Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು

|

Updated on: May 16, 2021 | 10:10 AM

’ಇಂತಹ ಕಾಲದಲ್ಲೂ ಕವಿತೆಯ ಮೊರೆಹೊಗುವುದು ಪಲಾಯನವಾಗುವುದಿಲ್ಲವೇ? ಎಂಬ ಪ್ರಶ್ನೆ ಅನೇಕ ಬಾರಿ ನನ್ನನ್ನು ಕಾಡಿದೆ. ಆದರೆ ಪ್ರತಿಬಾರಿಯೂ ಅತ್ಯಂತ ಸಂಕಟದ ಗಳಿಗೆಯಲ್ಲಿ ‘ಇನ್ನು ಸಾಧ್ಯವಿಲ್ಲʼ ಅನಿಸಿದಾಗ ಕವಿತೆ ನನ್ನನ್ನು ನಡೆಸಿದೆ. ಅದು ನಾನು ಕವಿತೆಗಳನ್ನು ಬರೆಯುವ ಮೂಲಕವೇ ಎಂದು ಹೇಳಲಾರೆ; ಜಗತ್ತಿನ ವಿವಿಧ ಭಾಷೆಗಳ ಜೀವಸಂವೇದಿ ಕವಿತೆಗಳು ನನ್ನ ಒಡನಾಡಿಯಾಗಿ ತಬ್ಬಲಿತನ ಕಾಡುವ ಹೊತ್ತಿಗೆ ನೇವರಿಸುತ್ತಾ ಕೈಹಿಡಿದಿವೆ.’ ಡಾ. ಪಿ. ಭಾರತೀದೇವಿ

Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
ಕವಿ ಪಿ. ಭಾರತಿದೇವಿ
Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಡಾ. ಪಿ. ಭಾರತೀದೇವಿ ಅವರ ಕವಿತೆಗಳು ನಿಮ್ಮ ಓದಿಗೆ. 

ಡಾ. ಭಾರತೀದೇವಿಯವರ ಈ ನಾಲ್ಕು ಕವಿತೆಗಳನ್ನು ಓದಿದಾಗ ಮೊದಲಿಗೆ ಢಾಳಾಗಿ ಹೊಳೆದದ್ದು, ಇಲ್ಲಿ ಮನುಷ್ಯ ಸಂಬಂಧಗಳ ನಡುವಿನ ಸ್ನೇಹ ಸೇತುವೊಂದು ಕಡಿದು ಬಿದ್ದಿದೆ ಎನ್ನುವ ವಿಷಾದ. ಅದು ಸೃಷ್ಟಿಸಿರುವ ಹಿಂಸೆ ಕ್ರೌರ್ಯ, ಪರಕೀಯ ಭಾವ, ಒಂಟಿತನ, ಸಂಬಂಧಗಳ ಅಂತರಾಳಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂಬ ಹತಾಶೆ. ಇಂತಹ ಗಾಢ ವಿಷಾದದ ಎಡೆಯಲ್ಲಿಯೂ, ಹೀಗೆ ಕಡಿದು ಬಿದ್ದಿರುವ ಸೇತುವನ್ನು ಮನುಷ್ಯ ಪ್ರೇಮದಿಂದ ಮತ್ತೆ ಬಂಧಿಸಬೇಕು, ಹೊಸದಾಗಿ ಕಟ್ಟಬೇಕು ಎನ್ನುವ ಆಕಾಂಕ್ಷೆ ಇದೆ. ಅದನ್ನು ಆಗುಮಾಡುವ ಬಗೆಯ ಬಗ್ಗೆ ಅಲ್ಲಲ್ಲಿ ಕ್ವಚಿತ್ತಾಗಿ ಮಿಂಚುವ ಜಿಜ್ಞಾಸೆಯ ಸಾಲುಗಳಿವೆ. ಎಂಬುದು ಮುಖ್ಯವಾದುದು. ಇಂತಹ ಇತ್ಯಾತ್ಮಕ ಧೋರಣೆಯೇ ಕವಿತೆಗೆ ಸಫಲತೆಯನ್ನು ನೀಡುತ್ತದೆ.

