Poetry; ಅವಿತಕವಿತೆ: ಬುದ್ಧನಾಗುವ ಭ್ರಮೆ ಕಳಚಿ

‘ಬುದ್ಧ ಕೇವಲ ಸಂಕೇತವಾಗಿ, ಗಾಂಧೀ ನಗೆಪಾಟಲಾಗಿ, ಮಾನವತೆ ಬಿಕ್ಕುತ್ತಿರುವ ಈ ಸತ್ಯೋತ್ತರ ದುರಿತ ಕಾಲದಲ್ಲಿ ನಮ್ಮ ಸುತ್ತಲ ತಲ್ಲಣಗಳಿಗೆ ಕವಿತೆ ಒಂದು ಸಾಂತ್ವನ. ಕವಿತೆ ಬರೆದು ಜಗತ್ತನ್ನೇ ಬದಲಿಸಿಬಿಡುವೆನೆನುವ ಭ್ರಮೆ ನನಗಿಲ್ಲ. ಕವಿತೆ ಕಟ್ಟುವ ಕ್ರಿಯೆಯಲ್ಲಿ ನಾನು ಏನೋ ಆಗಿರುತ್ತೇನೆ ಅಷ್ಟು ಸಾಕು; ಕಾವ್ಯ ಕನ್ನಿಕೆಯ ಸೆರಗ ಹಿಡಿಯಲು.‘ ಹಂದಲಗೆರೆ ಗಿರೀಶ್  

Poetry; ಅವಿತಕವಿತೆ: ಬುದ್ಧನಾಗುವ ಭ್ರಮೆ ಕಳಚಿ
ಕವಿ ಹಂದಲಗೆರೆ ಗಿರೀಶ್
ಶ್ರೀದೇವಿ ಕಳಸದ | Shridevi Kalasad

|

Feb 07, 2021 | 11:39 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ಅವಿತಕವಿತೆ. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಹಂದಲಗೆರೆ ಗಿರೀಶ್ ಅವರ ಎರಡು ಕವನ ನಿಮ್ಮ ಓದಿಗೆ. ಪರಿಕಲ್ಪನೆ : ಶ್ರೀದೇವಿ ಕಳಸದ

ಕಾವ್ಯವು ಲೋಕಾನುಸಂಧಾನದ ಸರಿದಾರಿಗೆ ಎಲ್ಲರನ್ನೂ ಒಯ್ಯಬೇಕೇ ಹೊರತು ಕಾವ್ಯದ ಆರಾಧನೆಗಲ್ಲ. ಹಾಗೆ ಯಾವುದನ್ನು ಆರಾಧಿಸಿದರೂ ಅದು ಆರಾಧಿಸಿದವರನ್ನು ಗುಲಾಮರನ್ನಾಗಿಸಿ ಆಳಲು ಶುರು ಮಾಡುತ್ತದೆ. ಅದು ನಿಸರ್ಗದ ನಡೆಗೆ ಕೇಡು ತರುತ್ತದೆ. ಗಿರೀಶ್ ಅವರ ಕವಿತೆಗಳು ಲೋಕದ ಜೊತೆಗೆ ಪ್ರತಿ ಜೀವಿಯೂ ಇಟ್ಟುಕೊಳ್ಳಬೇಕಾದ ಸಂಬಂಧಸ್ವರೂಪವನ್ನು ಧೇನಿಸುತ್ತವೆ. ಧ್ವನಿಯೇ ಕಾವ್ಯದ ಆತ್ಮ ಮುಂತಾದ ಸ್ಲೋಗನ್ನುಗಳ ಕಾವ್ಯಮೀಮಾಂಸೆಯ ಕಾವ್ಯಪೂಜಾ ಸಾಮಗ್ರಿಗಳನ್ನು ಪಕ್ಕಕ್ಕಿಟ್ಟು ಇವರ ಕವನಗಳನ್ನು ಓದಬೇಕಾದ ಅಗತ್ಯವಿದೆ. ಎಸ್. ನಟರಾಜು ಬೂದಾಳು

