ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಈಶ್ವರಪ್ಪ
ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ತಪ್ಪಿರುವುದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗನಿಂದ ಎಂದು ಈಶ್ವರಪ್ಪ ಆರೋಪಿಸಿದ್ದು, ಇದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಈಶ್ವರಪ್ಪ ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದಾರೆ.
ಶಿವಮೊಗ್ಗ,(ಮಾರ್ಚ್ 15): ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ(KS Eshwarappa), ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ(Shivamogga Loksabha constituency) ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಇಂದು (ಮಾರ್ಚ್ 15) ಶಿವಮೊಗ್ಗದ (Shivamogga) ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು.
ಸ್ವತಂತ್ರವಾಗಿ ಸ್ಪರ್ಧಿಸಿ ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದರು.
ಇದನ್ನೂ ಓದಿ: ಈಶ್ವರಪ್ಪ ಬೆನ್ನಲ್ಲೇ ಯಡಿಯೂರಪ್ಪ ವಿರುದ್ಧ ಮತ್ತೋರ್ವ ಟಿಕೆಟ್ ವಂಚಿತ ನಾಯಕ ಕೆಂಡಾಮಂಡಲ
ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ
ನನ್ನಿಂದಲೇ ಎನ್ನುವವರ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇನೆ. ಸಭೆಯಲ್ಲಿ ಭಾಗಿಯಾಗಿರುವವರೆಲ್ಲೂ ನನ್ನ ಪರ ಕೆಲಸ ಮಾಡಬೇಕು. ಪಕ್ಷದ ಸಿದ್ಧಾಂತ ಪರವಿರುವ ನನ್ನನ್ನು ಬೆಂಬಲಿಸಬೇಕು. ಚುನಾವಣೆ ವೇಳೆ ಜಾತಿ ವಿಚಾರ ಪ್ರಬಲವಾಗಿ ಚರ್ಚೆಯಾಗುತ್ತದೆ, ಎಲ್ಲಾ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ನಿರ್ಧರಿಸಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ. ಮೋದಿ ಪ್ರಧಾನಿಯಾದ ನಂತರ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ಹಾಗಾಗಿ ಮೋದಿ, ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಈಶ್ವರಪ್ಪ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.
ಕಾಂತೇಶ್ ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾನೆ ಎಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರಸ್ತಾಪ ಮಾಡಲಾಗಿತ್ತು. ಬಿಎಸ್ ವೈ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚುನಾವಣೆ ಸಮಿತಿಯಲ್ಲಿ ಕಾಂತೇಶ್ ಹೆಸರು ಪ್ರಸ್ತಾಪವಾಗಿತ್ತು. ಆದರೆ ಬೊಮ್ಮಾಯಿ ಹೆಸರೂ ಹೇಗೆ ಬಂತು ಗೊತ್ತಿಲ್ಲ .ಅದೊಂದು ಕೆಟ್ಟ ರಾಜಕೀಯ.. ಅದರ ಬಗ್ಗೆ ನಾನು ಹೇಳುವುದಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಪ್ರಾಣ ಹೋದರೂ ಮೋದಿ ವಿರುದ್ಧ ಹೋಗಲ್ಲ
