ಇಲ್ಲಿಗೀ ಕತೆ ಮುಗಿಯಿತು ಅಂತ ಯಾವತ್ತಿಗೂ ಆಗುವುದಿಲ್ಲ. ನಾನು ಬರೆದಾದ ನಂತರ ಈ ಕತೆಯ ಪಾತ್ರಗಳಿಗೆ ಒಳ್ಳೆಯದು, ಕೆಟ್ಟದ್ದು ಏನೇನೋ ಆಗಿದೆ. ‘ಟೆಸ್ಟ್ ಬೇಡ ಅಂದ್ರು’ ಎಂದು ಯಾರ‍್ಯಾರ ಮೇಲೋ ಭಾರ ಹಾಕಿ ಪೊಕಳೆ ಬಿಡುತ್ತಿದ್ದ ಆ ರಾಜಕಾರಣಿ ಕೋವಿಡ್‌ನಿಂದ ತೀರಿಕೊಂಡಿದ್ದಾನೆ. ಗಂಡ ಕ್ಷಮಿಸು ಎನ್ನದಿದ್ದಕ್ಕೆ ಸಿಟ್ಟು ತಳೆದವಳಿಗೆ ಏನಾಯಿತೋ, ಅದೇ ಮನೆಯಲ್ಲಿ ಒಟ್ಟಿಗಿದ್ದಾರೆ. ಕೋವಿಡ್ ನಿರ್ಲಕ್ಷ್ಯಕ್ಕೆ ಬಲಿಯಾದ ಗಪ್ಪತಿಯ ಮಗ ಗೌರೀಶನ ಹೆಂಡತಿ ಬಸುರಾದರೂ ಅದು ಬೇಡವೆಂದು ಪಶ್ಚಾತ್ತಾಪದ ಬೇಯುವಿಕೆಯನ್ನು ಗರ್ಭಪಾತದ ತನಕ ಅವರು ಮುಂದುವರೆಸಿದ್ದಾರೆ. ಪ್ರಕೃತಿ ಎಂದರೆ ಬೋರೆನ್ನುವ ಸ್ಮಿತಾ ಗಂಡ, ಮಗುವಿನೊಡನೆ ಅಮೆರಿಕದಲ್ಲಿ ಸುಖದಿಂದಿದ್ದಾಳೆ. ಬೆಂಗಳೂರಿಗೆ ಲಾಕ್‌ಡೌನ್ ಬಳಿಕ ಹೋಗಿದ್ದ ಗೋಪಾಲ ಮಾಸ್ತರ ಮಗನು ಎರಡನೆಯ ಅಲೆಯಲ್ಲಿ ಕೋವಿಡ್‌ಗೆ ತುತ್ತಾಗಿ, ಅಲ್ಲಿ ಬೆಡ್ ಸಿಗದೇ ಇಲ್ಲಿಗೆ ಕರೆತರುವಾಗ ದಾರಿ ಮೇಲೇ ಮೃತಪಟ್ಟಿದ್ದಾನೆ.
*
ನಮಸ್ಕಾರ
ಈ ಬೆಳಗೂ ಕಾರ್ಗಾಲದ ಎಲ್ಲ ಬೆಳಗಿನಂತೆ ಒಂದು ಬೆಳಗು. ರಾತ್ರಿಯಿಡೀ ಮಳೆ ಸುರಿದಿದೆ. ಕರೆಂಟು ನಾಪತ್ತೆಯಾಗಿದೆ. ಬೆಳಗು ಏರಿದರೂ ಆಗಸಕ್ಕೆ ಇರುಳ ಕಪ್ಪು ಇನ್ನೂ ಮೆತ್ತಿಕೊಂಡೇ ಇದೆ. ಕ್ಲಿನಿಕ್ಕಿಗೆ ಹೊರಡುವ ತಯಾರಿಯಲ್ಲಿದ್ದಾಗ ಪುಸ್ತಕ ಸಂಗಾತಿ ಬಸೂ ಫೋನು ಬಂತು:
‘ವೈದ್ಯರ ದಿನದ ಶುಭಾಶಯಗಳು. ಏನ್ಮಾಡ್ತಿರಿ ಇವತ್ತೆ?’