ಈ ಕವಿತೆಗಳಲ್ಲಿ ಒಂದು ಛಿದ್ರ ಸ್ಥಿತಿ ನಿರ್ಮಾಣವಾಗಿದೆ. ನಮ್ಮನಮ್ಮ ಅಂತರಾಳವನ್ನು ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ಯಾಕೆ ವಿಫಲರಾಗಿದ್ದೇವೆ ಎಂಬ ಚಿಂತನೆ ಹುಟ್ಟಿಸಿದ ಛಿದ್ರ ಸ್ಥಿತಿಯಿದು. ಯಾಕೆಂದರೆ ನಾವು ನಮ್ಮ ‘ಭೂತ’ ದಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. (ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ ಕಂತಿ ಕೈಬಡಿವ ಬೀಜಾಣುಜಾಲ) ಈ ಭೂತ ಎನ್ನುವುದು ವರ್ತಮಾನವನ್ನು ನಿಯಂತ್ರಿಸುತ್ತದೆ ಮತ್ತು ಭವಿಷ್ಯವನ್ನು ನಿರ್ದೇಶಿಸುತ್ತದೆ. ಅದನ್ನು ನಾವು ವಸ್ತುನಿಷ್ಠವಾಗಿ ಅನುಸಂಧಾನ ಮಾಡಿಕೊಳ್ಳದಿದ್ದರೆ ಅದೊಂದು ಹಿಂಸೆಯ ಆಗರವಾಗುತ್ತದೆ ಕ್ರೌರ್ಯದ ಕೂಪವಾಗುತ್ತದೆ. ಆಗ ‘ಕಟ್ಟಳೆಗಳ ಕಾಯಿಲೆ’ಯ ಭೂತ ನಮ್ಮನ್ನು ಆಹುತಿ ತೆಗೆದುಕೊಳ್ಳುವುದರಲ್ಲಿ ಯಾವ ಸಂಶಯವೇ ಇಲ್ಲ. ಹಾಗೆ ಅನುಸಂಧಾನ ಮಾಡಿಕೊಳ್ಳಬೇಕಾಗಿರುವ ನೆಲೆಯಲ್ಲಿ ಉಂಟಾಗುವ ಭಯ, ತಲ್ಲಣ, ಕ್ರೌರ್ಯ ಹಿಂಸೆ, ಅಪಮಾನ ಸೋಲು, ಭರವಸೆಗಾಗಿ ತಡಕಾಟ, ಪ್ರೀತಿಯ ಹಪಾಹಪಿ ಎಲ್ಲವೂ ಈ ಕವಿತೆಗಳಲ್ಲಿವೆ. ಸಂಬಂಧಗಳ ಒಳಗೆ ಪರಸ್ಪರ ನುಸುಳಿರುವ ವಿದ್ರೋಹದ ಸ್ವರೂಪವನ್ನು ಇವು ಪರಿಣಾಮಕಾರಿಯಾಗಿ ಬಯಲಿಗೆಳೆಯುತ್ತವೆ. ಇವುಗಳ ಮೂಲಕ ಈ ಕವಿತೆಗಳು ಪ್ರೀತಿಯ ಕರೆಯನ್ನು ನೀಡುತ್ತಿವೆ.

ಈ ಛಿದ್ರತೆಯೆಂಬುದು ‘ನಮ್ಮನ್ನು ನಾವೇ ಇರಿದುಕೊಳ್ಳುವ’ ರೀತಿಯಿದು. ಸಮತೋಲ ತಪ್ಪಿದ ಸಂಬಂಧದ ರೂಪವನ್ನು ಕನಸುಗಳ ಶವಯಾತ್ರೆ, ಖಿನ್ನನಾದ ಚಂದ್ರ, ದಿಕ್ಕಾಪಾಲಾದ ನಕ್ಷತ್ರಗಳು, ಗರ ಬಡಿದ ಹಸಿರೆಲೆಗಳು ಮುಂತಾದ ರೂಪಕಗಳ ಮೂಲಕ ಕವಿ ಇಲ್ಲಿ ಬಹಳ ಮಾರ್ಮಿಕವಾಗಿ ಕಟ್ಟಿ ಕೊಟ್ಟಿದ್ದಾರೆ.