ಪ್ರಾಣ ಹೋದರೂ ನಾನು ನರೇಂದ್ರ ಮೋದಿ ವಿರುದ್ಧ ಹೋಗುವುದಿಲ್ಲ. ಮೋದಿ ಪ್ರಧಾನಿ ಆಗುವ ಮೊದಲು ಎಲ್ಲಾ ದೇಶಗಳು ಪಾಕ್ ಜತೆಗಿದ್ದವು. ಆದರೆ ಮೋದಿ ಪ್ರಧಾನಿ ಆದ ನಂತರ ಎಲ್ಲ ದೇಶಗಳು ಭಾರತದ ಜತೆಗಿವೆ. ಮುಸ್ಲಿಂ ರಾಷ್ಟ್ರಗಳು ಕೂಡ ಮೋದಿಗೆ ರತ್ನಗಂಬಳಿ ಹಾಕಿ ಕರೆಯುತ್ತಿವೆ. ನಮ್ಮ ದೇಶಕ್ಕೆ ಬನ್ನಿ ಎಂದು ಮೋದಿಗೆ ದುಂಬಾಲು ಬೀಳುತ್ತಿವೆ. ವಂಶ ಪಾರಂಪರ್ಯ ವಿರುದ್ಧ ಪ್ರಧಾನಿ ಮೋದಿ ಮಾತನಾಡಿದ್ದರು. ಹಾಗಾಗಿ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲ್ಲ. ವಿಧಾನಸಭೆ ಚುನಾವಣೆ ವೇಳೆ ನೀವು ಹಿಂದೆ ಸರಿಯಬೇಕು ಎಂದಿದ್ದರು. ಪಕ್ಷದ ಹಿರಿಯ ಸೂಚನೆಯಂತೆ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್ಗೆ ಟಿಕೆಟ್ ಭರವಸೆ ನೀಡಿದ್ದರು. ಯಡಿಯೂರಪ್ಪ ಭೇಟಿ ವೇಳೆ ಶಿವಕುಮಾರ್ ಉದಾಸಿ ಸ್ಪರ್ಧಿಸಲ್ಲ ಅಂತಿದ್ದಾರೆ ಅಂದೆ. ನೀವು ಅನುಮತಿ ನೀಡಿದರೆ ಕಾಂತೇಶ್ ಹಾವೇರಿಯಿಂದ ಸ್ಪರ್ಧಿಸುತ್ತಾರೆ. ಹಾವೇರಿಯಲ್ಲಿ ಹಾಸ್ಟೆಲ್ ಮಾಡಿದ್ದೇನೆ, ಸಂಬಂಧಿಕರು ಇದ್ದಾರೆ. ಹೀಗಾಗಿ ಹಾವೇರಿ ಟಿಕೆಟ್ ನೀಡಿದರೆ ಕಾಂತೇಶ್ ಗೆಲ್ಲುತ್ತಾನೆ ಎಂದು ಹೇಳಿದ್ದೆವು. ಈ ವೇಳೆ ಕಾಂತೇಶ್ಗೆ ಹಾವೇರಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಅಲ್ಲದೇ ಹಾವೇರಿ ಟಿಕೆಟ್ ಕೊಡಿಸಿ ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸುತ್ತೇನೆಂದಿದ್ದರು ಎಂದು ಈಶ್ವರಪ್ಪ ಹೇಳಿದರು.
ಈ ಜೋಶ್ ಚುನಾವಣೆ ಮುಗಿಯುವವರೆಗೂ ಇರಬೇಕು
ಶಿವಮೊಗ್ಗ ಅಂದರೆ ಭಾರತೀಯ ಜನತಾ ಪಕ್ಷದ ದೊಡ್ಡ ಸಂಘಟನೆಯಿದೆ. ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿ ಮತ್ತೊಂದು ಕಾಂಗ್ರೆಸ್ ಆಗಬಾರದೆಂದು ನಿರ್ಧಾರ ಮಾಡಿದ್ದೇನೆ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದೆಂಬುದು ನಮ್ಮ ಉದ್ದೇಶ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಡಿವಿಎಸ್, ಕಟೀಲುಗೆ ಟಿಕೆಟ್ ತಪ್ಪಿಸಿದ್ದಾರೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ವತಂತ್ರವಾಗಿ ಸ್ಪರ್ಧಿಸುವೆ. ರಾಘವೇಂದ್ರ, ಗೀತಾ ಶಿವರಾಜ್ಕುಮಾರ್, ಈಶ್ವರಪ್ಪ ಪ್ರಮುಖ ಸ್ಪರ್ಧೆ ಮಾಡುತ್ತಿದ್ದು, ಮೂವರು ಅಭ್ಯರ್ಥಿಗಳ ಪೈಕಿ ಯಾರು ಹಿತವರೆಂದು ನೀವೇ ನಿರ್ಧರಿಸಿ. ಈ ಜೋಶ್ ಲೋಕಸಭಾ ಚುನಾವಣೆ ಮುಗಿಯುವವರೆಗೂ ಇರಬೇಕು ಎಂದು ಸಭೆಯಲ್ಲಿ ತಮ್ಮ ಬೆಂಬಲಿಗರು, ಅಭಿಮಾನಿಗಳಿಗೆ ಕರೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ಶೆಟ್ಟರ್ರನ್ನು MLC ಮಾಡಿದ್ದರು. ಅಂತಹ ಶೆಟ್ಟರ್ರನ್ನು ಯಡಿಯೂರಪ್ಪ ಮನವೊಲಿಸಿ ಬಿಜೆಪಿಗೆ ಕರೆತಂದಿದ್ದ. ಈಗ ಬೆಳಗಾವಿ ಟಿಕೆಟ್ ನೀಡುವುದಾಗಿ ಶೆಟ್ಟರ್ಗೆ ಹೇಳಿದ್ದಾರೆ, ಯಾವ ಕೇಂದ್ರದ ನಾಯಕರನ್ನು ಕೇಳಿ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:01 pm, Fri, 15 March 24