ಹಿಂದೂ ಧರ್ಮ ಇಲ್ಲ ಎಂದ ಉದಯನಿಧಿ ಸ್ಟಾಲಿನ್​​ನನ್ನು ಗಲ್ಲಿಗೇರಿಸಿ: ಕಾಂಗ್ರೆಸ್​ ಶಾಸಕ

ಉದಯನಿಧಿ ಹಾಗೆ ಹಲವರು ಸನಾತನ ಧರ್ಮ ಮುಗಿಸಬೇಕು ಅಂತಾರೆ. ಧರ್ಮವನ್ನು ಪಾಲನೆ ಮಾಡಬೇಡ ಅನ್ನಲು ನೀನು ಯಾರು? ಧರ್ಮವನ್ನು ಪಾಲನೆ ಮಾಡಬೇಡಿ ಎಂದು ಯಾರು ಹೇಳಬಾರದು ಎಂದು ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಹಿಂದೂ ಧರ್ಮ ಇಲ್ಲ ಎಂದ ಉದಯನಿಧಿ ಸ್ಟಾಲಿನ್​​ನನ್ನು ಗಲ್ಲಿಗೇರಿಸಿ: ಕಾಂಗ್ರೆಸ್​ ಶಾಸಕ
ಕೊತ್ತೂರು ಮಂಜುನಾಥ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ವಿವೇಕ ಬಿರಾದಾರ

Updated on:Oct 02, 2023 | 3:11 PM

ಕೋಲಾರ ಅ.02: ಹಿಂದೂ ಧರ್ಮ ಇಲ್ಲ ಎಂದು ಹೇಳುವವರನ್ನು ಗಲ್ಲಿಗೇರಿಸಬೇಕು. ಉದಯನಿಧಿ ಸ್ಟಾಲಿನ್ (Udayanidhi Stalin) ಅವರಿಗೆ ದುಡ್ಡು ಜಾಸ್ತಿ ಆಗಿ ಹುಚ್ಚರಾಗಿದ್ದಾರೆ. ಅವರಿಗೆ ಎರಡೂ, ಮೂರು ಹುಚ್ಚು ನಾಯಿ ಕಚ್ಚಿದೆ ಹೀಗಾಗಿ ಹುಚ್ಚರಾಗಿದ್ದಾರೆ. ನಾವು ಇರುವುದು ಭಾರತ ದೇಶದಲ್ಲಿ. ನಿನ್ನ ಧರ್ಮವನ್ನು ನೀನು ಪಾಲನೆ ಮಾಡು. ಧರ್ಮವನ್ನು ಪಾಲನೆ ಮಾಡಬೇಡ ಎಂದು ಹೇಳುವುದಕ್ಕೆ ಯಾರಿಗೂ ಹಕ್ಕಿಲ್ಲ. ನನ್ನ ಧರ್ಮವನ್ನು ಇಲ್ಲ ಎಂದು ಹೇಳುವುದಕ್ಕೆ ನೀನು ಯಾರು? ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಹರಿಹಾಯ್ದರು.

ಕೋಲಾರದ ಗಾಂದಿವನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉದಯನಿಧಿ ಹಾಗೆ ಹಲವರು ಸನಾತನ ಧರ್ಮ ಮುಗಿಸಬೇಕು ಅಂತಾರೆ. ಧರ್ಮವನ್ನು ಪಾಲನೆ ಮಾಡಬೇಡ ಅನ್ನಲು ನೀನು ಯಾರು? ಧರ್ಮವನ್ನು ಪಾಲನೆ ಮಾಡಬೇಡಿ ಎಂದು ಯಾರು ಹೇಳಬಾರದು. ನಟ ಪ್ರಕಾಶ್ ರಾಜ್ ಎಂಟು ವರ್ಷದ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದು ಭಾರತ ದೇಶ, ಬಾಬಾ ಸಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಕೊಟ್ಟಿದ್ದಾರೆ. ಆ ಧರ್ಮ ಈ ಧರ್ಮ ಅಂತ ಯಾರು ಅನ್ನುತ್ತಾರೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದರು.

ಕಾನೂನು ರೀತಿಯಲ್ಲಿ ಕ್ರಮ‌ ಕೈಗೊಳ್ಳಬೇಕು

ಕೋಲಾರದಲ್ಲಿ ತಲವಾರ್ ಪ್ರದರ್ಶನ ವಿಚಾರವಾಗಿ ಮಾತನಾಡಿದ ಅವರು ಕತ್ತಿ ಯಾರೇ ಹಿಡಿದರೂ‌, ಯಾರೇ ಕಾನೂನು‌ ವಿರುದ್ಧ ನಡೆದರೂ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಯಾರೇ ಆಗಲಿ, ‌ಯಾವುದೇ ಜಾತಿಯಾಗಲಿ, ಕಾನೂನು ಎಲ್ಲಾರಿಗೂ ಒಂದೇ. ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಲೇ ಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಈ ರೀತಿ ಘಟನೆ ನಡೆಯುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ನಡೆದಿವೆ. ಕೆಲವೊಂದು ಅಕಸ್ಮಿಕವಾಗಿ ನಡೆಯುತ್ತದೆ. ಅದನ್ನು ಕಾನೂನು ರೀತಿಯಲ್ಲಿ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಧರ್ಮದ ಬಗ್ಗೆ ತಿಳಿಯದವರಿಂದ ಇಂಥ ಮಾತು: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ನಿರ್ಮಲಾನಂದನಾಥ ಸ್ವಾಮೀಜಿ ಆಕ್ಷೇಪ