ಭೂತದ ಅನುಭವಗಳು ಒಂದು ಸಾಮಾನ್ಯವಾದ ಬೈನರಿ ಅಭಿಪ್ರಾಯಗಳನ್ನು ಸ್ಥಾಪಿಸಿಬಿಡುತ್ತವೆ. ಒಳ್ಳೆಯದು, ಕೆಟ್ಟದ್ದು, ಪಾಪ ಪುಣ್ಯ, ನಮ್ಮವರು, ಅನ್ಯರು, ಸ್ವರ್ಗ ನರಕ ಹೀಗೆ. ಇವು ಕಾಲದಿಂದ ಕಾಲಕ್ಕೆ ವ್ಯಕ್ತಿಗತ ಅನುಭವದ ಮೂಸೆಯಲ್ಲಿ ಪಾಕಗೊಳ್ಳುವುದಿಲ್ಲ, ಪರಿಷ್ಕೃತಗೊಳ್ಳುವುದೇ ಇಲ್ಲ. ಅಜ್ಜ ನೆಟ್ಟ ಆಲದ ಮರಕ್ಕೆ ನೇತುಹಾಕಿಕೊಳ್ಳುವುದೇ ಇವುಗಳ ಅಂತಿಮ ನೆಲೆಯಾಗಿಬಿಡುತ್ತದೆ. ಇಂತಹ ದುರಂತದ ಅರಿವು ಈ ಕವಿತೆಗಳಲ್ಲಿವೆ. ಈ ಅರಿವು ಸುಲಭವಾಗಿ ಸಿದ್ಧಿಸುವುದಿಲ್ಲ. ಬೇಲಿಯಾಚೆಗಿನ ಸತ್ಯವನ್ನು ಕಾಣುವುದೆಂದರೆ

ತುಂಡಾದ ಕೈಗಳು, ಛಿದ್ರ ಮೆದುಳು
ಹೆಪ್ಪುಗಟ್ಟಿದ ರಕ್ತದ ಹಸಿವಾಸನೆ
ತುಂಡಾದ ಅಸ್ತ್ರಗಳ ಮೇಲೆ
ಇಂತಹ ನರಕವನ್ನು ಹಾದು ಬರಬೇಕಾಗಿದೆ.

ಇವು ನಮ್ಮನ್ನೇ ನಾವು ಇರಿದುಕೊಂಡ ಗುರುತುಗಳು. ಇದು ಚರಿತ್ರೆ ಕಲಿಸಿದ ಪಾಠ. ಸಂಬಂಧಗಳ ಛಿದ್ರತೆಯನ್ನು ಬೆಸೆಯುವುದಕ್ಕೆಂದು ಅವಳು ದ್ವೇಷದ/ಭೂತದ ಪರಂಪರೆಯನ್ನು ಹರಿದುಕೊಂಡು ಬಂದಿದ್ದಾಳೆ. ದ್ವೇಷದ ಎದುರು ಪ್ರೀತಿಯನ್ನು ಮನದಟ್ಟು ಮಾಡಿಸುತ್ತಿದ್ದಾಳೆ. ‘ಅವಳ ಕಣ್ಣೀರ ಬಿಸಿಗೆ ಇವನ ಕೈಯಲ್ಲಿ ಬೊಬ್ಬೆ ಎದ್ದಿವೆ’, ಎನ್ನುವ ಮಾತುಗಳು ಇಂತಹ ಸಾಮುದಾಯಿಕ ವಿದ್ರೋಹಕ್ಕೆ ಇಬ್ಬರೂ ಬಲಿಯಾಗಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ. ನಮ್ಮ ಮೇಲೆ ಸವಾರಿ ಮಾಡುವ ಭೂತಕ್ಕೆ ನಮ್ಮ ವರ್ತಮಾನವನ್ನು ಘಾಸಿಗೊಳಿಸುವ ‘ಹಲ್ಲುಗಳಿವೆ’. ಇದೊಂದು ಉರಿಯುವ ‘ಪಂಜು’. ಎನ್ನುವುದೇನೋ ನಿಜ ಇದರಿಂದ ಬಿಡಿಸಿಕೊಳ್ಳುವುದೆಂದರೆ ಇದೇ ಹಲ್ಲುಗಳನ್ನು ನಮ್ಮ ಬದುಕಿನ ಕ್ರಿಯಾತ್ಮಕ ಚಟುವಟಿಕೆಗಳಿಗೆ ರೂಪಾಂತರಿಸಿಕೊಳ್ಳುವುದು. ಉರಿಯುವ ಪಂಜು ಸಬಂಧಗಳನ್ನು ಸುಟ್ಟು ಭಸ್ಮವಾಗಿಸುವ ಹಾಗೆ ಮಂಜು ಮುಸುಕಿದ ದಾರಿಗೆ ದೀಪವೂ ಆಗಬಲ್ಲದು. ಭೂತ ಎನ್ನುವುದು ಇತ್ಯಾತ್ಮಕ ಧೋರಣೆಯನ್ನು ಬೆಳೆಸುವ ಗುರುವೂ ಆಗಬಲ್ಲದು. ಅದರಿಂದ ಪಾಠ ಕಲಿಯಬೇಕಾದುದೂ ಬಹಳ ಇದೆ. ಇಂತಹ ಇತ್ಯಾತ್ಮಕ ಧೋರಣೆಯ ಸುಳಿವನ್ನು “ಬೆಳಕು ಬಯಸುವ ನಮಗೆ/ಬೇಯುತ್ತಾ ಚಿಗುರುವ ಎಡೆಗಳೇ ತೋರುತ್ತಿಲ್ಲ” ಎನ್ನುವ ಸಾಲುಗಳಲ್ಲಿ ಕಾಣಬಹುದಾಗಿದೆ. ಇವು ಭೂತವನ್ನು ವರ್ತಮಾನದ ಜೊತೆಗೆ ವಸ್ತುನಿಷ್ಠವಾಗಿ ಅನುಸಂಧಾನ ಮಾಡಿಕೊಳ್ಳುವ ಸಂಧಿಕಾಲದಲ್ಲಿ ನಿಂತ ಸ್ಥಿತಿಯನ್ನೂ ಬಯಲಾಗಿಸುತ್ತವೆ. ಇದು ಮುಂದುವರೆದು

