ನಾನೆಂಬ ಪರಿಮಳದ ಹಾದಿಯಲಿ: ನನ್ನ ಅನ್ನವನ್ನು ನಾನೇ ಗಳಿಸಲು ಶುರುಮಾಡಿದಾಗ ನನಗೆ ನಲವತ್ತೊಂಬತ್ತು…

‘ಇನ್ನು ನೀವು ಹೊಸ ಬದುಕನ್ನು ಆರಂಭಿಸಬೇಕಾಗುತ್ತದೆ. ನೀವು ನೀವಾಗಿರಬೇಕಾಗುತ್ತದೆ. ನಿಮ್ಮನ್ನು ನೀವು ಇಂಥವರ ಪತ್ನಿ, ಇಂಥವರ ತಾಯಿ ಎಂದು ಗುರುತಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನಾದರೂ ಹೊಸದನ್ನು ಕಲಿಯಿರಿ, ಹೊಸ ತಿರುವಿನಲ್ಲಿ ಬದುಕು ಹೊರಳಲಿ. ಯಾಕೆ ನೀವು ಸಾಂಬಾ ನೃತ್ಯ ಕಲಿಯಬಾರದು? ಲಂಡನ್ನಿನ ಆಸ್ಪತ್ರೆಯಲ್ಲಿ ಆಪ್ತಸಲಹೆಗಾರರು ಹೀಗೆಂದಾಗ ಇಂಥ ಯಾವ ಆಸೆ ಮನಃಸ್ಥಿತಿಯೂ ನನ್ನಲಿರಲಿಲ್ಲ. ಏನಾದರೂ ಕಲಿಯಬೇಕು ಎಂಬುದು ಮಾತ್ರ ಮನಸ್ಸಿನಲ್ಲಿ ನಾಟಿತ್ತು.’ ಜಯಶ್ರೀ ಜಗನ್ನಾಥ

ನಾನೆಂಬ ಪರಿಮಳದ ಹಾದಿಯಲಿ: ನನ್ನ ಅನ್ನವನ್ನು ನಾನೇ ಗಳಿಸಲು ಶುರುಮಾಡಿದಾಗ ನನಗೆ ನಲವತ್ತೊಂಬತ್ತು...
ಅನುವಾದಕಿ ಜಯಶ್ರೀ ಜಗನ್ನಾಥ
Follow us
ಶ್ರೀದೇವಿ ಕಳಸದ
|

Updated on:Jan 21, 2021 | 5:52 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಮೈಸೂರಿನ ಜಯಶ್ರೀ ಜಗನ್ನಾಥ ಅವರು ಅನುವಾದಕರು ಮತ್ತು ಫ್ರೆಂಚ್ ಶಿಕ್ಷಕರು. ಅವರ ಅನುಭವ ಬರಹ ನಿಮ್ಮ ಓದಿಗೆ…

ಅಂದು ಪುಸ್ತಕ ಪೆನ್ನುಗಳನ್ನು ಜೋಡಿಸಿಕೊಳ್ಳುತ್ತಿದ್ದಂತೆ ನನ್ನ ಕೈ ನಡುಗುತ್ತಿತ್ತು. ನನಗಾಗ 46 ವರ್ಷ ವಯಸ್ಸಾಗಿತ್ತು. ಸರಿಯಾಗಿ 25 ವರ್ಷಗಳ ನಂತರ ಮತ್ತೆ ನಾನು ಹಿಂದೆ ವಿದ್ಯಾರ್ಥಿನಿಯಾಗಿದ್ದಅದೇ ಮಾನಸ ಗಂಗೋತ್ರಿ ಕ್ಯಾಂಪಸ್ಸಿಗೆ ಮತ್ತೊಮ್ಮೆ ಹೊರಟಿದ್ದೆ. ಜೀವನ ಎಂಬುವುದೊಂದು ಅಚ್ಚರಿ ತುಂಬಿದ ಅನಿರೀಕ್ಷಿತಗಳ ಹಾಯಿದೋಣಿ. ಎಲ್ಲಿಂದೆಲ್ಲಿಗೆ ಕೊಂಡೊಯ್ದು ಕೆಡಹುವುದೋ ಕಂಡವರ್ಯಾರು?

