ದೇವಸ್ಥಾನದಲ್ಲಿ ಗಂಟೆಯನ್ನು ಏಕೆ ಬಾರಿಸುತ್ತಾರೆ?, ಎಷ್ಟು ಸಲ ಬಾರಿಸಬೇಕು ಗೊತ್ತೇ?, ಇದರ ಹಿಂದಿದೆ ವೈಜ್ಞಾನಿಕ ಕಾರಣ

|

Updated on: May 14, 2024 | 3:35 PM

ಗಂಟೆಯಿಲ್ಲದ ಹಿಂದೂ ದೇವಾಲಯ ಎಲ್ಲೂ ಕಾಣಸಿಗುವುದಿಲ್ಲ. ಗಂಟೆಯ ನಿನಾದವನ್ನು ಪವಿತ್ರವೆಂದು ಹಲವಾರು ಧರ್ಮಗಳು ನಂಬುತ್ತವೆ. ಹಾಗಾದರೆ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗಂಟೆಗಳನ್ನು ಏಕೆ ಕಟ್ಟಿರುತ್ತಾರೆ?, ಇದನ್ನು ಎಷ್ಟು ಸಲ ಬಾರಿಸಬೇಕು?. ಈ ಕುರಿತ ಎಲ್ಲ ಮಾಹಿತಿ ಇಲ್ಲಿದೆ.

ದೇವಸ್ಥಾನದಲ್ಲಿ ಗಂಟೆಯನ್ನು ಏಕೆ ಬಾರಿಸುತ್ತಾರೆ?, ಎಷ್ಟು ಸಲ ಬಾರಿಸಬೇಕು ಗೊತ್ತೇ?, ಇದರ ಹಿಂದಿದೆ ವೈಜ್ಞಾನಿಕ ಕಾರಣ
Temple Bell
Follow us on

ನಾವು ದೇವಾಲಯದ ಒಳಗೆ ಪ್ರವೇಶಿಸಿದ ಕೂಡಲೇ ಮಾಡುವ ಮೊದಲ ಕೆಲಸ ಗಂಟೆ ಬಾರಿಸುವುದು, ಬಳಿಕ ದೇವರಿಗೆ ನಮಸ್ಕಾರ ಮಾಡುತ್ತೇವೆ. ದೇವಸ್ಥಾನವನ್ನು ಪ್ರವೇಶಿಸುವಾಗ ಗಂಟೆ ಬಾರಿಸುವ ಈ ಸಂಪ್ರದಾಯ ಅಥವಾ ಪದ್ಧತಿ ಶತಮಾನಗಳಷ್ಟು ಹಳೆಯದು, ಇದನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಪ್ರತಿ ದೇವಸ್ಥಾನದಲ್ಲಿ ಗಂಟೆಗಳು ಇರುತ್ತವೆ. ಗಂಟೆಯಿಲ್ಲದ ಹಿಂದೂ ದೇವಾಲಯ ಎಲ್ಲೂ ಕಾಣಸಿಗುವುದಿಲ್ಲ. ಗಂಟೆಯ ನಿನಾದವನ್ನು ಪವಿತ್ರವೆಂದು ಹಲವಾರು ಧರ್ಮಗಳು ನಂಬುತ್ತವೆ. ಹಾಗಾದರೆ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗಂಟೆಗಳನ್ನು ಏಕೆ ಕಟ್ಟಿರುತ್ತಾರೆ?, ಇದನ್ನು ಏಕೆ ಬಾರಿಸುತ್ತಾರೆ, ದೇವಾಲಯಗಳಲ್ಲಿ ಇಡುವ ಗಂಟೆಯ ಮಹತ್ವವೇನು, ಇದನ್ನು ಎಷ್ಟು ಸಲ ಬಾರಿಸಬೇಕು?. ಈ ಕುರಿತ ಎಲ್ಲ ಮಾಹಿತಿ ಇಲ್ಲಿದೆ.

ದೇವಾಲಯದಲ್ಲಿ ಗಂಟೆಗಳನ್ನು ಬಾರಿಸುವುದರಿಂದ, ವಿಗ್ರಹಗಳಲ್ಲಿ ನೆಲೆಸಿರುವ ದೇವರುಗಳು ಎಚ್ಚರಗೊಳ್ಳುತ್ತಾರೆ ಮತ್ತು ಭಕ್ತರ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತವೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಸ್ಕಂದ ಪುರಾಣದ ಪ್ರಕಾರ, ದೇವಾಲಯದ ಗಂಟೆಯನ್ನು ಬಾರಿಸುವ ಮೂಲಕ, ಮಾನವನ ನೂರು ಜೀವನದ ಪಾಪಗಳು ದೂರವಾಗುತ್ತವೆ.