“ಈಗ ನನ್ನ ಗಾಯಕ್ಕೆ ನೀನು
ನಿನ್ನ ಗಾಯಕ್ಕೆ ನಾನು
ಹಸಿರುಮದ್ದು ಕಟ್ಟುತ್ತಾ
ಕಟ್ಟಳೆಗಳ ಕಾಯಿಲೆಯಿಂದ ಬಿಡಿಸಿಕೊಳ್ಳುತ್ತಿದ್ದೇವೆ”

ಎನ್ನುವ ಸಾಲುಗಳು, ಮೇಲೆ ಹೇಳಿದ ಹಿಂಸೆ ಕ್ರೌರ್ಯ ರಕ್ತಪಾತಗಳಿಗೆ ಒಂದು ಪರಿಹಾರವೂ ಹೌದು. ಸಂಬಂಧಗಳ ವಿಚ್ಛಿದ್ರತೆಯನ್ನು ಪ್ರೀತಿಯ ಮೂಲಕ ಸರಿಪಡಿಸಬಹುದೆಂಬ, ಕೇವಲ ಕತ್ತು ಹಿಸುಕುವ ತೋರ ಕೈಗಳು ಮಾತ್ರವಲ್ಲ, ನೇವರಿಸುವ ಕೈಗಳೂ ಇವೆ ಎಂಬ ಆಶಾವಾದದಿಂದ ಮುಕ್ತಾಯವಾಗುತ್ತದೆ. ಇಂತಹ ಸಂದರ್ಭಕ್ಕೊಂದು “ರಹದಾರಿಯನ್ನು ನೀಡು” ಎಂದು ಅಂಗಲಾಚುತ್ತಿದ್ದಾಳೆ. ಇಂತಹ ಅರಿವಿನ ಆಸ್ಫೋಟವನ್ನೇ ಸಾಕ್ಷಾತ್ಕಾರದ ಗಳಿಗೆಗಳು ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಹೀಗೆ ಅರಿವಿನ ಆಸ್ಫೋಟಕ್ಕೆ ಕಾರಣವಾಗುವ ಕವಿತೆಗಳು ಹೆಚ್ಚು ಹೆಚ್ಚು ಬರಲಿ ಎಂದು ನಾನು ಭಾರತೀದೇವಿಯವರನ್ನು ಹಾರೈಸುತ್ತೇನೆ. ಮತ್ತು ಪರಿಣಾಮಕಾರೀ ಕವಿತೆಗಳನ್ನು ನೀಡಿದ ಅವರನ್ನು ಅಭಿನಂದಿಸುತ್ತೇನೆ.
ಡಾ. ಗಿರಿಜಾ ಶಾಸ್ತ್ರಿ, ಹಿರಿಯ ಲೇಖಕರು, ವಿಮರ್ಶಕರು