ಆ ಕ್ಯಾಂಪಸ್ಸಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಗಿಸಿದಾಗ ನನಗೆ ಇಪ್ಪತ್ತೊಂದು ವರ್ಷ. ಎರಡು ವರ್ಷಗಳ ಕಾಲ ಅಭ್ಯಸಿಸಿ ಎಮ್.ಎಸ್​ಸಿ ಪದವಿ ಪಡೆದದ್ದು ಕನಸೇನೋ ಎಂಬಂತಿತ್ತು. ಅದೇ ಕಟ್ಟಡಗಳು, ಅದೇ ಕ್ಯಾಂಟೀನ್, ಅದೇ ಮರಗಿಡಗಳೂ ಇರಬಹುದೇನೊ. ಆಗ ಎಂದೂ ಒಂಟಿಯಾಗಿ ತಿರುಗಿದ್ದುದರ ನೆನಪಿಲ್ಲ. ನಗುತ್ತಾ ಮಾತಾಡುತ್ತಾ ಓಡಾಡುವ ಗೆಳತಿಯರ ಗುಂಪು. ಪ್ರಯೋಗ ಶಾಲೆ ಟೆಸ್ಟು, ರೆಕಾರ್ಡ್​ ಬುಕ್​ ಬರೆಯಬೇಕೆನ್ನುವ ಹಪಾಹಪಿ, ಮುಂದಿನ ಜೀವನವೇನು ಎನ್ನುವ ಕುತೂಹಲ ತುಂಬಿದ ತುಡಿತದ ತಹತಹ.  ಓ ಬದುಕೇ ಇದೋ ಬಂದೆ ನಿನ್ನನ್ನು ಎದುರುಗೊಳ್ಳಲು ಎಂಬ ಉತ್ಸಾಹದ ಕ್ಷಣಗಳವು. ಅನುಭವಗಳೆಲ್ಲವೂ ನಾನು ನನ್ನ ಮಡಿಲಿಗೆ ಮೊಗೆಮೊಗೆದು ತುಂಬಿಕೊಳ್ಳಲೆಂದೇ ಕಾಯುತ್ತಿವೆಯೇನೋ ಎಂಬ ಆತ್ಮಸ್ಥೈರ್ಯ. ಜೀವಕೋಶಗಳು , ಕ್ರೋಮೋಸೋಮುಗಳನ್ನು ಗಂಟೆಗಟ್ಟಲೆ ಸೂಕ್ಷ್ಮದರ್ಶಕಗಳಲ್ಲಿ ನೋಡಿ ನೋಡಿ ಏನನ್ನೋ ಸಂಶೋಧಿಸಿ ಸಾಧಿಸಿ ಬಿಡಬೇಕು ಎನ್ನುವ ಕಾತುರ.

ಇಪ್ಪತ್ತೈದು ವರ್ಷಗಳ ನಂತರ… ಇದೇ ಕ್ಯಾಂಪಸ್ಸಿನಲ್ಲಿ ಒಂಟಿಯಾಗಿ ನಿಧಾನವಾಗಿ ಹೆಜ್ಜೆ ಹಾಕಲಾರಂಭಿಸಿದೆ, ಫ್ರೆಂಚ್ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿನಿಯಾಗಿ. ಇಪ್ಪತ್ತೈದು ವರ್ಷಗಳ ಹಿಂದೆ ಓದು ಮುಗಿಸಿ ಮದುವೆಯಾಗಿ ಸಂಸಾರ ಹೂಡಿಕೊಂಡು ವಿದೇಶಕ್ಕೆ ತೆರಳಿದ ಮೇಲೆ ಬದುಕು ಬೇರೆಯದೇ ಪಥದಲ್ಲಿ ಸಾಗಿತ್ತು. ಎರಡು ಮಕ್ಕಳಾಗಿ ಎಲ್ಲವೂ ಸುಗಮ ಎಂದುಕೊಳ್ಳುತ್ತಿರುವ ಹೊತ್ತಿನಲ್ಲಿ ಉರುಳುತ್ತಿರುವ ಗಾಲಿಗೆ ಕಲ್ಲೊಂದು ಅಡರಿತ್ತು. ಕ್ಯಾನ್ಸರ್​ನಿಂದಾಗಿ ಪತಿಯನ್ನು ಕಳೆದುಕೊಂಡ ಮೇಲೆ ಮೈಸೂರಿಗೆ ವಾಪಸಾದೆ. ಮಕ್ಕಳಿಬ್ಬರೂ ತಮ್ಮ ತಮ್ಮ ವಿದ್ಯಾಭ್ಯಾಸಕ್ಕಾಗಿ ಮರಳಿ ವಿದೇಶಕ್ಕೆ ತೆರಳಿದರು.