‘ಏನು ಮಾಡದು? ಎಂತಾ ಇಲ್ಲ. ಕ್ಲಿನಿಕ್ಕು, ಅಡುಗೆಮನೆ, ಓದು, ಬರಹ, ಕಾಯಕವೇ ಕೈಲಾಸ. ಇವತ್ತು ಡಾ. ಬಿ. ಸಿ. ರಾಯ್ ಹುಟ್ಟಿದ, ಮರಣಿಸಿದ ದಿನ. ಪೇಶೆಂಟ್ ನೋಡುತ್ತ ಕೊನೆಯುಸಿರೆಳೆದವರು ಅವರು.’
‘ಡಾಕ್ಟ್ರ ಡೈರಿ ಬರವಣಿಗೆ ಮುಗುಸ್ಬೇಕಂತೇನು ಇರಲಿಲ್ಲ. ಇನ್ನೂ ಎಷ್ಟ್ ಉಳದವಲ್ಲ?’
‘ನಾನೀಗ ಕ್ಲಿನಿಕ್ಕಿಗೆ ಹೊರಟೆ, ಬಂದು ಮಾತಾಡ್ತೀನಿ, ಬೈ.’
ಮಧ್ಯಾಹ್ನದವರೆಗೂ ಆಗುವಂತೆ ಹೊಟ್ಟೆ ತುಂಬಿಸಿ, ನೀರು ಕುಡಿದು ಹೊರಡುತ್ತಿರುವಾಗ ಅಡಿಗೆಮನೆ ಸಹಾಯಕಿ ಸುಜಾತಾ ಬಂದಳು. ನೋವು ತಿಂದು ಗಟ್ಟಿಯಾಗಿರುವ ದಿಟ್ಟ, ಪುಟ್ಟ, ಕಾಯಕಜೀವಿ.
‘ಹ್ಯಾಪಿ ಡಾಕ್ಟರ್ಸ್ ಡೇ ಮೇಡಂ’
‘ಆಯ್ತೇ, ಥ್ಯಾಂಕ್ಯೂ. ನೀನಿದಿಯ ಅಂತ ಎಲ್ಲ ಹಗುರ’
‘ಇಲ್ಲಿ ಕೆಳಗೆ ಬಳ್ಳೀಲಿ ಪುರುಚ್ಲು ಕಾಯಿ ಬಿಟ್ಟದೆ. ಅದ್ರ ಸ್ಞೀಂ ಮಾಡುವಾ?’
‘ಓ, ಮಾಡುವಾ..’
ಅಲ್ಲಿಗೆ ಚೀನಿಕಾಯಿ ಕಡುಬು, ಹಸಿ ಸಾಸ್ಮೆಯ ಯೋಜನೆ ಮಧ್ಯಾಹ್ನಕ್ಕೆ ತಯಾರಾಯಿತು.
ಅಷ್ಟೊತ್ತಿಗೆ ಸುಬ್ರಾಯ ಬಂದ. ನಾವು ತಯಾರಿಸಿದ ಕೆಲಸದ ಸಾಫ್ಟ್ ಕಾಪಿಯನ್ನು ಹಾರ್ಡ್ ಕಾಪಿಗೆ ಇಳಿಸುವವ. ಈ ಊರಿಗೆ ಬಂದಷ್ಟು ವರ್ಷಗಳಿಂದಲೂ ನಮ್ಮೊಡನಿರುವ ಅನುಗಾಲದ ಬಂಧು.
‘ಹ್ಯಾಪಿ ಡಾಕ್ಟರ್ಸ್ ಡೇ ಅಮಾ. ಇವತ್ತೆಂತ ಕಾರ್ಯಕ್ರಮ ಹಾಕಿದ್ರಿ?’
‘ಇವತ್ತು ಉಳಿದಿರೊ ಕಿಟ್ ಕೊಟ್ಟು ಬರಬೇಕು ಸುಬ್ರಾಯ.’
‘ಅದ್ರ ಜೊತೆ ಒಂದೊಂದು ಮಾಸ್ಕ್ ಕೊಡದೂ ಒಳ್ಳೇದು ಮೇಡಂ, ಹ್ಯಾಪಿ ಡಾಕ್ಟರ್ಸ್ ಡೇ’ ಎನ್ನುತ್ತ ಸುಬ್ರಾಯನ ಹೆಂಡತಿ ನಾಗವೇಣಿಯೂ ಅಂಗಡಿಗೆ ಬಂದಳು.
