Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ

|

Updated on: Feb 09, 2021 | 7:07 PM

Identity: ‘ಒಂದೇ ಒಂದು ಕ್ಷಣ; ವಿಕ್ಷಿಪ್ತ ಬುದ್ದಿಯ ಮಾತು ಕೇಳಿ ಪ್ರಕೃತಿಯ ವಿರುದ್ಧ ನಡೆಯಲು ಹೋಗಿ ಜರ್ಜರಿತವಾದ ಕತ್ತು. ಪರಿಣಾಮವಾಗಿ ಅನುಭವಿಸಿದ ಅವಮಾನ. ಮೂಲೆಯಲ್ಲಿಟ್ಟಿದ್ದ ನಾಗರ ಬೆತ್ತಕ್ಕೆ ಆಗೆಲ್ಲಾ ಎಲ್ಲಿಲ್ಲದ ಚಟುವಟಿಕೆ, ಉತ್ಸಾಹ. ಅಡುಗೆ ಮನೆಯ ಅರಿಷಿಣ ಅಡುಗೆಗಿಂತಲೂ ಗಾಯಕ್ಕೆ ತುಂಬಲು ಬಳಕೆ ಆಗಿದ್ದೇ ಹೆಚ್ಚು. ಘಾತ; ಬದುಕು ಜಂಝಾವಾತ. ಈ ಎಲ್ಲದರ ನಡುವೆಯೂ ಒಳಧ್ವನಿಯ ಸದ್ದು ಹೊರಗಿನೆಲ್ಲ ಜಂಜಡಗಳನ್ನೂ ಮೀರಿ ಕೇಳುತ್ತಿತ್ತು.' ನಂದಿನಿ ಹೆದ್ದುರ್ಗ

Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ
ರೈತಮಹಿಳೆ, ಕವಿ, ನಂದಿನಿ ಹೆದ್ದುರ್ಗ
Follow us on
ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬಿದ್ದಲ್ಲೆ ಮೊಳೆಯುತ್ತ ಬೆಳೆಯುತ್ತ ಚಿಗುರನು ಚಾಚಿಕೊಳ್ಳುತ್ತ ಸಾಗುವ ನಂದಿನಿ ಹೆದ್ದುರ್ಗ ಅವರದು ಹೇಳಿಕೇಳಿ ಮಣ್ಣಮಾರ್ಗ! ಅದಕ್ಕೆ ಕಾವ್ಯಮಾರ್ಗವೂ ಸೇರಿದರೆ ಹೇಗಿದ್ದೀತು?

ಮಗ‌ ತಿಳಿವಳಿಕೆ ಬರುವ ಮೊದಲೇ ಮಡಿಲು ಸೇರಿಯಾಗಿತ್ತು. ಹದಿನೇಳಕ್ಕೆ ಬೆಳದಿಂಗಳಿನಂತ ಗಂಡು ಮಗುವಿಗೆ ತಾಯಾಗುವ ಯೋಗ. ಹೆರಿಗೆಯ ಕೊನೆಯ ಕ್ಷಣದಲ್ಲಿ ನನ್ನ ಕೂಗಾಟ ಮುಗಿಲು ಮುಟ್ಟಿದಾಗ ಆ ತಾಯೆದೆಯ ಡಾಕ್ಟರು ಹೇಳಿದ್ದು ಇನ್ನೂ ನೆನಪಿದೆ. ‘ನಿನ್ನಷ್ಟೇ ಸುಂದರವಾದ ಎತ್ತರದ ದಪ್ಪದ ಕೂಸು ಇದು, ಕಷ್ಟ ಆಗ್ತದೆ.’

ಡಾಕ್ಟರಿಕೆ ಎನ್ನುವುದು ಸುಮ್ಮನೇ ಅಲ್ಲ; ಹೆರಿಗೆಯ ನೋವಿನ ನನ್ನ ಅಸಹನೆ ತಟ್ಟಿದ್ದು ಡಾಕ್ಟರ್ ಮೇಲೆ. ಮೂರುವರೆ ಕೆಜಿಯ ಹಸುಗೂಸನ್ನು ತೊಟ್ಟಿಲಲ್ಲಿ ನೋಡಿದವರೆಲ್ಲರೂ ಅಚ್ಚರಿ ಪಟ್ಟರು. ಆ ತಾಯ್ತನವನ್ನು ನಾನು ಸಂಭ್ರಮಿಸಿದೆನಾ? ಗೊತ್ತಿಲ್ಲ.

ಅದು… ‘ನನ್ನ ಹಾಲುಗೆನ್ನೆಗಳೇ ಬತ್ತಿಲ್ಲದ ಹೊತ್ತು’ ಆದರೆ ಹೀಗೆನ್ನುವುದು ಸರಿಯಾಗಲಾರದು. ಪುಟಾಣಿ ಕಂದ ದೊಡ್ಡಮನೆಯ ಅಂಗುಲಂಗುಲದಲ್ಲೂ ಅಂಬೆಗಾಲಿಟ್ಟ. ತೊಟ್ಟಿಮನೆಯ ಕಟ್ಟೆಯೊಳಗೆ ನೂರುಬಾರಿ ಬಿದ್ದು ಎದ್ದು ಹೆದರಿದಾಗ ನನ್ನ ತಾಯ್ತನ ಹೊಮ್ಮಿ ಹರಿದಿತ್ತಲ್ಲವೇ? ಆಸರೆಯಾಗಬೇಕಾದವನ ಅಸಹನೆ, ಮುಗಿಯದ ಸಿಡುಕು, ಹಿರಿಯರ ಕೊಂಕು, ದಂಡಿದಂಡಿ ಬದುಕು. ಇದಿಷ್ಟೇ ತಾನೇ ನನಗಿದ್ದಿದ್ದು? ಐದಕ್ಕೆದ್ದರೂ  ಸಾಕಾಗುತ್ತಿರಲಿಲ್ಲ. ಅದೇನು ಕೆಲಸವೋ ಏನೋ. ಈಗ ಯೋಚಿಸಿದರೆ ಹೌದೇ, ನಿಜವೇ ಎನಿಸುತ್ತದೆ. ಆಗೆಲ್ಲಾ ಹೊರಗೊಂದು ಲೋಕವಿದ್ದುದರ ಕುರಿತು ಗಮನವೇ ಇರಲಿಲ್ಲ. ಇದ್ದರೂ ಮದುವೆ ನಾಮಕರಣ ಗೃಹಪ್ರವೇಶಕ್ಕೆ ಮುಗಿದು ಹೋಗುತ್ತಿತ್ತು. ಉಳಿದದ್ದು ನಮ್ಮದಲ್ಲ ಎನ್ನುವ ಪರಿಸರ. ಹಾಗೆ ಅನಿಸಲು ಶುರುವಾಗಿಯೇ ಆಳದಾಳದ ಕೊನೆಯಿಂದ ಸಣ್ಣದೊಂದು ಧ್ವನಿ ಹೊರಟಿದ್ದು; ಇದು ನಾನಲ್ಲ ಇನ್ನೇನೋ ಆಗುವುದಿದೆ, ಆಗಬೇಕಿದೆ.’