ಬುದ್ಧನಾಗುವುದೆಂದರೆ

ಕದಡಿದ ನೀರು ತಂತಾನೆ ತಿಳಿಯಾಗುವ ಪರಿ ಒಳಗಿನೊಳಗಣದ ಅರಿವು

ನಿರಂತರ ಚಲನೆಯ ಸಜೀವ ರೂಪಕ ನದಿಯಾಗುವುದು

ಕತ್ತಲೆ ಬೆಳಕು ದಡಗಳ ನಡುವೆ ಹರಿದು ಮೂರನೇ ದಡ ಸೃಜಿಸುವುದು ಪ್ರಪಾತಕ್ಕೆ ಧುಮ್ಮಿಕ್ಕಿ ಚಿಮ್ಮಿ ನಭದ ಕಡಲಾಗುವುದು

ಅಂಟಿಯೂ ಅಂಟದ ನಂಟು ತಾವರೆ ಎಲೆಮೇಗಲ ಹನಿಯಾಗುವುದು ಎಚ್ಚರದ ನಿದ್ದೆ ನೀರಿಲ್ಲದ ಜಳಕ

ಹಿಡಿ ಬೆಳಕಿಗಾಗಿ ಅಲೆಯದೆ ನಮ್ಮ ದಾರಿಗೆ ನಾವೇ ಮಿಣುಕು ಹುಳುವಾಗುವುದು

ಮುಗಿಲಿಗೆ ಏಣಿಯಾಗಲು ಹವಣಿಸುತ್ತಿದ್ದ ಬಿದಿರೊಂದು ಕೊಳಲಾಗಿ ಉಲಿದು ಒಳಗಿನ ಅನಾದಿ ಖಾಲಿ ನಾದವಾಗಿ ಮರಳಿ ಕಾಡಿಗೆ ಹೊರಳುವುದು

ಅಂಬರದ ಹೂ ಅರಸದೆ ಮಣ್ಣಘಮಲು ಹೀರುವ ಬೇರು ಹೂ ಚುಂಬಿಸುವ ಎರೆಹುಳುವಾಗುವುದು

ಕಲ್ಲುಮುಳ್ಳುಗಳ ದ್ವೇಷಿಸದೆ ಮನ ಕಾಲಿಗೆ ಅರಿವಿನ ಮೆಟ್ಟು ಮೆಟ್ಟಿ ಬಯಲು ಬಯಲ ದಾಟುವ ಅಲೆಮಾರಿಯಾಗುವುದು

ಬುದ್ಧನಾಗುವುದೆಂದರೆ ಜಪ ತಪ ಧರ್ಮ ದೇವರು ಸಿದ್ದಮಾರ್ಗಗಳೆಲ್ಲವನ್ನೂ ನಿರಾಕರಿಸಲು ಸಿದ್ಧನಾಗುವುದು ಸಾವೊಂದನು ಬಿಟ್ಟು

ಬುದ್ಧನಾಗುವುದು ಯುದ್ಧ ತನ್ನ ವಿರುದ್ದ ತಾ ಗೆದ್ದು ಗಡಿ ಬೇಲಿದಾಟುವ ಪರಿಮಳದ ಹೂವಾಗಿ ಅರಳುವುದು

ಬೇವಲ್ಲಿ ಸಿಹಿ ಮಂಜಿನಲ್ಲಿ ಕೆಂಡ ಬೆಂಕಿಯೊಳಗೆ ತಂಪು ಸುಖದ ಆಸೆಯ ಆಳದಲ್ಲಿ ದುಃಖದ ರುಚಿ ಹುಡುಕುವುದು

ಬುದ್ಧನಾಗುವುದೆಂದರೆ ಕಂಬಳಿ ಹುಳು ಚಿಟ್ಟೆಯಾಗಿ ರೆಕ್ಕೆಬಿಚ್ಚುವ ಸೋಜಿಗ

ಮೊದಲು ಬುದ್ಧನಾಗುವ ಭ್ರಮೆ ಕಳಚಿ ಸಹಜಯಾನಿಯಾಗುವುದು

GIRISH

ಕೈಬರಹದೊಂದಿಗೆ ಹಂದಲಗೆರೆ ಗಿರೀಶ್

ಜೀವ ಜೋಳಿಗೆ

ಅಪ್ಪನೆಂದರೆ ಆಕಾಶವಲ್ಲ ಕಂದನ ಕೈಗೆಟಕುವ ಅವಕಾಶ ಹಗುರಾಗಿದೆ ದಿನ ಮೆದುವಾಗಿದೆ ಮನ ಬೆಳದಿಂಗಳ ತುಂಡೊಂದು ಎದೆಮೇಲಾಡಿ

