Stock Market Updates: ಇಂದಿನ ಷೇರು ವಹಿವಾಟಿನಲ್ಲಿ ಗಳಿಕೆ ಯಾರದು, ನಷ್ಟ ಯಾರಿಗೆ? ಇಲ್ಲಿದೆ ವಿವರ
ಕಳೆದ ಕೆಲವು ದಿನಗಳಿಂದ ಉತ್ತಮ ವಹಿವಾಟು ನಡೆಸುತ್ತಿರುವ ಭಾರತೀಯ ಷೇರುಪೇಟೆಗಳು ಗುರುವಾರ ಮತ್ತೆ ಗಳಿಕೆಯ ಓಟ ಮುಂದುವರಿಸಿವೆ.
ಮುಂಬೈ: ಕಳೆದ ಕೆಲವು ದಿನಗಳಿಂದ ಉತ್ತಮ ವಹಿವಾಟು ನಡೆಸುತ್ತಿರುವ ಭಾರತೀಯ ಷೇರುಪೇಟೆಗಳು (Stock Market) ಮಂಗಳವಾರದ ವಹಿವಾಟಿನಲ್ಲಿ ತುಸು ಕುಸಿತ ಕಂಡಿದ್ದವು. ಗುರುವಾರ ಮತ್ತೆ ಗಳಿಕೆಯ ಓಟ ಮುಂದುವರಿಸಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಏರಿಕೆ ನಡುವೆಯೂ ಉತ್ತಮ ವಹಿವಾಟು ನಡೆಸಿದ ಬಿಎಸ್ಇ ಸೆನ್ಸೆಕ್ಸ್ (BSE Sensex) 212.88 ಅಂಶ ಚೇತರಿಕೆ ಕಂಡು 59,756.84 ರಲ್ಲಿ ವಹಿವಾಟು ಕೊನೆಗೊಳಿಸಿತು. ಎನ್ಎಸ್ಇ ನಿಫ್ಟಿ (NSE Nifty) 80.60 ಅಂಶ ಚೇತರಿಸಿ 17,736.95 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.
ಏರ್ಟೆಲ್, ಎಚ್ಡಿಎಫ್ಸಿ ಗಳಿಕೆ ಓಟ:
ಭಾರ್ತಿ ಏರ್ಟೆಲ್, ಎಚ್ಡಿಎಫ್ಸಿ, ಟಾಟಾ ಸ್ಟೀಲ್, ಪವರ್ ಗ್ರಿಡ್, ಸನ್ ಫಾರ್ಮಾ, ಟೈಟಾನ್, ಆ್ಯಕ್ಸಿಸ್ ಬ್ಯಾಂಕ್, ಡಾ. ರೆಡ್ಡೀಸ್ ಹಾಗೂ ಎನ್ಟಿಪಿಸಿ ಉತ್ತಮ ಗಳಿಕೆ ದಾಖಲಿಸಿವೆ. ಜೆಎಸ್ಡಬ್ಲ್ಯೂ ಸ್ಟೀಲ್ ಶೇಕಡಾ 5.47, ಹಿಂಡಾಲ್ಕೊ ಶೇಕಡಾ 3.51, ಟಾಟಾ ಸ್ಟೀಲ್ ಶೇಕಡಾ 2.96, ಅದಾನಿ ಪೋರ್ಟ್ಸ್ ಶೇಕಡಾ 2.61 ಗಳಿಕೆ ದಾಖಲಿಸಿವೆ.
ಇದನ್ನೂ ಓದಿ: ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡಲು ಕಾರ್ಯತಂತ್ರ ಬದಲಿಸಿ: ಎಲ್ಐಸಿಗೆ ಸರ್ಕಾರ
ಮತ್ತೊಂದೆಡೆ ಬಜಾಜ್ ಫಿನ್ಸರ್ವ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ವಿಪ್ರೋ ಹಾಗೂ ನೆಸ್ಲೆ ಷೇರು ಮೌಲ್ಯದಲ್ಲಿ ಕುಸಿತವಾಗಿದೆ. ಬಜಾಜ್ ಫೈನಾನ್ಸ್ ಶೇಕಡಾ 1.86, ಬಜಾಜ್ ಫಿನ್ಸರ್ವ್ ಶೇಕಡಾ 1.66, ಏಷ್ಯನ್ ಪೇಂಟ್ಸ್ ಶೇಕಡಾ 1.34, ಬಜಾಜ್ ಆಟೊ ಶೇಕಡಾ 0.87 ಹಾಗೂ ನೆಸ್ಲೆ ಶೇಕಡಾ 0.74 ಕುಸಿತ ಕಂಡಿವೆ.
ರೂಪಾಯಿ ಚೇತರಿಕೆ:
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ ಮತ್ತೆ ಚೇತರಿಕೆ ಹಾದಿಗೆ ಮರಳಿದೆ. ಮಂಗಳವಾರ ಚೇತರಿಕೆ ದಾಖಲಿಸಿದ್ದ ರೂಪಾಯಿ ಮೌಲ್ಯ, ಗುರುವಾರ ಸಂಜೆಯೂ (3 ಗಂಟೆ ವೇಳೆಗೆ) 31 ಪೈಸೆ ವೃದ್ಧಿಯಾಗುವ ಮೂಲಕ 82.50 ತಲುಪಿತು.
ಕಚ್ಚಾ ತೈಲ ಬೆಲೆ ಹೆಚ್ಚಳ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಗುರುವಾರ ಪ್ರತಿ ಬ್ಯಾರೆಲ್ಗೆ ಶೇಕಡಾ 0.3ರಷ್ಟು ಏರಿಕೆಯಾಗಿ 95.94 ಡಾಲರ್ಗೆ ಹೆಚ್ಚಳವಾಗಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ಶೇಕಡಾ 0.2ರಷ್ಟು ಹೆಚ್ಚಾಗಿ 88.10 ಡಾಲರ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