ಕ್ಲಿನಿಕ್ ಪ್ರವೇಶಿಸಿದರೆ ಹಸಿರು ಗೌನು, ಮಾಸ್ಕ್, ಫೇಸ್ ಶೀಲ್ಡ್ ಹಾಕಿ ಆಶಾ, ಸಾಂಡ್ರಾ ಸಿದ್ಧರಾಗಿದ್ದಾರೆ. ಜನರಿಗೆ ದೂರದೂರ ಕೂರಲು ಹೇಳಿ, ಮಾಸ್ಕ್ ಹಾಕಲು ಹೇಳಿ, ಒಬ್ಬೊಬ್ರೇ ಬನ್ನಿ ಎನ್ನುತ್ತ ಮತ್ತೊಂದು ದಿನಕ್ಕೆ ಸನ್ನದ್ಧರಾಗಿದ್ದಾರೆ. ನನ್ನ ಕಂಡದ್ದೇ, ‘ಹ್ಯಾಪಿ ಡಾಕ್ಟರ್ಸ್ ಡೇ ಮೇಡಂ’ ಎಂದು ಇಬ್ಬರೂ ಒಟ್ಟಿಗೇ ಹೇಳಿದರು. ‘ಕತೆ ಇವತ್ತೇ ಲಾಸ್ಟಾ?’ ಎಂದು ಓದುಪ್ರಿಯೆ ಸಾಂಡ್ರಾ ಮುಖ ಸಣ್ಣ ಮಾಡಿದಳು. ‘ಬ್ಯಾರೇ ಬುಕ್ ಓದಿ ತೀಡುಕ್ ಅಡ್ಡಿಲ್ವೆ. ಮೇಡಂ, ಇದು ಕತೆ ಪುಸ್ತಕ ಓದ್ತ ತೀಡ್ತೇ ಇರ‍್ತದೆ’ ಎಂದು ಆಶಾ ಅವಳಿಗೆ ತಮಾಷೆ ಮಾಡಿದಳು.
‘ನೋಡ್ರೇ, ಡಾಕ್ಟರ್ಸ್ ಡೇ ‘ಹ್ಯಾಪಿ’ ಆಗೋದು ಯಾವತ್ತು ಗೊತ್ತಾ? ಆಸ್ಪತ್ರೆಯಲ್ಲಿ ಸಹಾಯ ಮಾಡುವ ನಿಮ್ಮಂತ ಸುಬ್ರಾಯನಂತ ಸಿಬ್ಬಂದಿಗಳು ಇದ್ದಾಗ. ಜೊತೆಗೆ, ಕಸ ತೆಗೆಯೋರು, ಆಸ್ಪತ್ರೆ ವೇಸ್ಟ್ ಒಯ್ಯೋರು, ರೋಗಿಗಳು, ಹಾಲು ಪೇಪರು ಹಾಕೋರು, ಅನ್ನ ಬೆಳೆಯೋರು, ಸಮಾಜ ಕಾಯೋ ಪೊಲೀಸಿನವರು, ಔಷಧಿ ಕಂಪನಿಗಳು, ಅದರ ರೆಪ್-ಉದ್ಯೋಗಿಗಳು, ಔಷಧಿ ತಂದುಕೊಡೋ ರಿಕ್ಷಾದವರು – ಎಲ್ಲ ಹ್ಯಾಪಿಯಾಗಿದ್ದರಷ್ಟೇ ಡಾಕ್ಟ್ರು ಹ್ಯಾಪಿ. ಅಷ್ಟೇ ಅಲ್ಲ, ಅವರ ಮನೆಯೋರು, ಬಂಧುಬಳಗ ಆರೋಗ್ಯದಿಂದ ಇದ್ರಷ್ಟೇ ಅವರು ಹ್ಯಾಪಿ. ಅಲ್ವಾ? ಈ ಸಲ ಕೊರೊನಾದಿಂದ ಈ ಇಷ್ಟರಲ್ಲಿ ಯಾರೂ ಖುಷಿಯಾಗಿಲ್ಲ. ಹಂಗಾಗಿ ಈ ಸಲ ಇದು ಡಾಕ್ಟರ್ಸ್ ಡೇ ಮಾತ್ರ. ಅದರಲ್ಲಿ ಹ್ಯಾಪಿ ಇಲ್ಲ’ ಅಂದೆ.