ಲಿಂಗಾಯುತ ಸಮುದಾಯಕ್ಕೆ ಸಿಎಂ ಸ್ಥಾನ: ಏನೋ ತಲೆ ಕೆಟ್ಟು ಮಾತನಾಡುತ್ತಿದ್ದಾರೆ

ಲಿಂಗಾಯುತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಚಾರವಾಗಿ ಮಾತನಾಡಿದ ಅವರು ಯಾರ್ಯಾರಿಗೋ ಏನು ತಲೆ ಕೆಟ್ಟು ಹುಚ್ಚು ಹಿಡಿದು ಮಾತನಾಡುತ್ತಿದ್ದಾರೆ. 136 ಶಾಸಕರು ಕಾಂಗ್ರೆಸ್‌ ಪಕ್ಷದಿಂದ ಗೆದಿದ್ದಾರೆ. ಸರ್ಕಾರ ಸುಭಿಕ್ಷೆಯಾಗಿ ನಡೆದುಕೊಂಡು ಹೋಗುತ್ತಿದೆ. ಶಾಸಕರಿಗೆ ಮಾತನಾಡುವ ಆಸಕ್ತಿ ಇದ್ದರೆ, ನಿಮ್ಮ ತಾಲೂಕಿನ ಅಭಿವೃದ್ದಿ ಬಗ್ಗೆ ಮಾತ‌ನಾಡಿ. ಜನರ ಕಷ್ಟ ಸುಖಗಳ ಬಗ್ಗೆ ಮಾತನಾಡಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹತ್ತಿರ ಹೋಗಿ ಸರ್ಕಾರದ ಮಟ್ಟದಲ್ಲಿ‌ ಹೋಗಿ ಕೆಲಸ ಮಾಡಿಸಿಕೊಳ್ಳಿ ಎಂದು ವಾಗ್ದಾಳಿ ಮಾಡಿದರು.

ತೀಟೆಗಳು ಮಾಡುವುದು, ಪಿನ್​ಗಳಲ್ಲಿ ಚುಚ್ಚುವರನ್ನು ಪಕ್ಷದಿಂದ ಸ್ವಲ್ಪ ದೂರವಿಡಿ. ಮಂತ್ರಿ ಬೇಕು, ಸಿಎಂ ಬೇಕು ಎಂದು ಕೇಳಿದರೇ, ನನಗೂ ಪಿಎಂ‌ ಆಗಬೇಕು ಅಂತ ಆಸೆ ಇದೆ. ಕೈ ಎಲ್ಲಿಯವರೆಗೂ ಹೋಗತ್ತೆ ಅಲ್ಲಿಯವರೆಗು‌ ಚಾಚಬೇಕು. ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೇ ತಾಲೂಕಿನಲ್ಲಿ ಮಾಡಿ. ನಮ್ಮ ಜಾತಿ ಸಿಎಂ ಆಗಬೇಕು, ಈ‌ ಜಾತಿ ಸಿಎಂ ಆಗಬೇಕು ಎಂಬುವುದನ್ನು ಬಿಡಿ. ತಲೆ ಕೆಟ್ಟವರ ರೀತಿ ಮತನಾಡಬೇಡಿ.

ಸಿ.ಎಂ ಇಬ್ರಾಹಿಂ ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು ಇಬ್ರಾಹಿಂ ಅವರು ಕಾಂಗ್ರೆಸ್​​ಗೆ ಬಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಪಕ್ಷದಲ್ಲಿದ್ದಾಗ ಅಧಿಕಾರವನ್ನು ಬಳಕೆ ಮಾಡಿಕೊಂಡು ಪಕ್ಷ ಬಿಟ್ಟು ಹೋದರು. ಈಗ ಮತ್ತೆ ಪಕ್ಷಕ್ಕೆ ಬರುತ್ತಿದ್ದಾರೆ ಅಂದರೆ ಅಧಿಕಾರಕ್ಕಾಗಿ ಬರುತ್ತಾರಾ? ನಮ್ಮ ಬಳಿ ಮುಸ್ಲಿಂ ನಾಯಕರಿದ್ದಾರೆ. ಜಮೀರ್ ಅಹ್ಮದ್, ತನ್ವೀರ್ ಸೇಠ್, ನಸೀರ್ ಅಹ್ಮದ್ ಅವರಂತಹ ನಾಯಕರುಗಳು ಇದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್​ಗೆ ಬರುವಂತಹವರನ್ನು ಪಕ್ಷಕ್ಕೆ ತೆಗೆದುಕೊಳ್ಳುವುದು ತಪ್ಪು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:11 pm, Mon, 2 October 23