Next Door : ಮುಂದುವರೆಯುವುದೆಂದರೆ ತಂತ್ರಜ್ಞಾನದ ದಾಸರಾಗುವುದೆ?

|

Updated on: Jul 03, 2021 | 12:49 PM

Loneliness : ಸಾವಿರಾರು ವರ್ಷಗಳ ಹಿಂದಿನ ಮಾನವನ ಸಾಮಾಜಿಕ ವಿಕಸನದಲ್ಲಿ ಸಾಧಿಸಿರುವುದೇನನ್ನು? ಆದಿ ಮಾನವನ ಕಾಲದಲ್ಲಿ ಮನುಷ್ಯ ಸಮಾಜದ ಬದುಕುಳಿವಿಗೆ ಸಮುದಾಯದ ಶಕ್ತಿಯೇ ಕಾರಣವಾಗಿತ್ತು. ಒಂಟಿಜೀವಿಯಾಗಿದ್ದರೆ ಜೈವಿಕವಿಕಾಸದಲ್ಲಿ ಮಾನವಕುಲವೆಂದೋ ನಶಿಸಿ ಹೋಗುತ್ತಿತ್ತು. ಹಾಗಿದ್ದರೆ ನಾವೇಕೆ ಮುಂದುವರೆದು ಮತ್ತೆ ಒಂಟಿತನವನ್ನು ಆರಿಸಿಕೊಳ್ಳುತ್ತಿದ್ದೇವೆ, ಮನುಷ್ಯ-ಮನುಷ್ಯರ ಸಂಬಂಧಗಳಿಗಿಂತ ‘ಅಲೆಕ್ಸಾ ಬೈಜು’ಗಳೇಕೆ ನಮಗೆ ಹಿತವಾಗುತ್ತಿದ್ದಾರೆ?‘ ಜಯಶ್ರೀ ಜಗನ್ನಾಥ

Next Door : ಮುಂದುವರೆಯುವುದೆಂದರೆ ತಂತ್ರಜ್ಞಾನದ ದಾಸರಾಗುವುದೆ?
ಲೇಖಕಿ ಜಯಶ್ರೀ ಜಗನ್ನಾಥ
Follow us on

ವಾಟ್ಸಪ್ಪು, ಟ್ವಿಟರು, ಫೇಸ್​ಬುಕ್ಕು ಮತ್ತೀಗ ಕ್ಲಬ್​ಹೌಸಿನಲ್ಲೂ ಇಲ್ಲವಾ? ಉತ್ತರ ಇಲ್ಲವೆಂದಾದಲ್ಲಿ ಆನ್​ಲೈನ್​ ಸಂಸ್ಕೃತಿಯಲ್ಲಿ ನಾಗರಿಕ ಸಮಾಜ ಥಟ್ಟನೆ ನಮ್ಮನ್ನು ಒಂದು ಹಳೇ ಪಳಿಯುಳಿಕೆಯಂತೆ ಮೂಲೆಯಲ್ಲಿ ನಿಲ್ಲಿಸಿಬಿಡುತ್ತದೆ. ಉಸಿರಾಡಬೇಕೆಂದರೆ ಹರಿಯುವ ನೀರಿನೊಂದಿಗೆ ಹರಿಯಲೇಬೇಕು ಎಂಬ ತತ್ವದೊಂದಿಗೆ ನಮ್ಮ ನಮ್ಮ ವಯೋಮಾನ, ಆಸಕ್ತಿ, ಅನಿವಾರ್ಯಕ್ಕೆ ತಕ್ಕಂತೆ ನಮ್ಮ ಕಣ್ಣುಗಳನ್ನು ಬೆಳಕಿನಪರದೆಗಳಿಗೆ ಅಂಟಿಸುತ್ತ ಕಣ್ಣುಗಳನ್ನು ಅಗಲ ಮಾಡಿಕೊಳ್ಳುತ್ತ ಸಾಗುತ್ತಿದ್ದೇವೆ. ಗತಿಶೀಲ ಜಗತ್ತಿಗೆ ಕೊರೊನಾ ವೈರಾಣು ಮತ್ತಷ್ಟು ಚುರುಕು ನೀಡಿದ್ದೇ ಬೆಳಗಾಗುವುದರೊಳಗೆ ಕ್ಲಾಸುಗಳು, ಆಸ್ಪತ್ರೆಗಳು, ಅಂಗಡಿಗಳು, ಸಂತೆಗಳು-ಸಂತರುಗಳು, ಓಣಿಗಳು-ಕಟ್ಟೆಗಳು, ಗುಂಪುಗಳು, ಪರವಿರೋಧಗಳು, ಅಭಿವ್ಯಕ್ತಿಗಳು, ಸ್ವಾತಂತ್ರ್ಯ-ಸಂಸ್ಕೃತಿಗಳು, ಪರಂಪರೆ-ಪತಾಕೆಗಳು, ಗಾಳಿಪಟ-ಬಾಲಂಗೋಚಿಗಳ ಮೂಲಕ ಇಡೀ ಊರಿಗೆ ಊರನ್ನೇ ಜಾಲತಾಣಗಳ ಕೊಂಡಿಗೆ ಸಿಕ್ಕಿಸಿ ಕುಳಿತುಬಿಟ್ಟಿದ್ದೇವೆ.  