ಇದು ನಿನ್ನೆ ವೈದ್ಯ ಕುಟುಂಬವಾದ ನಮ್ಮ ಮನೆಯಲ್ಲಿ ನಡೆದ ಚರ್ಚೆ. ಜೊತೆಗೆ ವೈದ್ಯರ ವಾಟ್ಸಪ್ ಗುಂಪಿನಲ್ಲೂ ಇಂಥದೇ ಚರ್ಚೆ ನಡೆಯುತ್ತಿತ್ತು. ವೈದ್ಯರ ದಿನವೆಂದರೆ ಅದು ನರ್ಸುಗಳ ದಿನವೂ, ಹೆಲ್ಪರ್‌ಗಳ ದಿನವೂ, ಸ್ವಚ್ಛತಾ ಸಿಬ್ಬಂದಿಗಳ ದಿನವೂ, ರೋಗಿಗಳ ದಿನವೂ, ಜೀವತ್ಯಾಜ್ಯ ಒಯ್ಯುವವರ ದಿನವೂ, ಆ್ಯಂಬುಲೆನ್ಸಿನವರ ದಿನವೂ, ಪ್ರಯೋಗಾಲಯದವರ ದಿನವೂ ಆಗಿರುತ್ತದೆ. ಕೋವಿಡ್‌ಗಾಗಿ ಕೆಲಸ ಮಾಡುತ್ತ ಎಳೆಯ, ಹಿರಿಯ ಎನ್ನದೆ ಇದುವರೆಗೆ ಒಂದು ಸಾವಿರದಷ್ಟು ವೈದ್ಯರು ದೇಶದಲ್ಲಿ ಮರಣಹೊಂದಿದ್ದಾರೆ. ಅವರ ಸಾವು ಹುಸಿ ಹೋಗದಿರಲಿ. ಅವರೆಲ್ಲರ ನೆನಪಿನಲ್ಲಿ ಇನ್ನುಮೇಲೆ ಇನ್ನೂ ಕಾಳಜಿಯಿಂದ ಪೇಶೆಂಟ್ ನೋಡುವಾ. ಇವತ್ತು ಮಧ್ಯಾಹ್ನ ಚೀನೀಕಾಯಿ ಕಡುಬು ತಿನ್ನುವಾ ಎಂದು ಗೌನ್ ಹಾಕತೊಡಗಿದೆ. ಅಷ್ಟರಲ್ಲಿ ದುರಮುರಗಿಯವರ ಉರುಮೆಯ ಸದ್ದು ಕೇಳಿತು. ಲಾಕ್‌ಡೌನ್ ತೆರವು ಅಂತಾದದ್ದೇ ಬಂದಿರೇ?
‘ಯಲ್ಲಾರೂ ಮನ್ಲಿ ಕೂತ್ರ ಹ್ವಟ್ಟಿ ತುಂಬಬೇಕಲ್ಲಮ್ಮ, ಬಂದ್ ಬಿಟ್ಟಿವಿ’
ಸರಿಯಾಗಿ ಮಾಸ್ಕ್ ಹಾಕಿಕೊಂಡು ಬಂದಿದ್ದಳು. ಮೊದಲಾದರೆ ಕಂಡಕೂಡಲೇ ಹಣೆಗೆ ಭಂಡಾರ ಇಡುತ್ತಿದ್ದವಳು ಈಗ ಪೊಟ್ಟಣ ಕಟ್ಟಿಟ್ಟುಕೊಂಡಿದ್ದಳು. ಭಂಡಾರ ಪಡೆದು, ಗೌರವ ಸಲ್ಲಿಸಿ ಒಳಗೆ ತಿರುಗಿದರೂ ಇನ್ನೂ ನಿಂತಿದ್ದಾಳೆ. ಮಧ್ಯಾಹ್ನ ಮನೆಯ ಬಳಿ ಬಾ ಎನ್ನಬೇಕೆಂದುಕೊಳ್ಳುವುದರಲ್ಲಿ, ‘ನೀವು ಹಾಕ್ಕಂಡಿರಂತ ಒಂದ್ ವಳ್ಳೆ ಮಾಸ್ಕು ಕೊಡಮ್ಮ’ ಎಂದಳು.