*

ಕೇವಲ ಅನಿಸಿಕೆಗಳಾಗಿ ಉಳಿದುಬಿಡಬಹುದಾಗಿದ್ದ ಅನುಭವಗಳನ್ನು, ಮನಸ್ಸಿನ ಭಾವನೆಗಳನ್ನು ಕವಿತೆಯಾಗಿಸುವ ಹಾದಿಯಲ್ಲಿ ಸಹಜವಾಗಿ ಒದಗಿಬರುವ ಪ್ರತಿಮೆಗಳು ರೂಪಕಗಳು ಸಾವಯವ ರೀತಿಯಲ್ಲಿ ಕವಿತೆಯಲ್ಲಿ ಹಾಸು ಹೊಕ್ಕಾಗ ಅಲ್ಲೊಂದು ಲೀಲೆಗೆ ಜಾಗವಿದೆ, ಏಕಾಂತ ಲೋಕಾಂತವಾದಾಗ ಓದುಗ ಕೂಡ ಕವಿತೆಯ ಭಾಗವಾಗುತ್ತಾನೆ ಮತ್ತು ಅಲ್ಲಿ ಹಲವಾರು ಕವಿತೆಗಳ ಸೃಷ್ಟಿಯಾಗುತ್ತದೆ. ಅಂಥದೊಂದು ಸಾಧ್ಯತೆ ಇಲ್ಲಿನ ನಾಲ್ಕು ಕವಿತೆಗಳಲ್ಲಿ ನಿಚ್ಚಳವಾಗಿ ಸಾಧ್ಯವಾಗಿದೆ. ಚಿಂತನೆ ಕವಿತೆಗೆ ಅಡ್ಡಗಾಲು ಅಂತಾರೆ ಅದು ಬಹುತೇಕ ನಿಜ ಆದರೆ ಚೆಲ್ಲಾಪಿಲ್ಲಿಯಾಗಿ ಹರಿಯುವ ಗುಣವುಳ್ಳ ಭಾವನೆಗಳನ್ನು ಒಂದು ದಿಕ್ಕಿನಲ್ಲಿ ಚ್ಯಾನಲೈಸ್ ಮಾಡದೇ ಹೋದಾಗ ಆಗಬಹುದಾದ ಅಪಾಯಗಳಿಂದ ಪಾರಾಗಿರುವ ಇಲ್ಲಿನ ಕವಿತೆಗಳು ಒಂದು ಒಳ್ಳೆಯ ಓದನ್ನು ಮತ್ತು ಹೃದ್ಯ ಅನುಭವವನ್ನು ಸಾಧ್ಯವಾಗಿಸಿವೆ.
ಚಿದಂಬರ ನರೇಂದ್ರ, ಹಿರಿಯ ಕವಿ, ಅನುವಾದಕರು

ಕಲೆ : ಮದನ ಸಿ.ಪಿ.

ಉರುಳು

ಈ ರಾತ್ರಿ ನೆಮ್ಮದಿಗೆ ಉಬ್ಬಸ
ಮುಂಜಾವದ ಕನಸುಗಳ ಶವಯಾತ್ರೆಗೆ
ಹೂವೆರಚಲು
ನಮ್ಮವರೇ ಬೊಗಸೆ ಹಿರಿದಿದ್ದಾರೆ
ಕುಣಿಯಲು ಗೆಜ್ಜೆ ತೊಟ್ಟಿದ್ದಾರೆ

ಈ ನಿಟ್ಟುಸಿರಿನ ರಾತ್ರಿ
ಹಸಿರೆಲೆಗಳಿಗೆ ಗರ ಬಡಿದಿದೆ
ಚಂದಿರ ಖಿನ್ನನಾಗಿದ್ದಾನೆ,
ನಕ್ಷತ್ರಗಳು ದಿಕ್ಕಾಪಾಲಾಗಿವೆ
ನಿಶಾನೆಗಳು ಚಿಂದಿಯಾಗಿವೆ…

ಆಡದೇ ಉಳಿದ ಮಾತುಗಳ
ಆಡಲಾಗದ ಮಾತುಗಳ
ಕತ್ತು ಹಿಡಿದು ಅದುಮಿ
ಸಮಾಧಿ ಮಾಡುವ ಈ ದಿನ
ನೆಲ ಒದ್ದೆಯಾಗಿದೆ
ಹುಲ್ಲೂ ನೆಲಕ್ಕೊರಗಿದೆ…