ಹೌದು, ಯಾಕಷ್ಟು ಬೇಗ ಮದುವೆಯಾದೆ ಎಂದರೆ ಈಗ ಉತ್ತರವಾಗಿ ನಗಬಹುದಷ್ಟೇ. ಹದಿನಾರಕ್ಕೆ ಹುಡುಗ ನೋಡಲು ಬರುತ್ತಾನೆ ಎಂದಾಗ ಏನಾದರೂ ಅನಿಸಿತ್ತಾ? ನೆನಪಿಸಿಕೊಂಡಾಗೆಲ್ಲಾ ನೆನಪಿಗೆ ಸೋಲು ಖಚಿತ. ಆದರೆ ಅಮ್ಮ ಹೇಳುತ್ತಿದ್ದ, ಎರಡನೆಯದೂ ಗಂಡಾಗಿದ್ದರೆ; ನನ್ನ ಬರುವಿಕೆಯೇ ಬೇಡವಿತ್ತು ಎನ್ನುವ ಮಾತನ್ನು ಮನೆಯಲ್ಲಿ ಪದೇಪದೆ ಕೇಳಿದಾಗೆಲ್ಲಾ ಬದುಕಿ ತೋರಿಸಬೇಕು ಎನ್ನುವ ಬಾಲಿಶ ಛಲ ಹುಟ್ಟುತ್ತಿತ್ತು.

ಚಿಕ್ಕಂದಿನಿಂದಲೂ ಮದುವೆ ಎಂದರೆ ಒಂದೇ ಕನಸಿದ್ದಿದ್ದು. ನನ್ನ ಗಂಡ ನನಗಿಂತ ಎತ್ತರವಿರಬೇಕು! ನನಗದೇನೋ ಈಗಲೂ ಎತ್ತರದ ವ್ಯಾಮೋಹ. ಜೊತೆಗೆ ನನ್ನ ಗಂಡನನ್ನು ನಾನು ಹನೀ ಅಂತ ಕರೆಯಬೇಕು. ನಿಜ್ಜಾ… ‘ಹನೀಈಈ!’ ನನ್ನ ಚಿಕ್ಕಮ್ಮ ಹಾಗೇ ಕರೆಯುತ್ತಿದ್ದರು. ಎಷ್ಟು ಮುದ್ದಾದ ಪುಟಾಣಿ ಆಸೆ ಇದು. ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ ಮಹತ್ತರವಾದ ಯಾವುದೇ ಗುರಿಯೂ ಇರಲಿಲ್ಲ. ಆದರೆ ಓದಿನಲ್ಲಿ ಆಲಸ್ಯ ತೋರಿದ್ದು ನೆನಪೇ ಇಲ್ಲ. ಯಾವತ್ತಿಗೂ ಒಳ್ಳೆಯ ಅಂಕಗಳು. ಕಬ್ಬಿಣದ ಕಡಲೆಯ ಗಣಿತವನ್ನೂ ರೊಚ್ಚಿನಿಂದ ಕಲಿತು ಹತ್ತರಲ್ಲಿ ಡಿಸ್ಟಿಂಕ್ಷನ್ನು. ಫರ್ಸ್ಟ್​ ಕ್ಲಾಸ್​ನಲ್ಲಿ ಪಾಸಾದವರೆಲ್ಲರೂ ವಿಜ್ಞಾನವನ್ನೇ ಓದಬೇಕು ಎಂಬ ಅಲಿಖಿತ ನಿಯಮವಿತ್ತು ಎನ್ನುವಂತೆ ಮೈಸೂರಿನಲ್ಲಿ ವಿಜ್ಞಾನ ವಿಭಾಗ ಆರಿಸಿ ಕಾಲೇಜು ಕಲಿಯಲು ಕಳಿಸಿದರು. ಅಲ್ಲೂ ಫರ್ಸ್ಟ್ ಕ್ಲಾಸ್. ಆದರೆ ಅದಾದ ಮೇಲೆ?  ನಿರ್ಧಾರ ತೆಗೆದುಕೊಳ್ಳುವುದೇ ಮುಖ್ಯ ಪರೀಕ್ಷೆ. ಅದರಲ್ಲಿ ಪಾಸಾಗುವುದು, ರ್ಯಾಂಕು ಬರುವುದು ಬದುಕಿಗೆ ಅನಿವಾರ್ಯ.

