Kasturba Gandhi Death Anniversary | ಕಸ್ತೂರ್ಬಾ ಗಾಂಧಿ ಪುಣ್ಯಸ್ಮರಣೆ: ನೀವು ತಿಳಿದಿರಬೇಕಾದ ಕೆಲವು ಅಂಶಗಳು
Kasturba Gandhi Death Anniversary: ಕಸ್ತೂರ್ಬಾ ಗಾಂಧಿ ಸಹಕಾರದ ಹೊರತಾಗಿ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮ ಆಗುತ್ತಿರಲಿಲ್ಲ ಎಂದು ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹಿಂದೊಮ್ಮೆ ಹೇಳಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿದ್ದುಕೊಂಡು ಮಹಾತ್ಮ ಎಂಬ ನೆಗಳ್ತೆಗೆ ಪಾತ್ರರಾದವರು ಮೋಹನದಾಸ ಕರಮಚಂದ ಗಾಂಧಿ ಅಥವಾ ಮಹಾತ್ಮಾ ಗಾಂಧೀಜಿ. ಗಾಂಧಿಯನ್ನು ದೇಶವು ಮಹಾತ್ಮ ಎಂದು ಗುರುತಿಸುವ ಜನರು, ಅವರ ಜತೆಯಾಗಿ ನಡೆದ ಪತ್ನಿಯ ಬಗ್ಗೆ ಮಾತನಾಡುವುದು ಕಡಿಮೆ. ಹೆಸರಾಂತ ಗಾದೆ ಮಾತಿನಂತೆ ’ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ’. ಹಾಗೆ ನೋಡಿದರೆ, ಮಹಾತ್ಮ ಗಾಂಧಿಯ ಸ್ವಾತಂತ್ರ್ಯ ಹೋರಾಟದ ಹಿಂದೆ ಕಸ್ತೂರ್ಬಾ ಗಾಂಧಿ ಅವರ ಬೆಂಬಲವಿದೆ. ಶ್ರಮವಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕೂಡ ಮಾತನಾಡಿದ್ದರು. ಕಸ್ತೂರ್ಬಾ ಗಾಂಧಿ ಸಹಕಾರದ ಹೊರತಾಗಿ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮ ಆಗುತ್ತಿರಲಿಲ್ಲ ಎಂದಿದ್ದರು.
ಮಹಾತ್ಮ ಗಾಂಧಿ ಪತ್ನಿ ಕಸ್ತೂರ್ಬಾ ಗಾಂಧಿ ಬಗ್ಗೆ ಕೆಲವು ವಿಶೇಷ ಅಂಶಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ: ಕಸ್ತೂರ್ಬಾ ಗಾಂಧಿ ಗೋಕುಲ್ದಾಸ್ ಕಪಾಡಿಯಾ ಹಾಗೂ ವ್ರಜ್ಕುನ್ವೇರ್ಬಾ ಕಪಾಡಿಯಾ ದಂಪತಿಗೆ ಏಪ್ರಿಲ್ 11, 1869ರಲ್ಲಿ ಜನಿಸಿದರು. ಮೋಹನದಾಸ ಕರಮಚಂದ ಗಾಂಧಿಯನ್ನು ಕಸ್ತೂರ್ಬಾ 14 ವರ್ಷದವರಾಗಿದ್ದಾಗಲೇ ವರಿಸಿದರು.
ಕಸ್ತೂರ್ಬಾ ಶಾಲಾ ಶಿಕ್ಷಣವನ್ನು ಪಡೆದಿರಲಿಲ್ಲ. ಆದರೆ, ಗಾಂಧಿ ಅವರನ್ನು ಮದುವೆಯಾದ ಬಳಿಕ, ಗಾಂಧಿ ಕಸ್ತೂರ್ಬಾ ಅವರಿಗೆ ಓದು ಮತ್ತು ಬರಹವನ್ನು ಕಲಿಸಿದರು.
ಮೋಹನದಾಸ ಕರಮಚಂದ ಗಾಂಧಿ ಇಂಗ್ಲೆಂಡ್ನಲ್ಲಿ ಕಾನೂನು ಶಿಕ್ಷಣ ಪಡೆದು ಬದುಕು ಸಾಗಿಸುವ ಸಲುವಾಗಿ, ಕಸ್ತೂರ್ಬಾ ಗಾಂಧಿ ತಮ್ಮ ಒಡವೆಯನ್ನು ಮಾರಿದ್ದರಂತೆ. ಈ ಕುರಿತು ಗೋಪಾಲಕೃಷ್ಣ ಗಾಂಧಿ ಮಾಹಿತಿ ನೀಡಿದ್ದರು.
