ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಕೋರ್ಟ್ಗೆ ಹೋಗುತ್ತೇನೆಂದ ಯತ್ನಾಳ್
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿತ್ತು. ಈ ವಿಚಾರವಾಗಿ ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರು ನ.24: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ “ಪ್ರಕರಣವನ್ನು ಹಿಂಪಡೆದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಭ್ರಷ್ಟಾಚಾರ ಪ್ರಕರಣ ಹಿಂಪಡೆಯಲು ಸರ್ಕಾರ ಮರು ಪರಿಶೀಲಿಸಬೇಕು” ಎಂದು ಬರೆದುಕೊಂಡಿದ್ದಾರೆ.
I will challenge the withdrawal of the Dissapropriation of Assets case against DK Shivakumar in the Court.
Government should reconsider withdrawl of Corruption Case. @ANI @PTI_News https://t.co/xflu2XshCs
— Basanagouda R Patil (Yatnal) (@BasanagoudaBJP) November 24, 2023
ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆಶಿ: ಈಶ್ವರಪ್ಪ
ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆ ಶಿವಕುಮಾರ್. ಈ ಹಿಂದೆ ನನ್ನ ವಿರುದ್ಧ ಆರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದೆ. ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಮುಖ್ಯ ಹೊರತು ನ್ಯಾಯವಲ್ಲ. ಉದ್ದುದ್ದ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ಲವೇ? ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ಗ್ಯಾರಂಟಿ ಯೋಜನೆ ಹೆಸರಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ಮಾಡಿದರು.
ಇದು ಗೂಂಡಾಗಳಿಗೆ ರಕ್ಷಣೆ ಕೊಡುವ ಸರ್ಕಾರ. ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಪಡೆದು ನಂತರ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ನನ್ನ ಮೇಲೆ ಆಪಾದನೆ ಬಂತು ನಾನು ರಾಜೀನಾಮೆ ಕೊಟ್ಟೆ. ತಜ್ಞರು ಹೇಳುತ್ತಿದ್ದಾರೆ, ಸಿಬಿಐಗೆ ತನಿಖೆಗೆ ವಹಿಸಲು ಅನುಮತಿ ಇದೆ. ಆದರೆ ಹಿಂಪಡೆಯಲು ಅನುಮತಿ ಬೇಕಿಲ್ಲವೆಂದು. ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ವಾ? ಇದು ದೇಶದಲ್ಲೇ ದೊಡ್ಡ ಅಪರಾಧ. ಸಚಿವ ಸಂಪುಟಕ್ಕೆ ಬೆಲೆ ಇಲ್ಲ ಅಂತ ಇವರು ಸಾಬೀತು ಮಾಡಿದರು. ಸಂವಿಧಾನಕ್ಕೆ ಎಲ್ಲಿ ಬೆಲೆ ಇದೆ ಅಲ್ಲಿ ಸರಿಯಾದ ತೀರ್ಪು ಬರುತ್ತದೆ. ಸಿಬಿಐ ತನಿಖೆ ಹಿಂಪಡೆಯುವುದನ್ನೇ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸರ್ಕಾರದ ಮುಂದಿದೆ ಕಾನೂನು ಸವಾಲು
ನೂರಕ್ಕೆ ನೂರರಷ್ಟು ಡಿಕೆ ಶಿವಕುಮಾರ್ ವಿರುದ್ಧವಾಗಿ ತೀರ್ಪು ಬರಲಿದೆ. ನೂರಕ್ಕೆ ನೂರರಷ್ಟು ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆ ಶಿವಕುಮಾರ್ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡರು ಎಂದು ಗುಡುಗಿದರು.
ಸರ್ಕಾರದ ಈ ತೀರ್ಮಾನ ಕಾನೂನು ಬಾಹಿರ: ಬಿ.ವೈ.ರಾಘವೇಂದ್ರ
ಸರ್ಕಾರದ ಈ ತೀರ್ಮಾನ ಕಾನೂನು ಬಾಹಿರ. ಹೈಕೋರ್ಟ್ನಲ್ಲಿ ಇನ್ನೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಬದ್ಧ ಸಂಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ರಾಜ್ಯಕ್ಕೆ ಇದೊಂದು ಕೆಟ್ಟ ಸಂದೇಶ ರವಾನೆಯಾಗಿದೆ. ಇದನ್ನು ಸಮಾಜ ಮತ್ತು ನ್ಯಾಯಾಂಗ ಗಮನಿಸುತ್ತದೆ. ಪ್ರತಿರೋಧ ಬರುವ ತೀರ್ಪು ಬಂದರೇ ಅಚ್ಚರಿ ಪಡಬೇಕಿಲ್ಲ. ಅವರ (ಕಾಂಗ್ರೆಸ್ನವರು) ತಪ್ಪುನ್ನು ಮುಚ್ಚಿಕೊಳ್ಳುವುದಕ್ಕೆ ಹೋರಟಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Fri, 24 November 23