ಒಂದರ್ಥದಲ್ಲಿ ಈ ಅನಿವಾರ್ಯ ಬೇರೊಂದು ರೀತಿಯ ಪ್ರಯೋಗ, ಅವಿಷ್ಕಾರ, ಕ್ರಾಂತಿಗಳಿಗೆ ಸಂದರ್ಭಾನುಸಾರ ಕಾರಣವಾಯಿತು. ಆದರೆ ಆಳದಲ್ಲಿ? ಹಳ್ಳಿಗಳಿಗೂ, ನಗರ-ಮಹಾನಗರಗಳಿಗೂ ಅವುಗಳದ್ದೇ ಆದ ಸ್ವಭಾವ-ಸಂಸ್ಕೃತಿಗಳಿವೆ. ಅಲ್ಲೆಲ್ಲ ಜೀವಿಸುತ್ತಿರುವವರು ನಾವುನಾವುಗಳೇ. ತಂತ್ರಜ್ಞಾನ ಮತ್ತು ನಾಗರಿಕತೆಯ ಚೌಕಟ್ಟಿನಡಿ ನಮ್ಮನಮ್ಮ ಆಸೆ, ಆಶಯ, ನಿರ್ಧಾರಗಳನ್ನು ಬಂಧಿಸಿಡುತ್ತ, ಮಾನವ ಸಂಬಂಧಗಳನ್ನು ನಿಸ್ತಂತುಗೊಳಿಸುತ್ತ ಬರುತ್ತಿದ್ದೇವೆಯೇ? ಯಾವೆಲ್ಲ ಸಂದರ್ಭ, ಹಂತಗಳಲ್ಲಿ ಈ ಸಂಬಂಧಗಳು ಹೆಚ್ಚು ಆಪ್ತವಾಗಬೇಕಿತ್ತೋ ಅಲ್ಲೆಲ್ಲ ವ್ಯಾವಹಾರಿಕತೆಯ ಪರಿಧಿ ಆವರಿಸಿ ಭಾವಶೂನ್ಯರಾಗುತ್ತಿದ್ದೇವೆಯೇ? ಪರಸ್ಪರ ಸಹಕಾರ ತತ್ವ ಮರೆತ ಪರಿಣಾಮವಾಗಿ ಸಾಮುದಾಯಿಕ ಸ್ಪರ್ಶ, ಸೌಂದರ್ಯ, ಪ್ರಜ್ಞೆಯ ಬಿಸುಪನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆಯೇ? ಇದೆಲ್ಲವೂ ನಮ್ಮ ಮುಂದಿನ ಪೀಳಿಗೆ ಅಥವಾ ಮಾನವವಿಕಾಸದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅದಕ್ಕೆ ನಾವು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ?

ಹೀಗೆ ಯೋಚಿಸುತ್ತಲೇ ಹುಟ್ಟಿಕೊಂಡ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನೆಕ್ಸ್ಟ್ ಡೋರ್ (Next Door)’ ನಿಮ್ಮ ಸ್ವಾನುಭಗಳೊಂದಿಗೆ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪದಮಿತಿ ಸುಮಾರು 800. ಉತ್ತಮ ಗುಣಮಟ್ಟದ ನಿಮ್ಮ ಭಾವಚಿತ್ರವೂ ಇರಲಿ. ಈ ಸರಣಿ ಪ್ರತೀ ಶನಿವಾರಕ್ಕೊಮ್ಮೆ ಪ್ರಕಟವಾಗುವುದು. ಇ-ಮೇಲ್ tv9kannadadigital@gmail.com

*
‘ಆನ್​ಲೈನ್​ ಜಗತ್ತಿಗೆ ಹೆಚ್ಚು ಆತುಕೊಳ್ಳದೆ, ಪರಸ್ಪರರ ದೈನಂದಿನ ಚಟುವಟಿಕೆಗಳಲ್ಲಿ ಸಹಕಾರ ತತ್ವ ಕಂಡುಕೊಂಡು ಈ ಮೂಲಕ ಮನುಷ್ಯ ಸಂಬಂಧಗಳನ್ನು ಹೆಚ್ಚು ಆಪ್ತಗೊಳಿಸಿಕೊಳ್ಳಬೇಕು. ಇದು ನಾವು ವಾಸಿಸುವ ಬೀದಿಬೀದಿಗಳಿಂದಲೇ ಶುರುವಾಗಬೇಕು. ಈ ಪ್ರಕ್ರಿಯೆಯಲ್ಲಿಯೇ ಮಾನವವಿಕಾಸದ ಭವಿಷ್ಯವೂ ಅಡಗಿದೆ.’ ಜಯಶ್ರೀ ಜಗನ್ನಾಥ, ಲೇಖಕಿ, ಅನುವಾದಕಿ, ಮೈಸೂರು. 

