ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಹಿಂದಿಯ ಜನಪ್ರಿಯ ಕವಿ ಡಾ. ಗೋವಿಂದ ಪ್ರಸಾದ ಅವರ ಕವಿತೆಗಳು ಮೊದಲ ಸಲ ಕನ್ನಡಕ್ಕೆ ಅನುವಾದಗೊಂಡಿದ್ದು, ಮೇ ಮೊದಲ ವಾರದಂದು ಕಾವ್ಯಪ್ರಿಯರನ್ನು ತಲುಪಲಿವೆ. ಅನುವಾದವೆಂದರೇನು, ಈ ಕವಿತೆಗಳ ಅನುವಾದದ ಔಚಿತ್ಯವೇನು ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ದಾರೆ ಡಾ. ಶೋಭಾ ನಾಯಕ.
ಕೃ : ವರ್ತಮಾನದ ಧೂಳು (ಅನುವಾದಿತ ಕವಿತೆಗಳು)
ಮೂಲ ಕವಿ : ಡಾ. ಗೋವಿಂದ ಪ್ರಸಾದ
ಕನ್ನಡಕ್ಕೆ : ಡಾ. ಶೋಭಾ ನಾಯಕ
ಮುಖಪುಟ ವಿನ್ಯಾಸ : ಮದನ ಸಿ. ಪಿ.
ಪುಟ: 92
ಬೆಲೆ : 100 ರೂ.
ಪ್ರಕಾಶನ : ಸಂಕಥನ, ಮಂಡ್ಯ
*
ಸಮಕಾಲೀನ ಹಿಂದಿ ಸಾಹಿತ್ಯದಲ್ಲಿ ಡಾ. ಗೋಬಿಂದ ಪ್ರಸಾದರಿಗೆ ಮುಖ್ಯವಾದ ಒಂದು ಸ್ಥಾನವಿದೆ. ಅವರು ಕವಿತೆಯನ್ನು ಕಟ್ಟುವ ವಿಧಾನಕ್ಕೆ ಹಿಂದಿ ವಿಮರ್ಶಕರು ಮಾರು ಹೋಗಿದ್ದಾರೆ. ಅವರ ಕವಿತೆಗಳು ಓದುಗರಿಗೆ ಪ್ರೇರಣೆ ನೀಡುವುದರ ಜೊತೆಗೆ ಅವರನ್ನು ಇನ್ನಷ್ಟು ಸಂವೇದನಾಶೀಲರನ್ನಾಗಿಸುವ ಪ್ರಕ್ರಿಯೆಗೆ ಹಿಂದಿ ಓದುಗ ವಲಯ ತನ್ನ ತೃಪ್ತಿಯನ್ನೂ ಪ್ರಕಟಿಸಿದೆ. ಕಾವ್ಯಜನ್ಯ ರಾಜಕೀಯವನ್ನು ಶಕ್ತಿ ರಾಜಕಾರಣದಿಂದ ಬೇರ್ಪಡಿಸಿ ಬರೆಯುವ ಗೋಬಿಂದ ಪ್ರಸಾದರ ಕವಿತೆಗಳ ಸೌಂದರ್ಯವನ್ನು ಈ ಸಂಕಲನದಲ್ಲಿರುವ ಹೆಚ್ಚಿನ ಎಲ್ಲಾ ಕವಿತೆಗಳಲ್ಲಿಯೂ ಕಾಣಬಹುದು.
ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ. ಅನೇಕ ವರ್ಷಗಳಿಂದ ಗೋಬಿಂದ ಪ್ರಸಾದರು ವೈಯಕ್ತಿಕವಾಗಿ ನನಗೆ ಗೊತ್ತು. ಅವರ ತರಗತಿಗಳಲ್ಲಿ ಕುಳಿತು ನಾನು ಪಾಠ ಕೇಳಿದ್ದೇನೆ. ಚಹಾ ಕುಡಿಯುತ್ತಾ ಸಾಕಷ್ಟು ಹರಟಿದ್ದೇನೆ. ಜೆಎನ್ಯೂ ಮತ್ತು ಜಂತರ್ ಮಂತರ್ಗಳಲ್ಲಿ ನಡೆವ ಹೋರಾಟಗಳಲ್ಲಿ ನಾವಿಬ್ಬರೂ ಜೊತೆಯಾಗಿಯೇ ಭಾಗವಹಿಸಿದ್ದೇವೆ. ಆ ಎಲ್ಲಾ ಸಂದರ್ಭಗಳಲ್ಲೂ ಅವರು ಕವಿತೆ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತಾಡಿದ್ದು ನನಗೆ ಗೊತ್ತಿಲ್ಲ.
