ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಎಲ್ಲಿ ಅರಿವಿಗೆ ಇರದೊ ಬೇಲಿ ಸ್ವರ್ಗವನು ಅದರೆದುರು ಹೂಳಿ
‘ಆಗ ಯೂಪಿಎಸ್ ಇಲ್ಲದ ಬಾಲ್ಯಕಾಲ. ಕರೆಂಟ್ ಹೋದ ತಕ್ಷಣ ನಾನು ನನ್ನ ಅಮ್ಮ ಸಂಗೀತ ಕಛೇರಿ ಶುರುಮಾಡುತ್ತಿದ್ದೆವು. ಆಗ ಅಮ್ಮ ಕೇಳುತ್ತಿದ್ದ ಹಾಡುಗಳಲ್ಲಿ ‘ಹೇಳದಿದ್ದರೂ ನೀನು’ ಮೊದಲನೆಯದ್ದು. ದೀಪದ ಬೆಳಕಿನಲ್ಲಿ ಗೋಡೆಗಳ ಮೇಲೆ ನಮ್ಮ ನಮ್ಮ ನೆರಳುಗಳನ್ನು ನೋಡುತ್ತ, ಕೈಯ್ಯಾಡಿಸುತ್ತ ಈ ಭಾವಗೀತೆಯನ್ನು ಹಾಡುತ್ತಿದ್ದೆ. ಈಗಲೂ ಇದು ಹೃದಯಕ್ಕೆ ಬಹಳ ಹತ್ತಿರವಾದ ಹಾಡು.‘ ಸುಪ್ರಿಯಾ ರಘುನಂದನ್
ಕನ್ನಡ ಸುಗಮ ಸಂಗೀತ ಪರಿಚಯವಾಗಿದ್ದೇ ನನಗೆ ಲಕ್ಷ್ಮೀನಾರಾಯಣ ಭಟ್ಟರ ‘ಎಲ್ಲಿ ಜಾರಿತೋ ಮನವು’ ಭಾವಗೀತೆಯಿಂದ. ನನ್ನ ತಂದೆಗೆ ಆಗ ಹಿಂದೂಸ್ತಾನಿ ಜೊತೆಗೆ ಸುಗಮ ಸಂಗೀತ ಬಹಳ ಅಚ್ಚುಮೆಚ್ಚು. ಭಟ್ಟರ ಭಾವಗೀತೆಗಳ ಕ್ಯಾಸೆಟ್ಗಳನ್ನು ಬಹಳ ಕೇಳುತ್ತಿದ್ದರು. ನಾನು ಶಾಲಾದಿನಗಳಲ್ಲಿ ‘ಎಲ್ಲಿ ಜಾರಿತೋ’ ಹಾಡಿ ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡಿದ್ದೆ. ಹೀಗೆ ಪ್ರತೀದಿನ ಇವರ ಭಾವಗೀತೆಗಳನ್ನು ಕೇಳುವುದು ಹಾಡುವುದು ಕಲಿಯುವುದು ಕಲಿಸುವುದು ಈ ನಿರಂತರ ಯಾನದಲ್ಲಿ ಮನಸ್ಸಿಗೆ ಹತ್ತಿರವಾಗುತ್ತ ಬಂದರು. ಅವರ ಒಂದೊಂದು ಸಾಲಂತೂ ಇಡೀ ದಿನ ಗುಂಗು ಹಿಡಿಸಿ ಕಾಡಿಸಿಬಿಡುತ್ತವೆ. -ಸುಪ್ರಿಯಾ ರಘುನಂದನ್, ಗಾಯಕಿ
ಹಿನ್ನೆಲೆ ಗಾಯಕಿ, ಸುಗಮ ಸಂಗೀತ ಕಲಾವಿದೆ ಸುಪ್ರಿಯಾ ರಘುನಂದನ್ ಅವರಿಗೆ ಭಟ್ಟರ ಈ ಎರಡು ಕವನಗಳು ಯಾಕೆ ಆಪ್ತ ಎಂಬುದನ್ನು ಓದಿ ಅವರ ಮಾತುಗಳಲ್ಲೇ.
ಹೇಳದಿದ್ದರೂ ನೀನು
ಹೇಳದಿದ್ದರೂ ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ
ನೂರು ಹಳೆ ನೆನಪುಗಳು ಚೀರಿ ಚಿಮ್ಮುತ್ತಲಿವೆ ಮರೆವೆಯಲಿ ಹುಗಿದರೂ ಮೇಲಕ್ಕೆದ್ದು ನಮ್ಮ ಮೇಲೆ ಏಕೆ ವಿಧಿಗೆ ಈ ಬಗೆ ಜಿದ್ದು ಬೆಂದವರ ಬೆನ್ನಿಗೇ ಗುದ್ದು?