ಆದರೆ ಅಷ್ಟು ಸಣ್ಣ ವಯಸ್ಸಿಗೆ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗುವುದಾದರೂ ಹೇಗೆ? ಮೂರನೇ ವರ್ಷಕ್ಕೇ ಅಣ್ಣನ ಜೊತೆಗೆ ಒಂದನೇ ತರಗತಿಗೆ ಶಾಲೆಗೆ ಹೋಗಲು ಆರಂಭಿಸಿದವಳಿಗೆ ಹದಿಮೂರಕ್ಕೆ ಹತ್ತನೆಯ ತರಗತಿ ಮುಗಿದು ಹದಿನೈದಕ್ಕೆ ಪಿಯುಸಿ ಮುಗಿಸಿ ಹದಿನಾರಕ್ಕೆ ಬಿಎಸ್ಸಿ ಪದವಿಗೆ ಸೇರಿಯಾಗಿತ್ತು. ಈಗ ಯೋಚಿಸಿದರೆ ನಗು ಬರುತ್ತದೆ. ಆದರೆ ಈಗಿನ ಈ‌ ನಗುವಿಗೆ ಬೆಳಕಿದೆ. ಚಂದ ಇದ್ದೀಯಾ ಎಂಬ ಹೊಗಳಿಕೆ ನನ್ನ ಕಂಗಳಿಗೆ ಇನ್ನಷ್ಟು ಹೊಳಪು ತುಂಬುತ್ತದೆ.

ಆದರೆ… ಆಗ? ಆಗ ನನ್ನದೇ ಈ ಶರೀರದ ಬಗ್ಗೆ ನನಗೆ ಇನ್ನಿಲ್ಲದ ಕೀಳರಿಮೆ. ಶಾಲೆಯ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಾನು ಹಿಂದೆ ಹಿಂದೆ. ಕಾರಣ ನಾನು ಡುಮ್ಮಿ, ಹಲ್ಲುಬ್ಬಿ. ನಾನು ಒಂಚೂರೂ ಚಂದವಿಲ್ಲ ಎನ್ನುವುದು ನನ್ನದೇ ಪರಿಸರ ತುಂಬಿಕೊಟ್ಟ ಕೀಳರಿಮೆ. ಬದುಕಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತ್ಮವಿಶ್ವಾಸ ಆಯ್ಕೆಗೆ ಪ್ರೋತ್ಸಾಹಿಸುತ್ತದೆ. ಕೀಳರಿಮೆ ಗೋಣು ತಗ್ಗಿಸಿ ಒಪ್ಪಿಕೊಳ್ಳುತ್ತದೆ. ಹೋಗಲಿ ಅದನ್ನು ಅಲ್ಲಿಗೇ ಬಿಡುವುದು ಒಳಿತು. ಮದುವೆಯಾಯ್ತು. ‘ಹನೀ’ಎನ್ನಲಾಗಲಿಲ್ಲ.

ವರ್ಷದೊಳಗೆ ಮಗುವೂ ಆಯ್ತು. ಕಂದ ಅಂಬೆಗಾಲಿಟ್ಟ, ತಪ್ಪು ಹೆಜ್ಜೆ ಹಾಕಿದ, ನಾಕು ಮಾತು ಬಂದೊಡನೇ ಜಗದ ಎಲ್ಲದೂ ಇವತ್ತೇ ತಿಳಿಯಬೇಕು ಎಂಬಂತೆ ಪ್ರಶ್ನೆ ಸುರಿಸಿದ. ಅದು ದೊಡ್ಡ ಕುಟುಂಬ, ಬರುವವರು ಹೋಗುವವರ ದಂಡೇ ಇರುತ್ತಿದ್ದ ಕಾಲ. ಅನ್ನ ಬಸಿಯುವಾಗ ಗಂಜಿಗೆ ಹಿಡಿ ಅನ್ನ ಬಿದ್ದರೆ, ಸಾರಿಗೆ ಉಪ್ಪು ಸಾಲದೇ ಹೋದರೆ, ಗುಡಿಸಿದ ಮೇಲೂ ಕಸವಿದ್ದರೆ ಮನೆ ಕೋರ್ಟಾಗಿ ಬದಲಾಗುತ್ತಿತ್ತು. ಮನಸ್ಸು ಛಿದ್ರ. ದೇಹವೂ.

ಆಗೆಲ್ಲಾ ಓದುತ್ತಿದ್ದೆನಾ ಅಂದರೆ ಅದಕ್ಕೆ ಸಮಯ ಸಿಕ್ಕಿದ್ದು ನೆನಪಿಲ್ಲ ಅಥವಾ ಓದಿಗೆ ಬೇಕಾದ ವಾತಾವರಣ? ಅದೂ ಇರಲಿಲ್ಲ.  ‘ಒಂದ್ ಘಳೀಗೆ ಕೂತ್ಕಂಡೆ ಅನ್ಕಳಿ, ಅವ್ವಾರೂ ಮರ ಸುತ್ತ ಬರೋಗು ಮೂರು ಸರ್ತಿ ಅಂತಾರೆ’ ಅಂತಿದ್ದ ನಮ್ಮ ಕೊಟ್ಟಿಗೆ ಹುಡುಗ. ಮನೆಯ ಸೊಸೆಗೂ ಅದೇ ಮಾತು ಅನ್ವಯವಾಗುತ್ತಿತ್ತು. ಮದುವೆಯಾಗಿ ಹನ್ನೊಂದನೇ ವರ್ಷಕ್ಕೆ ಮಗಳು ಹುಟ್ಟಿದಳು. ನಂತರ ಕೂಡುಕುಟುಂಬದಿಂದ ಪಾಲು, ಹಿಸ್ಸೆ.

