ಸುಮಲತಾ ವಿರುದ್ಧದ ರಾಜಕೀಯ ಕದನಕ್ಕೆ ವಿರಾಮ ಘೋಷಿಸಿದ ಕುಮಾರಸ್ವಾಮಿ, ಪಾಠ ಕಲಿತರೇ ಎಚ್ಡಿಕೆ!
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ರಾಜಕೀಯ ಇಡೀ ದೇಶವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಸುಮಲತಾ ಅಂಬರೀಶ್ ವರ್ಸಸ್ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿ ರೋಚಕ ಕಾದಾಟ ನಡೆದಿತ್ತು. 2019ರ ಚುನಾವಣೆಯಲ್ಲಿ ಹಾವು-ಮುಂಗುಸಿಯಂತಿದ್ದ ಕುಮಾರಸ್ವಾಮಿ, ಸಂಸದೆ ಸುಮಲತಾ ಅಂಬರೀಶ್ ಅವರು ಇದೀಗ ಮುನಿಸು ಮರೆಯಬೇಕಾದ ಅನಿವಾರ್ಯತೆ ಬಂದಿದೆ. ಅದರಲ್ಲೂ ಕುಮಾರಸ್ವಾಮಿ, ಸುಮಲತಾ ವಿರುದ್ಧದ ರಾಜಕೀಯ ಕದನಕ್ಕೆ ವಿರಾಮ ಘೋಷಿಸಿದ್ದಾರೆ.
ಮಂಡ್ಯ, (ಮಾರ್ಚ್ 15): ಲೋಕಸಭಾ ಚುನಾವಣೆ (Loksabha Elections 2024) ಸಮೀಪಿಸುತ್ತಿದ್ದಂತೆ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ವರಸೆ ಬದಲಾಗಿದೆ. ಕಳೆದ ಲೋಕಸಭಾ ಚುನಾವಣೆಯಿಂದ ಆರಂಭವಾಗಿದ್ದ ಕುಮಾರಸ್ವಾಮಿ-ಸುಮಲತಾ ಅಂಬರೀಶ್ ನಡುವೆ ದೊಡ್ಡಮಟ್ಟದಲ್ಲಿ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. ಆದ್ರೆ, ಈ ಬಾರಿ ಲೋಕಸಭಾ ಚುನಾವಣೆ ಬರುತ್ತಿದ್ದಂತೆಯೇ ವೈರತ್ವ ಮರೆತು ಒಂದಾಗುವ ಮುನ್ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮಾತನಾಡಿದ್ದ ಕುಮಾರಸ್ವಾಮಿ, ಸುಮಲತಾ ಅವರೇನು ನನ್ನ ಶತ್ರುನಾ, ಭೇಟಿ ಮಾಡುವ ಅವಶ್ಯಕತೆ ಬಂದರೆ ಅವರನ್ನು ಸಹ ಭೇಟಿಯಾಗತ್ತೇನೆ ಎಂದು ಹೇಳಿದ್ದರು. ಇದೀಗ ಕುಮಾರಸ್ವಾಮಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸುಮಲತಾ ಅಂಬರೀಶ್ ಅವರನ್ನು ಅಕ್ಕ ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ. ಅಲ್ಲದೇ ಸುಮಲತಾ ಅಂಬರೀಶ್ ನನ್ನ ಅಕ್ಕ ಇದ್ದಂತೆ, ನಮ್ಮಿಬ್ಬರ ನಡುವಿನ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.
ಹೌದು.. ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿ ಆಯ್ಕೆಗಾಗಿ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿತ್ತು. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎಂದು ಹೇಳಿದರು. ಈ ಮೂಲಕ ಕದನ ರಾಜಕೀಯ ವಿರಾಮ ಘೋಷಿಸಿದರು.
ಇದನ್ನೂ ಓದಿ: ಜೆಡಿಎಸ್ ಗೇಮ್ ಚೇಂಜ್, ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!