*

ಆಕೆ ಆಫ್ರಿಕಾ ಖಂಡದ ಒಂದು ಸಣ್ಣ ಮೂಲೆಯಿಂದ ಇಂಗ್ಲೆಂಡಿಗೆ ಆಗತಾನೇ ಬಂದಿದ್ದಳು. ಎಳೆ ಯುವತಿ. ಸೊಂಟದಲ್ಲಿ ವರ್ಷದ ಮಗು. ಪಾರ್ಕುಗಳಲ್ಲಿ ರಸ್ತೆಗಳಲ್ಲಿ ಮಗು ಅವಳ ಸೊಂಟದಿಂದಿಳಿದು ಅತ್ತಿತ್ತ ಹೊರಟರೆ ಅದನ್ನು ಹಿಡಿಯಲು ಅವಳು ಥಟ್ಟನೆ ಅದರ ಹಿಂದೆ ಓಡುತ್ತಲೇ ಇರಲಿಲ್ಲ. ಅವಳಿಗೆ ತಲೆ ಕೆಟ್ಟಿದೆಯೇನೋ ಆ ಮಗು ಅಪಾಯದಲ್ಲಿದೆಯೇನೋ ಎಂದು ಸಮಾಜ ಕಾರ್ಯಕರ್ತರು ವಿಚಾರಿಸಿದಾಗ ಅವರಿಗೆ ತಿಳಿದುಬಂದಿದ್ದಿಷ್ಟು. ಆಕೆಗೆ ತಾಯಿಯೇ ತನ್ನ ಮಗುವನ್ನು ಹಿಡಿಯಬೇಕೆಂಬ ‘ನಾಗರಿಕ’ ಸಮಾಜದ ರೀತಿನೀತಿಗಳು ಹೊಸತು. ಅವಳು ಆಫ್ರಿಕಾದಲ್ಲಿದ್ದ ಸಮುದಾಯದಲ್ಲಿ ಆ ಸಮುದಾಯದ ಎಲ್ಲಾ ಹಿರಿಯರೂ ಎಲ್ಲಾ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದರು. ಮಗು ಅಪಾಯದಲ್ಲಿದ್ದರೆ ಅದನ್ನು ಹಿಡಿಯುವುದು ಎಲ್ಲರ ಜವಾಬುದಾರಿಯೂ ಆಗಿತ್ತು. ಇಲ್ಲಿ ಹಾಗಲ್ಲ, ತಂದೆತಾಯಿಯರು ತಮ್ಮ ಮಕ್ಕಳಿಗೆ ತಾವೇ ಜವಾಬುದಾರರು ಎಂಬ ಅಂಶ ಆಕೆಗೆ ಅನಾಗರಿಕವಾಗಿ ಕಂಡದ್ದಷ್ಟೇ ಅಲ್ಲ ಅದನ್ನು ಅರಿತುಕೊಳ್ಳಲು ಅವಳಿಗೆ ಬಹಳ ಕಾಲ ಹಿಡಿಯಿತು.

ನನಗೆ ನೆನಪಿದೆ, ನಾವು ಚಿಕ್ಕವರಿದ್ದಾಗ ಅಂದರೆ 60ರ ದಶಕದಲ್ಲಿ, ಊರಿನ, ಕುಟುಂಬದ ಯಾವುದೇ ಹಿರಿಯರು ಮಕ್ಕಳಿಗೆ ಬೈಯ್ಯಬಹುದಿತ್ತು. ಬುದ್ಧಿ ಹೇಳಬಹುದಿತ್ತು. ಈಗ ತಾತ ಅಜ್ಜಿಯರೂ ಸಹ ತಮ್ಮ ತಮ್ಮ ಮೊಮ್ಮಕ್ಕಳಿಗೆ ಏನಾದರೂ ಹೇಳುವಾಗ ಸ್ವಲ್ಪ ಆಲೋಚಿಸಿ ಹೇಳಬೇಕಾದ ಪರಿಸ್ಥಿತಿಯಿದೆ. ಹಾಗೆಂದು ಹಳೆಯ ಕಾಲದಲ್ಲಿ ಎಲ್ಲವೂ ಉತ್ತಮವಾಗಿಯೇ ಇದ್ದವು ಎಂದಲ್ಲ. ಬೇರೆಯವರ ಮಕ್ಕಳಿಗೆ ಬೇಕಾದ ಹಾಗೆ ಹೊಡೆದು ಹಿಂಸೆ ಮಾಡುತ್ತಿದ್ದ ಹಿರಿಯರು ಆಗಲೂ ಇದ್ದರು. ಜವಾಬುದಾರಿ ದೊರಕಿದವರೆಲ್ಲಾ ಅದನ್ನು ವಿವೇಚನೆಯಿಂದ ಚಲಾಯಿಸುತ್ತಾರೆ ಅಥವಾ ದೊಡ್ಡವರೆಲ್ಲರಿಗೂ ದೊಡ್ಡತನ ತನ್ನಂತೆ ತಾನೇ ಬಂದುಬಿಡುತ್ತದೆ ಎಂಬ ಯಾವ ಭರವಸೆಯೂ ಇಲ್ಲ.