ಮಧ್ಯಮ ವರ್ಗದ  ಕೃಷಿ ಕುಟುಂಬಕ್ಕೆ ಸೊಸೆಯಾಗಿ ಸೇರಿದ ಯಾವುದೇ ಹೆಣ್ಣಿಗೂ ಪಾಲು ಪಡೆದು ಹೊರಬರುವುದು ಒಂದು ತಿರುವು. ಆಕೆಯ ಬದುಕಿನ ಪ್ರಮುಖ ಘಟ್ಟ. ವರ್ಷ ತುಂಬುವುದರೊಳಗಾಗಿ ಸಂಗತಿಗಳನ್ನು ಸಹಜವಾಗಿರಿಸಬೇಕಾದ ದೊಡ್ಡ ಹೊಣೆಗಾರಿಕೆ. ಸಾಂಗತ್ಯಕ್ಕೆ ಒದಗಿದವ ಸಂಪನ್ನನಾದರೆ ಅಡ್ಡಿಯಿಲ್ಲ. ಅಲ್ಲೇನಾದರೂ ತೊಡಕಿದ್ದರೆ ಮುಗಿದೇ ಹೋಯ್ತು, ಎತ್ತು ಏರಿಗೂ ಕೋಣ ನೀರಿಗೂ. ಸಂಸಾರ ವಿಮುಖವಾಗಿ ವಿಪರೀತ ಭಾರವೂ ಆಯಿತು. ಆದರೆ, ಸುಲಭಕ್ಕೆ ಸೋಲೊಪ್ಪಿಕೊಳ್ಳುವುದಕ್ಕಾಗುತ್ತದೆಯಾ? ಅದೂ ಅಷ್ಟು ಸಣ್ಣ ಸಂಗತಿಗಳಿಗೆ?

ಹೊರಸೆಲೆಯೊಂದಿಗೆ ಒಳಸೆಲೆ

 ಸರೀಕರೊಡನೆ ಸಮನಾಗಿ ಬದುಕಬೇಕೆನ್ನುವ ಹಠ. ಹಿಡಿಮೈಯಾಗಿ ತವರಿಗೆ ತಲೆ ಹಾಕಬಾರದೆನ್ನುವ ಹುಚ್ಚು ಸ್ವಾಭಿಮಾನ. ಕಾಫಿ ತೋಟದಲ್ಲೇ ಏನೋ ಸಾಧಿಸಿ ತೋರಿಸುವ ಎದೆಗಾರಿಕೆ. ದಿನದ ನಾಲ್ಕು ಗಂಟೆ ಮಾತ್ರ ವಿಶ್ರಾಂತಿ. ಉಳಿದದ್ದು ದುಡಿಮೆ. ಜೀವ‌ ಅರ್ಧವಾದರೂ ಜಿನುಗುತ್ತಲೇ ಇದ್ದ ಛಲ. ಅಪ್ಪ ಅಮ್ಮನಂತೆ ಕೃಷಿಯಲ್ಲಿ ಎತ್ತರಕ್ಕೇರಿ ನನ್ನದೇ ಛಾಪು ಮೂಡಿಸುವ ಆಸೆ. ಸೋರಿಹೋಗುತ್ತಿದ್ದುದನ್ನು ಹುಡುಕಿ, ಸೂರು ನೀರೂ ವ್ಯರ್ಥವಾಗದಂತೆ ಬಾಳಬೇಕೆನ್ನುವ ಮೋಹ. ಇದೆಲ್ಲದರ ನಡುವೆಯೂ ನಡುರಾತ್ರಿಯಲ್ಲಿ ತೆಳ್ಳನೆಯ ಬೆಳಗಿನಲ್ಲಿ ಅದೇ ಒಳಧ್ವನಿಯ ಸದ್ದು. ಜೋರಾಗಿ…’ಇದು ನಾನಲ್ಲ’ ಹೊರದಾರಿ ನನಗಿದೆಯೇ ಎಂಬ ಹುಡುಕಾಟ. ತಾನೆಣಿಸುವುದು ಒಂದು. ದೈವ ಬಗೆಯುವುದು ಇನ್ನೊಂದು. ನನ್ನ ಸಂಸಾರ ಬಕಾಸುರನ ಹೊಟ್ಟೆ ಎಂದು ಗೊತ್ತಾದ ಮೂರೇ ವರ್ಷದಲ್ಲಿ ನನ್ನ ಕೃಷಿ ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ವಿದಾಯ. ಈ ಹಂತದಲ್ಲಿ ಓದುತ್ತಿದ್ದೆನಾ? ಹೌದು. ಕೃಷಿ ಲೇಖನಗಳು, ಶೂನ್ಯ ಕೃಷಿ, ಸಾವಯವ ಕೃಷಿ, ಮೋರ್ ಕ್ರಾಪ್ ಪರ್ ಡ್ರಾಪ್, ಗೆಲ್ಲುವುದು ಹೇಗೆ, ಬದುಕಲು ಕಲಿಯಿರಿ. ಖುಷಿಯೆನ್ನಿಸುತ್ತಿತ್ತು ಓದು.