ಸಂಘರ್ಷ ಮುಂದುವರಿಸಲ್ಲ ಎಂದ ಎಚ್ಡಿಕೆ
ಅಂಬರೀಶ್ ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ನಾನು ಸಿಎಂ ಆಗಿದ್ದಾಗಲೇ ರಾಜ್ ಕುಮಾರ್, ಅಂಬರೀಶ್ ನಿಧನರಾದರು. ರಾಜ್ ಸಮಾಧಿ ಮಾಡಿದ್ದು ನಾನು. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ, ಗೌರವ ಕೊಟ್ಟಿದ್ದೇನೆ. ವಿಷ್ಣುವರ್ಧನ್ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಆತನಿಗೆ ನಮನ ಸಲ್ಲಿಸಬೇಕಾಗಿದ್ದು ನಮ್ಮ ಕರ್ತವ್ಯ. ಅಂಬರೀಶ್ ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿ. ಅಂಬರೀಶ್‌ಗೆ ಗೌರವ ನೀಡುವ ಮೂಲಕ ಮಂಡ್ಯದ ಜನರಿಗೂ ಗೌರವ ನೀಡಿದ್ದೇವೆ. ಸುಮಲತಾ ಅಂಬರೀಶ್ ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿತ್ತು. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಧರ್ಮ ಪಾಲಿಸ್ತಾರಾ ಸುಮಲತಾ?
2019ರ ಚುನಾವಣೆಯಲ್ಲಿ ಹಾವು-ಮುಂಗುಸಿಯಂತಿದ್ದ ಕುಮಾರಸ್ವಾಮಿ, ಸಂಸದೆ ಸುಮಲತಾ ಅಂಬರೀಶ್ ಅವರು ಇದೀಗ ಮುನಿಸು ಮರೆಯಬೇಕಾದ ಅನಿವಾರ್ಯತೆ ಬಂದಿದೆ. ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸುಮಲತಾ ಅವರು ಮಂಡ್ಯ ಬಿಟ್ಟು ಬೇರೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮನಸು ಮಾಡಿಲ್ಲ. ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತರೂ ಸುಮಲತಾ ಅಂಬರೀಶ್ ಅವರಿಗೆ ಗೆಲ್ಲುವ ವಾತಾವರಣ ಇಲ್ಲ. ಸ್ಥಳೀಯ ಬಿಜೆಪಿ ನಾಯಕರೇ ಬಿಜೆಪಿ ಚಿಹ್ನೆ ಅಡಿ ಸ್ಪರ್ಧಿಸಿದ್ರೆ ಮಾತ್ರ ಬೆಂಬಲಿಸುವ ಷರತ್ತು ಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಸುಮಲತಾ ಅಂಬರೀಶ್ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲಿಸುವ ಅನಿವಾರ್ಯತೆಯಲ್ಲಿದ್ದಾರೆ. ಆದ್ರೆ, ರಾಜಕೀಯ ಬದ್ಧ ವೈರಿಯಾಗಿರುವ ಕುಮಾರಸ್ವಾಮಿ ಅವರ ಪುತ್ರ , ಮೈತ್ರಿ ಅಭ್ಯರ್ಥಿ ನಿಖಿಲ್ಗೆ ಬೆಂಬಲಿಸುತ್ತಾರಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪಾಠ ಕಲಿತರೇ ಕುಮಾರಸ್ವಾಮಿ?