ನಿನ್ನ ಲೋಕಕ್ಕೊಂದು ರಹದಾರಿ ನೀಡು

ಎಡವಿ ಓಡಿ ಬಂದ ನನ್ನ ತಡವಿ
ಬಿರುಬಿಸಿಲ ಉರಿಯಲ್ಲೇ
ಬೇಲಿ ಬಾಗಿಲಲ್ಲೇ ತಡೆವೆ ಏಕೆ?
ಎಂದು ಗೋಗರೆಯುವ ನನ್ನ
ಕಣ್ಣೀರ ಬಿಸಿಗೆ ನಿನ್ನ ಕೈಯೆಲ್ಲ
ಹೇಗೆ ಬೊಬ್ಬೆಯೆದ್ದಿವೆ ನೋಡು…
ನಗೆಗೊಂದು ತಡೆ ಒಡ್ಡಿ
ಮಾತಿಗೊಂದು ಕಟ್ಟು ಕಟ್ಟಿ
ಬುಸುಗುಡುತ್ತಿರುವ ನಿನ್ನ ನಿಟ್ಟುಸಿರು
ಹೇಗೆ ಮೊಗ ಬಾಡಿಸಿದೆ ನೋಡು

ಇಣುಕಿ, ಹಣಿಕಿ ನೋಡುವ
ನನ್ನ ನೋಟಕ್ಕೆ
ಬೇಲಿಯಾಚೆಗಿನ ಸತ್ಯ ಕಾಣುವ
ಸತುವಿಲ್ಲ ಎಂದು ಅಂಜಿ, ಅಳುಕಿ
ತಡೆಯುವ ನಿನ್ನ
ನೋಟಕ್ಕೆ ನನ್ನ ದನಿ ಉಡುಗಿ,
ಕಾಲು ನಡುಗಿ, ಕಣ್ಣಬೆಳಕು ಚದುರಿಹೋಗಿದೆ

ಗೋಡೆಯಾಚೆ ಕಣ್ಣು ಹಾಯಿಸಿದರೆ
ತುಂಡಾದ ಕೈಗಳು, ಛಿದ್ರ ಮೆದುಳು
ಹೆಪ್ಪುಗಟ್ಟಿದ ರಕ್ತದ ಹಸಿವಾಸನೆ
ತುಂಡಾದ ಅಸ್ತ್ರಗಳ ಮೇಲೆ
ಕೊರೆದ ಮೊಹರುಗಳು
ಕೇಕೆ ಹಾಕಿ ವಿಕಾರವಾಗಿ ನಗುತ್ತಿವೆ
ನನ್ನೊಳಗೂ ಉರಿದ ಕನಸು
ಕಂದಿದ ಬೆಳಕು, ಕಟ್ಟಿದ ಕಾಲು
ಬಿಗಿದ ಸಂಕಲೆಗಳೊಳಗೂ
ಅವೇ ಗುರುತುಗಳು

ಚಾಚಿದ ಕೈಯ ಕಡಿದು
ಉರಿವ ದೀಪ ಕೆಡಿಸಿ
ಕೈತಟ್ಟುವ ಅಟ್ಟಹಾಸ,
ಎತ್ತಿಟ್ಟ ಕಾಲಡಿಯ ಕಲ್ಲ ಸೆಳೆದು
ಕಾಲ್ಕೊಟ್ಟು ಬೀಳಿಸುವ
ಆ ವಿಕೃತಿ
ನಮ್ಮಣ್ಣ, ನಮ್ಮಪ್ಪ, ನಮ್ಮಜ್ಜನದೇ ಆಗಿರುವಾಗ
ನಾ ಕೈ ಚಾಚಿದ್ದು ಕಡಿಯುವುದಕ್ಕಲ್ಲ,
ಬೆಸೆಯುವುದಕ್ಕೆ ಎಂದು
ನಾ ನಿನ್ನ ನಂಬಿಸುವುದಾದರೂ ಹೇಗೆ?
ನೀನಾದರೂ ಯಾಕೆ ನಂಬಬೇಕು?

ಇಂತಹ ಕಾಲದಲ್ಲೂ ಕವಿತೆಯ ಮೊರೆಹೊಗುವುದು ಪಲಾಯನವಾಗುವುದಿಲ್ಲವೇ? ಎಂಬ ಪ್ರಶ್ನೆ ಅನೇಕ ಬಾರಿ ನನ್ನನ್ನು ಕಾಡಿದೆ. ಆದರೆ ಪ್ರತಿಬಾರಿಯೂ ಅತ್ಯಂತ ಸಂಕಟದ ಗಳಿಗೆಯಲ್ಲಿ ‘ಇನ್ನು ಸಾಧ್ಯವಿಲ್ಲʼ ಅನಿಸಿದಾಗ ಕವಿತೆ ನನ್ನನ್ನು ನಡೆಸಿದೆ. ಅದು ನಾನು ಕವಿತೆಗಳನ್ನು ಬರೆಯುವ ಮೂಲಕವೇ ಎಂದು ಹೇಳಲಾರೆ; ಜಗತ್ತಿನ ವಿವಿಧ ಭಾಷೆಗಳ ಜೀವಸಂವೇದಿ ಕವಿತೆಗಳು ನನ್ನ ಒಡನಾಡಿಯಾಗಿ ತಬ್ಬಲಿತನ ಕಾಡುವ ಹೊತ್ತಿಗೆ ನೇವರಿಸುತ್ತಾ ಕೈಹಿಡಿದಿವೆ.