ತಗಳಪ್ಪ! ಇದು ನಿಜಕ್ಕೂ ಡಾಕ್ಟರ್ಸ್ ಡೇ ಶುಭಾಶಯ ಎಂದು ಎಲ್ಲರೂ ಖುಷಿಯಾದೆವು.
***
ಪ್ರಿಯ ಓದುಗರೇ, ವೈದ್ಯರ ದಿನದ ಶುಭಾಶಯಗಳು.
ಇದುವರೆಗೆ ನಿಮ್ಮೊಡನೆ ‘ಕವಲಕ್ಕಿ ಮೇಲ್’ ಮೂಲಕ ಅದೃಶ್ಯವಾಗಿ ಸಂಪರ್ಕದಲ್ಲಿದ್ದೆ. ಈ ಬರವಣಿಗೆ ನನಗೆ ಖುಷಿ ಕೊಟ್ಟಿದೆ. ಕತೆ ಬರೆಯುವುದು ಅಥವಾ ಅನಿಸಿದ್ದನ್ನು ಅಕ್ಷರ ರೂಪಕ್ಕಿಳಿಸುವ ಕ್ರಿಯೆ ಅತ್ಯಂತ ಸಂತೋಷದ ಗಳಿಗೆ. ನಾನು ನಾನಷ್ಟೇ ಅಲ್ಲದೆ ಬೇರೆ ಏನೇನೋ ಆಗಿ ಸಂಚರಿಸಿ ಬರುವ ಆಪ್ತ ಗಳಿಗೆ. ಬರೆದಾದ ಬಳಿಕ ಸಿಗುವ ಆನಂದ, ತೃಪ್ತಿಯನ್ನು ಯಾವುದಕ್ಕೂ ಹೋಲಿಸಲಾರೆ. ಬರವಣಿಗೆಯ ಖುಷಿ ನೀಡಿದ ಈ ಸರಣಿ ಕತೆಗಳಿಂದ ನನಗೆ ಪರೋಕ್ಷ ಉಪಯೋಗಗಳೂ ಆಗಿವೆ. ನಾನಾ ಕಾರ್ಯಕ್ರಮಗಳಿಗೆ ನನ್ನನ್ನು ಕರೆದು, ಬರಲಾರೆನೆಂದಾಗ ಬೇಸರ ತಳೆದವರು ‘ಮೇಡಂ ಯಾಕೆ ಬರಲ್ಲ ಅಂತ ಈಗ ಗೊತ್ತಾಯ್ತು’ ಎಂದಿದ್ದಾರೆ. ಮತ್ತೆ ಕೆಲವರು ನಾನೀಗ ಪ್ರಾಕ್ಟೀಸ್ ಬಿಟ್ಟು ಬರಿ ಬರವಣಿಗೆ, ಭಾಷಣ ಮಾಡುತ್ತ ಓಡಾಡುತ್ತ ಇರುವೆನೆಂದು ತಿಳಿದಿದ್ದವರಿಗೆ ಓಹೋ, ಇವರಿನ್ನೂ ಪೇಶೆಂಟುಗಳನ್ನು ನೋಡುತ್ತಿದ್ದಾರೆ ಎಂದೂ ತಿಳಿದು ಬಂತಂತೆ!
ಎಲ್ಲಕ್ಕಿಂತ ಮುಖ್ಯ ಯಾವುದು ಗೊತ್ತಾ? ನನ್ನ ಪದಗಳಿಗೆ, ಪಾತ್ರಗಳಿಗೆ, ಕತೆಗಳಿಗೆ ಕೇಳುವ ಕಿವಿಗಳು ನಿಮ್ಮ ರೂಪದಲ್ಲಿ ಸಿಕ್ಕಿಬಿಟ್ಟಿವೆ. ಇದು ಭಾಗ್ಯ!