ಈಗ ಪ್ರಸ್ತುತದಲ್ಲಿ ನೋಡೋಣ.

ಈ ವಿಶ್ವವ್ಯಾಪೀ ಸೋಂಕಿನ ಕಾಲದಲ್ಲಿ, ರೋಗಕ್ಕೆ ಹೊರತಾದ ನಮಗೆ ಹೆಚ್ಚಾಗಿ ಕೇಳಿ ಬರುತ್ತಿರುವ ಸಮಸ್ಯೆಗಳು ಎರಡು ; ಮಕ್ಕಳಿಗೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಮಾನಸಿಕ, ಭೌತಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳಿಗೆ ಹೆತ್ತವರು ಮಾಡುವ ಚಿಂತೆಗಳು ಮತ್ತು ಅರವತ್ತಕ್ಕೆ ಮೇಲ್ಪಟ್ಟ ಒಂಟಿಯಾಗಿ ಅಥವಾ ಇಬ್ಬರೇ ಜೀವಿಸುತ್ತಿರುವ ಹಿರಿಯರ ಬಗೆಗಿನ ಚಿಂತೆಗಳು.

‘ದಿನವೆಲ್ಲಾ ಸ್ಕ್ರೀನ್ ಮುಂದೆ ಕೂತ್ಕೋತಾರೆ, ಬರೀ ವೀಡಿಯೋದಲ್ಲಿ ಇತರ ಜನರನ್ನ ನೋಡಿ ನೋಡಿ ಜನಗಳ ಜೊತೆ ಬೆರೆಯೋದೇ ತಪ್ಪಿ ಹೋಗಬಹುದೇನೋ’ ಎಂದು ಮಕ್ಕಳ ತಂದೆತಾಯಿಯರು ಯೋಚಿಸಿದರೆ, ‘ದಿನಗಟ್ಟಲೆ ಏನೂ ಕೆಲಸ ಇಲ್ಲದೆ, ಯಾರೂ ಮಾತಾಡಿಸುವವರು ಇಲ್ಲದೆ ಹುಚ್ಚು ಹಿಡಿಯುತ್ತಿದೆ. ಫೋನು, ವಿಡಿಯೋ ಕರೆಯಲ್ಲಿ ಏನೂಂತ ಎಷ್ಟೂಂತ ಮಾತಾಡೋದು, ಮುಂಚೆ ಅಲ್ಲಿ ಇಲ್ಲಿ ಹೋಗ್ತಾ ಇದ್ವಿ ಈಗ ಹೊತ್ತೇ ಹೋಗಲ್ಲ’ ಅಂತ ಹಿರಿಯ ನಾಗರಿಕರ ಯೋಚನೆಗಳು. ಮಕ್ಕಳಿಗಾಗಿ ಹೊಸಹೊಸ ಅಪ್ಲಿಕೇಷನ್ಸ್ ಬಂದಿವೆ, ಹೊಸ ಮಾದರಿಯ ವಿದ್ಯಾಭ್ಯಾಸಕ್ಕೆ ತೊಡಗಿಕೊಳ್ಳುವಂತೆ ಮಾಡುವ ಜಾಲತಾಣಗಳು ಬಂದಿವೆ. ಮಕ್ಕಳು ಅವುಗಳ ಮುಂದೆ ಕುಳಿತು ಬಿಟ್ಟರೆ ಸಾಕು ಮೇಧಾವಿಗಳಾಗಿ ಹೋಗುತ್ತಾರೆ ಎಂದು ಪ್ರಚಾರ ಮಾಡುವ ಜಾಹೀರಾತುಗಳು ಬೇರೆ. ಪರದೆಗೆ ಕಣ್ಣು ಕೀಲಿಸಿ ಕುಳಿತ ಮಕ್ಕಳು ಹೆತ್ತವರೆದೆಗಳಲ್ಲಿ ತಲ್ಲಣವುಂಟು ಮಾಡುತ್ತವೆ. ಇದೆಲ್ಲಾ ಉಳ್ಳವರಿಗಾಗಿಯಾಯಿತು. ಇನ್ನು ಉಳಿದ ಮಕ್ಕಳೂ ಸಹ ಮೊಬೈಲ್ ಸಿಕ್ಕರೆ ಸಾಕು ಮೈಮನ ಮರೆತು ಕೆಟ್ಟಕೆಟ್ಟ ವಿಡಿಯೋಗಳನ್ನು ನೋಡುತ್ತಾ ಕೂಡುತ್ತಾರೆ. ಶಾಲೆಯಲ್ಲಿದ್ದಷ್ಟು ಹೊತ್ತು ಮನಸ್ಸಿಗೆ ಬುದ್ಧಿಗೆ ಸ್ವಲ್ಪವಾದರೂ ಕಸರತ್ತಿರುತ್ತಿತ್ತು. ಈಗೇನು ಗತಿ?