ಡಾ. ಪುರುಷೋತ್ತಮ ಬಿಳಿಮಲೆ, ಹಿರಿಯ ಲೇಖಕರು
ಅಭಿಪ್ರಾಯ
ನನ್ನ ಜಗಳ
ಮುಖಗಳೊಂದಿಗಲ್ಲ
ಮುಖವಾಡಗಳೊಂದಿಗೆ
ನನ್ನ ಹೋರಾಟ
ಗದ್ದುಗೆಯ ಮೇಲೆ ಕುಳಿತ
ಆ ಜನರೊಂದಿಗೆ
ಯಾರಿಗೆ ಯಾವುದೇ ಮುಖಗಳಿಲ್ಲವೋ!
ಹಾಗೆ ನೋಡಿದರೆ ನಿತ್ಯ ಜೀವನದಲ್ಲಿ ನಡೆಯುತ್ತಿರುವುದು ಅನುವಾದವೇ. ನಮ್ಮ ಸುತ್ತಮುತ್ತಲಿನ ಪ್ರಕೃತಿ ನಿರಂತರವಾಗಿ ಬದಲಾಗುತ್ತಾ ಇರುತ್ತದೆ ಹಾಗೂ ಸದ್ದಿಲ್ಲದೇ ಏನೆಲ್ಲ ಅನುವಾದಿಸುತ್ತಿರುತ್ತದೆ ಆದರೆ ಅದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಕಡುಬೇಸಿಗೆಯನ್ನು ಮಳೆಗಾಲವಾಗಿ, ಮುಂಗಾರು ಮಳೆಯನ್ನು ನಡುಗುವ ಚಳಿಯಾಗಿ, ಹೆಪ್ಪುಗಟ್ಟುವ ಚಳಿಯನ್ನು ಎಲೆಯುದುರುವ ಕಾಲವಾಗಿ ಹೀಗೆ. ಮನುಷ್ಯರೂ ಕೂಡಾ ಅಷ್ಟೇ. ಒಂದಲ್ಲ ಒಂದು ಅರ್ಥದಲ್ಲಿ ಅನುವಾದಕರೇ ಆಗಿದ್ದಾರೆ. ಹೆಂಡತಿಯ ಮಾತನ್ನು ಗಂಡ, ಗಂಡನ ಮೌನವನ್ನು ಹೆಂಡತಿ, ದಾರಿತಪ್ಪಿದ ಮಗನಿಗೆ ಬುದ್ಧಿ ಹೇಳುವ ತಂದೆಯ ಮಾತಿನಲ್ಲಿರುವ ಕಾಳಜಿಯಲ್ಲಿ, ಜೀವನವೀಡಿ ತನ್ನನ್ನೇ ಸವೆದುಕೊಂಡು ವಾತ್ಸಲ್ಯವ ಉಣಿಸುವ ತಾಯಿಯ ಮಮತೆಯಲ್ಲಿ, ಯಾವತ್ತಿಗೂ ಅರ್ಥವಾಗದ ಆದರೂ ಪ್ರಿಯತಮನನ್ನು ಅರ್ಥೈಸಿಕೊಳ್ಳಲು ಹೆಣಗಾಡುವ ಪ್ರೇಯಸಿಯ ಅಸಾಹಯಕತೆಯಲ್ಲಿ, ಹೇಗಾದರೂ ಮಾಡಿ ಬಾಸ್‌ನನ್ನು ಮೆಚ್ಚಿಸಲೇಬೇಕೆಂದು ವಿದೂಷಕನಂತೆ ವರ್ತಿಸುವ ನೌಕರನಲ್ಲಿ ಈ ‘ಅನುವಾದ’ ಪ್ರತಿಭೆಯನ್ನು ಸಹಜವಾಗಿ ಕಾಣಬಹುದು. ನಾವು ಸೇವಿಸುವ ಆಹಾರವೂ ರಕ್ತವಾಗಿ, ರಕ್ತ-ಮಾಂಸವಾಗಿ, ಮಾಂಸ-ಮಜ್ಜೆಯಾಗಿ, ಮಜ್ಜೆ-ವರ‍್ಯವಾಗಿ, ವರ‍್ಯ ಮತ್ತೇನೋ ಆಗಿ, ಮತ್ತೇನೋ ಎಂಬುದು ಕೊನೆಗೆ ಮಣ್ಣಾಗಿ ಅನವರತ ಅನುವಾದಗೊಳ್ಳುತ್ತಲೇ ಇರುತ್ತದೆ.