ಇನ್ನು ಕತೆಗಳ ಕುರಿತು ಕೆಲವು ಮಾತು. ಇಲ್ಲಿಗೀ ಕತೆ ಮುಗಿಯಿತು ಅಂತ ಯಾವತ್ತಿಗೂ ಆಗುವುದಿಲ್ಲ. ನಾನು ಬರೆದಾದ ನಂತರ ಈ ಕತೆಯ ಪಾತ್ರಗಳಿಗೆ ಒಳ್ಳೆಯದು, ಕೆಟ್ಟದ್ದು ಏನೇನೋ ಆಗಿದೆ. ‘ಟೆಸ್ಟ್ ಬೇಡ ಅಂದ್ರು’ ಎಂದು ಯಾರ‍್ಯಾರ ಮೇಲೋ ಭಾರ ಹಾಕಿ ಪೊಕಳೆ ಬಿಡುತ್ತಿದ್ದ ಆ ರಾಜಕಾರಣಿ ಕೋವಿಡ್‌ನಿಂದ ತೀರಿಕೊಂಡಿದ್ದಾನೆ. ಗಂಡ ಕ್ಷಮಿಸು ಎನ್ನದಿದ್ದಕ್ಕೆ ಸಿಟ್ಟು ತಳೆದವಳಿಗೆ ಏನಾಯಿತೋ, ಅದೇ ಮನೆಯಲ್ಲಿ ಒಟ್ಟಿಗಿದ್ದಾರೆ. ಕೋವಿಡ್ ನಿರ್ಲಕ್ಷ್ಯಕ್ಕೆ ಬಲಿಯಾದ ಗಪ್ಪತಿಯ ಮಗ ಗೌರೀಶನ ಹೆಂಡತಿ ಬಸುರಾದರೂ ಅದು ಬೇಡವೆಂದು ಪಶ್ಚಾತ್ತಾಪದ ಬೇಯುವಿಕೆಯನ್ನು ಗರ್ಭಪಾತದ ತನಕ ಅವರು ಮುಂದುವರೆಸಿದ್ದಾರೆ. ಪ್ರಕೃತಿ ಎಂದರೆ ಬೋರೆನ್ನುವ ಸ್ಮಿತಾ ಗಂಡ, ಮಗುವಿನೊಡನೆ ಅಮೆರಿಕದಲ್ಲಿ ಸುಖದಿಂದಿದ್ದಾಳೆ. ಬೆಂಗಳೂರಿಗೆ ಲಾಕ್‌ಡೌನ್ ಬಳಿಕ ಹೋಗಿದ್ದ ಗೋಪಾಲ ಮಾಸ್ತರ ಮಗನು ಎರಡನೆಯ ಅಲೆಯಲ್ಲಿ ಕೋವಿಡ್‌ಗೆ ತುತ್ತಾಗಿ, ಅಲ್ಲಿ ಬೆಡ್ ಸಿಗದೇ ಇಲ್ಲಿಗೆ ಕರೆತರುವಾಗ ದಾರಿ ಮೇಲೇ ಮೃತಪಟ್ಟಿದ್ದಾನೆ. ನಂಗೆ ಅಯ್ಯೋ ಪಾಪ ಅನ್ನಬೇಡಿ ಎಂದ ಸೀತೆಗೆ ಮುಜುಗರ ಬೇಡವೆಂದು ಪ್ರತಿತಿಂಗಳು ತನಗೆ ಬೇಕಾದ ಸಾಮಾನಿನ ಯಾದಿ ಕೊಟ್ಟು ನೇರ ಅಂಗಡಿಯಿಂದಲೇ ದಿನಸಿ ಒಯ್ಯುವ ವ್ಯವಸ್ಥೆ ಮಾಡಿದೆ. ಡೌಟಮ್ಮ ಡೌಟಮ್ಮನಾಗಿಯೇ ಮುಂದುವರೆದಿದ್ದಾಳೆ. ನನ್ನಮ್ಮ ಕೋವಿಡ್‌ನಿಂದ ಗುಣಮುಖರಾಗಿ, ಅಪ್ಪನೂ ಪಾಸಿಟಿವ್ ಆಗಿ ಗುಣಹೊಂದಿ, ಮಗಳೂ ಗುಣಹೊಂದಿ ಅವಳೀಗ ಎಂಡಿ ಪರೀಕ್ಷೆ ಬರೆಯುತ್ತಿದ್ದಾಳೆ.
