AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Digital Live: ಈಶ್ವರಪ್ಪಗೆ ಬೇಕಂತಲೇ ಅವಮಾನ ಮಾಡ್ತಿದ್ದಾರಾ ಯಡಿಯೂರಪ್ಪ? ಸರ್ಕಾರಕ್ಕೆ ಸಂಚಕಾರವಾಗುತ್ತಾ ಪಕ್ಷದೊಳಗಿನ ಬೇಗುದಿ?

ಬಿಜೆಪಿಯಲ್ಲಿ ಬಿ.ಎಸ್​.ಯಡಿಯೂರಪ್ಪ ಮತ್ತು ಕೆ.ಎಸ್​.ಈಶ್ವರಪ್ಪ ನಡುವೆ ಶುರುವಾಯ್ತಾ ಮುಸುಕಿನ ಗುದ್ದಾಟ? ಈ ವಿವಾದಕ್ಕೆ ಪಕ್ಷದವರು ಏನು ಹೇಳುತ್ತಾರೆ? ಪ್ರತಿಪಕ್ಷದವರ ಪ್ರತಿಕ್ರಿಯೆ ಹೇಗಿದೆ? ಅಸಲಿಗೆ ಕಾನೂನಿನ ಪ್ರಕಾರ ಇದು ಸರಿಯೋ? ತಪ್ಪೋ?

TV9 Digital Live: ಈಶ್ವರಪ್ಪಗೆ ಬೇಕಂತಲೇ ಅವಮಾನ ಮಾಡ್ತಿದ್ದಾರಾ ಯಡಿಯೂರಪ್ಪ? ಸರ್ಕಾರಕ್ಕೆ ಸಂಚಕಾರವಾಗುತ್ತಾ ಪಕ್ಷದೊಳಗಿನ ಬೇಗುದಿ?
ಟಿವಿ9 ಡಿಜಿಟಲ್​ ಲೈವ್​
Skanda
| Edited By: |

Updated on:Apr 02, 2021 | 9:13 PM

Share

ಕಳೆದ ಕೆಲ ತಿಂಗಳಿನಿಂದ ಕರ್ನಾಟಕ ರಾಜ್ಯ ಸರ್ಕಾರ ಸದ್ಯ ಒಂದಾದ ಮೇಲೊಂದು ಸಂಕಷ್ಟಗಳನ್ನು ಎದುರಿಸುತ್ತಲೇ ಇದೆ. ಸದ್ಯ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ತಿರುಗಿಬಿದ್ದಿದ್ದಾರೆ. ಸಚಿವನಾದ ನನ್ನ ಅನುಮತಿ ಪಡೆಯದೇ ಮುಖ್ಯಮಂತ್ರಿಗಳೇ ನೇರವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ₹ 63 ಕೊಟಿ ಬಿಡುಗಡೆ ಮಾಡಿದ್ದಾರೆ. ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. ಈ ವಿಚಾರದಲ್ಲಿ ನಿಯಮ ಪಾಲನೆ ಆಗುತ್ತಿಲ್ಲ ಎಂದು ಗುರುತರ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ 9 ಡಿಜಿಟಲ್ ಲೈವ್​ನಲ್ಲಿ ನಿರೂಪಕ ಹರಿಪ್ರಸಾದ್ ಸಂವಾದ ನಡೆಸಿಕೊಟ್ಟಿದ್ದು, ಸಂವಿಧಾನ ತಜ್ಞ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಬಿಜೆಪಿಯ ರೇಣುಕಾಚಾರ್ಯ, ತೇಜಸ್ವಿನಿ ಗೌಡ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಚರ್ಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಂಡುಬಂದ ಪ್ರಮುಖಾಂಶಗಳು ಇಂತಿವೆ.

ಈ ವಿವಾದದ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ, ಬಿಜೆಪಿಯ ಒಳಗೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಈ ಘಟನೆ ಒಂದು ಸಾಕ್ಷಿ. ಸಣ್ಣಪುಟ್ಟ ಸಮಸ್ಯೆಯಾಗಿದ್ದಾರೆ ಬಿಜೆಪಿ ಹೈಕಮಾಂಡ್​ಗೆ ದೂರು ನೀಡಬಹುದಿತ್ತು. ಆದರೆ, ಇದು ರಾಜ್ಯಪಾಲರ ತನಕ ಹೋಗಿದೆ ಎಂದರೆ ಪ್ರಕರಣದ ಗಂಭೀರತೆಯನ್ನು ಅರ್ಥೈಸಿಕೊಳ್ಳಬಹುದು. ಸ್ವತಃ ಹಿರಿಯರಾದ ಈಶ್ವರಪ್ಪನವರೇ ಇದೆಲ್ಲವನ್ನೂ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅಲ್ಲದೇ, ಕೆಜೆಪಿ ವಿಚಾರವನ್ನು ಕೆದಕಿದ್ದಾರೆ ಅಂದರೆ ಅದು ಅಸಮಾಧಾನ ಭುಗಿಲೆದ್ದಿದೆ ಎನ್ನುವುದಕ್ಕೆ ಕೈಗನ್ನಡಿ ಎಂದಿದ್ದಾರೆ.