ಮೋಹನದಾಸ ಕರಮಚಂದ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ನಡೆಸುತ್ತಿರುವಾಗ, ಕಸ್ತೂರ್ಬಾ ಕೂಡ ಅವರ ಜತೆಯಾಗಿದ್ದರು. ಅಷ್ಟೇ ಅಲ್ಲದೆ ಭಾರತೀಯರಿಗೆ ಆಫ್ರಿಕಾದಲ್ಲಿ ತಾರತಮ್ಯ ನೀತಿ ತೋರುತ್ತಿದ್ದುದನ್ನು ಕಸ್ತೂರ್ಬಾ ಕೂಡ ವಿರೋಧಿಸಿದ್ದರು. ಅದರಿಂದಾಗಿ ಕಸ್ತೂರ್ಬಾ ಸೆರೆವಾಸವನ್ನು ಅನುಭವಿಸಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾಗ ಅಶಿಕ್ಷಿತ ಜತೆಗಾರರಿಗೆ ಶಿಕ್ಷಣ ನೀಡಲು ಕಸ್ತೂರ್ಬಾ ಶ್ರಮಿಸಿದ್ದರು. ಇತರ ಶಿಕ್ಷಿತರೂ ಶಿಕ್ಷಣ ಇಲ್ಲದವರಿಗೆ ಓದು ಬರಹ ಕಲಿಸಬೇಕು ಎಂದು ಅವರು ಪ್ರೋತ್ಸಾಹಿಸುತ್ತಿದ್ದರು.
ಬಳಿಕ, ಜನವರಿ 9, 1915ರಂದು ಕಸ್ತೂರ್ಬಾ ಮೋಹನದಾಸ ಕರಮಚಂದ ಗಾಂಧಿ ಜತೆಗೆ ಭಾರತಕ್ಕೆ ಹಿಂತಿರುಗಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ದೇಶಾದ್ಯಂತ ಹಲವು ಆಂದೋಲನದಲ್ಲಿ ಅವರು ಪಾಲ್ಗೊಂಡರು. ಗಾಂಧೀಜಿ ಸೆರೆವಾಸ ಅನುಭವಿಸುತ್ತಿದ್ದಾಗ, ಕಸ್ತೂರ್ಬಾ ಅವರೇ ಮುಂಚೂಣಿಯ ಹೋರಾಟ ನಡೆಸಿದರು. ಇದರಿಂದಾಗಿ, ಕಸ್ತೂರ್ಬಾ ಕೂಡ ಸೆರೆವಾಸ ಅನುಭವಿಸುವಂತಾಗಿತ್ತು.
ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ರೈತ ಸಮುದಾಯದ ಪರವಾಗಿ ಹೋರಾಟ ಕೈಗೊಂಡಿದ್ದಾಗ, ಕಸ್ತೂರ್ಬಾ ರೈತ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ತಿಳಿಹೇಳುತ್ತಿದ್ದರು.
ಕಸ್ತೂರ್ಬಾ ಆಶ್ರಮದಲ್ಲಿ ಬಹುಸಮಯವನ್ನು ಕಳೆಯುತ್ತಿದ್ದರು. ಅಲ್ಲಿಯೇ ಅವರನ್ನು ಜನರು ‘ಬಾ’ ಅಂದರೆ, ‘ಅಮ್ಮ’ ಅಥವಾ ಕಸ್ತೂರ್ಬಾ ಎಂದು ಕರೆಯಲು ಶುರುಮಾಡಿದರು.
ಜನವರಿ 1944ರಲ್ಲಿ ಕ್ತಸೂರ್ಬಾ ಅವರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು. ಅದರಿಂದಾಗಿ ಕಸ್ತೂರ್ಬಾ ಹಾಸಿಗೆಯಲ್ಲೇ ದಿನ ಕಳೆಯುವಂತಾಗಿತ್ತು. ಮೊದಲು ಆರೋಗ್ಯ ಸುಧಾರಣೆ ಕಂಡರೂ ಬಳಿಕ ಆರೋಗ್ಯ ತೀರಾ ಹದಗೆಟ್ಟಿತು. 1944, ಫೆಬ್ರವರಿ 22ರಂದು ಬೆಳಗ್ಗೆ 7.35ಕ್ಕೆ ಪುಣೆಯಲ್ಲಿ ಕಸ್ತೂರ್ಬಾ ಕೊನೆಯುಸಿರೆಳೆದರು.
ಇದನ್ನೂ ಓದಿ: ಭಾರತದ ಮೇಲಿನ ಪ್ರೀತಿಗೆ ಮಹಾತ್ಮ ಗಾಂಧೀಜಿಯವರೇ ಮೂಲ ಕಾರಣ: ಒಬಾಮ
ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!
Published On - 12:45 pm, Mon, 22 February 21