ಈಗ ಆ ಆಫ್ರಿಕಾದ ಯುವತಿಯ ಸ್ಥಿತಿಯನ್ನೂ ನಗರಗಳಲ್ಲಿ ‘ವಿದ್ಯಾವಂತರು’ ಎಂದು ಕರೆಸಿಕೊಳ್ಳುವ ನಮ್ಮ ಸ್ಥಿತಿಯನ್ನೂ ಹೋಲಿಸಿ ನೋಡಿದಾಗ ನನಗನ್ನಿಸಿದ್ದದ್ದು, ನಾವು ಈ ನೂರಾರು ಸಾವಿರಾರು ವರ್ಷಗಳ ಹಿಂದಿನ ಮಾನವನ ಸಾಮಾಜಿಕ ವಿಕಸನದಲ್ಲಿ ಸಾಧಿಸಿರುವುದೇನನ್ನು? ಆದಿ ಮಾನವನ ಕಾಲದಲ್ಲಿ ಮನುಷ್ಯ ಸಮಾಜದ ಬದುಕುಳಿವಿಗೆ ಸಮುದಾಯದ ಶಕ್ತಿಯೇ ಕಾರಣವಾಗಿತ್ತು. ಒಂಟಿಜೀವಿಯಾಗಿದ್ದರೆ ಜೈವಿಕವಿಕಾಸದಲ್ಲಿ ಮಾನವಕುಲವೆಂದೋ ನಶಿಸಿ ಹೋಗುತ್ತಿತ್ತು. ಹಾಗಿದ್ದರೆ ನಾವೇಕೆ ಮುಂದುವರೆದು ಮತ್ತೆ ಒಂಟಿತನವನ್ನು ಆರಿಸಿಕೊಳ್ಳುತ್ತಿದ್ದೇವೆ?

ಫೋಟೋ : ಡಾ. ಲೀಲಾ ಅಪ್ಪಾಜಿ

ಪ್ಯಾಂಡೆಮಿಕ್ ಸಮಯದಲ್ಲಿ ನಾವು ‘ಒಂದು ಉತ್ತಮ ಸಮುದಾಯದ ಬೆಂಬಲವಿದ್ದಿದ್ದರೆ ಒಳ್ಳೆಯದಿತ್ತು’ ಎಂದುಕೊಳ್ಳುತ್ತಿರುವುದು ಸುಳ್ಳೇ?

ನಾವು ‘ಮುಂದುವರೆದಂತೆ’ ಅಭಿವೃದ್ಧಿ, ಎಂದರೆ ತಂತ್ರಜ್ಞಾನ ಎಂದು ನಂಬುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತಂತ್ರಜ್ಞಾನ, ಆರೋಗ್ಯಕ್ಕೆ ತಂತ್ರಜ್ಞಾನ ಹೊತ್ತು ಹೋಗಲೂ ಅದೇ ಸಮಸ್ಯೆಗಳ ಪರಿಹಾರಕ್ಕೂ ಅದೇ. ಈ ಗಡಿಬಿಡಿಯಲ್ಲಿ ಜನಕ್ಕೆ ಜನ ಹತ್ತಿರವಾಗುವ ಸಮುದಾಯದ ಶಕ್ತಿಯನ್ನು ಮರೆತು ಬಿಡುತ್ತಿದ್ದೇವೆಯೇ? ಸಮಸ್ಯೆ ಬಂದ ತಕ್ಷಣ ನಾವೇಕೆ ಅದನ್ನು ಸುಧಾರಿಸಲು ತಂತ್ರಜ್ಞಾನದ ಮೊರೆಹೋಗುತ್ತೇವೆ?

