ಲಘು ಬರಹ | ಆಹಾ ಕಾಫಿ ಹೀರುವುದು ಅದೆಂಥಾ ಸುಖ, ಡಿಸೆಂಬರ್ ಚಳಿಗೆ ಕಾಫಿ ಒಳ್ಳೇ ಸಖ
ಕಾಫಿ ಕೇವಲ ಪಾನೀಯವಲ್ಲ. ನನ್ನ ಪ್ರಕಾರ ಅದೊಂದು ಭಾವನೆ. ಕಾಫಿ ಕುಡಿಯುತ್ತಾ ನನ್ನ ಮನಸ್ಸಿನೊಳಗಿನ ಖುಷಿ-ದುಃಖವನ್ನು ತುಳುಕಿಸಿದರೆ ನನ್ನವರೊಂದಿಗೆ ನಾನಿದ್ದೇನೆ ಅನ್ನಿಸುತ್ತಿರುತ್ತೆ.

ನಸುಕಿನ ಮಂಜಲ್ಲಿ ಮೈ ಕೊರೆಯುವ ಚಳಿಗೆ ಘಮಘಮಿಸುವ ಕಂಪು ನೀಡುವ ಬೆಚ್ಚನೆಯ ಕಾಫಿ ಎಲ್ಲರಿಗೂ ಅಚ್ಚುಮೆಚ್ಚು. ಇದನ್ನು ಕುಡಿದೇ ಬೆಳಗಿನ ಎಲ್ಲಾ ಕಾರ್ಯಕ್ರಮಗಳು ಶುರುವಾಗೋದು. ಸಂಜೆ ತಲೆ ನೋವಾದಾಗಲೂ ಕಾಫಿಯಷ್ಟು ಹತ್ತಿರದವರು ಇನ್ನೊಬ್ಬರಿಲ್ಲ. ಕಾಫಿ ಬಾಳ ಸಂಗಾತಿ ಇದ್ದಂತೆ. ಕೋಪ ಬರಲಿ, ಬೇಜಾರಾಗಲಿ, ಹಸಿವಾಗಲಿ, ಮೀಟಿಂಗ್ ಇರಲಿ, ಎಲ್ಲದಕ್ಕೂ ಈ ಕಾಫಿ ಸಾಥಿ.
ಡಿಸೆಂಬರ್ ಬಂದಾಗಿದೆ. ಈಗ ಚಳಿ ಜಾಸ್ತಿಯಾಗಿದೆ. ಕಾಫಿ ಕೇವಲ ಪಾನೀಯವಲ್ಲ. ನನ್ನ ಪ್ರಕಾರ ಅದೊಂದು ಭಾವನೆ. ಕಾಫಿ ಕುಡಿಯುತ್ತಾ ನನ್ನ ಮನಸ್ಸಿನೊಳಗಿನ ಖುಷಿ-ದುಃಖವನ್ನು ತುಳುಕಿಸಿದರೆ ನನ್ನವರೊಂದಿಗೆ ನಾನಿದ್ದೇನೆ ಅನ್ನಿಸುತ್ತಿರುತ್ತೆ. ಸಿಕ್ಕಾಪಟ್ಟೆ ತಲೆ ನೋವಾದಾಗ, ಸ್ಟ್ರೆಸ್ ಅನಿಸಿದಾಗಲೆಲ್ಲ ಕಾಫಿಯ ಒಂದು ಗುಟುಕನ್ನು ಸುರ್ ಎಂದು ಹೀರಿ ಅದರ ಸವಿ ತುಟಿಗೆ ಸೋಕಿದರೆ ಸಾಕು ಬೆಚ್ಚನೆ ಹಿತ ಜೊತೆಯಾಗಿ ನೆಮ್ಮದಿಯ ಭಾಸವಾಗುತ್ತೆ. ಒಂದು ಮಾತಲ್ಲಿ ಹೇಳಬೇಕಂದ್ರೆ ಕಾಫಿ/ಟೀ ನನ್ನ ದಿನದ ಚೈತನ್ಯದ ಆಸರೆ. ಅದರಲ್ಲೂ ನನಗೆ ನನ್ನ ಕಾಫಿ ಪಾರ್ಟ್ನರ್ ಸಿಕ್ಕಿ, ಬೈಟು ಕಾಫಿಗೆ ಹೋಗಿ ಹರಟೆ ಹೊಡೆಯುವಾಗ ಮೂರೇ ಗೇಣು ಅಂದಂತಿರುತ್ತೆ.