ಬಯಸಿದ್ದು ಜೋಗಿ ಆಗಿದ್ದು ಅಪ್ಪ ಹೂ ನಗು ತುಂಬಿದ ಜೀವ ಜೋಳಿಗೆ ಹೆಗಲಾ ಮ್ಯಾಲೆ ಬೆಳದಿಂಗಳ ತುಂಡೊಂದು ಎದೆಮೇಲಾಡಿ

ಜೊಲ್ಲು ಸೂಸಿ ನಕ್ಕಾರೆ ಸಾವಿರ ಸಂಪಿಗೆ ಬಿರಿದಾ ಸೊಬಗು ಎಚ್ಚರದಲ್ಲೇ ಜೀವ ತಳೆವಾ ಕನಸು ಬೆಳದಿಂಗಳ ತುಂಡೊಂದು ಎದೆಮೇಲಾಡಿ

ಏಕಾಂತ ಲೋಕಾಂತ ಧಾವಂತದಲ್ಲೂ ಕಣ್ಣಹೊಲದಿ ಪುಟಿವ ಜೀವ ಕಾವ್ಯ ಹೆಜ್ಜೆ ಗೆಜ್ಜೆಯ ಸದ್ದು ನನ್ನಾ ಎದೆಗಿಲಕಿ ಬೆಳದಿಂಗಳ ತುಂಡೊಂದು ಎದೆಮೇಲಾಡಿ

ದಿನವೂ ಅರಳಿ ಹೊರಳಿ ನನ್ನ ಅಪ್ಪನ ಕಾಣಿಸಿದ ಸೋಜಿಗದ ಜೀವ ಕನ್ನಡಿ ಬೆಳದಿಂಗಳ ತುಂಡೊಂದು ಎದೆಮೇಲಾಡಿ

ಹಣ್ಣಾಗಿ ಮಣ್ಣುಸೇರಿದ ತಲೆಮಾರು ತೇವಕಾದ ಬೀಜದೊಳಗಿನ ಮೌನ ಉಲಿಯುತ್ತಿದೆ ಅಪ್ಪ ಅಮ್ಮ ತೊದಲು ಬೆಳದಿಂಗಳ ತುಂಡೊಂದು ಎದೆಮೇಲಾಡಿ

ಬುದ್ಧನ ಕಿರುನಗೆ ನಗುನಗುತ್ತಲೇ ಎದೆಗೊದ್ದು ನನ್ನ ಮಾಗಿಸಿದ ಹೂ ಪಾದಗಳಿಗೆ ಶರಣು ಬೆಳದಿಂಗಳ ತುಂಡೊಂದು ಎದೆಮೇಲಾಡಿ

GIRISH

ಗಿರೀಶ್ ಅವರ ಸಂಪಾದಿತ ಪುಸ್ತಕಗಳು ‘ಅರಿವೇ ಅಂಬೇಡ್ಕರ್‘ ಮತ್ತು ‘ಸುರಗಿ‘

ಪರಿಚಯ: ಹಂದಲಗೆರೆ ಗಿರೀಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆಯವರು. ರೈತಕುಟುಂಬದಲ್ಲಿ ಹುಟ್ಟಿದ ಇವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನೇಗಿಲ ಗೆರೆ ‘, ‘ನೀರಮೇಗಲ ಸಹಿ’ ಪ್ರಕಟಿತ ಕವನ ಸಂಕಲನಗಳು. ಸಂಪಾದಿತ ಪುಸ್ತಕಗಳು ‘ಅರಿವೇ ಅಂಬೇಡ್ಕರ್ ‘, ‘ಸುರಗಿ-ಸೀರೆ ಕವಿತೆ.’

ಅವಿತಕವಿತೆ: ಇಡೀ ಜೀವಯಾನವೇ ಒಂದು ಬೊಗಸೆ ನೀರಾದದ್ದು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada