Poetry ; ಅವಿತಕವಿತೆ : ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?

| Updated By: ಆಯೇಷಾ ಬಾನು

Updated on: Apr 11, 2021 | 7:42 AM

'ನನ್ನ ತಲ್ಲಣಗಳ ಅಭಿವ್ಯಕ್ತಿಗೆ ಊರುಗೋಲಾಗಿ ನನಗೆ ಸಿಕ್ಕಿದ್ದು ಪದ್ಯ. ಒಂದು ರೀತಿಯಲ್ಲಿ ಇದು ವಾಸ್ತವದ ಮತ್ತು ನನ್ನ ಭಾವ ಪ್ರಪಂಚದ ದೊಡ್ಡ ಕೊಂಡಿ. ಸಂತೆಯೊಳಗಿನ ಗದ್ದಲದ ನಡುವಿನ ಏಕಾಂತ ನನ್ನ ಕವಿತೆಗಳದ್ದು ಅಂತ ಅಂದುಕೊಂಡಿದ್ದೇನೆ. ಕವಿತೆಗಳು ನನಗೆ ಕಟ್ಟಿಕೊಟ್ಟಿರುವುದು ಕೂಡ ಇದನ್ನೇ. ನನ್ನದೋ ಅಥವಾ ಇನ್ಯಾರದ್ದೋ ಬದುಕಿನ ಖಾಸಗಿ ಬಿಕ್ಕು, ನಲಿವು, ತಣ್ಣಗಿನ ಕ್ರೌರ್ಯ, ಸಮಾಜದ, ಸಂಬಂಧಗಳ ನಿಂಬಂಧನೆಗೆ ಒಳಪಟ್ಟ ಉಸಿರು ಇಲ್ಲಿ ನನಗೆ ಅಕ್ಷರಗಳಾಗಿ ಜೊತೆಯಾಗುತ್ತವೆ' ಸ್ಮಿತಾ ಮಾಕಳ್ಳಿ

Poetry ; ಅವಿತಕವಿತೆ : ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?
ಕವಿ ಸ್ಮಿತಾ ಮಾಕಳ್ಳಿ
Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಸ್ಮಿತಾ ಮಾಕಳ್ಳಿ ಅವರು ಬರೆದ ಕವಿತೆಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಸ್ಮಿತಾ ಮಾಕಳ್ಳಿಯವರ ಕವನಗಳಲ್ಲಿ ನಿರ್ಜನ ಬಯಲಿನಲ್ಲಿ ಹರಿವ ಜಲದ ಸಲಿಲವಾದ ನಡಿಗೆಯ ಹೆಜ್ಜೆ ಗುರುತುಗಳಿವೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯದ ಕಟ್ಟುಪಾಡುಗಳಲ್ಲಿ ಬಂಧಿಸಿಕೊಳ್ಳದ ಸ್ವತಂತ್ರ ಮನೋಭಾವವೊಂದು ಮೇಲಿಂದ ಮೇಲೆ ಅಲೆದಾಡುತ್ತದೆ. ಈ ಮನೋಭಾವ ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಮೇಲಿಂದ ಮೇಲೆ ತೆರೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ ಸ್ಮಿತಾ ಕವಿತೆಗಳನ್ನು ಕುರಿತು ಹೀಗೆ ಎಂದು ಗುರುತಿಸಿ ಮಾತನಾಡುವುದಕ್ಕೆ ಸಾಧ್ಯವಾಗದಷ್ಟು ಕವಿತೆಗಳು ಬಿಡಿಬಿಡಿ ಚಿಟ್ಟೆಗಳಾಗಿ ಹಾರಿ ಸಂಚರಿಸುತ್ತವೆ. ತನ್ನ ಆಪ್ತವಾದ ಭಾವಲೋಕವನ್ನು ನಿಧಾನವಾಗಿ ಆದರೆ ಸ್ಧಿರವಾಗಿ ಖಾತರಿಪಡಿಸಿಕೊಳ್ಳುತ್ತಾ ಅದನ್ನು ಬಿಡಿಬಿಡಿ ಚಿತ್ರಗಳ ಮೂಲಕ ಹಿಡಿದಿಡುವ ಜೀವನಪ್ರೀತಿಯ ಹುಡುಗಿಯೊಬ್ಬಳು ಇಲ್ಲಿ ಕವಿತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಾಳೆ. ಚಿತ್ರಗಳು ಪದಗಳ ಜೋಡಿಸುವಿಕೆಯಿಂದಾಗಿ ಮೈದುಂಬಿಕೊಂಡು ಇಲ್ಲಿ ಕವಿತೆಗಳಾಗಿವೆ.
ಡಾ. ಎಚ್​.ಎಲ್​. ಪುಷ್ಪಾ, ಕವಿ, ಲೇಖಕಿ