ಇಲ್ಲಿಗೀ ಕತೆಗಳು ಮುಗಿಯುವುದಿಲ್ಲ. ಯಾಕೆಂದರೆ ಈ ಮೂವತ್ತು ಓದುವುದರಲ್ಲಿ ನಿಮ್ಮ ಮನದಲ್ಲಿ ನೂರು ಕತೆ ಹುಟ್ಟಿರುತ್ತವೆ. ‘ಓ ಇದು ಅವರ ಕತೆಯಾಗಿರಬಹುದು, ಆ ಅದು ಇವರ ಕತೆಯಾಗಿರಬಹುದು’ ಎಂಬ ಊಹೆ ಮೂಡಿರುತ್ತದೆ. ಹೀಗೆ ಕತೆಗಳು ಓದುವವರಲ್ಲಿ ಒಂದು ಕತೆ ಹುಟ್ಟಿಸಿ ಅರಳತೊಡಗಿದರೆ ಅಲ್ಲಿಗೆ ಕತೆ ಹೇಳುವವರ ಕೆಲಸ ಮುಗಿಯಿತು. ಅದಕ್ಕೇ ಸರಣಿ ಇಲ್ಲಿಗೆ ಮುಗಿಯುತ್ತಿದೆ.
ಈ ಕತೆಗಳನ್ನು ಈಗಲೇ ಬರೆಯಲು ಕಾರಣರಾದ ‘ಟಿವಿ9 ಕನ್ನಡ ಡಿಜಿಟಲ್’ ಮತ್ತು ಬಸೂರಿಂದ ಹಿಡಿದು ಬಂದಕೂಡಲೇ ಓದಿ ಬಿಡುವ ಸಾಂಡ್ರಾ, ಸುಭದ್ರಾ, ಮನಿಶಾ, ಗಣೇಶ, ವಿಜೇತಾರ ತನಕ ಹಲವರು ಈ ಸರಣಿಯನ್ನು ಸದ್ಯ ಮುಗಿಸಬೇಡಿ ಎನ್ನುತ್ತಿದ್ದಾರೆ. ಕಥಾ ವಸ್ತುವಿಗೆ ಏನೂ ಕೊರತೆಯಿಲ್ಲ. ಆದರೆ ಜನರ ದಾರುಣ ಪರಿಸ್ಥಿತಿಯನ್ನು, ದುಃಖವನ್ನು ಕತೆಯಾಗಿಸಿ ಬರೆದು ಅವರಿಗೇನು ಲಾಭ ಎಂಬ ಮುಳ್ಳು ಸದಾ ಕುಟುಕುತ್ತಿರುತ್ತದೆ. ಆ ಕಾರಣಕ್ಕೆ ಕತೆಯಾಗದೆ ಎಂದಿನಿಂದಲೋ ಹುದುಗಿ ಕುಳಿತವರೆಲ್ಲ ಕೋವಿಡ್ ಕಾರಣಕ್ಕೆ ಈಗ ಎದ್ದೆದ್ದು ಬಂದಿದ್ದಾರೆ. ನಾವು ನೆನಪಾಗಲಿಲ್ಲವ ಅಂತ ಕೆಲ ಕತೆಗಳು ಸೈಡ್ ವಿಂಗಿನಿಂದ ಕೇಳುತ್ತಿವೆ. ನಮ್ಮ ಗುಟ್ಟುಗಳನ್ನು ಇಷ್ಟು ಹಸಿಹಸಿಯಾಗಿ ಹೇಳಿದ್ದೇಕೆ ಎಂದು ಕೆಲವು ಮುಖವುಬ್ಬಿಸಿವೆ. ನಾನೆಂಬ ಸೂತ್ರಧಾರಿಣಿ ಇಲ್ಲದೇ ನೀವೇ ನಿಮ್ಮದನ್ನು ಹೇಳಿಕೊಳ್ಳುವ ಕಾಲ ಬರಲಿದೆ, ತಡೆಯಿರಿ ಎಂದು ಸಮಾಧಾನಿಸಿದ್ದೇನೆ.
