ಭಾರತದ ಬಗ್ಗೆ ಅಮೆರಿಕ ಮೌನತಾಳಿದೆ: ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಗರಂ
ಭಾರತದಲ್ಲಿ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರಾಹುಲ್ ಗಾಂಧಿ ಭಾರತವನ್ನು ಕಾಂಗ್ರೆಸ್ ಪಕ್ಷದೊಟ್ಟಿಗೆ ಸಮಾನವಾಗಿ ನೋಡಬಾರದು. ಜನರಿಂದ ತಿರಸ್ಕೃತರಾದವರು ಪ್ರಜಾಪ್ರಭುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ದೆಹಲಿ: ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅಮೆರಿಕ ಮತ್ತು ಅಮೆರಿಕದಲ್ಲಿನ ಸಂಸ್ಥೆಗಳು ಮೌನ ತಾಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಗರಂ ಆಗಿದೆ. ಬಿಜೆಪಿಯ ಹಲವು ನಾಯಕರು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರಾಹುಲ್ ಗಾಂಧಿ ಭಾರತವನ್ನು ಕಾಂಗ್ರೆಸ್ ಪಕ್ಷದೊಟ್ಟಿಗೆ ಸಮಾನವಾಗಿ ನೋಡಬಾರದು. ಜನರಿಂದ ತಿರಸ್ಕೃತರಾದವರು ಪ್ರಜಾಪ್ರಭುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದು ಎಂದು ರಾಹುಲ್ ಗಾಂಧಿಯವರ ವ್ಯಾಖ್ಯಾನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಜನರ ತೀರ್ಪನ್ನು ಯಾರೂ ಅಪಮಾನಿಸಬಾರದು. ನಮ್ಮ ಅಂತರಿಕ ವ್ಯವಹಾರಗಳಲ್ಲಿ ಮತ್ತೊಂದು ರಾಷ್ಟ್ರವನ್ನು ಮಧ್ಯಪ್ರವೇಶ ಮಾಡುವಂತೆ ಕೇಳುವುದು ತಾಯ್ನಾಡನ್ನು ತ್ಯಜಿಸಿದಂತೆಯೇ ಸರಿ. ರಾಹುಲ್ ಗಾಂಧಿ 1975ರ ಮತ್ತು G-23 ಬೇಡಿಕೆಗಳನ್ನು ಮರೆತಂತೆ ಕಾಣುತ್ತಿದೆ. ರಾಹುಲ್ ಗಾಂಧಿಯ ಪ್ರಜಾಪ್ರಭುತ್ವದ ಮಾದರಿಯನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಬಯಸಿದವರಿಗೆ ಹುದ್ದೆ ನೀಡಿಲ್ಲ ಎಂದು ಟ್ವೀಟ್ ಮಾಡಿರುವ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಸಂಸದ ರಾಹುಲ್ ಗಾಂಧಿ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ.
Seeking interference of another country in our domestic affairs is nothing less than ditching our homeland
Rahul Gandhi seems to have forgotten 1975 and the demands of G23. Those demanded elections have not been nominated yet. No one understands Rahul Gandhi’s model of democracy
— Pralhad Joshi (@JoshiPralhad) April 3, 2021
ರಷ್ಯಾ ಮತ್ತು ಚೀನಾಗಳು ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಕಠಿಣ ನಿಲುವು ತಳೆದಿರುವ ಬಗೆಗಿನ ವೆಬಿನಾರ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ವಿಶ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯದ ಕಲ್ಪನೆಗಳನ್ನು ವಿವರಿಸುವ ವೇಳೆ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅಮೆರಿಕ ಮತ್ತು ಅಮೆರಿಕದಲ್ಲಿನ ಸಂಸ್ಥೆಗಳು ಮೌನ ತಾಳಿವೆ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದರು
ಅಮೆರಿಕದ ಸಂವಿಧಾನವು ಸ್ವಾತಂತ್ರ್ಯದ ಗಾಢ ಪರಿಕಲ್ಪನೆಯನ್ನು ಸಾರುತ್ತದೆ. ಆದರೆ ಎಷ್ಟೇ ಉದಾತ್ತ ಕಲ್ಪನೆಯನ್ನು ಹೇಳಿದರೂ ಸಹ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಸಮರ್ಥಿಸಿಕೊಳ್ಳಬೇಕು. ಹೀಗೆ ತನ್ನ ಸಂವಿಧಾನದಲ್ಲಿ ಹೇಳಲಾದ ಕಲ್ಪನೆಗಳನ್ನು ಸಮರ್ಥಿಸಿಕೊಳ್ಳುವುದು ಅಮೆರಿಕದ ಎದುರಿನ ಬಹುದೊಡ್ಡ ಪ್ರಶ್ನೆ ಎಂದು ರಾಹುಲ್ ಗಾಂಧಿ ವೆಬಿನಾರ್ ಸಂವಾದದಲ್ಲಿ ವಿವರಿಸಿದರು.
ಚುನಾವಣೆಗಳಲ್ಲಿ ಸ್ಪರ್ಧಿಸಲು ಸಮಾಜದ ವಿವಿಧ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ನನ್ನನ್ನು ಅಥವಾ ಯಾವುದೇ ಅಭ್ಯರ್ಥಿಯನ್ನು ರಕ್ಷಿಸುವ ಕಾನೂನು, ಆರ್ಥಿಕ ಬೆಂಬಲ, ಮುಕ್ತ ವ್ಯವಸ್ಥೆಯ ಮಾಧ್ಯಮಗಳ ಬೆಂಬಲ ಚುನಾವಣೆಗಳು ನಡೆಯಲು ಅಗತ್ಯವಿದೆ. ಆದರೆ 2014ರ ನಂತರ ಸಾರ್ವಜನಿಕ ಸಂಸ್ಥೆಗಳನ್ನು ಆಡಳಿತಾರೂಢ ಸರ್ಕಾರ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ದೇಶದಲ್ಲಿ ಆಡಳಿತಾರೂಢ ಬಿಜೆಪಿಯ ನಡೆಗಳು ಕುರಿತು ಸಾರ್ವಜನಿಕರಲ್ಲಿ ಅಸಮಧಾನ ಹುಟ್ಟುಹಾಕುತ್ತಿವೆ. ಇಂತಹ ಎಲ್ಲ ಜನರನ್ನೂ ಒಗ್ಗೂಡಿಸುವುದು ಮುಖ್ಯ ಎಂದು ರಾಹುಲ್ ಗಾಂಧಿ ವ್ಯಾಖ್ಯಾನಿಸಿದರು.
ಇದನ್ನೂ ಓದಿ: ನಾನು ಭಾರತದ ಪ್ರಧಾನಿಯಾದರೆ..? ಪ್ರಶ್ನೆಗೆ ರಾಹುಲ್ ಗಾಂಧಿ ಏನು ಉತ್ತರಿಸಿದರು..