ಬದುಕಿನ ದೊಡ್ಡ ಕ್ಯಾನ್ವಾಸಿನಲ್ಲಿ ಆಗುತ್ತಿರುವ ಪಲ್ಲಟಗಳನ್ನು ಸ್ಮಿತಾ ತನ್ನ ಪುಟ್ಟ ಬೊಗಸೆಗಳಲ್ಲಿ ಹಿಡಿದುನೊಡುವ ಕ್ರಮ ಆಕರ್ಷಣೀಯವಾಗಿದೆ. ಅನುಭವಗಳ ತಾಜಾತನ, ಕುಶಲತೆ ಗಮನ ಸೆಳೆಯುತ್ತವೆ. ಆಧುನಿಕತೆ ತಂದೊಡ್ಡಿದ ವೇಗದ ಬದಲಾವಣೆಗಳು ಒಂದು ತಣ್ಣಗಿನ ಜೀವನಕ್ರಮವನ್ನು ಅನುದಿನವೂ ಅಲ್ಲೋಲ ಕಲ್ಲೋಲಗೊಳಿಸುತ್ತ ನಡೆಯುತ್ತವೆ. ಬದಲಾವಣೆಗಳನ್ನು ಒಪ್ಪಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ಹಾಗೂ ಹಳೆಯ ಬದುಕಿನ ಮಾಧುರ್ಯದ ಮೆಲುಕು ಎರಡೂ ಒಟ್ಟೊಟಿಗೆ ಸ್ಮಿತಾಳ ಅಭಿವ್ಯಕ್ತಿಯಲ್ಲಿ ಕಾಣುತ್ತವೆ. ಹೊಸಕಾಲದ ತಲ್ಲಣಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸುವ ಅವಳ ಬರಹಗಳು ತಮ್ಮ ಆಪ್ತವಾದ ಅಭಿವ್ಯಕ್ತಿಯಿಂದ ಆಸಕ್ತಿ ಹುಟ್ಟಿಸುತ್ತವೆ. ಕೋಲ್ಮಿಂಚಿನಂತಹ ಕೆಲವು ಸಾಲುಗಳು ಆಕೆಯ ಕುರಿತು ಭರವಸೆಯನ್ನು ಮೂಡಿಸುತ್ತವೆ.
ಡಾ. ಗೀತಾ ವಸಂತ, ಕವಿ, ಲೇಖಕಿ

*

ಧ್ಯಾನ

ಈಗೀಗ
ನಾನು ನೀನು ನೋಡುವಾಗ ಕಣ್ಣಂಚುಗಳು
ಮಾತಿಗಿಳಿಯಬೇಕೆಂದೇನಿಲ್ಲಾ
ನನ್ನ ನಿನ್ನ ತುಡಿತಗಳು
ಕಾಣಲೇಬೇಕೆಂದೇನಿಲ್ಲಾ
ನಮ್ಮ ನಾವು ಕಾಣುವ ಭರದಲಿ
ಕಂಪಿಸಲೇ ಬೇಕೆಂದೆನಿಲ್ಲಾ
ಇವೆಲ್ಲವನೂ ಕೇಳಿದ ಇನ್ಯಾರಿಗಾದರೂ
ಉತ್ಕಟ ಪ್ರೀತಿಯ ಪರಿ ಇದಲ್ಲವೆನ್ನಲೂಬಹುದು,
ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?