ಸಂವಿಧಾನ ತಜ್ಞ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಇದೊಂದು ಗಂಭೀರ ಸ್ವರೂಪದ ಆರೋಪ ಹಾಗೂ ಬೆಳವಣಿಗೆ. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿ ಹಾಗೂ ರಾಜ್ಯಪಾಲ ಹುದ್ದೆಗಳನ್ನು ಅತ್ಯಂತ ಗೌರವಯುತ ಸಾಂವಿಧಾನಿಕ ಹುದ್ದೆಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಹುದ್ದೆಗಳು ಮಹತ್ವದ ಜವಾಬ್ದಾರಿಯನ್ನು ಹೊಂದಿವೆ. ಸದ್ಯ ಈಶ್ವರಪ್ಪ ಕೆಲ ವಿಚಾರಗಳನ್ನು ನೇರವಾಗಿ ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ. ಆದರೆ, ನಿಯಮಾನುಸಾರ ಮುಖ್ಯಮಂತ್ರಿ ಹುದ್ದೆಯಲ್ಲಿರುವವರಿಗೆ ಯಾವುದೇ ಸಚಿವರು ಅಥವಾ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯೆಪ್ರವೇಶಿಸುವ ಅಧಿಕಾರವಿದೆ. ಆದರೂ, ಇಲ್ಲಿ ಈಶ್ವರಪ್ಪ ಬರೆದಿರುವ ಪತ್ರವನ್ನು ಓದಿದರೆ ಈ ಸಚಿವ ಸಂಪುಟದಲ್ಲಿ ಅಸಾಧಾರಣವಾದ ಬಿಕ್ಕಟ್ಟು ಮೂಡಿದೆ ಎನ್ನುವುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಮುಖ್ಯಮಂತ್ರಿಗಳು ನನ್ನ ಗಮನಕ್ಕೆ ತರದೇ ಅನುದಾನ ಬಿಡುಗಡೆ ಮಾಡಿದ್ದಾರೆ ಹಾಗೂ ಅದೇ ಕಾರಣಕ್ಕಾಗಿ ನಾನು ಇದನ್ನು ತಡೆಹಿಡಿದಿದ್ದೇನೆ ಎಂದು ಹೇಳಿರುವುದನ್ನು ಗಮನಿಸಿದರೆ ಇದು ಮನಸ್ತಾಪ ಮೂಡಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದಿದ್ದಾರೆ.

