ಟಿವಿ9 ಡಿಜಿಟಲ್​ ಸಮೀಕ್ಷೆ ಫಲಿತಾಂಶ: ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ನೆಟ್ಟಿಗರ ಉತ್ತರ ನೋಡಿ

ಟಿವಿ9 ಕನ್ನಡ ಡಿಜಿಟಲ್ ಸಮೀಕ್ಷೆ: ನಾವು, ಫೇಸ್​ಬುಕ್, ಯೂಟ್ಯೂಬ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಸಮೀಕ್ಷೆ ನಡೆಸಿದೆವು. ಮಾರ್ಚ್ 11 ರಂದು ‘‘ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ?’’ ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟೆವು. ಇದಕ್ಕೆ ಬಂದ ಉತ್ತರಗಳೇನು? ಜನ ಏನನ್ನುತ್ತಾರೆ ಎಂಬ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಟಿವಿ9 ಡಿಜಿಟಲ್​ ಸಮೀಕ್ಷೆ ಫಲಿತಾಂಶ: ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ನೆಟ್ಟಿಗರ ಉತ್ತರ ನೋಡಿ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Mar 19, 2022 | 12:11 PM

ಬೆಂಗಳೂರು: ಇತ್ತೀಚೆಗೆ ಬಂದ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಮೆರೆದಾಡಿದರೆ ಇತ್ತ ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನೆಲಕಚ್ಚಿದೆ. ತಾನು ಅಧಿಕಾರದಲ್ಲಿದ್ದ ಪಂಜಾಬ್​ನಲ್ಲಿ ಕೂಡ ಸೋತು ಸುಣ್ಣವಾಗಿದೆ. ಉತ್ತರಾಖಂಡ್, ಗೋವಾದಲ್ಲಿ ಉತ್ತಮ ಪ್ರದರ್ಶನದ ಆಸೆ ಇಟ್ಟುಕೊಂಡಿದ್ದ ಕೈ ಪಾಳಯ ಗೋವಾದಲ್ಲಿ ಸರ್ಕಾರ ರಚನೆ ಮಾಡುವ ಬಗ್ಗೆಯೂ ಯೋಜನೆ ಹಾಕಿಕೊಂಡಿತ್ತು. ಆದರೆ ಐದು ರಾಜ್ಯಗಳ ಪೈಕಿ ಒಂದು ಕಡೆಯೂ ಕಾಂಗ್ರೆಸ್ ಗೆದ್ದು ಬರಲಿಲ್ಲ. ಬದಲಾಗಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ ಮತ್ತು ಮಣಿಪುರದಲ್ಲಿ ಬಹುಮತ ಪಡೆದುಕೊಂಡಿದೆ. ಪಂಜಾಬ್ ಒಂದು ಕಡೆ ಆಪ್ ತನ್ನ ಸರ್ಕಾರ ರಚಿಸಿದೆ. ಈ ಮಧ್ಯೆ, ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುತ್ತದೆಯೇ? ಕರ್ನಾಟಕದ ಪರಿಸ್ಥಿತಿ ಏನಾಗಲಿದೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದೆ. ಹೆಚ್ಚು ಕುತೂಹಲ ಮೂಡಿಸಿದೆ.

ಕರ್ನಾಟಕದಲ್ಲಿ ಮುಂದಿನ ವರ್ಷ, ಅಂದರೆ 2023 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಅನುಸಾರ ಕರ್ನಾಟಕ ರಾಜಕೀಯ ನಾಯಕರನ್ನು ಈ ಬಗ್ಗೆ ಪ್ರಶ್ನಿಸಿದಾಗ ವಿವಿಧ ಅಭಿಪ್ರಾಯಗಳು ಕೇಳಿಬಂದಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೂ ಪ್ರಭಾವ ಬೀರುತ್ತದೆ ಎಂದು ಹಲವರು ಹೇಳಿದ್ದಾರೆ. ಬಿಜೆಪಿ ನಾಯಕರು ಶತಾಯಗತಾಯ ನಾವೇ ಮತ್ತೆ ಗೆಲ್ಲುತ್ತೇವೆ, ಮೋದಿ ಹವಾ ಜೊತೆಗೆ ನಮ್ಮ ಕೆಲಸ, ಬಿಜೆಪಿ ಸದೃಢವಾಗಿದೆ ಎಂಬ ಇತ್ಯಾದಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರು ಉತ್ತರ ಭಾರತದ ರಾಜ್ಯಗಳ ಲೆಕ್ಕಾಚಾರ ಬೇರೆ ಇತ್ತ ಕರ್ನಾಟಕವೇ ಬೇರೆ. ಪಂಚರಾಜ್ಯಗಳ ಚುನಾವಣೆಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಅದು ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಸದನದಲ್ಲಿಯೂ ಮಾತುಕತೆ ನಡೆದಿತ್ತು. ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಏನೇ ಆಗಲಿ, ಈ ಬಗ್ಗೆ ಜನರು ಏನು ಹೇಳುತ್ತಾರೆ ಎನ್ನುವುದೇ ಕೊನೆಗೆ ಮುಖ್ಯವಾಗುತ್ತದೆ.