ಭೂಲೋಕದ ಅಮೃತ: ಕಾಫಿ ಸದ್ಯದ ಯುಗದಲ್ಲಿ ಜೀವನದ ಒಂದು ಭಾಗವಾಗಿದೆ. ಭಾರತದ ಅತ್ಯಂತ ಪ್ರಿಯವಾದ ಪಾನೀಯವಿದು. ಹುಡುಗಿಯರ ಜೊತೆ ಸ್ನೇಹ ಬೆಳೆಸಲು ಹಾತೊರೆಯುವ ಇಂಟ್ರೆಸ್ಟಿಂಗ್ ಅಂದ್ರೆ ಪಡ್ಡೆ ಹುಡುಗರು ಮೊದಲು ಕರೆಯುವುದೇ ಕಾಫಿಗೆ ಅಂತ. ಬಳಿಕ ಅದೇ ಕಪ್ನಲ್ಲಿ ಹಾರ್ಟ್ ಬಿಡಿಸಿ ಪ್ರಪೋಸ್ ಮಾಡ್ತಾರೆ.
ಇನ್ನು ವಯಸ್ಕರಂತೂ ತಮ್ಮ ಸರಿಸಮಾನರೊಂದಿಗೆ ಕಾಫಿ ಅಂಗಡಿಯಲ್ಲಿ ಕೂತು ಸಮಾಜದ ಚಿಂತೆ ಮಾಡ್ತಿರ್ತಾರೆ. ಇದೇ ಸಮಯದಲ್ಲಿ ಮಹಿಳೆಯರು ಕೂಡ ತಮ್ಮ ಅಕ್ಕಪಕ್ಕದ ಮನೆಯವರೊಂದಿಗೆ ಕಾಫಿ ಸವಿಯುತ್ತಾ ಸಂಸಾರದ, ಧಾರಾವಾಹಿಗಳ ಬಗ್ಗೆ ಗುನುಗುತ್ತಾ ಕೂರುತ್ತಾರೆ.
ಈ ಕಾಫಿ ಅನ್ನೋದು ಹಲವು ಕವಿಗಳ ಪಾಲಿಗೆ ಸ್ಫೂರ್ತಿ ದೇವತೆಯೂ ಹೌದು. ಯೋಚಿಸುವ ಶಕ್ತಿಯನ್ನು ಹೆಚ್ಚಿಸುತ್ತೆ ಎಂದೂ ಹಲವರು ಕಾಫಿಯನ್ನು ಹೊಗಳಿದ್ದಾರೆ.
ಬೆಸೆಯುವ ಮಂತ್ರ: ನಾವು ಪರಿಚಯಸ್ಥರ ಮನೆಗೆ ಹೋದರೆ ಮೊದಲು ಕೇಳುವುದೇ ಕಾಫಿ ಮಾಡ್ಲಾ ಅಂತ. ಹಾಗೇ ಯಾರನ್ನಾದರೂ ಭೇಟಿಯಾದ್ರೂ ‘ಹಲೋ ಸಾರ್ ಕಾಫಿ ಆಯ್ತಾ’ ಅಂದೇ ನಮ್ಮ ಮಾತು ಮುಂದುವರಿಸುತ್ತೇವೆ. ಇನ್ನು ಸಿಸಿಡಿ, ಅದೇ ಕಣ್ರಿ ಕೆಫೆ ಕಾಡಿ ಡೇ ಚಿರಪರಿಚಿತವಾದ ಜಾಗವಿದು. ಅನೇಕರ ಪ್ರೇಮಕ್ಕೆ ಜನ್ಮಸ್ಥಳ, ಕವಿಗಳ ಹಾಟ್ ಫೇವರಿಟ್. ಈ ಸಿಸಿಡಿಯ ಯಶಸ್ಸಿನ ಹಿಂದೆಯೂ ಕಾಫಿ ಘಮ ತುಂಬಿದೆ. A lot can happen over coffee ಅಂತ ಕಾಫಿಯ ಘಮವನ್ನು ವಿಶ್ವಕ್ಕೆ ಪರಿಚಯಿಸಿದ್ದು ಕೆಫೆ ಕಾಫಿ ಡೇ.
A lot can happen over coffee ಅನ್ನೋ ಮಾತು ಅದೆಷ್ಟು ನಿಜ ಅಲ್ವಾ? ಏನೂ ಈ ಬರಹ ಓದುವ ಹೊತ್ತಿಗೆ ನಿಮ್ಮ ಕೈಲಿದ್ದ ಕಾಫಿಯೂ ಖಾಲಿಯಾಯ್ತಾ? ಫ್ರೆಶ್ ಆಗಿ ಇನ್ನೊಂದು ಕಪ್ ಕುಡೀರಿ. ಯಾರು ಬೇಡ ಅಂದ್ರು.
Published On - 2:53 pm, Tue, 15 December 20