ಭಾಷೆಯ ವಿಷಯಕ್ಕೆ ಬಂದಾಗ ನಾವಿಲ್ಲಿ ‘ಅನುವಾದ’ದ ವ್ಯಾಪ್ತಿಯನ್ನು ಕುಗ್ಗಿಸಿಕೊಳ್ಳುತ್ತೇವೆ. ‘ತರ್ಜುಮೆ’ ಎಂಬುದು ಕೇವಲ ಒಂದು ನುಡಿಯಿಂದ ಇನ್ನೊಂದು ನುಡಿಗೆ ಆಗುವ ವ್ಯಾಕರಣಬದ್ಧ ಮರು ನಿರೂಪಣೆಯಲ್ಲ. ಬಲ್ಲವರು ಹೇಳುವ ಹಾಗೆ ‘Translation is the creation of original literature in another language’ ಕವಿತೆಯ ವಿಷಯದಲ್ಲಂತೂ ಈ ಮಾತು ಇನ್ನೂ ನಿಜ. ಇಲ್ಲಿ ಅಕ್ಷರಶಃ ಶುಷ್ಕ ಅನುವಾದ ಯಾವ ಕೆಲಸಕ್ಕೂ ಬರುವುದಿಲ್ಲ; ಭಾವನೆಗಳ ಆಳದಲ್ಲಿ ಅದಲಾ-ಬದಲಿ ಆಗದ ಹೊರತು.
ಇಷ್ಟೆಲ್ಲಾ ಹೇಳಲು ಕಾರಣ ಹಿಂದಿ ಭಾಷೆಯ ಹಿರಿಯ ಕವಿಗಳಾದ ಗೋವಿಂದ ಪ್ರಸಾದರ ಆಯ್ದ ಕವನಗಳನ್ನು ನಾನು ಅನುವಾದ ಮಾಡಲು ಪ್ರಯತ್ನಿಸಿರುವುದು. ವೈಯಕ್ತಿಕವಾಗಿ ನನಗೆ ಇದು ಖುಷಿ ಮತ್ತು ಹಿಂಜರಿಕೆ, ಆತಂಕ ಮತ್ತು ಆತ್ಮವಿಶ್ವಾಸವನ್ನುಂಟು ಮಾಡುತ್ತಿರುವ ಸಂದರ್ಭವಾಗಿದೆ. ಗೋವಿಂದ ಪ್ರಸಾದ ಸಮಕಾಲೀನ ಹಿಂದಿ ಕಾವ್ಯಲೋಕದಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರು. ಇವರು ಜವಾಹಾರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ‘ಕೋಯಿ ಏಸಾ ಶಬ್ದ ದೋ’ ಮತ್ತು ‘ವರ್ತಮಾನ ಕೀ ಧೂಲ್’ ಎಂಬ ಎರಡು ಕವನ ಸಂಕಲನಗಳಿಂದ ಆಯ್ದ 80 ಕವಿತೆಗಳನ್ನು ಆಯ್ದುಕೊಂಡಿದ್ದೇನೆ. ಹಾಗೆ ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನನ್ನ ಮನಸ್ಸಿನಲ್ಲಿದ್ದುದು ಕನ್ನಡ ಸಾಹಿತ್ಯ ವಲಯದ ರುಚಿ-ಅಭಿರುಚಿಗೆ ಹೊಸತೇನಾದರೂ ಸೇರಿಸಬೇಕೆಂಬ ಹಂಬಲ. 70ರ ದಶಕದಿಂದ ಹಿಡಿದು ಈವರೆಗಿನ ಇಲ್ಲಿಯ ಕವಿತೆಗಳಲ್ಲಿ ಎಲ್ಲಾ ಬಗೆಯ ಸಮಾಜೋ-ರಾಜಕೀಯ, ಸಾಂಸ್ಕೃತಿಕ ವರ್ಣ ವೈವಿಧ್ಯವನ್ನು