ಬಾಗುವುದು ಏಗುವುದು ಸಹನೆಯಲಿ ಸಾಗುವುದು ಇಷ್ಟಕೇ ಮುಗಿಯಿತೆ ನಮ್ಮ ಬಾಳು ಕಾಣಬಾರದ್ದೆಲ್ಲ ಕಂಡರೂ ಕಹಿಬೇಡ ಕನಸಿನಲಿ ಹುಗಿಯೋಣ ನಮ್ಮ ಗೋಳು
ಆಗ ಯೂಪಿಎಸ್ ಇಲ್ಲದ ಬಾಲ್ಯಕಾಲ. ಕರೆಂಟ್ ಹೋದ ತಕ್ಷಣ ನಾನು ನನ್ನ ಅಮ್ಮ ಸಂಗೀತ ಕಛೇರಿ ಶುರುಮಾಡುತ್ತಿದ್ದೆವು. ಆಗ ಅಮ್ಮ ಕೇಳುತ್ತಿದ್ದ ಹಾಡುಗಳಲ್ಲಿ ‘ಹೇಳದಿದ್ದರೂ ನೀನು’ ಮೊದಲನೆಯದ್ದು. ದೀಪದ ಬೆಳಕಿನಲ್ಲಿ ಗೋಡೆಗಳ ಮೇಲೆ ನಮ್ಮ ನಮ್ಮ ನೆರಳುಗಳನ್ನು ನೋಡುತ್ತ, ಕೈಯ್ಯಾಡಿಸುತ್ತ ಈ ಭಾವಗೀತೆಯನ್ನು ಹಾಡುತ್ತಿದ್ದೆ. ಈಗಲೂ ಇದು ಹೃದಯಕ್ಕೆ ಬಹಳ ಹತ್ತಿರವಾದ ಹಾಡು. ಹಾಗೇ ಇನ್ನೊಂದು;
ಎಲ್ಲಿ ಅರಿವಿಗೆ ಇರದೊ ಬೇಲಿ
ಎಲ್ಲಿ ಅರಿವಿಗೆ ಇರದೊ ಬೇಲಿ ಎಲ್ಲಿ ಇರದೋ ಭಯದ ದಾಳಿ ಅಂಥ ನೆಲ ಇದೆಯೇನು ಹೇಳಿ? ಸ್ವರ್ಗವನು ಅದರೆದುರು ಹೂಳಿ
ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಬೀಸುವುದೋ ನೆಮ್ಮದಿಯ ಗಾಳಿ-ಎಲ್ಲಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ
ಕಣ್ಣೋ ಹಿಗ್ಗಿನಾ ಗೂಡು ಮಣ್ಣೋ ಸುಗ್ಗಿಯಾ ಬೀಡು ದುಡಿವುವೋ ಎಲ್ಲ ಕೈ ಎಲ್ಲಿ ಬಿಡುಗಡೆಯು ಹಾಡುತಿದೆ ಅಲ್ಲಿ
ಪ್ರೀತಿ ನೀತಿಯ ಸೂತ್ರವಾಗಿ ನೀತಿ ಮಾತಿನ ಪಾತ್ರವಾಗಿ ಅರಳೀತು ಎಲ್ಲಿ ಎದೆಹೂವು ಅಂಥ ನೆಲವಾಗಲೀ ನಾಡು
ನಿಜವಾದ ಸ್ವಾತಂತ್ರ್ಯ ಅನ್ನುವುದು ಏನು ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ ಈ ಕವಿತೆಯಲ್ಲಿ. ಇದಕ್ಕೆ ಮೈಸೂರು ಅನಂತಸ್ವಾಮಿಯವರು ಸ್ವರಸಂಯೋಜನೆ ಮಾಡಿದ್ದಾರೆ. ಮೊದಲ ಸಲ ಇದನ್ನು ಕೇಳಿದಾಗ ಬಹಳ ಭಾವುಕಳಾಗಿದ್ದೆ. ನಮ್ಮದೇ ಆದ ಚಿಕ್ಕಪ್ರಪಂಚದಲ್ಲಿ ಹೇಗೋ ಇದ್ದುಬಿಡುತ್ತೇವೆ. ಹೊರಗೆ ಎಷ್ಟೋ ಜನರ ವೇದನೆ, ನರಳಾಟವನ್ನು ನಾವು ಕೇಳಿಸಿಕೊಳ್ಳಲೂ ಮನಸ್ಸು ಮಾಡದೆ ನಿರ್ಲಕ್ಷಿಸಿಬಿಡುತ್ತೇವಲ್ಲ? ಎಂದನ್ನಿಸಿತು. ಹೀಗೆ ಒಂದೊಂದು ಸಾಲುಗಳು ಕಣ್ಮುಂದೆ ಹಾಡುಹೋಗುತ್ತಲೇ ಇರುತ್ತವೆ. ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತವೆ. ಇವರ ಸಾಹಿತ್ಯ ನನ್ನ ಬದುಕಿನಲ್ಲಿ ಪ್ರಭಾವ ಬೀರಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಇದನ್ನೂ ಓದಿ : ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಅವರ ಊರ್ವಶಿಯನ್ನು ರಂಗದ ಮೇಲೆ ತರುವುದೇ ನಾನು ಸಲ್ಲಿಸುವ ಶ್ರದ್ಧಾಂಜಲಿ