ನಮ್ಮ ದೂರುಗಳು, ನಮ್ಮ ನಮ್ಮ ವಿಳಾಸಗಳ ತಲುಪುವ
ತಡ ಸಂಜೆಗಳ ಆಯುಷ್ಯ ಕೆಲವೇ ಕೆಲವು ಕ್ಷಣಗಳದ್ದು
ಆದರೂ
ಅವು ಕೊಸರಿಕೊಂಡು ಹೊಮ್ಮುವ ಮತ್ತು ಆಳಕ್ಕೆ
ಒಮ್ಮೆಲೇ ಜಿಗಿದು
ಮೇಲೆದ್ದು ಬರುವ ದಾಹಕ್ಕೆ
ಒಂದೊಂದೇ ಗುಟುಕು ನೀರು
ಇಳಿದಂತೆಲ್ಲಾ ಜೀವ ತಂಪೆನಿಸಿ
ನಿತ್ರಾಣಗೊಂಡ ಮನ ಸಂಪಿಗೆಯೆಸಳಾಗಲು
ಸಮಯ ತಿರುಗುವುದು ಬೇಕಿಲ್ಲಾ
ಒಳಗಿನ ಲೋಕ ಕದಲದಿದ್ದರಾಯಿತು
ಆಗ ಅಲ್ಲಿ ಎಲ್ಲವೂ ಕ್ಷೇಮ.

ಧೂಪ ಮೇಲೇರಿ ಕಳೆಗಟ್ಟಿದಂತೆಲ್ಲಾ
ಸುಳಿವ ಸುಗಂಧವ ಮತ್ತು ತೇಲಿಸಿದಂತೆಲ್ಲಾ
ಆಕಾಶ ತಿಳಿಯಾಗಿ ಮತ್ತೆ ಅವನ
ಶರ್ಟಿನ ಅರ್ಧ ಮಡಿಚಿದ ತೋಳುಗಳ ಮೇಲೆ
ಒಲವಾಗದಿದ್ದಲ್ಲಿ ಇನ್ನೊಮ್ಮೆ ಕಾದಾಡುವ ಮನಸ್ಸಾಗದಿದ್ದಲ್ಲಿ
ಮುನಿಸಿನ ಬಳಿಕವು ಬರಸೆಳೆದು ಚುಂಬಿಸಿಕೊಳ್ಳದಿದ್ದಲ್ಲಿ
ಅದು ನಾವಲ್ಲವೇ ಅಲ್ಲ
ಇದೆಲ್ಲದರ ನಡುವೆ
ನೀವು ಉತ್ಕಟ ಪ್ರೀತಿಯ ಬಗ್ಗೆ ಕೇಳುವಿರೆಂದಾದರೆ
ನಮ್ಮ ಕೈ ಹಿಡಿತಗಳ, ಬೆಸೆದ ತೋಳುಗಳ
ಚುಂಬಿಸಿಕೊಂಡ ತುಟಿಯ, ಇಬ್ಬರು ಕುಡಿದ
ಒಂದೇ ಗ್ಲಾಸಿನ ಧ್ಯಾನವಷ್ಟೇ ನನ್ನೊಳಗೆ.

*

ರಾತ್ರಿಗಳ ಮಾರಾಟಕ್ಕೆ ಇಡಿ

ರಾತ್ರಿಗಳೆಂದರೆ ಅಸಾಧ್ಯ
ವೇದನೆಗಳು ಮರುಕಳಿಸಿ
ಆ ಆಯಕಟ್ಟಿನ
ರಸ್ತೆಗೆ ಬಂದು
ಗಿಜುಗುಡುವ ಮೌನದ ಕಟ್ಟೆಯೇನೋ.
ಉದುರಿದ ತಲೆಗೂದಲುಗಳ
ಕೂಡುವುದೊ ಇಲ್ಲಾ ಕಳೆಯುವುದೋ
ಎನ್ನುವ ಪ್ರಶ್ನೆ ಇದ್ದದ್ದೆ
ಏಕೆಂದರೆ ನೋವಿನೆಳೆಗಳ
ಲೆಕ್ಕ ನನ್ನೊಳು ಇಟ್ಟಷ್ಟು
ಅದು ತಪ್ಪುವುದು ಸಹಜ
ಎಷ್ಟೇ ಆಗಲಿ ಲೆಕ್ಕದ
ಒಳವ ನೋಡದವಳು ನಾನು

ಅಂತೆಯೇ ಚಂದ್ರನ
ಲೆಕ್ಕದೂಗಿಸಲು ಈ
ರಾತ್ರಿಗಳ ಗಾಯಕ್ಕೆ
ಅಲ್ಪವಾದರೂ ಮುಲಾಮು ಬೇಕು
ಹುಡುಕಿಕೊಡಲಾರಿರಿ ನೀವು.
ಸುಕ್ಕುಗಟ್ಟುತ್ತಿರುವ ಕಣ್ಣುಗಳಿಗೆ
ಸುಡಲಾರದ ಸೂರ್ಯನ
ಮೋಹ ಹೆಚ್ಚಿದಷ್ಟು
ರಾತ್ರಿಗಳು ಸುಡುವವು
ಅದಕ್ಕೆ ಏನೋ
ಎಲ್ಲವನ್ನೂ ಮರೆಸುವ ಹಗಲಿನ
ಮುದಿ ದಾರಿಯ ಹಾಡಿನಂತೆ
ರಾತ್ರಿಗಳ ಮಾರಾಟಕ್ಕೆ ಇಡಿ
ಕೊಳ್ಳುವವರಿಲ್ಲದೆಯೂ
ಅದರ ಸರಳುಗಳ ಬಿಗಿಯ
ತಿಳಿಯಾಗಿಸಲು.

ಕೈಬರಹದೊಂದಿಗೆ ಸ್ಮಿತಾ ಮಾಕಳ್ಳಿ

ಮಾಸುತ್ತಿವೆ ಗೆರೆಗಳು

ಮಾಸುತ್ತಿವೆ ಗೆರೆಗಳು
ಚೌಕಾಬಾರದ ಆಚೆಗೂ
ಬೇಳೆ ಮಸೆಯಲು
ಓಡಬೇಕಿಲ್ಲ ಈಗ
ಏಕೆಂದರೆ
ಆಡಲು ಕೈಗಳಿಲ್ಲ.
ಮಾತುಗಳಿಗೆ ಕಿವಿಯಾಗಲೆಂಬಂತೆ
ನಿಶ್ಯಬ್ಧವಾಗಿ ಕುಳಿತಿವೆ
ಮನೆಯ ಮುಂದಿನ ಜಗಲಿಗಳು.
ಈ ಜಗಲಿಗಳ ಗೋಜಿಲ್ಲದೆ
ಅಜ್ಜ ಈಗ
ಗಾಳಿಯ ಕಛೇರಿಗೆ
ತಲೆದೂಗುವ ತೆನೆಗಳಿಗೆ
ತನ್ನ ಕಥೆಯನ್ನ
ಹೇಳುತ್ತಿರಬಹುದೇನೋ.
ಕುಳಿತಿದ್ದೇನೆ ನಾನು
ಮರದ ಬುಡದಲ್ಲಿ
ಸದಾ ಗಡಿಬಿಡಿಯಲ್ಲಿರುವ
ಇರುವೆ ಸಾಲನ್ನೇ
ದಿಟ್ಟಿಸುತ್ತಾ.

*

ಬುಟ್ಟಿ

ಆಕಾಶ ಬುಟ್ಟಿಯಂತೆ
ಹಾರಲಾಗದ
ಇದ್ದಲ್ಲೇ
ನೆನಪುಗಳ ಕಾಪಿಟ್ಟಿದ್ದ
ಬಿದಿರ ಬುಟ್ಟಿಗೆ
ಈಗ ಮುಪ್ಪು!

ಒಲಿದ ಬಿದಿರ
ಒಂದೊಂದು ಹೆಣಿಗೆಯು
ಕೂಡಿದಂತೆಲ್ಲಾ
ಕುಸುರಿಯೊಳಗೆ
ಕಣ್ಣರಳಿಸಿ ಮಾತಾಗುವ
ಬಲು ನಾಜೂಕಿನ
ವೈಯ್ಯಾರದ ಬಿಸುಪು
ಒಮ್ಮೆ ಇವಳದಾಗಿತ್ತು!

ಆಗೆಲ್ಲಾ
ಮನೆಯ ರಹಸ್ಯ ಕೋಣೆಯಂತೆಯೇ
ಇವಳ ಇರುವು
ಮೂಲೆಯ ಅಜ್ಜಿಯ
ಕತೆಗಳಿಗೆ ಕಿವಿಯಾದವಳು
ಮಕ್ಕಳ ಲೋಕಕೆ
ಏಣಿಯಾದವಳು
ನಸು ನಗುತಲೇ
ಜರತಾರಿ ಲಂಗಗಳ
ಗರಿಗರಿ ಅಂಚಿಗೆ
ಮೈಯ್ಯಾದವಳು.

ಇವಳದೋ
ಥರಾವರಿ ಘಮಲುಗಳ
ಜೊತೆಗಿನ ಪ್ರಾಯಬದ್ಧ
ನಡಿಗೆ.