***
ಇದುವರೆಗೆ ಪ್ರತಿದಿನ ಬಂದದ್ದು ನನ್ನ ಅನುಭವವಷ್ಟೇ ಅಲ್ಲ. ಇದು ಬಹುತೇಕ ಎಲ್ಲ ವೈದ್ಯ ಬಾಂಧವರ ಅನುಭವವಾಗಿದೆ. ನನಗೆ ಅಕ್ಷರ ಸಖ್ಯವಿದೆ, ಬರೆದೆ. ಹಲವರ ಅನುಭವ ಇದಕ್ಕಿಂತ ವೈವಿಧ್ಯಮಯವೂ, ಅರ್ಥಪೂರ್ಣವೂ ಆಗಿರಬಹುದು. ಅವರೆಲ್ಲ ಬರೆಯಲು ಸಮಯವಿರದೇ, ಅದರಲ್ಲಿ ನಂಬಿಕೆಯಿಲ್ಲದೆ ಬರೆಯದೇ ಇದ್ದಾರೆ ಅಷ್ಟೆ.
ಕೆಳಗೇ ಇದ್ದುಬಿಡುವುದನ್ನು ಚೆನ್ನಾಗಿ ಕಲಿತದ್ದರಿಂದ ಕಡಲಿಗೆ ನೂರಾರು ನದಿಗಳನ್ನು ಒಳಗೊಳ್ಳಲು ಸಾಧ್ಯವಾಗಿದೆ ಎನ್ನುತ್ತದೆ ದಾವ್. ನನಗೆ ಕೆಳಗಿಳಿಯುವುದನ್ನು, ಎಲ್ಲವನ್ನು ಒಳಗೊಳ್ಳುವುದನ್ನು ಕಲಿಸುತ್ತಿರುವುದು ಈ ವೃತ್ತಿ. ಇದು ನನಗೆ ಬೆಳಕು ತೋರಿಸಿದೆ, ದಿಕ್ಕಾಗಿದೆ. ಕಲಿಕೆ ಮುಗಿಯುವುದಿಲ್ಲ, ಮುಂದುವರಿದೇ ಇರುತ್ತದೆಂದು ತಿಳಿಸಿಕೊಟ್ಟಿದೆ. ಲೋಕದಲ್ಲಿ ಅಪ್ರಿಯ ಸತ್ಯಗಳು ಇವೆ; ಅದರ ಮರೆಯಲ್ಲಿ ಸಿಹಿ ವಾಸ್ತವಗಳೂ ಇವೆ ಎನ್ನುವುದನ್ನು ವೃತ್ತಿ ಒದಗಿಸಿದ ಜನರ ಒಡನಾಟದಿಂದ ಕಂಡುಕೊಂಡಿದ್ದೇನೆ. ಇದು ನನ್ನದಷ್ಟೇ ಅಲ್ಲ, ನನ್ನ ವೃತ್ತಿಬಾಂಧವರ ಮಾತೂ ಆಗಿದೆ.
ಹೊರಗೆ ಸರತಿ ಬೆಳೆಯುತ್ತಿದೆ. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ.
ಎಲ್ಲರಿಗೂ ತುಂಬ ಪ್ರೀತಿ
ಡಾ. ಎಚ್. ಎಸ್. ಅನುಪಮಾ
*
ಪದಗಳ ಅರ್ಥ
ತೀಡು = ಅಳು
ಸ್ಞೀಂ = ಸಿಹಿ
*
‘ಕವಲಕ್ಕಿ ಮೇಲ್’ ಸರಣಿ ಕುರಿತು ನಿಮ್ಮ ಅಭಿಪ್ರಾಯಗಳಿದ್ದಲ್ಲಿ ಬರೆದು ಕಳಿಸಿ tv9kannadadigital@gmail.com
*
ಫೋಟೋ : ಡಾ. ಲೀಲಾ ಅಪ್ಪಾಜಿ
ಇದನ್ನೂ ಓದಿ :Covid Diary : ಕವಲಕ್ಕಿ ಮೇಲ್ ; ಗುರುಮಲೆಯ ಗುರೂಜಿಯ ‘ಮಶಕ ಮಾರಣ ಮಂತ್ರ’
ಇದನ್ನೂ ಓದಿ : 30 ಕವಲಕ್ಕಿ ಮೇಲ್ಗಳನ್ನು ಇಲ್ಲಿ ಓದಬಹುದು. https://tv9kannada.com/specials
Published On - 11:45 am, Thu, 1 July 21