ಶಾಸ್ತ್ರದ ಪ್ರಕಾರ ಗಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ, ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಗಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ. ದೇವಾಲಯ ಪ್ರವೇಶಿಸುವ ಭಕ್ತರು ಗಂಟೆ ಬಾರಿಸಿದಾಗ ಅವರಲ್ಲಿ ಭಕ್ತಿ ಭಾವ ಮೂಡುತ್ತದೆ. ಜೊತೆಗೆ ಆರತಿ ವೇಳೆ ನಿರಂತರವಾಗಿ ಗಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತದೆ ಎಂಬ ಕಾರಣಕ್ಕೆ ಗಂಟೆ ಮೊಳಗಿಸಲಾಗುತ್ತದೆ.

ಈ ಕುರಿತು ಟಿವಿ9 ಆ್ಯಪ್ ಜೊತೆ ಮಾತನಾಡಿದ ಪ್ರಸಿದ್ಧ ಪುರೋಹಿತ ಅನಂತಕೃಷ್ಣ ಅವರು, ”ಅನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಗಂಟಾನಾದ ಮೊಳಗುತ್ತಿದೆ. ಈ ಗಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆ. ನಾವು ಯಾವಾಗ ಗಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ”.

”ಗಂಟೆಯನಾದ ಶುಭಪ್ರದವಾದದ್ದು, ಎಲ್ಲಿ ಗಂಟೆಯನಾದವಿರುತ್ತೊ ಅಲ್ಲಿ ಪ್ರೇತವಾಗಲಿ, ರಾಕ್ಷಸರಾಗಲಿ ವಾಸವಿರುವುದಿಲ್ಲ. ಅದಕ್ಕಾಗಿಯೇ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಾಗ ಮೊದಲು ಗಂಟೆಗೆ ಪೂಜೆ ಮಾಡಿ ನಂತರ ದೇವರ ಪೂಜೆ ಶುರು ಮಾಡುತ್ತೇವೆ. ಶುಭಕಾರ್ಯಗಳಿಗೆ ಗಂಟೆಬಾರಿಸುವ ನಾವು, ಶ್ರಾದ್ಧದ ದಿನ ಗಂಟೆಯನ್ನು ಬಾರಿಸುವುದಿಲ್ಲ ಕಾರಣ ಪಿತೃಗಳು ಒಳಬರುವುದಿಲ್ಲ, ಶ್ರಾದ್ಧ ಮುಗಿದ ಮೇಲೆ ಸಂಜೆ ದೇವರಿಗೆ ಗಂಟೆ ಬಾರಿಸಿ ಮಂಗಳಾರುತಿ ಮಾಡುತ್ತೇವೆ. ಅದಕ್ಕಾಗಿಯೇ ಗಂಟೆನಾದಕ್ಕೆ ಬಹಳ ಮಹತ್ವ,” ಎಂದು ಹೇಳುತ್ತಾರೆ.

ದೇವಾಲಯದಲ್ಲಿ ಗಂಟೆಗಳನ್ನು ನೇತುಹಾಕುವುದಕ್ಕೆ ಆಧ್ಯಾತ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣಗಳೂ ಇವೆ ಎಂದು ಅನಂತಕೃಷ್ಣ ಅವರು ಹೇಳುತ್ತಾರೆ. ”ದೇವಾಲಯದ ಗಂಟೆಗಳನ್ನು ಹಲವಾರು ಲೋಹಗಳು ಮತ್ತು ಮಿಶ್ರಲೋಹಗಳಿಂದ ರಚಿಸಲಾಗಿದೆ ಮತ್ತು ಈ ಲೋಹಗಳ ಪ್ರಮಾಣಗಳನ್ನು ನಿಖರವಾದ ವೈಜ್ಞಾನಿಕ ಲೆಕ್ಕಾಚಾರಗಳೊಂದಿಗೆ ಬೆರೆಸಲಾಗುತ್ತದೆ. ನೀವು ಗಂಟೆಯನ್ನು ಬಾರಿಸಿದಾಗ, ಮೆದುಳಿನ ಎಡ ಮತ್ತು ಬಲ ಹಾಲೆಗಳ ನಡುವೆ ಸಂಪೂರ್ಣ ಸಾಮರಸ್ಯವನ್ನು ರಚಿಸಲಾಗುತ್ತದೆ, ಇದು ನಿಮ್ಮನ್ನು ಸರ್ವೋಚ್ಚ ಶಾಂತ ಸ್ಥಿತಿಗೆ ತರುತ್ತದೆ. ಗಂಟೆ ಬಾರಿಸಿದಾಗ ವಾತಾವರಣದಲ್ಲಿ ಕಂಪನ ಉಂಟಾಗುತ್ತದೆ. ಈ ಕಂಪನದ ಪ್ರಯೋಜನವೆಂದರೆ ಅದರ ಪ್ರದೇಶದಲ್ಲಿ ಬರುವ ಎಲ್ಲಾ ಬ್ಯಾಕ್ಟೀರಿಯಾಗಳು, ವೈರಸ್​ಗಳು ಮತ್ತು ಸೂಕ್ಷ್ಮಜೀವಿಗಳು ನಾಶವಾಗುತ್ತವೆ, ಇದರಿಂದಾಗಿ ಸುತ್ತಮುತ್ತಲಿನ ಪರಿಸರವು ಶುದ್ಧವಾಗುತ್ತದೆ,” ಎಂದು ಹೇಳಿದರು.