ಆದರೆ, ಸಂಬಂಧಿಗಳದ್ದೆಲ್ಲಾ ವಿಭಿನ್ನ ಬದುಕು. ನನ್ನ ಜೀವನ ಯಾಕೆ ಹೀಗಾಯ್ತು. ಹಾಗಿದ್ದರೆ ಚಿಕ್ಕ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡವರೆಲ್ಲಾ ಹೀಗೇ ಇದ್ದಾರಾ?ಈ ಪ್ರಶ್ನೆಗೆ ಉತ್ತರವಾಗಿ ನನ್ನ ಕಣ್ಣು ತುಂಬಿಹರಿದು ಮಾರನೆಯ ಬೆಳಗಿಗೆ ಮುಖ ಊದಿಕೊಂಡಿರುತ್ತಿತ್ತು ಅಷ್ಟೇ. ಕೃಷಿ ಕುಟುಂಬದ ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆಯ ಕನಸು. ನನ್ನ’ಗೌರಿ’ ಹಸು ಸಣ್ಣಪುಟ್ಟ ವೈಯಕ್ತಿಕ ಅಗತ್ಯಗಳನ್ನು ಪೂರೈಸುತ್ತಿದ್ದರೂ ಮೂಲಭೂತ ಅವಶ್ಯಕತೆಗಳಿಗೂ ಮತ್ತೆ ಕೈಯೊಡ್ಡುವಂಥ ಜೀವನ. ಅದೇ ಯಾಕೆ? ಇದು ಸಾಕು,  ಈಗ ಆಗಲ್ಲ. ಸಣ್ಣಪುಟ್ಟ ಅವಶ್ಯಕತೆಗಳಿಗೆ ಕಾರ್ಯ ಕಾರಣ ಹೇಳುವಾಗೆಲ್ಲ ಹಿಡಿಯಾಗುತ್ತಿತ್ತು ಮನಸ್ಸು. ಆಗಲೇ ನಿರ್ಧರಿಸಿ, ಆಗಿನ ಕಾಲಕ್ಕೆ ಹಣದ ಬೆಳೆ ಅಂತಲೇ ಹೆಸರಾಗಿದ್ದ ಶುಂಠಿ ಬೆಳೆಯಲು ಮನಸ್ಸು ಮಾಡಿದೆ. ಹೆಚ್ಚು ನಿರ್ಧಾರಗಳಿಗೆ ಒಡ್ಡಿಕೊಂಡಷ್ಟೂ ಬದುಕು ತಿರುವುಗಳನ್ನು ಹಾಯುತ್ತದೆ. ಗಟ್ಟಿ ಮನಸ್ಸು, ಭಂಡಧೈರ್ಯ ಇರದೇ ಹೋದರೆ ಬದುಕು ಬರೀ ನೇರ, ನೀರಸ. ತಿಟ್ಟ ತಿರುವುಗಳಿಲ್ಲದೇ ಬದುಕು ಆಕರ್ಷಕವಾಗಿ ಕಾಣಲು ಹೇಗೆ ಸಾಧ್ಯ?

ಮನೆಯಲ್ಲಿ ಮೂರು ವರ್ಷದ ಮಗಳು. ಶುಂಠಿ ಗದ್ದೆಯಿದ್ದಿದ್ದು ಅರ್ಧ ಫರ್ಲಾಂಗು ದೂರ. ಮಗಳನ್ನು ಮಲಗಿಸಿ ಹೊರಬಾಗಿಲಿಗೆ ಬೀಗ ಹಾಕಿ ಹೋದರೆ ಬರುವಷ್ಟರಲ್ಲಿ ಅತ್ತು ರಚ್ಚೆ ಹಿಡಿದು ಸೋತು ಸುಸ್ತಾಗಿ ಹೋಗಿರುತಿತ್ತು. ಆಗೀಗ ಪಕ್ಕದ ಮನೆಗೆ ಬಿಟ್ಟು ಹೋಗುವುದು ಇದ್ದರೂ ಅರ್ಧಗಂಟೆಯೊಳಗೆ ಉರಿಬಿಸಿಲಿನಲ್ಲಿ ತನ್ನ ಪುಟಾಣಿ ಹೂಮನದಲ್ಲಿ ಸಾವಿರ ಕಂಗಾಲು ಪ್ರಶ್ನೆಗಳನ್ನು ತುಂಬಿಕೊಂಡು ನಾನಿದ್ದಲ್ಲಿಗೆ ಹುಡುಕಿ ಬರುತ್ತಿತ್ತು. ಶುಂಠಿ ಬೆಳೆಯುವುದೆಂದರೆ ಹೀಗೊಂದು ಸಾಲು ಬರೆದಷ್ಟು ಸಲೀಸಲ್ಲ. ಅದೂ‌ ನೆರವಿಗೆ ಯಾರೂ ಇರದೇ ಹೋದಾಗ. ಫೆಬ್ರವರಿ ಕೊನೆಗೆ ಬಿತ್ತನೆ ಮಾಡಿದರೆ ಮಂದಿನ ಮೂರು ತಿಂಗಳು ಸ್ಪ್ರಿಂಕ್ಲರ್ ಮಾಡಬೇಕು. ಊರಿನ ಹಿರಿಮರಿ ಗದ್ದೆ ಜಮೀನುಗಳಲ್ಲೆಲ್ಲಾ ಶುಂಠಿಯದ್ದೇ ಕಾರುಬಾರಿದ್ದ ಕಾಲ. ಕೊಡುತ್ತಿದ್ದ ಮೂರು ಫೇಸು ಕರೆಂಟಿನ ಅವಧಿ ಯಾತಕ್ಕೂ ಸಾಕಾಗ್ತಿರಲಿಲ್ಲ. ಯಾರ ಬೋರವೆಲ್ಲುಗಳೂ ಪೂರ್ತಿಯಾಗಿ ನೀರೆತ್ತಿದ್ದು ಕಂಡಿರಲಿಲ್ಲ. ಆಗೆಲ್ಲ ಗಂಡಸರು ತಂತಿಗೆ ಗಣೆ ತಾಗಿಸಿ ಜಂಪ್ ಹೋಗಿಸಿ ತಮ್ಮ ಮೋಟಾರು ಪಂಪ್ ಶುರು ಮಾಡಿಕೊಳ್ಳುತ್ತಿದ್ದರು. ಆಗ ಉಳಿದ ಮೋಟಾರುಗಳೆಲ್ಲ ಬಂದ್​. ಒಂಥರಾ ಅಸಹಾಯಕತೆ. ಈ ಎಲ್ಲಾ ತಾಕಲಾಟಗಳಲ್ಲಿ ಗೆಲ್ಲುತ್ತೀನಾ, ಒಂದಿಷ್ಟು ಹಣ ನನ್ನದಾಗುತ್ತಾ ಸ್ವಾಭಿಮಾನದ ಬದುಕು ಇನ್ನು ಮುಂದಾದರೂ  ಸಾ‌ಧ್ಯವಾ? ಇಂಥವೇ ಎಷ್ಟೊಂದು ಪ್ರಶ್ನೆಗಳಿದ್ದವು ಆಗೆಲ್ಲಾ ನನ್ನ ‌ಮುಂದೆ.