ಮತದಾರನ ನಿರ್ಧಾರವೇ ಕೊನೆಗೆ ನಿರ್ಣಯಾತ್ಮಕ ಆಗುತ್ತದೆ. ಮತದಾರ ಯಾರನ್ನು ಅಧಿಕಾರಕ್ಕೆ ತರಲು ಬಯಸಿದ್ದಾನೆ, ಯಾರಿಗೆ ಮತ ನೀಡುತ್ತಾನೆ, ಯಾರು ಹೆಚ್ಚು ಜನಬೆಂಬಲ ಗಳಿಸುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರ ಆಗುತ್ತದೆ. ಈ ಎಲ್ಲಾ ಹಿನ್ನೆಲೆಗಳನ್ನು ಗಮನಿಸಿ ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಯೂಟ್ಯೂಬ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಒಂದು ಸಮೀಕ್ಷೆ ನಡೆಸಿದೆ. ಮಾರ್ಚ್ 11 ರಂದು ‘‘ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ?’’ ಎಂಬ ಪ್ರಶ್ನೆಯನ್ನು ಟಿವಿ9 ಜನರ ಮುಂದಿಟ್ಟಿದೆ. ಇದಕ್ಕೆ ಬಂದ ಉತ್ತರಗಳೇನು? ಜನ ಏನನ್ನುತ್ತಾರೆ ಎಂಬ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಫೇಸ್ಬುಕ್ ಅಂಕಿ-ಅಂಶ, ಕಮೆಂಟ್​ಗಳು ಏನು?

ಫೇಸ್ಬುಕ್​ನಲ್ಲಿ ಕೇಳಿದ ಈ ಪ್ರಶ್ನೆಗೆ ಇದುವರೆಗೆ ಸುಮಾರು 4,100 ಜನ ಕಮೆಂಟ್ ಮಾಡಿದ್ದಾರೆ. 3,400 ರಷ್ಟು ಜನರು ರಿಯಾಕ್ಷನ್ ನೀಡಿದ್ದಾರೆ ಹಾಗೂ 30ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ಕಮೆಂಟ್ ಮಾಡಿ ಎಂದು ಕೇಳಲಾಗಿದ್ದು ಹಲವರು ಅವರ ಅಭಿಪ್ರಾಯ ಹೇಳಿದ್ದಾರೆ.

ಪ್ರಸ್ತುತ ಅಧಿಕಾರದಲ್ಲಿ ಇರುವ ಬಿಜೆಪಿ ಉಳಿದ ಆಡಳಿತಾವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಂತರಿಕ ಜಗಳವನ್ನು ಕಡಿಮೆ ಮಾಡಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನಿಜವಾಗಿ ಈಗ ಬಿಜೆಪಿ ಕಾಂಗ್ರೆಸ್​ಅನ್ನು ವಿರೋಧಿಸುತ್ತಿಲ್ಲ, ಅವರದೇ ಪಕ್ಷದ ನಾಯಕರನ್ನು ವಿರೋಧಿಸುತ್ತಿದೆ, ಅಲ್ಲದೆ ಬಿಜೆಪಿ ಬಲಿಷ್ಠವಾಗಿಲ್ಲ. ಕಾಂಗ್ರೆಸ್ ದುರ್ಬಲವಾಗಿರುವುದು ಬಿಜೆಪಿ ಬಲಿಷ್ಠ ಎಂಬಂತೆ ಮಾಡಿದೆ ಎಂದು ಮತ್ತೊಬ್ಬರು ತಮ್ಮ ಯೋಚನೆ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ನಡೆಸಿದ್ದು ಸಾಕು ಇನ್ನು ಬಿಜೆಪಿ ಬರಲಿ ಎಂದೂ ಕೆಲವರು ಹೇಳಿದ್ದಾರೆ. ಕುಟುಂಬ ರಾಜಕಾರಣ ನಿಲ್ಲುವವರೆಗೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಹಲವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನಿಸಿದಾಗ, ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಬಗ್ಗೆ ಜನರ ಪ್ರತಿಕ್ರಿಯೆ ಸಮಾನಾಗಿದೆ. ವಿಶೇಷ ಎಂದರೆ ಬಿಜೆಪಿ ಉಲ್ಲೇಖಿಸುವಾಗ ಬಸವರಾಜ ಬೊಮ್ಮಾಯಿ ಅಥವಾ ಇತರ ನಾಯಕರ ಹೆಸರು ಕಡಿಮೆ ಕೇಳಿಬಂದಿದ್ದರೆ, ಕಾಂಗ್ರೆಸ್ ಉಲ್ಲೇಖಿಸುವಾಗ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಹೆಸರು ಕಂಡುಬಂದಿದೆ. ಈ ಮಧ್ಯೆ, ಕೆಲವರು ಜೆಡಿಎಸ್ ಮತ್ತು ಇನ್ನು ಕೆಲವರು ಪ್ರಜಾಕೀಯದ ಆಡಳಿತ ಬೇಕು ಎಂದಿದ್ದಾರೆ.