ಈಗ ಒಂದು ಬಡಾವಣೆಯಲ್ಲಿ, ಯಾವುದೋ ಒಂದು ರಸ್ತೆಯ ಚಿತ್ರಣವನ್ನು ಗಮನಿಸಿ. ಮಕ್ಕಳನ್ನು ಗಮನಿಸುತ್ತಾ ಚಟುವಟಿಕೆಗಳಲ್ಲಿ ತೊಡಗಿಸಿ ಆಸಕ್ತಿ ಹುಟ್ಟಿಸಲು ಶಾಲೆ, ಉಪಾಧ್ಯಾಯರುಗಳಿಲ್ಲ. ತಂದೆತಾಯಿಯರಿಗೆ ಸಮಯದ ಅಭಾವ. ಹಾಗಾಗಿ ಮಕ್ಕಳ ದೃಷ್ಟಿ ಸ್ಕ್ರೀನಿಗೆ. ಮಾಡಲು ಕೆಲಸವಿಲ್ಲದೇ, ಮನಸ್ಸಿಗೆ ಚಟುವಟಿಕೆಗಳಿಲ್ಲದೇ ಕಾಲಕಳೆಯಲು ಒದ್ದಾಡುತ್ತಿರುವ ಹಿರಿಯ ನಾಗರಿಕರು. ಈಗ ನೋಡಿ ಹೂವಿದೆ ನಾರಿದೆ. ಎರಡೂ ಎದುರಿಗಿವೆ. ಮಾಲೆಯಾಗುತ್ತಿಲ್ಲ ಮಾತ್ರ. ಮಕ್ಕಳಿಗೆ ದುಡಿದಿದ್ದನ್ನೆಲ್ಲಾ ಸುರಿದು ಕಂಪ್ಯೂಟರ್, ಅಪ್ಲಿಕೇಷನ್ಸ್ ಖರೀದಿಸಿ ಆ ‘ವಿದ್ಯಾಭ್ಯಾಸ’ ತಾಣಗಳನ್ನು ಬಹುಬಿಲಿಯನ್ ಕಂಪನಿಗಳನ್ನಾಗಿ ಮಾಡುತ್ತಿದ್ದೇವೆ. ಹಿರಿಯರಿಗೂ ಬೇಕಾದ ಹಳೆಯ ಹಾಡು ಕೇಳುವ ಉಪಕರಣಗಳು, ಆನ್​ಲೈನಿನಿಂದಲೇ ಬೇಕಾದ್ದನ್ನು ತರಿಸಿಕೊಳ್ಳುವ, ಬೇಕಾದ ಸಿನೆಮಾ ನೋಡುವ ಕೂತಲ್ಲೇ ಕಾಲಕಳೆಯಬಹುದಾದ ಸಲಕರಣೆಗಳನ್ನು ಕೊಡಿಸಿ ಆ ಕಂಪನಿಗಳನ್ನೂ ಶ್ರೀಮಂತರನ್ನಾಗಿಸಿದ್ದೇವೆ.

ಕೊರೊನಾದ ಕಾಲದಲ್ಲಿಯೂ ಅಂತರದಲ್ಲಿದ್ದುಕೊಂಡೇ ನಮ್ಮ ನಮ್ಮ ಮನೆಯ ಗೇಟುಗಳನ್ನು ತೆರೆದುಕೊಳ್ಳಬಹುದಿತ್ತು, ಕೊರೊನಾ ಪೂರ್ವದಲ್ಲಿ ಅಂಥದೊಂದು ಎಳೆ ಹಿಡಿದುಕೊಂಡಿದ್ದರೆ. ಹಿರಿಯರು ಸಂಜೆ ಹೊತ್ತು ಅಂಗಳದಲ್ಲಿ ಕುರ್ಚಿ ಹಾಕಿಕೊಂಡೇ ಅಂತರದಲ್ಲಿ ಮಕ್ಕಳೊಂದಿಗೆ ಬೆರೆಯಬಹುದಾಗಿತ್ತು. ಗೊತ್ತಿರುವ ವಿಷಯಗಳನ್ನು ಚರ್ಚಿಸುವುದು, ಕಲಿಸಿಕೊಡುವುದೋ ಹೀಗೆ ದಿನಕ್ಕೆ ಒಂದೆರಡು ಗಂಟೆ ತೊಡಗಿಕೊಂಡರೂ ಪರಸ್ಪರ ಹಿತವೇ. ಹಾಗೆಯೇ ತರುಣ ಪೀಳಿಗೆಯ ಅನಿವಾರ್ಯತೆಯನ್ನು ಹಿರಿಯರು, ಹಿರಿಯರ ಅನಿವಾರ್ಯತೆಯನ್ನು ತರುಣಪೀಳಿಗೆಯವರು ಅರ್ಥ ಮಾಡಿಕೊಂಡು ನಿತ್ಯದ ಕೆಲಸಗಳನ್ನು ಪರಸ್ಪರ ಪೂರೈಸಿಕೊಳ್ಳಬಹುದಿತ್ತು. ಇದು ಕೊರೊನಾಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಒಟ್ಟಾರೆ ಸಾಮುದಾಯಿಕ ಪ್ರಜ್ಞೆಯನ್ನು ಇದು ಕೇಂದ್ರೀಕರಿಸುತ್ತದೆ.