ದೇವಾಲಯದ ಘಂಟೆಗಳ ವಿಧಗಳು:

  • ಗರುಡ ಗಂಟೆ – ಗರುಡ ಗಂಟೆ ಚಿಕ್ಕದಾಗಿದೆ, ಇದನ್ನು ಒಂದು ಕೈಯಿಂದ ನುಡಿಸಬಹುದು.
  • ಡೋರ್ಬೆಲ್ – ಇದು ಬಾಗಿಲಲ್ಲಿ ನೇತಾಡುತ್ತದೆ. ಇದು ದೊಡ್ಡದು ಅಥವಾ ಚಿಕ್ಕ ಗಾತ್ರದಲ್ಲಿರುತ್ತದೆ.
  • ಕೈಗಂಟೆ – ಘನವಾದ ಹಿತ್ತಾಳೆಯ ತಟ್ಟೆಯಿಂದ ಗಂಟೆಯನ್ನು ಮಾಡಲಾಗುತ್ತದೆ. ಇದನ್ನು ನುಡಿಸಲು ಮರದ ಹಿಡಿಯನ್ನು ನೀಡಲಾಗಿರುತ್ತದೆ.
  • ಘಂಟ್ – ಇದು ತುಂಬಾ ದೊಡ್ಡದಾಗಿದೆ, ಕನಿಷ್ಠ 5 ಅಡಿ ಉದ್ದ ಮತ್ತು ಅಗಲವಿದೆ. ಇದರ ಧ್ವನಿ ದೃದ ವರೆಗೆ ಕೇಳುತ್ತದೆ.

ಸಾಮಾನ್ಯವಾಗಿ ಗಂಟೆಗಳನ್ನು ಮಿಶ್ರ ಲೋಹಗಳಿಂದ ಅಂದರೆ ಕ್ಯಾಡ್ಮಿಯಂ, ಸತು, ತಾಮ್ರ, ಸೀಸ, ನಿಕ್ಕೆಲ್, ಮ್ಯಾಂಗನೀಸ್ ಮತ್ತು ಕ್ರೋಮಿಯಂನಿಂದ ತಯಾರಿಸಲಾಗುತ್ತದೆ. ಅತಿ ಹೆಚ್ಚಿನ ಕಂಪನ ಪಡೆಯಲು ಒಂದು ನಿಖರವಾದ ಅಳತೆಯಲ್ಲಿ ಹಲವು ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. ಪರಿಣಾಮವಾಗಿ ಗಂಟಾನಾದ ಹೆಚ್ಚು ಹೊತ್ತಿನವರೆಗೆ ಹಾಗೂ ಹೆಚ್ಚು ದೂರ ದವರೆಗೆ ಕೇಳಿಸಲು ಸಾಧ್ಯವಾಗುತ್ತದೆ.

”ಸ್ಕಂದ ಪುರಾಣದ ಪ್ರಕಾರ, ಗಂಟೆ ಬಾರಿಸಿದಾಗ ಹೊರಬರುವ ಶಬ್ದವು ”ಓಂಕಾರ” ಶಬ್ದಕ್ಕೆ ಹೋಲುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಗಂಟೆ ಬಾರಿಸಿದಾಗ ಅದರಿಂದ ಹೊರ ಬರುವ ಸದ್ದು ಓಂಕಾರಕ್ಕೆ ಸಮನಾಗಿರುತ್ತದೆ. ಮತ್ತು ಓಂಕಾರ ಉಚ್ಛಾರಣೆಯ ಪುಣ್ಯವೇ ಪ್ರಾಪ್ತಿಯಾಗಲಿದೆ ಎನ್ನುವುದು ನಂಬಿಕೆ. ಪುರಾಣಗಳ ಪ್ರಕಾರ ಘಂಟೆಯ ನಾಲಿಗೆಯಲ್ಲಿ ಸರಸ್ವತಿ, ಶಿವನು ಉದರ ಭಾಗದಲ್ಲಿ, ಮುಖದಲ್ಲಿ ಬ್ರಹ್ಮ, ಕೊನೆಯ ಭಾಗದಲ್ಲಿ ವಾಸುಕಿ ಹಾಗೆಯೇ ಮೇಲಿರುವ ಹಿಡಿಭಾಗದಲ್ಲಿ ಪ್ರಾಣಶಕ್ತಿ ಇರುತ್ತದೆ.” ಎಂದು ಹೇಳುತ್ತಾರೆ ಮಂಗಳೂರಿನ ಪ್ರಸಿದ್ಧ ದೇವಾಲಯದ ಅರ್ಚಕರು.

”ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂಜೆಯ ಸಮಯದಲ್ಲಿ ಗಂಟೆ ಬಾರಿಸಿದಾಗ, ದೇವರ ಎದುರು ನಿಂತಿರುವ ವ್ಯಕ್ತಿಯ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಮೊಳಗಿಸುವಿಕೆಯು ಪರಿಸರವನ್ನು ಶುದ್ಧೀ ಕರಿಸುತ್ತದೆ. ಘಂಟೆಯ ನಾದವು ಮನಸ್ಸು ಪ್ರಶಾಂತಗೊಂಡು ಆರಾಧಕರ ಮತ್ತು ಭಕ್ತರ ಮನಸ್ಸಿನಲ್ಲಿ ದೇವರಲ್ಲಿ ಭಕ್ತಿ, ಉತ್ಸಾಹ, ಏಕಾಗ್ರತೆ ಮತ್ತು ಆಂತರಿಕ ಶಾಂತಿ ಮತ್ತು ನಿರ್ಮಲ ಮನಸ್ಸನ್ನು ಪ್ರೇರೇಪಿಸುತ್ತದೆ,” ಎಂದು ಅವರು ಹೇಳಿದರು.

ಗಂಟೆಯನ್ನು ಎಷ್ಟು ಸಲ ಬಾರಿಸಬೇಕು?:

ಹಿಂದೂ ದೇವಾಲಯಗಳಲ್ಲಿ ಎಷ್ಟು ಬಾರಿ ಗಂಟೆ ಬಾರಿಸಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ನಿಯಮವಿಲ್ಲ. ಇದು ಸಾಮಾನ್ಯವಾಗಿ ವೈಯಕ್ತಿಕ ಆಯ್ಕೆಯಾಗಿದೆ ಅಥವಾ ಸ್ಥಳೀಯ ಪದ್ಧತಿಗಳ ಆಧಾರದ ಮೇಲೆ ಬದಲಾಗಬಹುದು ಎನ್ನುತ್ತಾರೆ ಮಂಗಳೂರಿನ ಪುರೋಹಿತರಾದ ಮಹಾಲಿಂಗೇಶ್ವರ ಭಟ್. ”ಗಂಟೆಯನ್ನು ಒಂದು, ಎರಡು ಅಥವಾ ಮೂರು ಬಾರಿ ಮಾತ್ರ ಬಾರಿಸಿದರೆ ಒಳ್ಳೆಯದು. ದೇವಸ್ಥಾನದ ದರ್ಶನ ಮುಗಿಸಿ ಹೊರ ಹೋಗುವಾಗ ಮಾತ್ರ ಗಂಟೆಯನ್ನು ಬಾರಿಸಬಾರದು. ದೇವಸ್ಥಾನವನ್ನು ಪ್ರವೇಶಿಸುವ ಸಮಯದಲ್ಲಿ ಮತ್ತು ಆರತಿಯ ಸಮಯದಲ್ಲಿ ಗಂಟೆಯನ್ನು ಬಾರಿಸಬೇಕು. ಸ್ಥಳೀಯ ಪದ್ಧತಿಗಳ ಆಧಾರದ ಮೇಲೆ ಇದು ಬದಲಾಗಬಹುದು. ಗಂಟೆ ಬಾರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಮನಸ್ಸನ್ನು ಕೇಂದ್ರೀಕರಿಸಲು, ಸಾಮರಸ್ಯ ಮತ್ತು ಶಾಂತಿಯ ಭಾವವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ,” ಎಂದು ಅವರು ಹೇಳಿದರು.