ ರೂಪಾಯಿ ಕೊಟ್ಟು ಅರ್ಜಿ ಪಡೆಯಬಹುದು ಎಂದ ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್: ಕೇಂದ್ರ ಸಚಿವಗೆ ಮಂಡ್ಯ ಉಸ್ತುವಾರಿ
ಅರ್ಜಿ ಜೊತೆಯಲ್ಲಿ 2 ಲಕ್ಷ ರೂ. ಡಿಡಿ ಶುಲ್ಕ ನೀಡಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು 1 ಲಕ್ಷ ರೂ. ಡಿಡಿ ಮೂಲಕ ಅರ್ಜಿ ಸಲ್ಲಿಸಬೇಕು. ಯಾರು ಕಾಂಗ್ರೆಸ್ ಟಿಕೆಟ್ ಬಯಸುತ್ತಾರೋ ಅವರು ಅರ್ಜಿ ಹಾಕಬಹುದು. ನಾನು ಸ್ಪರ್ಧಿಸಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬೇಕು. ಕಾಂಗ್ರೆಸ್ ಟಿಕೆಟ್ಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ವಲಸೆ ಹೋದವರಿಗೂ ಮುಕ್ತ ಆಹ್ವಾನ ಎಂದು ಹೇಳುವ ಮೂಲಕ ಈಗಾಗಲೇ ಕಾಂಗ್ರೆಸ್ ಬಿಟ್ಟು ಬೇರೆ-ಬೇರೆ ಪಕ್ಷಗಳಿಗೆ ಹೋಗಿರುವ ನಾಯಕರಿಗೂ ವಾಪಸ್ ಪಕ್ಷಕ್ಕೆ ಬರುವಂತೆ ಪರೋಕ್ಷವಾಗಿ ಆಹ್ವಾನ ಕೊಟ್ಟಿದ್ದಾರೆ.
ಮೊದಲ ಬಾರಿಗೆ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಭೇಟಿ ಕೊಟ್ಟು ಬಳಿಕ ಉಳಿದ ರಾಜ್ಯಗಳಿಗೆ ಹೋಗಲಿದ್ದಾರೆ. ನವೆಂಬರ್ 6ರಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಸಾವಿರಾರು ಕಾರ್ಯಕರ್ತರು ಮುಖಂಡರು ಏರ್ ಪೋರ್ಟ್ ನಲ್ಲಿ ಖರ್ಗೆ ಅವರನ್ನು ಸ್ವಾಗತ ಕೋರಲಾಗುತ್ತೆ ಎಂದು ಮಾಹಿತಿ ನೀಡಿದರು.
ಬಳಿಕ ಅಂದೇ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಂಡಿದ್ದೇವೆ. ಸರ್ವೋದಯ ಸಮಾವೇಶ ಅಂತ ಹೆಸರು ಇಡಲಾಗಿದ್ದು, ರಾಜ್ಯದ ವಿವಿಧ ಮೂಲೆಯಿಂದ ಜನ ಈ ಸಮಾವೇಶಕ್ಕೆ ಬರುತ್ತಾರೆ ಎಂದು ತಿಳಿಸಿದರು.
Published On - 4:07 pm, Wed, 2 November 22