ಬೆಂಗಳೂರು, ಜನವರಿ 31: ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಕ್ರೀಡಾ ಪ್ರಾಧಿಕಾರದ ಬೈಲಾ (ನಿಬಂಧನೆ ತಿದ್ದುಪಡಿ) ದಲ್ಲಿ ಇದಕ್ಕೆ ಅವಕಾಶವಿಲ್ಲ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬೈಲಾದ ನಿಯಮದ ಪ್ರಕಾರ ಸಚಿವರೇ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಸದ್ಯ ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ ವಿಜಯಾನಂದ ಕಾಶಪ್ಪನವರ್, ಕ್ರೀಡಾ ಪ್ರಾಧಿಕಾರದ ಬೈಲಾ ಬದಲಾವಣೆ ಆದ ಮೇಲೆ ನಾನು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಾಧ್ಯ. ಬೈಲಾ ಬದಲಾಗದಿದ್ದರೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಈಗ ಅಲ್ಲಿ ಅಧ್ಯಕ್ಷರು ಸಚಿವರೇ ಇದ್ದಾರೆ. ಬೈಲಾ ಬದಲಾದರೆ ನಾನು ಅಧ್ಯಕ್ಷ ಆಗುತ್ತೇನೆ, ಹಾಗಾದರೆ ಮಾತ್ರ ಆ ಸ್ಥಾನ ಪಡೆಯುತ್ತೇನೆ. ಇಲ್ಲದೇ ಹೋದರೆ ನಾನು ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಆಗುವುದಿಲ್ಲ. ನಾನು ಶಾಸಕನಾಗಿಯೇ ಸಂತೋಷದಿಂದ ಇರುತ್ತೇನೆ. ಸಣ್ಣ ಪುಟ್ಟ ತೊಂದರೆ ಆಗಿಯೇ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಬೇಕು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ವಿಜಯಾನಂದ ಕಾಶಪ್ಪನವರ್
ನಮ್ಮ ಕುಟುಂಬದ್ದು ಸಮಸ್ಯೆ ನಾವೇ ಬಗೆಹರಿಸಿಕೊಳ್ಳಲು ರೆಡಿ ಇದ್ದೀವಲ್ಲ. ಬೇರೆ ಹೊರಗಡೆಯವರದ್ದಲ್ಲ ಇದು. ನಮ್ಮ ಮನೆಯೊಳಗೇ ನಮ್ಮ ನಾಯಕರೇ ಮಾಡಿದ ನಿರ್ಧಾರ. ನಮ್ಮವರೇ ಸರಿ ಪಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಕಾಯುತ್ತೇನೆ. ನನ್ನನ್ನು ಸಚಿವನನ್ನಾಗಿಯೇ ಮಾಡಿ ಎಂದು ಸಿಎಂಗೆ ಹೇಳಿದ್ದೆ. ಈಗ ತಗೋ ಅಂತ ಸಿಎಂ ಹೇಳಿದ ಮೇಲೆ ಭರವಸೆ ಇಟ್ಟಿದ್ದೇನೆ. ಈ ಜಗತ್ತಲ್ಲಿ ಯಾರಿಗೆ ಸಮಾಧಾನ ಇದೆ ಹೇಳಿ? ಸಚಿವರಾಗಬೇಕು ಅಂದುಕೊಂಡವರಿಗೆ ನಿಗಮ ಮಂಡಳಿ ಕೊಟ್ಟರೆ ಸಮಾಧಾನ ಮಾಡುವುದಕ್ಕಾಗತ್ತಾ ಎಂದು ಪ್ರಶ್ನಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ಪುನರ್ ರಚನೆ ವಿಚಾರ ಈಗ ಹೇಳಲು ಸಾಧ್ಯವಿಲ್ಲ. ಅದನ್ನು ಸಮಯವೇ ನಿರ್ಧಾರ ಮಾಡುತ್ತದೆ. ಈಗಲೇ ಮಾತನಾಡಿದರೆ ಈ ಸಮಯದಲ್ಲಿ ಹೇಳಿದರೆ ಅದು ಬಹಳ ಮುಂಚಿತ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮಂತ್ರಿ ಸ್ಥಾನ ಈಗ ಸಿಕ್ಕಿಲ್ಲ, ಆದರೆ ಮುಂದೆ ಖಂಡಿತ ಸಿಗಲಿದೆ: ವಿಜಯಾನಂದ್ ಕಾಶಪ್ಪನವರ್, ಶಾಸಕ
ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಮನಸ್ಸಿನಲ್ಲಿಯೂ ಇದೆ. ಖಂಡಿತವಾಗಿಯೂ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಎರಡು ವರ್ಷದ ನಂತರವೂ ಸಚಿವರನ್ನಾಗಿ ಮಾಡಬಹುದು. ಎರಡು ವರ್ಷದ ನಂತರ ಯಾಕೆ ಮಂತ್ರಿ ಆಗಬಾರದ? ಅರ್ಹತೆ ಇಲ್ವಾ ನಮ್ಮತ್ರ ಎಂದು ಪ್ರಶ್ನಿಸಿದರು.
ನಮಗೆ ವಿಶ್ವಾಸ ಇದೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ಕೆಲವೊಂದಿಷ್ಟು ದಿನ ಆದ ಮೇಲೆ ಸಚಿವ ಸ್ಥಾನ ನೀಡಬಹುದು. ಒಂದು ವರ್ಷ ಮಂತ್ರಿ ಆಗುತ್ತೇನೋ, 2 ವರ್ಷ ಮಂತ್ರಿ ಆಗುತ್ತೇನೋ ಒಟ್ಟಿನಲ್ಲಿ ಇದೇ ಸರ್ಕಾರದಲ್ಲಿ ಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.