Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year Resolution | ಮಾಸ್ಕ್ ಧರಿಸಲು ಪ್ರೇರಣೆ ನೀಡುವ, ವ್ಯಾವಹಾರಿಕ ಜ್ಞಾನ ಕಲಿಸುವ ಕನಸು

ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎಂದು ಓರ್ವ ಪಿಯುಸಿ ವಿದ್ಯಾರ್ಥಿನಿ ಮತ್ತು ನವೋದ್ಯಮಿ ಹೊಸ ವರ್ಷದ ಕನಸುಗಳನ್ನು ಟಿವಿ9 ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.

New Year Resolution | ಮಾಸ್ಕ್ ಧರಿಸಲು ಪ್ರೇರಣೆ ನೀಡುವ, ವ್ಯಾವಹಾರಿಕ ಜ್ಞಾನ ಕಲಿಸುವ ಕನಸು
ಪಿಯುಸಿ ವಿದ್ಯಾರ್ಥಿನಿ ಆರ್ಯಾ (ಎಡ) ನವೋದ್ಯಮಿ ಆಶಾ ಮಹೇಶ್ (ಬಲ)
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 11:00 PM

ಹೊಸ ವರ್ಷದಲ್ಲಿ ಒಂದಿಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುವ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎಂದು ಓರ್ವ ಪಿಯುಸಿ ವಿದ್ಯಾರ್ಥಿನಿ ಆರ್ಯಾ ನಾಗರಾಜ ಶಾಸ್ತ್ರಿ ಮತ್ತು ನವೋದ್ಯಮಿ ಆಶಾ ಮಹೇಶ್ ಹೊಸ ವರ್ಷದ ಕನಸುಗಳನ್ನು ಟಿವಿ9 ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.

ಮನೆ ಆಹಾರವನ್ನೇ ಸೇವಿಸ್ತೇನೆ, ಮಾಸ್ಕ್ ಧರಿಸಲು ಪ್ರೇರೇಪಣೆ ನೀಡುತ್ತೇನೆ 2021ರಲ್ಲಿ ವೈಯಕ್ತಿಕವಾಗಿ ನಾನು ನನ್ನ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇನೆ. ಕರಿದ ಪದಾರ್ಥ ಮತ್ತು ಮನೆಯ ಹೊರಗಿನ ಆಹಾರ ಸೇವನೆ ಕಡಿಮೆ ಮಾಡುತ್ತೇನೆ. ಜತೆಗೆ, ನನ್ನ ಸಿಟ್ಟಿನ ಸ್ವಭಾವವನ್ನು ಸಂಪೂರ್ಣವಾಗಿ ತೊರೆಯಬೇಕು ಎಂದುಕೊಂಡಿದ್ದೇನೆ.

ಸಮಾಜ, ರಾಜ್ಯ ಅಥವಾ ದೇಶದಲ್ಲಿ ಕಸವನ್ನು ಕಂಡ ಕಂಡಲ್ಲಿ ಎಸೆಯುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕರೋನಾ ಪೀಡಿತರಿಗೆ, ವಿಶೇಷವಾಗಿ ಬಡವರ್ಗದವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಬೇಕು. ಮುಖ್ಯವಾಗಿ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿಭಟನೆ ಹಾಗೂ ರಸ್ತೆ ತಡೆಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಬಯಸುತ್ತೇನೆ.

ಇವುಗಳೆಲ್ಲ ಈಡೇರಲು ನಾನು ನನ್ನ ಮನೆ ಮತ್ತು ಸುತ್ತಮುತ್ತಲಿನ ಸ್ವಚ್ಛತೆಗೆ ಕೈಜೋಡಿಸುತ್ತೇನೆ. ಇನ್ನೊಬ್ಬರಿಗೆ ಸಹಾಯ ಮಾಡುವದರಲ್ಲಿ ವೈಯಕ್ತಿಕವಾಗಿ ಅಥವಾ ಯಾವುದೇ ಸಂಘ ಸಂಸ್ಥೆಗಳ ಮೂಲಕ ಸ್ವಯಂ ಪ್ರೇರಿತನಾಗಿ ಭಾಗಿಯಾಗುತ್ತೇನೆ. ತಪ್ಪದೇ ಮಾಸ್ಕ್​ ಧರಿಸುತ್ತೇನೆ. ಬೇರೆಯವರೂ ಧರಿಸುವಂತೆ ಒತ್ತಾಯಿಸುತ್ತೇನೆ .