ಹಗಲು ಕಣ್ಣುಮುಚ್ಚಾಲೆಯಾಡುತ್ತಿದ್ದ ಕರೆಂಟಿಗೆ ಬೇಸತ್ತು ರಾತ್ರಿ ನೀರು ಹೊಡೆಯುವುದನ್ನು ಶುರುವಿಟ್ಟೆ. ಬೇಸಿಗೆ ರಜಕ್ಕೆ ಬರುತ್ತಿದ್ದ ಮಗ ನನಗೆ ಜೊತೆಯಾದ. ಮನೆಯಿಂದ ನಡುರಾತ್ರಿ ಆಚೆ ಹೊರಟು ಜಮೀನು ತಲುಪಿ ಹಗಲು ಡೆಡ್​ಲೈನ್ ಹಾಕಿರುತ್ತಿದ್ದ ಪೈಪುಗಳಿಗೆ ಸ್ಪ್ರಿಂಕ್ಲರ್ ಜೆಟ್ ಜೋಡಿಸಿ ಮೋಟಾರು ಆನ್ ಮಾಡಿದ ಮೇಲೆ ಸರಿಯಾಗಿ ತಿರುಗುತ್ತಿದೆಯಾ, ಜೆಟ್ ಸರಿ ನಿಂತಿದೆಯಾ, ಖಾತರಿ ಮಾಡಿಕೊಂಡೇ ಮನೆಗೆ ವಾಪಾದು. ಒಂದು ರಾತ್ರಿಗೆ ಎರಡು ಶಿಫ್ಟ್​ ಸ್ಪ್ರಿಂಕ್ಲರ್. ಆಗೆಲ್ಲಾ ನನ್ನ ಅಸಹನೆಗೆ, ಕೋಪಕ್ಕೆ, ಅಸಹಾಯಕತೆಗೆ ಬಲಿಯಾಗುತ್ತಿದ್ದಿದ್ದು ನನ್ನ ಪುಟ್ಟ ಮಗಳು. ಆಗಿನ ನನ್ನ ರುದ್ರರೂಪ ನೆನಪಿಸಿಕೊಂಡ ಮಕ್ಕಳು ಈಗಲೂ ಒಂದು ಕ್ಷಣ ಮೌನಕ್ಕೆ ಜಾರುತ್ತಾರೆ.

ಒಂದು ರಾತ್ರಿಯಂತೂ ಶುಂಠಿಯ ದಟ್ಟ ಬೆಳೆಯ ಮಧ್ಯೆ ಮನೆ ಕೀ ಕಳೆದುಹೋಗಿ ಗೋಳಾಡಿದ್ದು, ನಡುರಾತ್ರಿಯಲ್ಲಿ ಊರ ಬಸವ(ಗೂಳಿ) ಬೃಹದಾಕಾರವಾಗಿ ಶುಂಠಿ ಹೊಲದ ಮಧ್ಯೆ ನಿಂತಿದ್ದು ಕಂಡು ಜೀವ ಬಾಯಿಗೆ ಬಂದ ಮಗನನ್ನು ಅದು ಭ್ರಮೆ ಅಂತ ಧೈರ್ಯ ಹೇಳುತ್ತಲೇ ಅದೇನಾದರೂ ದೆವ್ವವಾಗಿದ್ದರೆ ಅನ್ನುವ ಯೋಚನೆಗೆ ಕರುಳೆಲ್ಲವೂ ನಡುಗಿದ್ದು, ಕಿತ್ತು ರಾಶಿ ಹಾಕಿದ್ದ ಶುಂಠಿ ಕಳುವಾಗಿದ್ದು ಈಗ ನೆನಪಿಸಿಕೊಳ್ಳುವಾಗ ಕಣ್ಣು ತುಂಬಿಕೊಳ್ಳುತ್ತಲೇ ನಗುವೊಂದು ಸುಳಿದುಹೋಗುತ್ತದೆ.

ಈ ನಡುವೆ ಇದ್ಯಾವುದೂ ಬೇಡವೆನಿಸಿದ್ದ ಒಂದು ಕ್ಷಣ. ಒಂದೇ ಒಂದು ಕ್ಷಣ. ವಿಕ್ಷಿಪ್ತ ಬುದ್ದಿಯ ಮಾತು ಕೇಳಿ ಪ್ರಕೃತಿಯ ವಿರುದ್ಧ ನಡೆಯಲು ಹೋಗಿ ಜರ್ಜರಿತವಾದ ಕತ್ತು. ನಂತರ ಹಾಗೆ ಯತ್ನಿಸಿದ್ದಕ್ಕೆ ಅನುಭವಿಸಿದ ಅವಮಾನ. ಮೂಲೆಯಲ್ಲಿಟ್ಟಿದ್ದ ನಾಗರ ಬೆತ್ತಕ್ಕೆ ಆಗೆಲ್ಲಾ ಎಲ್ಲಿಲ್ಲದ ಚಟುವಟಿಕೆ, ಉತ್ಸಾಹ. ಅಡುಗೆ ಮನೆಯ ಅರಿಷಿಣ ಅಡುಗೆಗಿಂತಲೂ ಗಾಯಕ್ಕೆ ತುಂಬಲು ಬಳಕೆ ಆಗಿದ್ದೇ ಹೆಚ್ಚು. ಘಾತ; ಬದುಕು ಜಂಝಾವಾತ. ಈ ಎಲ್ಲದರ ನಡುವೆಯೂ ಒಳಧ್ವನಿಯ ಸದ್ದು ಹೊರಗಿನೆಲ್ಲ ಜಂಜಡಗಳನ್ನೂ ಮೀರಿ ಕೇಳುತ್ತಿತ್ತು. ‘ಇದು ನಾನಲ್ಲ ಮತ್ತೇನೋ ಆಗುವುದಿದೆ ನನಗೆ, ಮತ್ತೇನೋ.’