ಯೂಟ್ಯೂಬ್ ಸಮೀಕ್ಷೆ ಏನು ಹೇಳುತ್ತದೆ?

ಯೂಟ್ಯೂಬ್​ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ಕಮೆಂಟ್ ಮಾಡಿ ಎಂಬ ಪ್ರಶ್ನೆ ಹಾಗೂ ಅದಕ್ಕೆ ಹೌದು ಮತ್ತು ಇಲ್ಲ ಎಂಬ ಆಯ್ಕೆ ಕೊಟ್ಟು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಇಲ್ಲಿಯವರೆಗೆ ಸುಮಾರು 1,16,000 ಜನರು ತಮ್ಮ ಅಭಿಮತ ಸೂಚಿಸಿದ್ದಾರೆ. 3,800 ರಷ್ಟು ಮಂದಿ ಲೈಕ್ ಕೊಟ್ಟಿದ್ದಾರೆ ಹಾಗೂ 1,225 ಮಂದಿ ಕಮೆಂಟ್ ಮಾಡಿದ್ದಾರೆ.

ಯೂಟ್ಯೂಬ್ ಕಮೆಂಟ್ ವಿಭಾಗದಲ್ಲಿ ಬಹುತೇಕ ಬಿಜೆಪಿ ಪರ ಅಭಿಪ್ರಾಯಗಳು ಕಂಡುಬಂದಿದೆ. ನಮಗೆ ಮೋದಿ, ಯೋಗಿ ಅಂತಹ ಉತ್ತಮ ನಾಯಕ ಬೇಕು ಎಂದೂ ಹಲವರು ಹೇಳಿದ್ದಾರೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಹಲವರು ತಿಳಿಸಿದ್ದಾರೆ. ಇನ್ನು ಹಲವರು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪಕ್ಷಾತೀತವಾಗಿ, ಯಾರು ಅಧಿಕಾರಕ್ಕೆ ಬಂದರೂ ಉತ್ತಮ ಆಡಳಿತ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇಲ್ಲೂ ಕೂಡ ಜೈ ಸಿದ್ದರಾಮಯ್ಯ ಎಂಬ ಕಮೆಂಟ್​ಗಳು ಇವೆ.

ಯೂಟ್ಯೂಬ್​ನಲ್ಲಿ ನಡೆಸಿದ ಸಮೀಕ್ಷೆ ಹೌದು/ ಇಲ್ಲ ಪ್ರಶ್ನೆಗೆ ಹೇಗೆ ಉತ್ತರ ಬಂದಿದೆ ಎಂಬ ಕುತೂಹಲ ಇದ್ದೇ ಇದೆ. ಅದರಂತೆ ಇಲ್ಲಿಯವರೆಗೆ ಶೇಕಡಾ 43 ರಷ್ಟು ಮಂದಿ ಹೌದು ಎಂದು ಮತ್ತು ಶೇಕಡಾ 57 ರಷ್ಟು ಮಂದಿ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯ ಇದೆ ಎಂದು ಶೇಕಡಾ 43 ರಷ್ಟು ಜನ ಮತ್ತು ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯ ಇಲ್ಲ ಎಂದು ಶೇಕಡಾ 57 ರಷ್ಟು ಜನ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್

ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ -ಸಿ.ಎಂ.ಇಬ್ರಾಹಿಂ

Published On - 8:58 am, Sat, 19 March 22