ಇತ್ತೀಚೆಗೆ ನ್ಯೂಜಿಲೆಂಡ್‌ನ ಕವಿ ಲಾಂಗ್‌ ಲೀವ್‌ ಹಾಗೂ ನಮ್ಮವರೇ ಆದ ಯೋಗೇಶ್‌ ಮೈತ್ರೇಯ ಹಾಗೂ ಜಸಿಂತ ಕೆರ್ಕೆಟ್ಟ ಅವರ ಕವಿತೆಗಳು ನನ್ನ ಜೊತೆಗೇ ಇವೆ. ಅವು ನನ್ನನ್ನೇ ನಾನು ನೋಡಿಕೊಳ್ಳುವಲ್ಲಿ, ಸುತ್ತಲಿನ ಎಲ್ಲದರೊಂದಿಗೆ ನಾನು ಬೆಸೆದುಕೊಂಡಿರುವ ಬಗೆಯನ್ನು ಮರುಶೋಧಿಸುವಲ್ಲಿ ನೆರವಾಗುತ್ತಾ ಸಂವಾದಿಸುತ್ತಿವೆ. ಇಲ್ಲಿ ಕವಿತೆಗಳು ಅವುಗಳು ನನ್ನೊಳಗೆ ಇಳಿದು ಎಬ್ಬಿಸಿದ ತರಂಗಗಳು ಎಂದಷ್ಟೇ ಹೇಳುತ್ತೇನೆ.

*
ನಮಗೆ ನಮ್ಮನ್ನೇ ಇರಿದುಕೊಳ್ಳುವ
ಇರಾದೆಯಿರಲಿಲ್ಲ
ಆದರೆ, ಲೋಕ ಹೇಳಿಕೊಟ್ಟ
ಪ್ರೀತಿಯ ವರಸೆಗಳು
ಇನ್ನೂ ಹಸಿಯಾಗಿದ್ದ ನಮ್ಮ ಗಾಯದ
ಹಕ್ಕಳೆ ಕಿತ್ತವು
ಒಸರುವ ರಕ್ತ, ಕೀವು
ಗತವನ್ನು ರಾಚಿದವು
ಅಲ್ಲೆಲ್ಲ ಇರಿದವರ,
ಸೆಳೆದವರ, ಕಿತ್ತವರ
ಗುರುತುಗಳು
ನಮ್ಮ ಕಣ್ಣು, ಬಾಯಿ, ಮೈಯನ್ನು
ಘಾಸಿಗೊಳಿಸಿ
ನೋಟ, ಮಾತುಗಳೊಳಗೆ
ಹಲ್ಲು, ಪಂಜುಗಳು ಮೂಡಿ
ಅಪರಿಚಿತವಾಗಿದ್ದ ನಮ್ಮೊಳಗು
ಅಸ್ಪಷ್ಟವಾಗಿ ಮೂಡುತ್ತಿರುವಾಗ
ಕತ್ತಲಲ್ಲಿ ಸಾವರಿಸಿಕೊಂಡು ತೆವಳುತ್ತಾ
ಮತ್ತೆ ಪರಸ್ಪರರನ್ನು ತಬ್ಬಿಕೊಂಡೆವು

ಈಗ ನನ್ನ ಗಾಯಕ್ಕೆ ನೀನು
ನಿನ್ನ ಗಾಯಕ್ಕೆ ನಾನು
ಹಸಿರುಮದ್ದು ಕಟ್ಟುತ್ತಾ
ಕಟ್ಟಳೆಗಳ ಕಾಯಿಲೆಯಿಂದ ಬಿಡಿಸಿಕೊಳ್ಳುತ್ತಿದ್ದೇವೆ.