ಕಾಲದ ನೆರಳಲ್ಲಿ
ನಡೆಯುತ್ತಾ ಹೋದಂತೆಲ್ಲಾ
ಮೈದುಂಬಿಕೊಂಡಿದ್ದ ಬಿದಿರು
ಸಿಬಿರ ಕಳಚುತ್ತಾ
ಕಟ್ಟುಗಳು ಸಡಿಲಗೊಳ್ಳುತ್ತವೆ
ಗುಟ್ಟುಗಳು
ನಡು ಬೀದಿಯ
ಸೇರುತ್ತವೆ.

ಬಗೆಬಗೆಯ
ಉಡುಪುಗಳು
ಗವ್ವನೆಯ ಮೈಯ್ಯೊಳಗೆ
ಮಿನುಗುತ್ತವೆ.

ಮಿನುಗಿದಂತೆಲ್ಲಾ
ಹಾಡುಗಳ
ತೇಲಿ ಬಿಡುವ
ಇವಳ ಕಣ್ಣುಗಳಿಗೆ
ಮಾತ್ರ
ಹಸಿ ಮಣ್ಣಿನ ಪ್ರಾಯ!

ಮೆಲ್ಲನೆ
ಅವಳೊಡಲು
ಮುಚ್ಚಿಕೊಂಡು ಸಲಹಿದ
ಬಟ್ಟೆಯ ಒಂದೊಂದು ಮಡಿಕೆಯು
ಬಣ್ಣ ರಹಿತವಾಗಿ
ಊರ ನೋಡುತ್ತವೆ.

ಎಳೆ ಕಳಚಿದಂತೆ
ನವೆದ ಬಟ್ಟೆಗಳಂತೆ
ನವೆಯುತ್ತಾಳೆ.

ದಾರಿ ಸವೆಸಿದಂತೆಲ್ಲಾ
ಗಾಳಿ ತಂಪೆನಿಸಿ
ಬದುಕ ಒರಗಿದಂತೆಲ್ಲಾ
ವಿಸ್ತಾರವೆನಿಸಿ
ನೆನಪ ಆಲವಾಗುತ್ತಾಳೆ.

ಆದರೂ
ಕಾಡ ನಡುವೆ
ಬೇರಿನಾಳಗಳಲ್ಲಿ
ಹೊಸ ಹುಟ್ಟುಗಳ
ಪೊರೆ ಕಳಚುತ್ತಾ
ಇವಳ ಎದುರುಗೊಳ್ಳಲು
ಕಾಯುತ್ತಿರುವ
ಅದೆಷ್ಟೋ
ಚಿಗುರುಗಳೊಳಗೆ
ಕುಸುರಿ ಕೈಗಳೊಳಗೆ
ಇವಳೇ
ತಿರು ತಿರುಗಿ
ಬುಟ್ಟಿ!

*

ಮೋಹವಾಗಬಾರದೆಂದರೆ ಹೇಗೆ?

ಜಾರಿ ಹಾರಿ ಗರಿಬಿಚ್ಚಿ ಮೈದಡವಿ
ಪುಟಪುಟನೇ ಕುಣಿಯುತ್ತಾ ನಡೆದು
ಓಲಾಡಿ ಜಾಜಿಯ ಮೇಲೆ ಕುಳಿತ
ಗುಬ್ಬಿಯ ಕೊಕ್ಕಿನ ಚಂಚಲ
ಬೆಲವನ ಹಕ್ಕಿಯ ಬೆನ್ನಿನ ಮುತ್ತಿನ ಮಾಲೆಯ
ಶೆಟ್ಟಿಯ ಕೊಂಡಿ
ಎಕ್ಕದ ಮೊಗ್ಗಿನ ಬಿರಿತದ ಸದ್ದು
ತುಂಟ ಪಾರಿವಾಳ
ಬಾಗಿರುವ ಮೆಣಸಿನ ಗಿಡದ
ಹೊಸ ಬೀಜದ ಮೊಳಕೆ
ಗೋಡಂಬಿಹಣ್ಣಿನ ರಸದ ಕಾಯಿ
ನಿಂತ ಒಂಟಿ ಮೈನಾ
ಪದರದ ಆಕಾಶ
ಒಲೆಯ ನಿಗಿನಿಗಿ ಕೆಂಡದ ನಡುವಿನ ಬಿಲ್ವದ
ಘಮದ ಅಂಟಿನ ಲೋಳೆಗೆ
ಹಳದಿ ಕೆಂಪು ಕಪ್ಪು ಮೈಗಳು ಆವರಿಸಿ
ಬಚ್ಚಲ ತುಂಬಾ ಉನ್ಮಾದ
ಆಚೆ ಇದನ್ನೆಲ್ಲಾ ನೋಡುತ್ತಿರುವ ನನಗೆ
ಮೋಹವಾಗಬಾರದೆಂದರೆ ಹೇಗೆ?