ಆರ್ಯಾ ನಾಗರಾಜ ಶಾಸ್ತ್ರಿ, ಪ್ರಥಮ ಪಿಯುಸಿ, ಜ್ಞಾನ ಸ್ವೀಕಾರ ಪಿಯು ಕಾಲೇಜ್ ಬೆಂಗಳೂರು

ನನಗೆ ತಿಳಿದ ವ್ಯಾವಹಾರಿಕ ಜ್ಞಾನವನ್ನು ಇನ್ನೊಂದೆರಡು ಮಹಿಳೆಯರಿಗೆ ಕಲಿಸುವೆ

‘ಆಶಾ’ಸ್ ಕಲೆಕ್ಷನ್’ (ಮಹಿಳೆಯರನ್ನು ಸುಂದರವಾಗಿಸುವ ಪ್ರಯಾಣ) ಎಂಬ ಹೆಸರಿನಡಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಸೀರೆ, ಕುರ್ತಾ, ಕೃತಕ ಆಭರಣ.. ಹೀಗೆ ಎಲ್ಲ ವಿಧದ ಉತ್ಪನ್ನಗಳನ್ನು ಉತ್ಪಾದಕರಿಂದ ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತಾರೆ ಬೆಂಗಳೂರಿನ ಕೆ ಆರ್ ಪುರಂ, ಭಟ್ಟರಹಳ್ಳಿ ಸಮೀಪದ ಆಶಾ ಮಹೇಶ್. ಟಿವಿ9 ಕನ್ನಡ ಡಿಜಿಟಲ್ ಜತೆ 2021ರ ಆಶೋತ್ತರಗಳನ್ನು ಹಂಚಿಕೊಂಡರು.

ನಾನು ನನ್ನ ನವೋದ್ಯಮ ಆರಂಭಿಸಿ ಎರಡು ವರ್ಷಗಳಷ್ಟೇ ಆಗಿದೆ. ಹೀಗಾಗಿ, 2021ರಲ್ಲಿ ನನ್ನ ಮಾರುಕಟ್ಟೆಯ ಕೌಶಲಗಳನ್ನು ಸುಧಾರಿಸಿಕೊಳ್ಳಲು ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪಲು ಸಮಯ ಮೀಸಲಿಡುತ್ತೇನೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತ ಹೇಳ್ತಾರೆ. ಹಾಗೆ ಒಂದು ಕುಟುಂಬದಲ್ಲಿ ಮಹಿಳೆ ಆರ್ಥಿಕವಾಗಿ ಸ್ವತಂತ್ರವಾಗಿದ್ದರೆ ಇಡೀ ಕುಟುಂಬಕ್ಕೆ ಒಂದು ಆಧಾರ ಸ್ತಂಭವಾಗಿರುತ್ತಾಳೆ. ಇದೇ ಕಾರಣಕ್ಕೇ ನಾನು ಸ್ವಉದ್ಯೋಗ ಆರಂಭಿಸಿದ್ದು. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಹೊಂದಲು ಸಹಾಯ ಮಾಡಬಲ್ಲ ಯೋಜನೆಗಳು ಹೊಸ ವರ್ಷದಲ್ಲಿ ಹೆಚ್ಚೆಚ್ಚು ಜನರಿಗೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ನನಗೆ ಗೊತ್ತಿರುವ ವ್ಯಾವಹಾರಿಕ ಜ್ಞಾನವನ್ನು ಇನ್ನೊಂದೆರಡು ಮಹಿಳೆಯರಿಗೆ ತಿಳಿಸಿ ಅವರ ಆರ್ಥಿಕ ಸ್ವಾವಂಬನೆಗೆ ಒತ್ತು ಕೊಡುತ್ತೇನೆ.

ಆಶಾ ಮಹೇಶ್, ‘ಆಶಾ’ಸ್ ಕಲೆಕ್ಷನ್, ಕೆ.ಆರ್.ಪುರಂ