ಅಲ್ಲದೇ, ಇಷ್ಟೆಲ್ಲಾ ಕೇಳಿಸಿಕೊಂಡ ಮೇಲೂ, ಸ್ವಜನಪಕ್ಷಪಾತದ ಆರೋಪ ವ್ಯಕ್ತವಾದ ಮೇಲೂ ಒಬ್ಬ ಮುಖ್ಯಮಂತ್ರಿ ಅಸಹಾಯಕತೆಯಿಂದ ಕೂರುತ್ತಾರೆ. ಹೀಗೆ ಮಾತನಾಡುವ ಮಂತ್ರಿಯ ವಿರುದ್ಧ ಏನೂ ಕ್ರಮಕೈಗೊಳ್ಳಲಾಗದೇ ಒದ್ದಾಡುತ್ತಿದ್ದಾರೆ ಎಂದರೆ ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದೇ ಉತ್ತಮ. ಬದಲಾಗಿ ಒಬ್ಬ ಸಮರ್ಥ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ಇವೆಲ್ಲವನ್ನೂ ನಿಭಾಯಿಸುವ ಜವಾಬ್ದಾರಿ ಕೊಡುವುದು ಒಳ್ಳೆಯದು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಇದೇ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಈ ಬಗ್ಗೆ ಮಾತನಾಡದಂತೆ ಪಕ್ಷದ ಹಿರಿಯರು ಆದೇಶ ನೀಡಿದ್ದಾರೆ. ಹಾಗಾಗಿ ನಾನು ಏನೂ ಮಾತನಾಡುವುದಿಲ್ಲ. ಈ ಸಮಸ್ಯೆಯನ್ನು ಪಕ್ಷದ ನಾಲ್ಕು ಗೋಡೆಯ ಬಗ್ಗೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು. ನಂತರ ಮತ್ತೆ ಮಾತಿಗೆಳೆದಾಗ, ಈಶ್ವರಪ್ಪ ಅವರ ಬಳಿ ಅನುದಾನ ಕಡಿಮೆ ಇದೆ ಹೀಗಾಗಿ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ಅನುದಾನ ಪಡೆಯಿರಿ ಎಂದು ವಿನಂತಿಸಿಕೊಂಡ ಕಾರಣ ಶಾಸಕರು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದರು ಎಂದು ವಿವಾದಕ್ಕೆ ಸ್ಪಷ್ಟನೆ ನೀಡುವ ಯತ್ನ ಮಾಡಿದರು. ಮುಖ್ಯಮಂತ್ರಿಗಳು ಸ್ವಜನ ಪಕ್ಷಪಾತ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಆದರೆ, ಇದಕ್ಕೆ ತಿರುಗೇಟು ನೀಡಿದ ಬೇಳೂರು ಗೋಪಾಲಕೃಷ್ಣ, ಈ ವಿಚಾರದಲ್ಲಿ ಮಾತನಾಡುವಂತಿಲ್ಲ ಎಂದು ಹೇಳುವ ರೇಣುಕಾಚಾರ್ಯ ದಿನ ಬೆಳಗಾದರೆ ಯತ್ನಾಳ್ ವಿರುದ್ಧ ಧ್ವನಿ ಎತ್ತುತ್ತಾರೆ. ಅದನ್ನು ಮಾತನಾಡಬಹುದಾದರೆ ಇದನ್ಯಾಕೆ ಚರ್ಚಿಸುವುದು ಸಾಧ್ಯವಿಲ್ಲ ಎಂದು ಕೇಳಿದರು. ಅಲ್ಲದೇ, ಈಶ್ವರಪ್ಪನವರು ಈ ಬಗ್ಗೆ ಮಾತನಾಡುವ ಮೂಲಕ ಮುಖ್ಯಮಂತ್ರಿಗಳು ತಮಗೆ ಬೇಕಾದವರಿಗೆ ಮಾತ್ರ ಅನುದಾನ ಕೊಡುತ್ತಿದ್ದಾರೆ. ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎನ್ನುವುದನ್ನು ಹೇಳುವ ಸ್ಪಷ್ಟ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್​ ಕೂಡ ಈ ಬಗ್ಗೆ ಮೇಲಿಂದ ಮೇಲೆ ಅನೇಕ ಬಾರಿ ಮಾತನಾಡಿರುವುದರಿಂದ ಬಿಜೆಪಿ ಪಕ್ಷದೊಳಗೆ ಎರಡು ಮೂರು ಬಣ ಸೃಷ್ಟಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಆಂತರಿಕ ಸಮಸ್ಯೆ ಹೆಚ್ಚಾಗಿದೆ ಎನ್ನುವುದನ್ನು ಪುನರುಚ್ಛರಿಸಿದರು.

ಈ ಬಗ್ಗೆ ಮಾತನಾಡಿದ ಬಿಜೆಪಿ ಸಂಸದೆ ತೇಜಸ್ವಿನಿ ಗೌಡ, ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದ್ದು ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇರಬೇಕಾದದ್ದು ಮುಖ್ಯ. ಈಶ್ವರಪ್ಪನವರಂತಹ ಹಿರಿಯರೇ ಈ ಶಿಸ್ತಿನ ಚೌಕಟ್ಟು ದಾಟಿ ಹೋಗುವುದು ಒಳ್ಳೆಯದಲ್ಲ. ಈ ವಿಚಾರವನ್ನು ಹೀಗೆ ಮಾತನಾಡುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಇದರಲ್ಲಿ ಹಿರಿಯ, ಕಿರಿಯ ಎನ್ನುವ ಭೇದಭಾವ ಇಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಉದ್ದೇಶಪೂರ್ವಕವಾಗಿ ಹೀಗೆ ನಡೆದುಕೊಂಡು ಈಶ್ವರಪ್ಪ ಅವರಿಗೆ ಮುಜುಗರ ಮಾಡಿದ್ದರೆ ಅದನ್ನೂ ನಾನು ಒಪ್ಪಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನು ರೆಬೆಲ್​ ಅಲ್ಲ, ಲಾಯಲ್.. ನನ್ನ ಅಪ್ಪ-ಅಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡ್ತಿದ್ರು, ನನ್ನನ್ನು ಈ ಪಕ್ಷ ಡಿಸಿಎಂ ಮಾಡಿದೆ: ಕೆ.ಎಸ್​. ಈಶ್ವರಪ್ಪ 

ಇದನ್ನೂ ಓದಿ: ಅರುಣ್ ಸಿಂಗ್-ಕಟೀಲ್ ನನ್ನೊಂದಿಗೆ ಚರ್ಚಿಸಿದ್ದಾರೆ.. ಬೈ ಎಲೆಕ್ಷನ್​ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ: ಈಶ್ವರಪ್ಪ

Published On - 9:10 pm, Fri, 2 April 21