ಗುರುತಿಸಬಹುದು. ಕನ್ನಡ ಸಾಹಿತ್ಯ ಸಂದರ್ಭವನ್ನಿಟ್ಟುಕೊಂಡು ಹೋಲಿಕೆ ಮಾಡಬಹುದಾದರೆ ನವೋದಯದ ನೈಸರ್ಗಿಕ ಭಾವ ಪರವಶತೆ ಹಾಗೂ ನವ್ಯದ ಅತಿಯಾದ ಸಾಂಕೇತಿಕ ಸಂಕೀರ್ಣತೆ, ಅಪರೂಪಕ್ಕೊಮ್ಮೆ ಸಾಮಾಜಿಕ ಅಸಮಾನತೆಯ ವಿರುದ್ಧ ಬಂಡಾಯದ ರಮ್ಯ ಧ್ವನಿಯೂ ನಮಗಿಲ್ಲಿ ನೋಡಲು ಸಿಗುತ್ತದೆ. ಹಿಂದಿ ಭಾಷೆಯ ಪ್ರಸಿದ್ಧ ವಿಮರ್ಶಕರು ಆದ ಡಾ. ಗೋವಿಂದ ಪ್ರಸಾದ ಅತ್ಯಂತ ಕಡಿಮೆ ಪದಗಳಲ್ಲಿ ಆಟವಾಡುವ ತಾತ್ವಿಕ ಮನೋಧರ್ಮದ ಕವಿ. ಹಾಗೆ ಇವರ ಕವಿತೆಯಲ್ಲಿ ಮೇಲಿಂದ ಮೇಲೆ ಎದುರಾಗುವುದು, ಕಾವ್ಯದ ವಸ್ತುವಿನಿಂದ ಆರೋಗ್ಯಕರ ಅಂತರವನ್ನು ಕಾಯ್ದುಕೊಂಡು ಒಂದು ಬಗೆಯಲ್ಲಿ ಹೆಣ್ಣು ಅಲ್ಲದ ಗಂಡು ಅಲ್ಲದ ಬೌದ್ಧಿಕ ಸಂಕಟದಿಂದ ನರಳುವ ಗಾಢ ವಿಷಾದ. ಸೂರ್ಯ ಮುಳುಗುತ್ತಿರುವ ಸಂಜೆಯ ಆಗಸ, ಶಿಶಿರ ಕಾಲದ ಎಲೆ ಉದುರುಸುತ್ತಿರುವ ಮರ, ಎತ್ತರೆತ್ತರದ ಪರ್ವತಗಳನ್ನು ಹಾದು ಬರುತ್ತಿರುವ ಸುಳಿಗಾಳಿ, ಆಗ ತಾನೆ ರೆಪ್ಪೆ ಬಿಚ್ಚಿಕೊಳ್ಳುತ್ತಿರುವ ನಕ್ಷತ್ರ ಕಣಿವೆ, ಮತ್ತಿದೆಲ್ಲವನ್ನೂ ಸುಮ್ಮನೆ ಗಮನಿಸುತ್ತಾ ಕಿಟಕಿಯಲ್ಲಿ ಕುತಿರುವ ಉದಾಸ ವ್ಯಕ್ತಿಯ ಚಿತ್ರ. ಇವರ ಕಾವ್ಯದಲ್ಲಿ ಮತ್ತೆ ಮತ್ತೆ ಸ್ಥಾಯಿ ಚಿತ್ರಗಳಾಗಿವೆ. ಹಿಂದಿ ಭಾಷೆಯನ್ನು ಒಳಗೊಂಡಂತೆ ದೇವನಾಗರಿ ಲಿಪಿಯನ್ನು ಬಳಸುವ ಉತ್ತರ ಭಾರತದ ಬಹುತೇಕ ಮೆಲು ದನಿಯ ಇಂಡೋ-ಆರ್ಯನ್ ಭಾಷೆಗಳು ಮತ್ತು ಗಾಢ ವರ್ಣ ಹಾಗೂ ಗಡಸು ಧ್ವನಿಯಲ್ಲಿ ನಂಬಿಕೆಯಿಟ್ಟು ವಿಷಯವನ್ನು ಮಂಡಿಸುವ ದ್ರಾವಿಡ ಭಾಷೆಗಳ ‘ನುಡಿ ಸಂವೇದನೆ’ಯಲ್ಲಿರುವ ಮೂಲಭೂತ ಚಾರಿತ್ರಿಕ ಭಿನ್ನತೆಯೂ ಇದಾಗಿರಬಹುದು. ಏಕೆಂದರೆ ಆಧುನಿಕ ಭಾಷಾ ವಿಜ್ಞಾನದಲ್ಲಿ ‘ನುಡಿ ಸಂಕರ’ವೆಂಬುದು ಜನಾಂಗೀಯ ಕಥನವೂ ಹೌದು; ಸಾಂಸ್ಕೃತಿಕ ಇತಿಹಾಸವೂ ಹೌದು.