ಮನೆ ಮನಸ್ಸನ್ನು ಖಾಲಿ ಮಾಡಿಕೊಂಡು ದಿಕ್ಕೆಟ್ಟು ನಿಂತಾಗ ಕುಟುಂಬ ಸಮಾಜ ಎಂದರೇನು ಎನ್ನುವ ಹೊಸ ದೃಷ್ಟಿ ಮೂಡಲಾರಂಭಿಸಿತ್ತು. ಲಂಡನ್ನಿನಲ್ಲಿ ಪತಿಯ ಚಿಕಿತ್ಸೆಗಾಗಿ ನೆಲೆಸಿದ್ದಾಗ ಅಲ್ಲಿನ ಆಪ್ತಸಲಹೆಯಲ್ಲಿ, ‘ಇನ್ನು ಮೇಲೆ ನೀವು ಹೊಸ ಬದುಕನ್ನು ಆರಂಭಿಸಬೇಕಾಗುತ್ತದೆ. ನೀವು ನೀವಾಗಬೇಕಾಗುತ್ತದೆ. ನಿಮ್ಮನ್ನು ನೀವು ಇಂಥವರ ಪತ್ನಿ, ಇಂಥವರ ತಾಯಿ ಎಂದು ಗುರುತಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನಾದರೂ ಹೊಸದನ್ನು ಕಲಿಯಿರಿ, ಹೊಸ ತಿರುವಿನಲ್ಲಿ ಬದುಕು ಹೊರಳಲಿ.  ಉದಾಹರಣಗೆ, ನೀವು ಸಾಂಬಾ ನೃತ್ಯವನ್ನೇ ಏಕೆ ಕಲಿಯಬಾರದು?’ ನನಗೆ ನಗು ಬಂತು. ಮೈಸೂರಿನಲ್ಲಿ, ನಾನು ಮಗಳಾಗಿ ಸೊಸೆಯಾಗಿ ತಾಯಿಯಾಗಿ ಕಾಲ ಕಳೆದ ಪರಿಸರದಲ್ಲಿ ಆಗಿನ ಪರಿಸ್ಥಿತಿಯಲ್ಲಿ ನೃತ್ಯ ಕಲಿಯುವ ಯಾವ ಆಸೆ ಅಥವಾ ಮನಃಸ್ಥಿತಿಯೂ ನನ್ನಲಿರಲಿಲ್ಲ. ಏನಾದರೂ ಕಲಿಯಬೇಕು ಎಂಬುದು ಮಾತ್ರ ಮನಸ್ಸಿನಲ್ಲಿ ನಾಟಿತ್ತು.

ಹಾಗಾಗಿ ಫ್ರೆಂಚ್ ಕೋರ್ಸಿಗೆ ಸೇರಿದೆ. ನನ್ನ ಜೊತೆಯಲ್ಲಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲರೂ 21-22 ವಯಸ್ಸಿನವರು. ನನಗೆ ಅತ್ಯಂತ ನಾಚಿಕೆ ಮುಜುಗರ. ನನ್ನ ಮುಖ ಒಂದು ರೀತಿಯ ಖಿನ್ನತೆಯಿಂದ ಬಾಡಿರುತ್ತಿತ್ತೋ ಏನೋ, ನಾನು ನಡೆದೇ ಕ್ಲಾಸಿಗೆ ಹೋಗುತ್ತಿದ್ದುದನ್ನು ನೋಡಿ ಒಬ್ಬ ಸಹಪಾಠಿ ಅತ್ಯಂತ ಕನಿಕರದಿಂದ ಕೇಳಿದ್ದಳು, ‘ನಿಮಗೆ ಬಸ್ಸಲ್ಲಿ ಬರಕ್ಕೂ ದುಡ್ಡಿಲ್ವಾ?’ ಹಣವಿಲ್ಲದ ವಿದ್ಯಾರ್ಥಿಗಳಿಗೆ ಹಣವೊಂದಿದ್ದರೆ ಮತ್ತೆಲ್ಲವೂ ಸಮಸ್ಯೆಗಳೇ ಅಲ್ಲ ಎನ್ನಿಸುತ್ತದೆ. ಅದೂ 20ರ ಹರೆಯದ ಆ ಯುವಶಕ್ತಿಯನ್ನು ಮತ್ತು ಅವರ ಆಯ್ಕೆಗಳನ್ನೂ ಬಡತನ ಕುಂದಿಸಿ ಹಾಕಿಬಿಡಬಲ್ಲದು. ಆಗ ನಾನಂದೆ, ‘ಹಣವಿದ್ದವರಿಗೂ ಸಮಸ್ಯೆಗಳಿರುತ್ತವೆ ಮಗೂ.’ ಮೊದಲದಿನ ಫ್ರೆಂಚ್ ಅಕ್ಷರ ಮಾಲೆಯನ್ನು ಕಲಿಯಬೇಕಾಗಿತ್ತು. ನನ್ನ ಮನಸ್ಸು ಸುಮಾರು 18 ವರ್ಷಗಳ ಹಿಂದೆ ನನ್ನ ಮಗನಿಗೆ ಎ ಬಿ ಸಿ ಡಿ ಹೇಳಿ ಕೊಡುತ್ತಿದ್ದದ್ದು ನೆನಪಾಗಿ ಕಣ್ಣೀರು ತುಂಬುತ್ತಿತ್ತು. ಮನಸ್ಸನ್ನು ಗಟ್ಟಿ ಮಾಡಿಕೊಂಡೆ.

