AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಮಲೆನಾಡಿನಲ್ಲಿ ಅಂಟಿಗೆ-ಪಂಟಿಗೆ ತಂಡದ ಕಲರವ, ಇಲ್ಲಿದೆ ಒಂದು ಝಲಕ್!

ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ದೀಪ.. ತಲೆಗೊಂದು ಕೆಂಪು ಮುಂಡಾಸು, ಬಿಳಿ ಬಟ್ಟೆಯಲ್ಲಿ ಆ ದೀಪವನ್ನ ಹಿಡಿದು ಸಾಗುತ್ತಿರುವ ತಂಡ.. ಮಣ್ಣಿನ ಹಣತೆಯ ದೀಪದೊಂದಿಗೆ ಮನೆ ಮನೆಗೆ ಹೋಗಿ ಜಾನಪದ ಹಾಡು ಹೇಳುತ್ತಿರುವ ಅಂಟಿಗೆ-ಪಂಟಿಗೆ ತಂಡ ಇಲ್ಲಿದೆ ನೋಡಿ.

ಏನಿದು ಮಲೆನಾಡಿನಲ್ಲಿ ಅಂಟಿಗೆ-ಪಂಟಿಗೆ ತಂಡದ ಕಲರವ, ಇಲ್ಲಿದೆ ಒಂದು ಝಲಕ್!
ಸಾಧು ಶ್ರೀನಾಥ್​
| Edited By: |

Updated on:Nov 29, 2022 | 9:27 AM

Share

ಮಲೆನಾಡು, ಬಗೆ ಬಗೆಯ ಹಬ್ಬ ಹರಿದಿನಗಳ ಆಚರಣೆ ಆಗರ. ಪ್ರತಿ ಹಬ್ಬವೂ ಇಲ್ಲಿ ಸಂತಸ ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಅದರಲ್ಲೂ ಈ ದೀಪಾವಳಿ ಸಂಭ್ರಮದಲ್ಲಿ ಮಲೆನಾಡಿಗರ ಮನೆ ಮೆನೆಯಲ್ಲೂ ದೀಪ ಬೆಳಗಿಸುವ ಅಂಟಿಗೆ-ಪಂಟಿಗೆ ಮನೆ ಮಾತಾಗಿದೆ. ಅಂಟಿಗೆ-ಪಂಟಿಗೆಯ ಒಂದು ಝಲಕ್ ಇಲ್ಲಿದೆ.

ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ದೀಪ.. ತಲೆಗೊಂದು ಕೆಂಪು ಮುಂಡಾಸು, ಬಿಳಿ ಬಟ್ಟೆಯಲ್ಲಿ ಆ ದೀಪವನ್ನ ಹಿಡಿದು ಸಾಗುತ್ತಿರುವ ತಂಡ.. ಮಣ್ಣಿನ ಹಣತೆಯ ದೀಪದೊಂದಿಗೆ ಮನೆ ಮನೆಗೆ ಹೋಗಿ ಜಾನಪದ ಹಾಡು ಹೇಳುತ್ತಿರುವ ಅಂಟಿಗೆ-ಪಂಟಿಗೆ ತಂಡ ಇಲ್ಲಿದೆ ನೋಡಿ.

ಇದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಡು ಬಂದ ದೃಶ್ಯ. ಈ ಅಂಟಿಗೆ-ಪಂಟಿಗೆ ಮಲೆನಾಡಿನ ಒಂದು ವಿಶಿಷ್ಟ ಕಲೆ. ಅದರಲ್ಲೂ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಈ ಕಲಾವಿದರು ಹೆಚ್ಚು. ದೀಪಾವಳಿ ಹಬ್ಬದ ಟೈಂನಲ್ಲಿ ಅಂಟಿಗೆ-ಪಂಟಿಗೆ ತಂಡ ಮೆಲೆನಾಡಿಗರ ಮನೆ ಮನೆಯಲ್ಲೂ ನಂದಾದೀಪ ಬೆಳಗಿಸುತ್ತವೆ.

ಹಾಗೇ ತೀರ್ಥಹಳ್ಳಿ ತಾಲೂಕಿನ ಹುಲಿಸರ ಗ್ರಾಮದ ದುರ್ಗಾಪರಮೇಶ್ವೇರಿ ಅಂಟಿಗೆ-ಪಂಟಿಗೆ ತಂಡವು ಶಿವಮೊಗ್ಗ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸುವ ಮೂಲಕ ದೀಪಾವಳಿ ಹಬ್ಬದ ಜಾನಪದ ಸೊಗಡನ್ನು ಈ ಬಾರಿಯು ಹೊರಹಾಕಿದರು. ಮಣ್ಣಿನ ದೀಪ ಹಿಡಿದು ಮೆನೆ ಮೆನೆಗೆ ಸಂಚರಿಸಿ, ನಿಮ್ಮ ಮನೆ ಸದಾ ದೀಪದ ಬೆಳಕಿನಂತೆ ಬೆಳಗಲಿ ಅಂತ ಹಾಡಿನ ಮೂಲಕವೇ ಹಾರೈಸುತ್ತಾರೆ.

ಸಾಮಾನ್ಯವಾಗಿ ರಾತ್ರಿ ಹಬ್ಬದ ಊಟ ಮಾಡಿ ಬಾಗಿಲು ಹಾಕಿದ ಮನೆಗಳಿಗೆ ಭೇಟಿ ನೀಡುವ ಅಂಟಿಗೆ-ಪಂಟಿಗೆ ಸದಸ್ಯರು ಹಾಡಿನ ಮೂಲಕವೇ ಮನೆಯ ಬಾಗಿಲನ್ನ ತೆಗೆಸುತ್ತಾರೆ. ಅದರಲ್ಲೂ ಗಣಪತಿ ಪದ, ಬಸವನ ಹಾಡು, ರಾಮಲಕ್ಷ್ಮಣರ ಹಾಡು, ತುಳಸಿ ಹಾಡು, ಕುಮಾರ ರಾಮನ ಹಾಡು, ಹೆಬ್ಬಾಗಿಲ ಹಾಡುಗಳು ಕೇಳುಗರಿಗೆ ಕತ್ತಲಲ್ಲೂ ಬೆಳಕು ಮೂಡಿಸುತ್ತಿವೆ. ಹೀಗೆ ತಂಡದ ಒಂದಿಷ್ಟು ಜನ ಹಾಡುತ್ತಿದ್ದರೆ ಮತ್ತೆ ಕೆಲವರು ಆ ಪದಕ್ಕೆ ಧ್ವನಿ ನೀಡುತ್ತಾರೆ. ಮನೆ ಮನೆಗಳಿಗೆ ಹೋಗುವ ಇವರು ತಾವು ತಂದ ದೀಪವನ್ನು ಮನೆಯ ಪೂಜಾ ಸ್ಥಳದ ಮೇಲೆ ಇರಿಸುತ್ತಾರೆ. ನಂತ್ರ ಮನೆಯವರು ಜ್ಯೋತಿಗೆ ಪೂಜೆಸಿ, ಅಂಟಿಗೆ-ಪಂಟಿಗೆ ತಂಡಕ್ಕೆ ಕಾಣಿಕೆ, ದವಸ ಧಾನ್ಯ ಇತ್ಯಾದಿಗಳನ್ನು ನೀಡಿ ಗೌರವಿಸುತ್ತಾರೆ ಎನ್ನುತ್ತಾರೆ ಅಂಟಿಗೆ-ಪಂಟಿಗೆ ತಂಡದ ಪ್ರಮುಖರಾದ ಸಂದೇಶ್.

ಒಟ್ನಲ್ಲಿ ಆಧುನಿಕತೆಯ ಭರಾಟೆಯಲ್ಲಿ ಇಂತಹ ಆನೇಕ ಆಚರಣೆಗಳು ಮರೆಯಾಗುತ್ತಿವೆ. ಆದ್ರೆ ಈ ಅಂಟಿಗೆ-ಪಂಟಿಗೆ ಆಧುನಿಕತೆಯ ಬಿರುಗಾಳಿ ನಡುವೆ ಮಲೆನಾಡಿನಲ್ಲಿ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಇದು ಇದೇ ರೀತಿ ಮುಂದುವರಿದು ಮಲೆನಾಡಿನ ಗ್ರಾಮೀಣ ಜಾನಪದ ಸೊಗಡು ಉಳಿಯಲಿ ಅನ್ನೋ ಆಶಯ ವ್ಯಕ್ತಪಡಿಸುತ್ತಾರೆ ಭಕ್ತರಾದ ವೀಣಾ ಅವರು.

Published On - 12:57 pm, Tue, 29 October 19