ಶುಂಠಿಯ ಮಾರುಕಟ್ಟೆ, ವ್ಯಾಪಾರಿಗಳ ಒಡನಾಟದ ಹಿನ್ನೆಲೆಯಲ್ಲಿ ಹೊರಗಿನ ನಾಕಾರು ಜನರ ಸಂಪರ್ಕ ಶುರುವಾಯಿತು. ಆತ್ಮೀಯ ಗೆಳತಿ ಯೋಗಶಿಬಿರಕ್ಕೆ ಪಾಲ್ಗೊಳ್ಳಲು ಕರೆ ಕೊಟ್ಟಿದ್ದು ಮತ್ತೊಂದು ತಿರುವು. ಅಲ್ಲಿಂದ ಹೊರಬದುಕು ಆರಂಭ. ನನ್ನ ಓದುವ ಆಸೆಗೆ ಆತ್ಮೀಯರು ಸಂಗ್ರಹಿಸಿ ಕೊಡುತ್ತಿದ್ದ ಪತ್ರಿಕೆಯ ಲೇಖನಗಳ ಕಟ್ಟು. ಕೃಷಿ, ಮಕ್ಕಳು ಮನೆಯ ನಡುವೆಯೇ ಸಮಯ ಹೊಂದಿಸಿ ಓದು. ಅನುಭವಿಸುತ್ತಿದ್ದ ದೈಹಿಕ ಹಲ್ಲೆ, ಮಾನಸಿಕ ಹಿಂಸೆಯಿಂದಾಗಿ ಸದಾ ಪ್ರಕ್ಷುಬ್ಧ ಮನಸ್ಸು. ಮೊದಲೇ ಹೇಳಿದೆನಲ್ಲಾ. ನೇರದಾರಿಯಲ್ಲಿ ಇರುವುದು ನೀರಸ ಬದುಕು; ಅನುಭವವೇ ಅಕ್ಷರವಾದವು.

‘ಕಥಾಕೂಟ‘ದ ಬಳಗದೊಂದಿಗೆ

ದಿನಚರಿಯನ್ನೇ ಲೇಖನವಾಗಿಸಿದಾಗ ಇನಿತಿನಿತೇ ಹಗುರಾದ ಹಾಗೆ. ಪ್ರಾದೇಶಿಕ ಪತ್ರಿಕೆ ‘ಜನತಾ ಮಾಧ್ಯಮ’ ನನ್ನ ತೊದಲು ಸಾಲುಗಳಿಗೆ ವೇದಿಕೆ ಒದಗಿಸಿತು. ಬದುಕು ಬರಹವಾದಾಗ ಓದುಗರ ಪ್ರೀತಿ ಪ್ರೋತ್ಸಾಹದ ಕರೆಗಳು ಬರತೊಡಗಿದವು. ಜಂಜಡಗಳ ಅನುಭವ ವ್ಯಕ್ತಿತ್ವಕ್ಕೆ ಗಟ್ಟಿತನ ಕೊಟ್ಟಿತು. ಈ ನಡುವೆ ಸಣ್ಣಪುಟ್ಟ ಸಭೆ ಸಮಾರಂಭಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನ. ಕೋಟಲೆಗಳ ಹಾದಿಯನ್ನು ‌ಕರುಣಿಸಿದವನೇ ಕಿರುಬೆರಳು ಹಿಡಿದು ಹೀಗೆ ಬಾ ಎಂದು ಕರೆದೊಯ್ದ. ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಆಕಸ್ಮಿಕವಾಗಿ ನನ್ನ ಗುರುಗಳ ಪರಿಚಯ. ನನ್ನ ಅಕ್ಷರದ ಬೆಳೆಗೆ ಅವರ ಪ್ರೀತಿ ಪ್ರೋತ್ಸಾಹದ ಗೊಬ್ಬರ.

ಹೌದಲ್ಲವಾ, ಯಾಕೆ ಹಾಗನಿಸಬೇಕು? ಚಿಕ್ಕಪ್ರಾಯದಲ್ಲೇನೋ ಸರಿ. ಮೂವತ್ತರವರೆಗೆ ಅಥವಾ ನಲವತ್ತರವರೆಗೂ ಸರಿ. ಆನಂತರವೂ ‘ಇದಲ್ಲ ನಾನು,  ಇನ್ನೇನೋ ಆಗಬೇಕಿದೆ. ಬೇರೆ ಬೇರೇನೋ ಆಗುವುದಿದೆ’ ಯಾಕೆ ಕಾಡಬೇಕು ಇಂಥದ್ದೊಂದು ಬಗೆ. ಇದು ಸಹಜವೇ? ಕೆಲವೊಮ್ಮೆ ‘ನನ್ನ ಮನೆಯೂ ಇನ್ನೆಲ್ಲೋ ಇದೆ’ ಅನಿಸುವುದು, ಸರಿಯೇ? ಊಂಹೂ. ನನ್ನ ಮಾವಯ್ಯ ಕಟ್ಟಿಸಿದ ಈ ಹಳೆಯ ದೊಡ್ಡಮನೆಯ ಕಣಕಣವನ್ನೂ ನಾನು ಪ್ರೀತಿಸುತ್ತೇನೆ. ಹಾಗಾದರೆ ಮತ್ತೇನು ನಡೆಯುತ್ತಿರುವುದು ಇಲ್ಲಿ, ಈ ಮನೋಭಿತ್ತಿಯಲ್ಲಿ.