ಈ ಮನಸ್ಸೆಂಬುದೊಂದು ಅಸಾಧಾರಣ ಅದ್ಭುತ ಮಾಯಾಶಕ್ತಿ. ನಗುನಗುತ್ತಿರುವಾಗ ನಿಶ್ಶಬ್ದವಾಗಿ ಕಂಬನಿಯನ್ನು ಕುಡಿಯುತ್ತಿರುತ್ತದೆ, ಅಳುತ್ತಿರುವವರ ಒಳೊಳಗೆ ನಗುವನ್ನು ಮೂಡಿಸುತ್ತಿರುತ್ತದೆ. ಹತಾಶೆಯ ಪರಮಾವಧಿಯನ್ನು ತಲುಪಿದಾಗ ಇದ್ದಕ್ಕಿದ್ದಂತೆ ರೀಚಾರ್ಜ್​ ಆದಂತೆ ಮತ್ತೆ ಸೆಟೆದೆದ್ದು ನಿಲ್ಲುತ್ತದೆ. ಇನ್ನೇನೂ ದಾರಿಯಿಲ್ಲ ಎಂದಾಗ ತನ್ನ ದಾರಿಯನ್ನು ತಾನೇ ತಯಾರಿಸಿಕೊಳ್ಳುವ ಬುಲ್ಡೋಜರ್ ಆಗಿಬಿಡುತ್ತದೆ.