ಅಂದು ಅಧಿಕಾರ ಇತ್ತು ಎಂದು ಮಂಡ್ಯದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳಲು ಎದುರಾಗಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರನ್ನು ಹೇಗೆಲ್ಲಾ ನಡೆಸಿಕೊಂಡಿದ್ದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್ನ ನಾಯಕರು ಸುಮಲತಾ ಅವರಿಗೆ ಬಾಯಿಗೆ ಬಂದಂತೆ ಬೈದಾಡಿದ್ದರು. ಅಲ್ಲದೇ ವೈಯಕ್ತಿ ದಾಳಿಗಳನ್ನು ಸಹ ಮಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಸುಮಲತಾ, ಜೆಡಿಎಸ್ ನಾಯಕರ ಬೈಗುಳಗಳನ್ನು ಜನರ ಮುಂದಿಟ್ಟು ಅನುಕಂಪಗಿಟ್ಟಿಸಿಕೊಂಡಿದ್ದರು. ಕೊನೆಗೆ ಜೆಡಿಎಸ್ ನಾಯಕರ ದರ್ಪ ತಮ್ಮ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪ್ರಮುಖ ಕಾರಣವಾಯ್ತು. ಈಗ ಮತ್ತೆ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಿಂದ ಕಣಕ್ಕಿಳಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದು, ಅಂದಿನ ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ಅಲ್ಲದೇ ಸುಮಲತಾ ಅವರ ಬೆಂಬಲ ಅಗತ್ಯವಾಗಿದ್ದರಿಂದ ಕುಮಾರಸ್ವಾಮಿ ಶಾಂತಿ ಮಂತ್ರ ಜಪಿಸಿದ್ದಾರೆ.
ಅಂದು ಇಡೀ ದೇಶವೇ ಮಂಡ್ಯದತ್ತ ತಿರುಗಿತ್ತು
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ರಾಜಕೀಯ ಇಡೀ ದೇಶವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಸುಮಲತಾ ಅಂಬರೀಶ್ ವರ್ಸಸ್ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿ ರೋಚಕ ಕಾದಾಟ ನಡೆದಿತ್ತು. ಅಂತಿಮವಾಗಿ ಸುಮಲತಾ ಸ್ವಾಭಿಮಾನಿ ಶಕ್ತಿ ಪ್ರದರ್ಶಿಸಿ ಗೆದ್ದರು. ನಿಖಿಲ್ ಕುಮಾರಸ್ವಾಮಿ ಅವರು ಸೋತಿದ್ದು ಹೀಗಲೂ ದಳಪತಿಗಳಿಗೆ ಸಹಿಸಲಾಗದ ನೋವಿನ ಸಂಗತಿಯಾಗಿದೆ. ಇನ್ನು 2019ರ ಚುನಾವಣೆ ಸೋಲಿನ ನೋವು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರಿಗೂ ಮರೆಯಲು ಸಾಧ್ಯವೇ ಇಲ್ಲ. ಇಂದು ನಡೆದ ಮಂಡ್ಯ ನಾಯಕರ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾಪವಾಗಿದೆ. ನಿಖಿಲ್ ತಮ್ಮ ನೋವನ್ನ ತೋಡಿಕೊಂಡಿದ್ರೆ ಕುಮಾರಸ್ವಾಮಿ ಅವರು ಸುಮಲತಾ ನಮ್ಮ ಅಕ್ಕ ಇದ್ದಂತೆ ಎಂದು 5 ವರ್ಷದ ಹಿಂದಿನ ಸಂಘರ್ಷಕ್ಕೆ ತಿಲಾಂಜಲಿ ಆಡಿದ್ದಾರೆ.
2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್, ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನದ ಕಹಳೆ ಮೊಳಗಿಸಿದ್ದರು. ಇತ್ತ ಜೆಡಿಎಸ್ನಿಂದ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದರು. ಇಲ್ಲಿಂದ ಸುಮಲತಾ ಮತ್ತು ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿ ಶುರುವಾಗಿತ್ತು. ಲೋಕಸಭೆ ಚುನಾವಣೆ ಮುಗಿದ ನಂತರವೂ ಮಂಡ್ಯ ಕ್ಷೇತ್ರದ ವಿಚಾರವಾಗಿ ಪರಸ್ಪರ ಕೆಸರೆರಚಾಟ ನಡೆಸಿಕೊಂಡು ಬಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