ಇನ್ನೂ ಪ್ರಸ್ತುತ ಕವಿತೆಗಳ ಅನುವಾದದ ಕುರಿತು ಹೇಳುವುದಾದರೆ, ಭಾಷಾಂತರ ಮಾಡುವಾಗ ಕೆಲವು ಸಂಸ್ಕೃತಭೂಯಿಷ್ಠ ಹಿಂದಿ ಶಬ್ದಗಳಿಗೆ ಪರ್ಯಾಯವಾಗಿ ಕನ್ನಡ ಶಬ್ದಗಳು ಸಿಗುವುದು ಕಷ್ಟಕರವಾಯಿತು. ಕೆಲವು ಕವನಗಳನ್ನು ಭಾವಾನುವಾದ ಮಾಡಲಾಗಿದೆ ಹೊರತು ಶಬ್ದಶಃ ಭಾಷಾಂತರವಲ್ಲ. ಏಕೆಂದರೆ ಮೂಲ ಕವನದ ಆಶಯ, ನಡಿಗೆ ಕೆಡಬಹುದು ಎನ್ನುವ ಸದುದ್ದೇಶದಿಂದ, ಕನ್ನಡ ಜಾಯಾಮಾನಕ್ಕೆ ಸಹಜವಾಗಿ ಹೊಂದುವಂತೆ ನುಡಿಗಟ್ಟನ್ನು ಬದಲಾಯಿಸಿಕೊಳ್ಳಲಾಗಿದೆ. ಇವೆಲ್ಲಾ ಬರೀ ಸಮಜಾಯಿಶಿಗಳು; ಅದರಾಚೆಗೆ ಏನೂ ಅಲ್ಲ ಅಷ್ಟೇ. ಇನ್ನೂ ಹೇಳಬೇಕಾದ್ದುದು ಇಷ್ಟೇ; ಇದರಿಂದ ನಾನು ಹಿಗ್ಗಿದ್ದೇನೆ. ಕನ್ನಡ ಒಳಗೊಳ್ಳುವ ನನ್ನ ಸಾಮರ್ಥ್ಯವು ಸ್ವಲ್ಪ ಮಟ್ಟಿಗೆ ಹಿಗ್ಗಿದೆ. ನನ್ನ ಭಾವಕೋಶವನ್ನು ವಿಸ್ತರಿಸಿರುವ ಈ ಅನುವಾದಕ್ಕೆ ಋಣಿಯಾಗಿರುವೆ.
ರುಚಿ
ಸುಗಂಧಭರಿತ ಚಹದ ಅಲೆಯಂತೆ
ನನ್ನ ನಿನ್ನ ನಡುವೆಯೂ
ಬರಬಹುದು
ಯಾವತ್ತಾದರೂ ಅಂತಹದೊಂದು ದಿನ
ಒಂದೇ ಕೆಟಲಿಯಿಂದ
ಸುರಿದರೂ
ಎರಡು ಭಿನ್ನ ಭಿನ್ನ
ರುಚಿಗಳಲ್ಲಿ ಬದಲಾಗುವ
ಆ ಚಹಾದ ಅಮಲಿನಂತೆ
ವಿದಾಯ ಹೇಳುವ ಕ್ಷಣದಲ್ಲಿ
ಹೇಗೆ ಎಲ್ಲವೂ ನೆರಳಿಗೆ ಸೇರಿಬಿಡುತ್ತವೆಯೋ
ವಸ್ತುವಿನ ರೂಪ ನಿರೂಪಗಳು
ಹಾಗೆಯೆ ರುಚಿಯೂ ಬದಲಾಯಿಸಿಕೊಳ್ಳುತ್ತದೆ
ತನ್ನದೇ ವಸ್ತುಗಳ ಜಾಯಾಮಾನ
*
(ನಿಮ್ಮ ಪ್ರತಿಗಳನ್ನು ಕಾಯ್ದಿರಿಸಲು ಸಂಪರ್ಕಿಸಿ : 9886133949)
ಇದನ್ನೂ ಓದಿ : New Book ; ಅಚ್ಚಿಗೂ ಮೊದಲು : ಬರಲಿದೆ ಕಾಳುಮೆಣಸಿನರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತೆ
Published On - 7:39 pm, Sun, 25 April 21