ಕೊತಕೊತ ಕುದಿಯುವ ಗೊಜ್ಜಿನ ಮೇಲೇಳುವ ಹಬೆಯನ್ನು ಚಿತ್ರಿಸುವ ಸಂಭ್ರಮದಲ್ಲಿ ಮೈಕೈ ಸುಟ್ಟುಕೊಂಡ ಗೆಳತಿಯೊಬ್ಬಳಿದ್ದಾಳೆ. ಆಫ್ರಿಕಾದ ಯಾವುದೋ ಮೂಲೆಯಲ್ಲಿಂದ ಬಂದ ಜಾಲತಾಣದ ಸುದ್ದಿಯನ್ನು ನಂಬಿಕೊಂಡು ಸರ್ವರೋಗ ನಿರೋಧಕ ಎಂದು ಕಂಡಕಂಡ ಸೊಪ್ಪಿನ ರಸಗಳನ್ನು ಕುಡಿದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಿದ್ದಾರೆ. ಸೆಗಣಿ ನೀರಿನಲ್ಲಿ ನೆನೆದರೆ ಸೂಕ್ಷ್ಮಾಣುಗಳಿಂದ ಮುಕ್ತಿ ಎಂದು ಪರದೆಯ ಮೇಲೆ ನೋಡಿ ಮಕ್ಕಳನ್ನು ಸೆಗಣಿಯಲ್ಲಿ ಅದ್ದಿ ಚರ್ಮರೋಗಕ್ಕೀಡು ಮಾಡಿದ ವಿದ್ಯಾವಂತರಿದ್ದಾರೆ. ಎಳೆ ವಯಸ್ಸಿನ ಯುವಕ ಯುವತಿಯರು ಸಿಕ್ಕಸಿಕ್ಕ ತಾಣಗಳಲ್ಲಿ ಪ್ರೀತಿಪ್ರೇಮ ಎಂಬ ನಿರಂತರವಾದ ರೋಚಕ ಭಾವನೆಗಳಿಗಾಗಿ ಹುಚ್ಚು ಭ್ರಮೆಯಲ್ಲಿ ತಡಕಾಡುತ್ತಿದ್ದಾರೆ. ಪರದೆಯ ಮೇಲೆ ಜಗತ್ತಿನ ಮೂಲೆಗಳಿಂದ ಬರುವ ಸುದ್ದಿಗಳ ಮೋಡಿ ಅಂಥಾದ್ದು.

ಕಂಪ್ಯೂಟರಿನ ಪರದೆಗೆ ಅಂಟಿಕೊಳ್ಳುವ ವ್ಯಕ್ತಿಗಳು ಒಂಟಿಯಾಗುತ್ತಿದ್ದಾರೆ ಎಂದೊಮ್ಮೆ ಅನ್ನಿಸಿದರೆ, ಇನ್ನೊಂದು ಕಡೆ ಆಂತರಿಕವಾಗಿರಬೇಕಾದದ್ದು ಅಥವಾ ಅವು ನಮ್ಮನಮ್ಮೊಳಗೇ ಇರಬೇಕೆಂದು ನಾವು ಅಂದುಕೊಂಡಿದ್ದೆಲ್ಲಾ ಈಗ ಸಾರ್ವಜನಿಕವಾಗುತ್ತಿವೆ. ಉದಾಹರಣೆಗೆ ಊಟ. ತಟ್ಟೆ, ಬಡಿಸಿದ ಊಟ, ಕಚ್ಚಿದ ಹಣ್ಣು ಬಾಯೊಳಗಿಟ್ಟ ತುತ್ತು ಎಲ್ಲವುಗಳನ್ನೂ ಹಂತಹಂತವಾಗಿ ಚಿತ್ರ ತೆಗೆದು ಎಡಿಟ್ ಮಾಡಿ ನಾವು ತಿನ್ನುವುದೆಲ್ಲಾ ರಾಜಭೋಗವೇ ಎಂದು ತೋರಿಸುವ ಹಂಬಲದ ಜೊತೆಗೆ, ಜಗತ್ತಿನಲ್ಲಿ ಮೂಲೆಮೂಲೆಗಳಲ್ಲಿ ಬೆಳೆಯುವ ತಯಾರಿಸಲ್ಪಡುವ ಖಾದ್ಯಗಳನ್ನೆಲ್ಲಾ ಇಲ್ಲೆ ಕುಳಿತಲ್ಲೇ ತರಿಸಿ ತಿಂದುಬಿಡುವ ಇನ್ನಿಲ್ಲದ ಆಕಾಂಕ್ಷೆಗಳು.

ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ದಂಪತಿಗಳು ತಮ್ಮ ಒಡನಾಟದ ಚಿತ್ರಗಳನ್ನೆಲ್ಲಾ ವಿವಿಧ ಭಂಗಿಗಳಲ್ಲಿ ಚಿತ್ರಿಸಿ ಪ್ರಕಟಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ಮೊದಲರಾತ್ರಿಯಲ್ಲಿ ವಧೂವರರನ್ನು ಹಾಸಿಗೆಯ ಮೇಲೆ ಮಲಗಿಸಿ ಛಾಯಾಚಿತ್ರಕಾರನೊಬ್ಬ ಚಿತ್ರಿಸಲು ಹೆಣಗುತ್ತಿದ್ದ. ಇದು ಅತಿ ಎಂದು ನಿರ್ಧರಿಸುವವರು ಯಾರು? ಇಂದು ಚಿತ್ರ ಮುಂದೆ ವಿಡಿಯೋ ಜಗಜ್ಜಾಹೀರು ಎಂದಾದರೆ ಗತಿ?