ಸ್ಮಿತಾ ಮಾಕಳ್ಳಿ ಅವರ ಪ್ರಕಟಿತ ಪುಸ್ತಕ

ತುಂಬೆ ಗಿಡ ಮತ್ತು ಹುಡುಗಿ

ಕಾಡಿನ ಮೌನವನ್ನೇ
ತಣ್ಣಗೆ ಹೊದ್ದು
ಮಣ್ಣಗುಡ್ಡೆಯೊಳಗೆ ಮಲಗಿರುವ
ಹುಡುಗಿಗೆ
ಬದುಕಿನ ಉತ್ತರ ಬೇಕಿಲ್ಲ

ಮಣ್ಣಗುಡ್ಡೆಯ ಮೇಲಿರುವ
ದಿನವೂ
ಲೋಕಕ್ಕೆ ಹುಡುಗಿಯ
ನೆನಪನ್ನು
ಅರಳಿಸಿ
ಮತ್ತೆ ಮತ್ತೆ ಕಳಚಿ ಬೀಳುವ
ತುಂಬೆ ಹೂವಿಗೂ
ಬದುಕಿನ ಉತ್ತರ ಬೇಕಿಲ್ಲ

ಕಾಲಸರಿದಂತೆ ಮಣ್ಣ ಗುಡ್ಡೆ
ಇಳಿಯುತ್ತದೆ
ಇಳಿದಂತೆ ಲೋಕದ ನೆನಪು
ಮತ್ತೆ ಮತ್ತೆ ಚಿಗುರುತ್ತದೆ
ತುಂಬೇಗಿಡ
ತನ್ನಷ್ಟಕ್ಕೆ ತಾನು
ಇದಕ್ಕೂ
ಬದುಕಿನ ಉತ್ತರ ಬೇಕಿಲ್ಲ

ಹಿಂದೊಮ್ಮೆ
ಹುಡುಗಿಯೊಡನೆ
ಆಡುತ್ತಾ ಕುಣಿಯುತ್ತಾ
ಜತೆಗಿದ್ದ ಬಾಲ್ಯಕ್ಕೂ
ಇಂದು
ಬದುಕಿನ ಉತ್ತರ ಬೇಕಿಲ್ಲ

ಇಲ್ಲ
ಉತ್ತರಗಳ ಹಂಗು
ಈ ಹುಡುಗಿಗೆ
ಈ ತುಂಬೇಗಿಡಕ್ಕೆ

ಆದರೆ
ಬರಿಗಾಲಲ್ಲಿ
ಪುಟ್ಟಪುಟ್ಟ ಕಂಗಳಲ್ಲಿ
ತಮ್ಮನ್ನು ತಾವೇ
ನೋಡಿಕೊಳ್ಳುವ ಆಸೆ ಇನ್ನೂ ಜೀವಂತ

*

ಪರಿಚಯ: ಸ್ಮಿತಾ ಮಾಕಳ್ಳಿ ಮೂಲತಃ ತಿಪಟೂರಿನವರು. ಸದ್ಯ ಬೆಂಗಳೂರಿನಲ್ಲಿ ವಾಸ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರ ಡಿಪ್ಲೊಮಾ ಪದವಿ. ಸದ್ಯ ಅದೇ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. ‘ಕೈಗೆಟಕುವ ಕೊಂಬೆ’ ಪ್ರಕಟಗೊಂಡಿರುವ ಕೃತಿಗೆ ‘ಮಧುರ ಚೆನ್ನ ದತ್ತಿ ನಿಧಿ’ ಬಹುಮಾನ ದೊರೆತಿದೆ. ಸದ್ಯ ಇವರು ಹೊಸ ಕವನ ಸಂಕಲನ ಹೊರತರುವ ತಯಾರಿಯಲ್ಲಿದ್ದಾರೆ.

ಇದನ್ನೂ ಓದಿ : Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ

Avitha Kavithe poetry column by poet Smitha Makalli

Published On - 6:46 am, Sun, 11 April 21