ಹದಿನಾರಕ್ಕೆ ಆಯ್ಕೆ ಬರುತ್ತದಾ, ಇಲ್ಲವಾ? ಗೊತ್ತಿಲ್ಲ. ನನಗಂತೂ ಗೊತ್ತಾಗಲಿಲ್ಲ. ಮೊದಮೊದಲು, ಹಾರುಬೂದಿಯಾದ ಮೇಲೆ ಹೋರುವುದರಲ್ಲಿ ಏನಿದೆ ಅರ್ಥ ಅನಿಸಿತ್ತು. ಹಾಗಲ್ಲ ಅದು. ಪೈರು ತುಂಬಿದ ಗದ್ದೆಯಲ್ಲೋ, ಮೊಗ್ಗು ಹಿಡಿದ ಗುಲಾಬಿಯ ಬುಡದಲ್ಲೋ, ಮೆಣಸು ಬಳ್ಳಿಯ ಪಕ್ಕಕ್ಕೋ ಆ ಬೂದಿ ಸುರಿದರೆ ನೆಲದ ಸಾರ ಜೋರಾಗುತ್ತದೆ ಗೊತ್ತಲ್ವಾ? ಅಕ್ಷರಗಳು ಕೈಹಿಡಿದವು; ಬರೆದದ್ದು ತುಸುವೇ. ತಾಯಿ ಮಮತೆಯ ಗುರುಗಳು ಕಿರುಬೆರಳು ಹಿಡಿದು ‘ಹೀಗೆ ಬಾ ಪುಟ್ಟಿ’ ಎಂದರು. ಅಹಮ್ಮು ಏರದಂತೆ ಆಗಾಗ ಬರಹ ಬೆನ್ನು ತೋರುತ್ತದೆ. ಕವಿತೆ ಕೈಕೊಡುತ್ತದೆ. ಕೆಲವೊಮ್ಮೆ ದಿನಗಟ್ಟಲೆ ಏನೋ ಯೋಚಿಸುತ್ತಾ ಕಳೆಯುವುದು ಆಲಸ್ಯವೋ ಅವಶ್ಯಕತೆಯೋ ತಿಳಿಯದೆ ಗೊಂದಲವಾಗುತ್ತದೆ. ಪ್ರತಿ ದಿನದ ಕೊನೆಯಲ್ಲಿ ದಿನವೊಂದು ಹೀಗೇ ಮುಗಿದು ಹೋದದ್ದಕ್ಕೆ ಆತಂಕವಾಗುತ್ತದೆ. ಆದರೂ ನವಿರು ಪ್ರೇಮ ಹೇಗೋ ನನ್ನ ಸಾಲುಗಳಿಗೆ ಆವಾಹಿಸಿಕೊಂಡುಬಿಡುತ್ತದೆ. ನನ್ನ ಕಾವ್ಯನಾಯಕಿ ಈ ಹುಚ್ಚು ಪ್ರೇಮವನು ತನ್ನದಾಗಿಸಿಕೊಳ್ಳುವ ಹಾದಿಯಲಿ ಅಗಾಗ ಬಿಕ್ಕುತ್ತಾಳೆ, ಸೊಕ್ಕುತ್ತಾಳೆ, ಅರೆಗಣ್ಣಾಗುತ್ತಾಳೆ, ತುಟಿ ಮುಂದೊಡ್ಡಿ ಕಾಯುತ್ತಾಳೆ, ಸೋಲುತ್ತಾಳೆ. ದಣಿಯುತ್ತಾಳೆ. ಕೆಲವಲ್ಲಿ ತಣಿಯುತ್ತಾಳೆ. ಅರೆ ಓ ಅದು ಅಲ್ಲಿ ಕಾಣುತ್ತಿರುವುದು ಅದೇನಾ? ನಾ ಆಗಬೇಕಾಗಿದ್ದ ಆ ಇನ್ನೊಂದು? ನಾನು ನಡೆಯಬೇಕಾಗಿದೆ ಹೆಜ್ಜೆಗಳನ್ನು ಧೃಡವಾಗಿ ಊರಿ. ಇದೇನಾ ನನ್ನ ಆ ಇನ್ನೊಂದು ಮನೆಯ ಹಾದಿ?

***
ಪರಿಚಯ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪುಟ್ಟಹಳ್ಳಿ ಹೆದ್ದುರ್ಗದಲ್ಲಿ ವಾಸವಾಗಿರುವ ನಂದಿನಿ ಹೆದ್ದುರ್ಗ ಅವರದು ಭೂಮಿಯನ್ನು ನಂಬಿದ ಬದುಕು. ಮೆಣಸು ಮತ್ತು ಕಾಫಿ ಬೆಳೆಗಾರ್ತಿಯಾಗಿರುವ ಅವರು ‘ಅಸ್ಮಿತೆ’ ಮತ್ತು ‘ಒಳಸೆಲೆ’ ಕವನ ಸಂಕಲನ, ‘ಬ್ರೂನೋ ದಿ ಡಾರ್ಲಿಂಗ್’ ಲವಲವಿಕೆಯ ಬರಹಗಳ ಸಂಕಲನ ಪ್ರಕಟ. ‘ರತಿಯ ಕಂಬನಿ’ ಬಿಡುಗಡೆಯಾಗಲಿರುವ ಕವನ ಸಂಕಲನ. ಪ್ಲ್ಯಾಂಟೆಷನ್ ಪತ್ರಿಕೆಗೆ ನಿಯಮಿತ ಬರಹ.

Motherhood: ನಾನೆಂಬ ಪರಿಮಳದ ಹಾದಿಯಲಿ; ಕ್ಷೀರಪಥದೊಳಗಿನ ಚೈತ್ರಗಾನ

Published On - 7:01 pm, Tue, 9 February 21