ಸ್ವಯಂಸೇವಾ ಸಂಸ್ಥೆಯೊಂದರ ಚಟುವಟಿಕೆಗಳಲ್ಲಿ ತೊಡಗಿರುವ ಜಯಶ್ರೀ

ಫ್ರೆಂಚ್ ಕಲಿಯುತ್ತಿದ್ದಂತೆ, ನನ್ನ ವಯಸ್ಸಿಗೆ ವಿದೇಶೀ ಭಾಷೆಯ ಉಚ್ಚಾರಣೆ ಎಷ್ಟು ಕಷ್ಟ ಎನ್ನಿಸುತ್ತಿತ್ತು. ತಪ್ಪಿಹೋದ ವ್ಯಾಸಂಗದ ಅಭ್ಯಾಸ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಪರೀಕ್ಷೆಗಳು ಹಿಂದೆಂದೂ ಇಲ್ಲದ ಆತಂಕ ಹೆದರಿಕೆಗಳನ್ನು ತಂದೊಡ್ಡುತ್ತಿದ್ದವು. ಪಿಎಚ್.​ಡಿ ಮಾಡುತ್ತಿದ್ದ ಮಗ, ಎಂಜಿನಿಯರಿಂಗ್‍ ಓದುತ್ತಿದ್ದ ಮಗಳು ಸರ್ಟಿಫಿಕೇಟ್ ಕೋರ್ಸ್​ ಮಾಡುತ್ತಿದ್ದ ನಾನು; ಮೂವರೂ ವಿದ್ಯಾರ್ಥಿಗಳು. ಯಾರೊಬ್ಬರೂ ಸಂಪಾದನೆ ಮಾಡುತ್ತಿರಲಿಲ್ಲ. ಅದಕ್ಕಿನ್ನೂ ಬಹಳ ಕಾಲವಿತ್ತು. ನಾನು ತಮಾಷೆಗಾಗಿ ಹೇಳುತ್ತಿದ್ದೆ, ಮಕ್ಕಳು ಪಾಸ್ ಆಗಿ ನಾನು ಫೇಲ್ ಆದರೆ ಏನು ಮಾಡೋದು? ಅವರಿಗೆ ಹೇಗೆ ಮುಖ ತೋರಿಸುವುದು? ಅದಕ್ಕಾದರೂ ಓದಬೇಕು. ಒಂದೊಂದಾಗಿ ಪರೀಕ್ಷೆಗಳು ವರ್ಷಗಳು ಉರುಳಿದವು. ಅಲ್ಝೀರಿಯಾಗೆ ಹೋಗುವ ಇಂಜಿನೀಯರುಗಳ ತಂಡ ಒಂದಿದೆ, ಅವರಿಗೆ ಒಂದು ತಿಂಗಳು ಫ್ರೆಂಚ್ ಭಾಷೆಯ ಪರಿಚಯ ಮಾಡಿಕೊಡಬೇಕು, ಪಾಠ ಮಾಡುತ್ತೀರಾ ಎಂದು ನಮ್ಮ ಪ್ರೊಫೆಸರ್ ನನ್ನನ್ನು ಕೇಳಿದಾಗ ನನಗೆ 49 ವರ್ಷ. ಈ ವಯಸ್ಸಿನಲ್ಲಿ ನನ್ನ ಮೊಟ್ಟಮೊದಲ ಸಂಪಾದನೆ ಶುರುವಾಯಿತು.

ತನ್ನ ಅನ್ನವನ್ನು ಸ್ವಂತ ಶ್ರಮದಿಂದ ಸಂಪಾದಿಸುವ ಶಕ್ತಿ ಪಡೆಯುವುದೇ ಬದುಕಿನ ಸಾರ್ಥಕತೆಯ ಪ್ರಥಮ ಮೆಟ್ಟಿಲು. ಆ ಅನುಭವ ಕೊಡುವ ಆನಂದ ಅವರ್ಣನೀಯ. ಕೆಲವೇ ಕೆಲವು ವರ್ಷಗಳ ಹಿಂದೆ ನನಗೆ ಫ್ರೆಂಚ್ ಭಾಷೆಯ ಗಂಧವೂ ಇರಲಿಲ್ಲ, ಈಗ ಅಲಯನ್ಸ್ ಫ್ರಾಂಚೈಸ್​ನಲ್ಲಿ ನಾನು ಶಿಕ್ಷಕಿಯಾಗುತ್ತಿದ್ದಂತೆ ನನ್ನ ಬದುಕಿನ ಹಾಯಿದೋಣಿಗೆ ಚುಕ್ಕಾಣಿ ಸಿಕ್ಕಿಬಿಟ್ಟಿತು.

***

ಪರಿಚಯ: ಜಯಶ್ರೀ ಜಗನ್ನಾಥ ಅವರು ಮೈಸೂರಿನಲ್ಲಿ ನೆಲೆಸಿದ್ದು ಆಶೋದಯ,  ದಿಶಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಅನುವಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಐಲಿಡ್ ಸಂಸ್ಥೆಯ ಮೂಲಕ ಶಿಕ್ಷಕರಿಗೆ ತರಬೇತಿ ಕೊಡುತ್ತಿದ್ದಾರೆ. ಸಾಕ್ಷ್ಯಚಿತ್ರ, ಸಂಶೋಧನಾ ಪ್ರಬಂಧಗಳಿಗೆ ಸಂಬಂಧಿಸಿದ ಅನುವಾದವನ್ನು ನಿಯಮಿತವಾಗಿ ಮಾಡುತ್ತ ಬಂದಿದ್ದಾರೆ. ಓದುವುದು, ಸಿನೆಮಾ ನೋಡುವುದು ಮತ್ತು ಕೈತೋಟ ಇವರ ಅಭಿರುಚಿಗಳು.

ನಾನೆಂಬ ಪರಿಮಳದ ಹಾದಿಯಲಿ: ಛಲವಿತ್ತು ಗುರಿಯಿತ್ತು ಹೊರಟೆ…

Published On - 3:33 pm, Thu, 21 January 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