ಈ ಜಾಲತಾಣಗಳು ವಿಶ್ವಮಾನವ ಕಲ್ಪನೆಯವುಗಳಲ್ಲವೇ ಅಲ್ಲ. ವಿಶ್ವದ ಎಲ್ಲಾ ಮಾನವರನ್ನೂ ಕಟ್ಟಿ ಹಾಕಲು ಸಾಮರ್ಥ್ಯವುಳ್ಳ ತಾಣಗಳಾದರೂ ಅದರಲ್ಲಿ ನಾವು ನಮ್ಮದೇ ಗುಂಪು ಕಟ್ಟಿ ಬಿಡುತ್ತೇವೆ. ಈ ಜಾತಿ ಆ ಜಾತಿ, ಈ ಧರ್ಮ ಈ ಗುಂಪು ಈ ಪಂಗಡ. ಆ ಕಾಲ್ಪನಿಕ ಛಾಯಾಲೋಕದಲ್ಲೇ ಕೇರಿಗಳು ಕೂಟಗಳು ಮತ್ತು ದ್ವೇಶವನ್ನೊಸರುವ ಮಾತು ಚಿತ್ರಗಳ ಹಲ್ಲೆಗಳು ಭರ್ಜಿಗಳು. ಝಳಪಿಸಿ ವಿಜೃಂಭಿಸಿ ಯಾವ ಕಾರ್ಕೋಟಕ ವಿಷವನ್ನು ಕೂಡಾ ಬಿತ್ತಿ ಪಸರಿಸಬಹುದು.

ಹಾಗೆಂದು ತಂತ್ರಜ್ಞಾನವನ್ನು ಕಡೆಗಣಿಸಬೇಕಿಲ್ಲ. ಅದು ಸಾಧ್ಯವೂ ಅಲ್ಲ, ಅದರಿಂದಲೇ ಸಮುದಾಯವನ್ನು ಹೆಚ್ಚು ಆಪ್ತ ಮಾಡಿಕೊಳ್ಳುವುದು ಸಾಧ್ಯವಿಲ್ಲವೇ? ಇದು ಮಾನವನ ಸಾಮರ್ಥ್ಯದ ಎರಡು ಆಯಾಮಗಳ ನಡುವಿನ ಘರ್ಷಣೆ ಆಗಬೇಕಿಲ್ಲ. ಪೀಳಿಗೆಗಳ ನಡುವಿನ ಕಂದಕವನ್ನು ಹೆಚ್ಚಿಸಬೇಕಾಗಿಲ್ಲ. ಹದ್ದು ಮೀರಿ ಹೋಗದಂತೆ ಎಚ್ಚರವಿಡಬೇಕಾದ ಕಾಲ ಬಂದಿದೆ. ಮನೆಮನೆಗಳಲ್ಲಿ ಬೀದಿಬೀದಿಗಳಲ್ಲಿ ಸಮುದಾಯಗಳ ಸಹಭಾಗಿತ್ವದ ಅಗತ್ಯವಿದೆ. ಸಹಚಾರ ಸಹಕಾರವನ್ನು ಪುನರುಜ್ಜೀವನಗೊಳಿಸಬೇಕಾಗಿದೆ.

ಮಾನವ ವಿಕಸನ ಸಮಸ್ಯೆಗಳು ಎದುರಾದಂತೆಲ್ಲಾ ಅದರ ಪರಿಹಾರಕ್ಕೆ ಸಮುದಾಯದತ್ತ ತೆರಳುವ ಬದಲು ತಂತ್ರ ಜ್ಞಾನದತ್ತ ಹೆಚ್ಚುಹೆಚ್ಚಾಗಿ ತೆರಳುತ್ತಿರುವುದೇಕೆ? ನಾವೇಕೆ ಸರಳ ಸಮಾಧಾನಗಳತ್ತ ಮನ ಹರಿಸುವುದಿಲ್ಲ? ಮನುಷ್ಯ-ಮನುಷ್ಯರ ಸಂಬಂಧಗಳಿಗಿಂತಾ ‘ಅಲೆಕ್ಸಾ ಬೈಜು’ಗಳೇಕೆ ನಮಗೆ ಹಿತವಾಗುತ್ತಿದ್ದಾರೆ?

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನನ್ನ ಅನ್ನವನ್ನು ನಾನೇ ಗಳಿಸಲು ಶುರುಮಾಡಿದಾಗ ನನಗೆ ನಲವತ್ತೊಂಬತ್ತು

Published On - 11:29 am, Sat, 3 July 21