*

ಗತ
ಸದ್ಯದೊಂದು ಬಿಂದುವಿನಲ್ಲಿ
ಬೆರೆತೆರಡು ಹನಿಗಳು
ಸುಡು ಬೇಗೆಯಲ್ಲಿ ಕುದಿಯುತ್ತಿರುವಾಗ
ಉಸ್ಸೆಂದು ಸುಸ್ತಾಗಿ ನೆಲಕ್ಕೊರಗಿ
ಕಣ್ಣು ಹಾಯಿಸುತ್ತೇನೆ…
ಪುಟ್ಟ ಲಂಗದೊಳಗಿನ ಪುಟ್ಟ ಪಾದಗಳು
ದಾಪುಗಾಲಿಡುವ ಹೊತ್ತು
ಅರಳಿದ ಎದೆ ಹೂಗಳ ಹಿಚುಕಿದ
ತೋರ ಕೈಗಳು
ಎಲ್ಲೆಡೆಯೂ ಅಲುಗುತ್ತಿರುವ
ನೂರು ಚಿತ್ರಗಳ ಮುರುಕು ಕನ್ನಡಿ
ಸದಾ ಅವಳೊಳಗೆ ಇರಿಯುತ್ತಿರುತ್ತದೆ

ಉತ್ತ ಕೈಯ ತುತ್ತ ತೋಳ ಕಸಿದು
ಬರೆಯುವ ಬೆರಳಿಗೆ ಬರೆ ಬಿದ್ದು
ನೀರುಪ್ಪಿಗೆ ಕಣ್ಣುರಿದು ಕೆಂಪಾಗಿ
ಗೀರು ಗಾಯದ ಉರಿ
ಅವನೊಳಗೆ ಚುರುಗುಡುತ್ತಿರುತ್ತದೆ

ಗೀರು ಕಾಣದಂತೆ ಅವನು
ಒಡಕು ಕಾಣದಂತೆ ಅವಳು
ಬಾಳಾಟ ನಡೆಸುತ್ತಿರುವ
ಅವಳು ನಾನಾಗಿರುವ ಅವನು ನೀನಾಗಿರುವ
ಈ ಸುಡುಹೊತ್ತಿನಲ್ಲಿ
ಒಳಗು ಕಾಣದ ಕುರುಡುಗಣ್ಣಿನ ನಾನು
ನಿನ್ನ ಕಣ್ಣಲ್ಲಿ ನನ್ನ ಕನಸರಸಿ
ಕಂಗಾಲಾಗಿರುವಾಗ
ಗೆಳೆಯಾ, ಮರುಳಿ ನಾನು
ನಿನ್ನ ಕಣ್ಣ ಕೆಂಪನ್ನು ಒಳಗಿಳಿಸಿಕೊಳ್ಳಲಿಲ್ಲ

ನನ್ನೊಳಗೆ ನಿನ್ನ ಬಿಂಬ ಕಾಣುವ
ಮರುಳು ಗೆಳೆಯನೇ,
ಒಡಕು ಕನ್ನಡಿಯಲ್ಲಿ
ನೀನು ನೂರಾಗಿದ್ದೀ
ಹಿಚುಕುವ ನೂರು ತೋರ ಕೈಗಳ ನಡುವೆ
ನೇವರಿಸುವ ಚಿಗುರು ಕೈಯ
ನನಗೆ ಕಾಣಲಾಗಲಿಲ್ಲ

ತೆರೆದರ್ಧ ಗೋಡೆಗಳ ಕೋಣೆಗಳೊಳಗೆ
ಬೆಳಕು ಬಯಸುವ ನಮಗೆ
ಬೇಯುತ್ತಾ
ಚಿಗುರುವ ಎಡೆಗಳೇ ತೋರುತ್ತಿಲ್ಲ

ಭಾರತೀದೇವಿ ಅವರ ಪುಸ್ತಕಗಳು

ಪರಿಚಯ : ಮೂಡುಬಿದರೆಯವರಾದ ಡಾ.ಪಿ. ಭಾರತೀದೇವಿ, ಪ್ರಸ್ತುತ ಹೊಳೆನರಸೀಪುರ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ನಿಲ್ಲಿಸಬೇಡ ಕಾಯುವುದನ್ನು, ಪಿಯರ್ ಬೊರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಕೃತಿಗಳು ಪ್ರಕಟವಾಗಿವೆ.  “ಭಾಷೆ ಮತ್ತು ಸಂಸ್ಕೃತಿಯ ಅಂತಃಸಂಬಂಧಗಳು-ಕೋಟ ಉಪಭಾಷೆಯನ್ನು ಅನುಲಕ್ಷಿಸಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿರುತ್ತಾರೆ. ಹಲವು ಲೇಖನಗಳು, ಅನುವಾದಿತ ಬರಹಗಳು ಪ್ರಕಟವಾಗಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

Published On - 9:41 am, Sun, 16 May 21